ಬೆಂಗಳೂರು: ಅನರ್ಹ ರೇಷನ್ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸುವ ಪ್ರಕ್ರಿಯೆ ಆರಂಭವಾಗಬಹುದು ಎಂಬ ಸುದ್ದಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿತ್ತು. ಆದರೆ ಸದ್ಯಕ್ಕೆ ರೇಷನ್ ಕಾರ್ಡ್ ಪರಿಷ್ಕರಣೆ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದರ ಪರಿಣಾಮ ಲಕ್ಷಾಂತರ ಬಡ ಕುಟುಂಬಗಳಿಗೆ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಈ ಎಲ್ಲದರ ನಡುವೆ, ರೇಷನ್ ಕಾರ್ಡ್ ಸಕ್ರಿಯವಾಗಿರಲು ಮತ್ತು ಉಚಿತ ಅಕ್ಕಿ ಸೌಲಭ್ಯ ಮುಂದುವರಿಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ, ರಾಜ್ಯ ಸರ್ಕಾರ, ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಹೆಬ್ಬೆರಳ ಗುರುತು ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30, 2026 ಅನ್ನು ಅಂತಿಮ ಗಡುವಾಗಿ ನಿಗದಿಪಡಿಸಿದೆ. ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಇರುವ ಸಂಪೂರ್ಣ ಗೈಡ್ ಇಲ್ಲಿದೆ:
ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊಬೈಲ್ ಕ್ರೋಮ್ ಬ್ರೌಸರ್‌ನಲ್ಲಿ ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.in ಓಪನ್ ಮಾಡಿ.
ಇ-ಸೇವೆಗಳು ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, 'ಇ-ಸೇವೆಗಳು' ಆಯ್ಕೆಯನ್ನು ಆರಿಸಿ.
ಇ-ರೇಷನ್ ಕಾರ್ಡ್ ಆಯ್ಕೆ ಮಾಡಿ: ನಂತರ 'ಇ-ರೇಷನ್ ಕಾರ್ಡ್' ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕಾಣುವ 'ಪಡಿತರ ಚೀಟಿ ವಿವರ' (Show RCs) ಎಂಬುದನ್ನು ಒತ್ತಿ.
ನಿಮ್ಮ ವಲಯವನ್ನು ಆಯ್ಕೆ ಮಾಡಿ: ನಿಮ್ಮ ಜಿಲ್ಲೆಗೆ ಅನುಗುಣವಾಗಿ 'ಬೆಂಗಳೂರು ವಲಯ' ಅಥವಾ 'ಇತರೆ ಜಿಲ್ಲೆಗಳ ವಲಯ'ದ ಲಿಂಕ್ ಅನ್ನು ಕ್ಲಿಕ್ ಮಾಡಿ.
ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ: ಅಲ್ಲಿ 'RC Status' ಆಯ್ಕೆಮಾಡಿ, ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ನಂಬರ್ ಅನ್ನು ಬಾಕ್ಸ್‌ನಲ್ಲಿ ಟೈಪ್ ಮಾಡಿ 'Go' ನೀಡಿ.
ಸದಸ್ಯರ ಇ-ಕೆವೈಸಿ ವಿವರ ನೋಡಿ: ಈಗ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳ ಪಟ್ಟಿ ಕಾಣಿಸುತ್ತದೆ.
ಪ್ರತಿ ಹೆಸರಿನ ಮುಂದೆ:' Success' ಎಂದು ಹಸಿರು ಬಣ್ಣದಲ್ಲಿದ್ದರೆ: ಇ-ಕೆವೈಸಿ ಆಗಿದೆ ಎಂದರ್ಥ. 'Pending' ಅಥವಾ ಖಾಲಿ ಇದ್ದರೆ: ಇ-ಕೆವೈಸಿ ಆಗಿಲ್ಲ ಎಂದರ್ಥ
ಬೇಕಾಗುವ ಪ್ರಮುಖ ದಾಖಲೆಗಳು:
ರೇಷನ್ ಕಾರ್ಡ್ ಸಂಖ್ಯೆ
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಇ-ಕೆವೈಸಿ ಮಾಡಿಸುವುದು ಹೇಗೆ?
ಇ-ಕೆವೈಸಿ ಪ್ರಕ್ರಿಯೆಗೆ ಹೆಬ್ಬೆರಳ ಗುರುತು ಕಡ್ಡಾಯವಾಗಿರುವುದರಿಂದ ಇದನ್ನು ಆಫ್‌ಲೈನ್ ಮೂಲಕವೇ ಮಾಡಿಸಬೇಕಾಗುತ್ತದೆ:
ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ: ನಿಮ್ಮ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಖ್ಯೆಯೊಂದಿಗೆ ನಿಯಮಿತವಾಗಿ ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು.
ಬಯೋಮೆಟ್ರಿಕ್ ದೃಢೀಕರಣ: ನ್ಯಾಯಬೆಲೆ ಅಂಗಡಿಯಲ್ಲಿರುವ ಇ-ಪೋಸ್ ಯಂತ್ರದಲ್ಲಿ ನಿಮ್ಮ ಹೆಬ್ಬೆರಳ ಗುರುತು (ಫಿಂಗರ್ ಪ್ರಿಂಟ್) ನೀಡುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ಪೂರ್ಣಗೊಳಿಸಬಹುದು.
ಬದಲಿ ವ್ಯವಸ್ಥೆ: ಒಂದು ವೇಳೆ ನ್ಯಾಯಬೆಲೆ ಅಂಗಡಿಯಲ್ಲಿ ತಾಂತ್ರಿಕ ತೊಂದರೆ ಇದ್ದಲ್ಲಿ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೂ ಭೇಟಿ ನೀಡಿ ಇದನ್ನು ಮಾಡಿಸಬಹುದು.
ಅಕಸ್ಮಾತ್, ಇ-ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?
ನಿಗದಿಪಡಿಸಿದ ಸೆಪ್ಟೆಂಬರ್ 30ರ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಮುಂದಿನ ತಿಂಗಳುಗಳಿಂದ ಉಚಿತ ಅಕ್ಕಿ ಹಾಗೂ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಇತರೆ ಸೌಲಭ್ಯಗಳ ಹಣ ಸ್ಥಗಿತಗೊಳ್ಳಬಹುದು.