ವಿಟಿಯು ಬಳಿ 250 ಕೋಟಿ ರೂ. ಕೇಳಿದ ಸರ್ಕಾರ Online Desk
ರಾಜ್ಯ

VTU ಖಜಾನೆ ಮೇಲೆ ಸರ್ಕಾರದ ಕಣ್ಣು; UVCE ಅಭಿವೃದ್ಧಿಗೆ ₹250 ಕೋಟಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪತ್ರ

ವರ್ಷಗಳ ಕಾನೂನು ಸಮರದ ಬಳಿಕ IT ಇಲಾಖೆಯಿಂದ ಸಿಕ್ಕಿದ್ದ ಬರೋಬ್ಬರಿ 610 ಕೋಟಿ ರೂಪಾಯಿ ಮೇಲೆ ಈಗ ರಾಜ್ಯ ಸರ್ಕಾರದ ಕಣ್ಣು ಬಿದ್ದಿದ್ದು. ಬೆಂಗಳೂರಿನ ಯುವಿಸಿಸಿಇ ಕಾಲೇಜಿನ ಅಭಿವೃದ್ಧಿಗಾಗಿ 250 ಕೋಟಿ ರೂಪಾಯಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಹಲವು ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU ಕೋಟಿ ಕೋಟಿ ಹಣವೇನೋ ವಾಪಸ್ ಬಂತು. ಆದರೆ, ಹೀಗೆ ಬಂದ ಹಣದ ಮೇಲೆ ಈಗ ರಾಜ್ಯಸರ್ಕಾರದ ಕಣ್ಣು ಬಿದ್ದಿದ್ದು, ವಿಶ್ವವಿದ್ಯಾಲಯದ ಖಜಾನೆಯಲ್ಲಿರುವ 610 ಕೋಟಿ ರೂಪಾಯಿ ಹಣದಲ್ಲಿ 250 ಕೋಟಿ ರೂಪಾಯಿಯನ್ನು ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ (UVCE) ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿರುವ ವಿಷಯ ಭಾರಿ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಿಎಸ್‌ ಬರೆದ ಪತ್ರದಲ್ಲಿ ಏನಿದೆ?

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಅಧಿಕೃತ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿರುವ ಸರ್ಕಾರದ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂ​ಗ್​ನ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಟಿಯು ಖಜಾನೆಯಿಂದ 250 ಕೋಟಿ ರೂಪಾಯಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಆದರೆ, ಹಲವು ವರ್ಷಗಳಿಂದ ವಿಟಿಯುಗೆ ಸರ್ಕಾರದಿಂದ ಸಮರ್ಪಕ ಅನುದಾನ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನದೇ ಖಜಾನೆಯ ಹಣವನ್ನು ಸರ್ಕಾರ ಕೇಳುತ್ತಿರುವುದಕ್ಕೆ ವಿಶ್ವವಿದ್ಯಾಲಯದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ವಿಟಿಯು ಆಡಳಿತ ಮಂಡಳಿಯು ಸರ್ಕಾರದ ಈ ಬೇಡಿಕೆಯನ್ನು ನಯವಾಗಿ ನಿರಾಕರಿಸಿದೆ ಎನ್ನಲಾಗಿದೆ.

ಕುಲಪತಿಗಳ ಸ್ವಾವಲಂಬನೆ ಪ್ಲ್ಯಾನ್‌ ಏನಾಗಿತ್ತು?

ಮುಂದುವರೆದು, ವಿಟಿಯು ಖಜಾನೆಯಲ್ಲಿರುವ ಹಣದ ಪೈಕಿ ಸುಮಾರು 500 ಕೋಟಿ ರೂಪಾಯಿಯನ್ನು ಫಿಕ್ಸ್‌ಡ್ ಡಿಪಾಸಿಟ್ (FD) ಇಡಲು ಕುಲಪತಿಗಳು ನಿರ್ಧರಿಸಿದ್ದರು. ಸರ್ಕಾರ ಸಂಬಳ ನೀಡದಿದ್ದರೂ, ಮುಂದಿನ 10 ವರ್ಷಗಳ ಕಾಲ ಈ ಠೇವಣಿಯಿಂದ ಬರುವ ಬಡ್ಡಿಯ ಹಣದಲ್ಲೇ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ವೇತನ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಕುಲಪತಿ ಪ್ರೊ. ವಿದ್ಯಾಶಂಕರ್ ಅವರ ಯೋಜನೆಯಾಗಿತ್ತು.

ಹಾಗಾದ್ರೆ, ವಿಟಿಯು ಖಜಾನೆಗೆ ಈ 610 ಕೋಟಿ ಬಂದಿದ್ದು ಎಲ್ಲಿಂದ?

ಈ ಮೊತ್ತವು ವಿಟಿಯು ಖಜಾನೆಗೆ ಆಕಸ್ಮಿಕವಾಗಿ ಬಂದ ಹಣವಲ್ಲ. 2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ತೆರಿಗೆ ವಿನಾಯಿತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ವಿಟಿಯುನ ಕಾರ್ಪಸ್ ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರ ತರುವಾಯು ಶಿಕ್ಷಣ ಸಂಸ್ಥೆಗಳಿಗೆ ಸಿಗುವ ತೆರಿಗೆ ವಿನಾಯಿತಿಯ (12-A ನೋಂದಣಿ) ಅಗತ್ಯ ದಾಖಲೆಗಳನ್ನು ಒದಗಿಸಿ, ವಿಟಿಯು ಆಡಳಿತ ಮಂಡಳಿಯು ಸುದೀರ್ಘ ಕಾನೂನು ಹೋರಾಟ ನಡೆಸಿತ್ತು. ಈ ಹೋರಾಟದ ಫಲವಾಗಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದ್ದ ಅಸಲು ಮತ್ತು ಬಡ್ಡಿ ಸೇರಿದಂತೆ ಒಟ್ಟು 610 ಕೋಟಿ ರೂಪಾಯಿ ಹಣವನ್ನು ವಿಶ್ವವಿದ್ಯಾಲಯಕ್ಕೆ ಮರಳಿ ನೀಡಿದೆ.

ಏತನ್ಮಧ್ಯೆ, ವಿಟಿಯುಗೆ ಈ ಬೃಹತ್ ಮೊತ್ತ ಮರಳಿ ಬಂದ ಬೆನ್ನಲ್ಲೇ, ಆ ಹಣದ ಬಳಕೆಯ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ವಿರೋಧ ಪಕ್ಷವಾದ ಬಿಜೆಪಿ ಆಗ್ರಹಿಸುತ್ತಿದೆ. ಇತ್ತ ರಾಜ್ಯ ಸರ್ಕಾರವೇ ಆ ಹಣದ ಮೇಲೆ ಕಣ್ಣಿಟ್ಟು 250 ಕೋಟಿ ರೂ. ಕೇಳುತ್ತಿರುವುದು ಮತ್ತೊಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!