ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯ ಅವರನ್ನು ಘಟನೆ ನಡೆದ ದಿನ (ಜೂನ್ 8, 2024) ಆರ್‌ಆರ್ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ದರ್ಶನ್ ಅವರೊಂದಿಗೆ ಪಾರ್ಟಿಯಲ್ಲಿದ್ದ ಕಾರಣ ಇವರನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ, ಮಂಗಳವಾರ ಬೆಂಗಳೂರಿನ 59ನೇ CCH ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯಲು ಹಾಜರಾಗಿದ್ದ ನಟ ಚಿಕ್ಕಣ್ಣ ತೀವ್ರ ಆತಂಕ ಮತ್ತು ಗಾಬರಿಯಿಂದಾಗಿ ಸಾಕ್ಷಿ ಹೇಳುವಾಗ ತಡಬಡಿಸಿದ್ದಾರೆ. ಮತ್ತೊಬ್ಬ ಪ್ರಮುಖ ಸಾಕ್ಷಿಯಾದ ನಟ ಯಶಸ್ ಸೂರ್ಯ ಅವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಘಟನೆಯ ದಿನ ನಡೆದ ಪಾರ್ಟಿಯ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಸರ್ಕಾರಿ ಅಭಿಯೋಜಕರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಕೋರ್ಟ್‌ನಲ್ಲಿ ಗಾಬರಿ ಬಿದ್ದ ನಟ ಚಿಕ್ಕಣ್ಣ
ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತ ನಟ ಚಿಕ್ಕಣ್ಣ ಅವರು ತೀವ್ರ ಆತಂಕಕ್ಕೆ ಒಳಗಾಗಿ ಮಾತನಾಡಲು ತಡಬಡಿಸಿದರು. ಇದನ್ನು ಗಮನಿಸಿದ ನ್ಯಾಯಾಧೀಶರು ಅವರಿಗೆ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. ಆದರೂ ಚಿಕ್ಕಣ್ಣ ಅವರು ತಮಗೆ ತೀವ್ರ ಟೆನ್ಷನ್ ಆಗುತ್ತಿದೆ ಎಂದು ಹೇಳಿ ಪೂರ್ಣ ಹೇಳಿಕೆ ನೀಡಲು ಹಿಂದೇಟು ಹಾಕಿದರು. ಅದರಂತೆ, ಚಿಕ್ಕಣ್ಣ ಅವರ ಒತ್ತಡ ಮತ್ತು ಆತಂಕದ ಪರಿಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ದರ್ಶನ್‌ಗೆ ಕಂಟಕವಾಗ್ತಾರಾ ನಟ ಯಶಸ್ ಸೂರ್ಯ?
ನ್ಯಾಯಾಲಯದ ಮುಂದೆ ಹಾಜರಾದ ನಟ ಯಶಸ್ ಸೂರ್ಯ ಅವರು, ತಮಗೆ ನಟ ದರ್ಶನ್ ಅವರೊಂದಿಗೆ ಹಲವು ವರ್ಷಗಳ ಒಡನಾಟವಿದೆ. 2010ರ ಚಿಂಗಾರಿ ಸಿನಿಮಾದಿಂದ ಹಿಡಿದು ಕುರುಕ್ಷೇತ್ರ, ಚಕ್ರವರ್ತಿ, ಒಡೆಯ ಹಾಗೂ ಗರಡಿ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವುದಾಗಿ ತಿಳಿಸಿದರು. ಮುಂದುವರೆದು, ಘಟನೆ ನಡೆದ ದಿನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ದರ್ಶನ್ ಅವರೊಂದಿಗೆ ಮುಂಬರುವ ಹೊಸ ಸಿನಿಮಾವೊಂದರ ಕುರಿತು ಚರ್ಚಿಸಲು ಭೇಟಿಯಾಗಿ ಊಟ ಮಾಡಿದ್ದೆವು. ಅಲ್ಲಿ ಕೇವಲ ಸಿನಿಮಾಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ಚರ್ಚೆಯಾಗಿತ್ತೇ ಹೊರತು ಬೇರೇನೂ ನಡೆದಿಲ್ಲ. ಊಟ ಮುಗಿದ ತಕ್ಷಣವೇ ನಾನು ಅಲ್ಲಿಂದ ಹೊರಟುಹೋಗಿದ್ದೆ ಎಂದುಹೇಳಿದ್ದರು.
ಏತನ್ಮಧ್ಯೆ, ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಪವನ್, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿರುವ ವಿಷಯವನ್ನು ಪಾರ್ಟಿ ವೇಳೆ ದರ್ಶನ್‌ಗೆ ತಿಳಿಸಲು ಬಂದು ಹೋಗಿದ್ದ ಎಂದು ಪೊಲೀಸರು ಹೇಳಿಕೆ ನೀಡಲು ತಿಳಿಸಿದ್ದರು. ಆದರೆ, "ಆ ಸಮಯದಲ್ಲಿ ನಾನು ಫೋನ್‌ನಲ್ಲಿ ಮಾತನಾಡುತ್ತಿದ್ದಿದ್ದರಿಂದ ಪವನ್ ಬಂದು ಹೋಗಿದ್ದು ನನ್ನ ಗಮನಕ್ಕೆ ಬಂದಿಲ್ಲ" ಎಂದು ಯಶಸ್ ಸೂರ್ಯ ಸ್ಪಷ್ಟಪಡಿಸಿದರು. ಇನ್ನು, ಯಶಸ್ ಸೂರ್ಯ ಅವರ ಈ ಹೇಳಿಕೆಯ ಬೆನ್ನಲ್ಲೇ, ಸರ್ಕಾರಿ ಅಭಿಯೋಜಕರು ಯಶಸ್ ಸೂರ್ಯ ಅವರನ್ನು ಭಾಗಶಃ ಹಾಸ್ಟೈಲ್ ವಿಟ್ನೆಸ್ (ಸಾಕ್ಷಿ ನುಡಿಯಲು ವಿಮುಖರಾದವರು) ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅದರಂತೆ, ಬುಧವಾರದ ವಿಚಾರಣೆಯಲ್ಲಿ ಸರ್ಕಾರಿ ವಕೀಲರು ಯಶಸ್ ಸೂರ್ಯ ಅವರಿಗೆ ಪಾಟೀ ಸವಾಲು ನಡೆಸಲಿದ್ದಾರೆ.