ಕನ್ನಡದಲ್ಲಿ 'ಬೇಟೆ ಸಾಹಿತ್ಯ'ವನ್ನು ಪೋಷಿಸುತ್ತಿರುವ ನರೇಂದ್ರ ರೈ ದೇರ್ಲ ಈಗ ಹೊಸ ಕೃತಿಯನ್ನು ಸಂಪಾದಿಸಿದ್ದಾರೆ. ಕೆದಂಬಾಡಿ ಜತ್ತಪ್ಪ ರೈ ಅವರ 'ಬೇಟೆಗಾರನ ಹುಲಿ ಹೆಜ್ಜೆ' ಕನಸು ಪ್ರಕಾಶನದ ಮತ್ತೊಂದು ಕೂಸು. ಕಾರ್ಕಳದ ಸಾಹಿತ್ಯ ಸಂಘದಲ್ಲಿ ಜ.19ರಂದು (ಇಂದು) ಬಿಡುಗಡೆಯಾಗುತ್ತಿದೆ... ಈ ಕೃತಿಯ ಆಯ್ದ ಭಾಗ ಇಲ್ಲಿ...
ಆ ವರುಷ ನಮ್ಮ ಮನೆಯ ಹಿರಿಯರು ನಮ್ಮ ನೆರೆಕೆರೆಯ ಕಾಡುಗಳನ್ನೆಲ್ಲಾ ಕಾಡುತ್ಪತ್ತಿಗಾಗಿ ಗೇಣಿಗೆ ಪಡೆದಿದ್ದರು. ಇದರಿಂದ ಒಂದೊಂದು ತುಂಡು ಕಾಡನ್ನು ಪಾಲುದಾರಿಕೆಯಲ್ಲಿ ನಾನೂ ವಹಿಸಿಕೊಂಡೆ. ನನ್ನ ಪಾಲಿಗೆ ಬಂದ ಕಾಡಿನಲ್ಲಿ ಆ ವರುಷ ಅಪಾರ ಕಾಡುತ್ಪತ್ತಿ ರಾಮಪತ್ರೆ, ಕರಿಮೆಣಸು, ಸೀಗೆ, ಉಂಡೆಹುಳಿ, ಹಂಡೆಗಟ್ಟಲೆ ಜೇನು.
ರಾಮಪತ್ರೆಯನ್ನು ದಿನವಿಡೀ ಕೈದು ರಾಶಿ ಮಾಡಿ ಗುದ್ದಿ ಹೂವು ಮತ್ತು ಗೋಟನ್ನು ವಿಂಗಡಿಸಿ ಹೂವನ್ನು ಗಾಡಿಯಲ್ಲಿ ಮನೆಗೆ ತರಬೇಕು. ಇದರೊಂದಿಗೆ ಕಾಲ ಕಾಲಕ್ಕೆ ತೆಗೆಯುವ ತೊಡ್ವೆ ಜೇನಿನ ಹಂಡೆ-ಹಂಡೆ, ಕರಿಮೆಣಸಿನ ಫಸಲು ಅದೆಷ್ಟೇ ಒಳ್ಳೆಯದಿರಲಿ ಕೊಯಿಲಿಗೆ ಬಂತೆಂದು ಗಣಿಸಬೇಕು. ಅದರಲ್ಲಿ ಸೀಗೆಕಾಯಿ ಮಾತ್ರ ಬೆಳೆದು ಒಣಗಿದರೂ ಉದುರದು. ಇದನ್ನು ಆರಾಮವಾಗಿ ಕೈದರೂ ಲಾಭವೇ. ಬೆಳೆದಷ್ಟು ಹೆಚ್ಚು ಬೆಲೆ ಬರುತ್ತದೆ. ಮರದ ಗೆಲ್ಲುಗಳಲ್ಲಿ ತಗುವ ಪರಿಯೇ, ಕುಡ್ವೋಳು ಇದೇ ಜಾತಿಯ ಇನ್ನಿತರ ಜೇನು ತೊಟ್ಟಿಯನ್ನು ಮರದಿಂದ ಇಳಿಸಲು ಪಕ್ವ ಕಾಲಮಾನ ದಿನಗಳನ್ನು ಕಾಯಬೇಕು.
ಆ ದಿನ ಒಂದು ಗಾಡಿ ತುಂಬಾ ರಾಮಪತ್ರೆಯನ್ನು ಗುದ್ದಿ ಗೋಟುಗಳನ್ನು ವಿಂಗಡಿಸಿ ಪತ್ರೆಯನ್ನು ಮನೆಗೆ ತಂದು ಒಣಗಿಸಬೇಕೆನ್ನುವ ಇರಾದೆಯಿಂದ ಗಾಡಿಯನ್ನು ಕಾಡಿಗೆ ತರುವಂತೆ ಗಾಡಿಯಾಳಿಗೆ ಸೂಚಿಸಿ ಇನ್ನುಳಿದ ಕೆಲಸದವರೊಂದಿಗೆ ನಾನು ಕಾಡಿಗೆ ನಡೆದೆ. ರಾಮಪತ್ರೆ ಜಮೆಯಾದ ಸ್ಥಳಕ್ಕೆ ಮಧ್ಯಾಹ್ನದ ಹೊತ್ತು ಗಾಡಿ ಬಂತು. ಆದರೆ ಆ ಬೆಟ್ಟದ ಗಾಡಿಯೆತ್ತುಗಳು ತಿದಿಯೊತ್ತಿದಂತೆ ಉಸಿರು ಬಿಡುತ್ತಿದ್ದವು. ಒಂದು ಎತ್ತಿಗೆ ಅಲ್ಲಲ್ಲಿ ತರಚಿದ ಗಾಯವಾಗಿತ್ತು. ಗಾಡಿಯವ ಗಾಡಿಯನ್ನು ಓಡಿಸಿಕೊಂಡು ಬರುವ ರಭಸದಲ್ಲಿ ಅದೆಲ್ಲಿಯಾದರೂ ಮಗುಚಿ ಬಿತ್ತಾ ಎಂದೆನಿಸಿತು. ಗಾಡಿಯೋಡಿಸುವುದರಲ್ಲಿ ಪರಿಣತ ಎಂದೇ ಖ್ಯಾತಿ ಪಡೆದ ಮಮ್ಮದೆ ಬ್ಯಾರಿ ನಮ್ಮ ಗಾಡಿ ಓಡಿಸುವವ, ಅವನ ಸಾರಥ್ಯದಲ್ಲಿ ಹಾಗಾಗುವುದು ಸಾಧ್ಯವೇ ಇಲ್ಲ.
ಗಾಡಿಯೆತ್ತುಗಳನ್ನು ನೊಗಕ್ಕೆ ಹೂಡಿದ ನಂತರ ಅದು ನಾಗಾಲೋಟದಿಂದಲೇ ಓಡುತ್ತಿರಲಿ- ಇವನು ಗಾಡಿಯ ಮೂತಿಯ ಮುಂಗಡೆಯಿಂದ ನುಗ್ಗಿ ಕತ್ತರಿಯೇರಿದವನಲ್ಲದೆ- ಉಳಿದ ಗಾಡಿಯಾಳುಗಳಂತೆ ಕತ್ತರಿಯ ಹತ್ತಿರ ಮೊದಲೇ ಬಂದು ನಿಂತು ಗಾಡಿಯೇರಿದವನಲ್ಲ. ಆದುದರಿಂದ ಗಾಡಿ ಮಗುಚಿ ಬಿದ್ದು ಆದ ತರಚು ಗಾಯಗಳಿದಲ್ಲ. ಇದೇನೆಂದು ಮಮ್ಮದೆಯ ಮುಖವನ್ನು ಪ್ರಶ್ನಾರ್ಥಕವಾಗಿ ದಿಟ್ಟಿಸಿದಾಗ ಆತನಂದ ಮಾತು ನಂಬಲಸಾಧ್ಯವಾದುದು. ನನ್ನ ಬೇಟೆಯ ಅನುಭವಕ್ಕೆ ಅಚ್ಚರಿಯ ಆಘಾತವನ್ನಿತ್ತು. ಎಚ್ಚರಿಸುವಂತಹುದು.
'ಧನಿಗಳೇ ಕವಲು ಕೊಂಬಿನ ಕಾಡು ಕಡವೆಯೊಂದು ಬಜಕ್ಕುರೆ ತಾರಿನ ತಿರ್ಗಾಸಿನ ಬಳಿ ಕಾಡಿನಿಂದ ಓಡಿ ಬಂದಿತು. ನಾನು ಹಾಕಿದ ಬೊಬ್ಬೆಯನ್ನೂ ಗಣನೆಗೆ ತೆಗೆದುಕೊಳ್ಳದೆ ಗಾಡಿ ಎತ್ತುಗಳಿಗೆ ಹಾಯತೊಡಗಿತು. ನಾನು ರಭಸದಿಂದ ಗಾಡಿಯನ್ನು ಮುಂದೋಡಿಸದಿರುತ್ತಿದ್ದರೆ ಆ ಗಡವ ಕಡವೆಯ ಕೊಂಬಿನ ಆಘಾತದಿಂದ ನಮ್ಮೆತ್ತುಗಳು ಹೊಟ್ಟೆ ಸೀಳಿಸಿಕೊಂಡು ಬರಬೇಕಿತ್ತು. 'ಅಲ್ಲಾ'ನ ದಯೆಯಿಂದ ಇದೀಗ ಅದ್ಹೇಗೋ ಪಾರಾಗಿ ಬಂದೆವು. ಇನ್ನು ಮರಳಿ ಹೋಗುವಾಗ್ಗೆ ಅದು ತರುಬಿ ನಿಂತರೆ ದೇವರೇ ಗತಿ ಎಂದು ತನಗೂ ಎತ್ತುಗಳಿಗೆ ಆದ ಬವಣೆಯನ್ನು ಬಣ್ಣಿಸಿದನು.
ನಾನಂದೆ 'ಮರಳುವಾಗ್ಗೆ ನಮ್ಮೊಂದಿಗೆ ಕೆಲಸದ ಆಳುಗಳಿದ್ದಾರಲ್ಲ, ಅವರು ಗಾಡಿಯ ಹಿಂದು ಮುಂದಿದ್ದರೆ ಕಡವೆಯು ಗಾಡಿಯ ಹತ್ತಿರ ಬರದು. ಅದೇನು ಪೆಟ್ಟಾದ ಹುಲಿಯೇ ಹಂದಿಯೇ? ನಮ್ಮೆದುರು ಬಂದಲ್ಲಿ ನಮ್ಮವರ ದೊಣ್ಣೆ ಕತ್ತಿಯ ಪೆಟ್ಟಿಗೆ ಹೆದರಿ ಎದುರಿನ ಕಾಡು ಸೇರದಿರದು' ಎಂದು ರಾಮಪತ್ರೆಯನ್ನು ಗಾಡಿಗೇರಿಸುವ ಕೆಲಸವನ್ನು ಮುಂದುವರಿಸಿದೆವು.
ಸುಮಾರು ಸಾಯಂಕಾಲ ಐದು- ಆರು ಗಂಟೆಯ ಹೊತ್ತಿಗೆ ಅಂದಿನ ಕಾಡಿನ ಕಾಡುತತ್ತಿಯ ಸಂಗ್ರಹದ ಕೆಲಸ ಮುಗಿಯಿತು. ಗಾಡಿಗೆ ಎತ್ತುಗಳನ್ನು ಕಟ್ಟಿ ಮನೆಗೆ ಅಭಿಮುಖರಾದೆವು. ಗಾಡಿ ಅದೇ ಬಜಕ್ಕುರೆ ತಾರಿನ ಏರು ಚಡಾವಿನ ಬಳಿ ತಲುಪಿತು. ಆಗ್ಗೆ ಆ ಗಡವ ಕಡವೆ ಅದೆಲ್ಲಿ ಕಾದಿತ್ತೋ, ಎತ್ತುಗಳ ಮೇಲೆ ಕೋಪದಿಂದ ಏದುಸಿರು ಬಿಡುತ್ತಾ ಎರಗಿತು.
ಗಾಡಿಯೊಳಗಿದ್ದವರು ನಿರೀಕ್ಷಿಸಿರದಿದ್ದ ಈ ಹಠಾತ್ ಆಘಾತದಿಂದ ದಿಗ್ಬ್ರಾಂತರಾದರು. ದಂಗಾದವರು ಎಚ್ಚೆತ್ತು ಒಮ್ಮೆಲೇ ಹೊಡೆದ ಹೋಹಾಕಾರಕ್ಕೆ ಕಡವೆಯ ಕೊಂಬಿನ ಆಘಾತಕ್ಕೆ ಘಾಸಿಗೊಂಡಿದ್ದ ಎತ್ತುಗಳು ಗಾಡಿಯನ್ನೆಳೆದುಕೊಂಡು ಅಬ್ಬರಿಸಿಕೊಂಡು ಓಡತೊಡಗಿದವು. ಗಾಡಿಯಲ್ಲಿ ಬರಿಗೈಯಲ್ಲಿ ಕೂತಿದ್ದೆ ನಾನು. ಸುಮಾರು ಏಳಡಿ ಎತ್ತರ, ಒಂಬತ್ತು ಉದ್ದದ ಕಾಡೆಮ್ಮೆಯಂತೆ ತೋರುವ ಕವಲು- ಕವಲು ಕೊಂಬಿನ ಕಡವೆಯು ಬುಸುಗುಡುತ್ತಾ ಗಾಡಿ ಎತ್ತುಗಳನ್ನು ಅಡ್ಡಗಟ್ಟಿ ಹಾಯಲು ಧಾವಿಸಿ ಬರುತ್ತಿದೆ.
ಇದನ್ನು ಕಂಡ ಕೆಲಸದಾಳುಗಳು ಕಡವೆಯತ್ತ ಕಲ್ಲು ತೂರಿ ಕಾಡಿನತ್ತ ಓಡಿಸಲು ಯತ್ನಿಸಿದರು. ಕೆಲಸದವರು ಬೀರಿದ ಸತತ ಕಲ್ಲುಗಳು ಪರಿಣಾಮ ಬೀರಿತು. ಕಡವೆಯು ಕಾಡನ್ನು ನುಗ್ಗಿತು. ಮನೆ ಸೇರಿದಾಗ ಮಮ್ಮದೆಯೆಂದ 'ಧನಿಗಳಲ್ಲಿ ನಾಳೆ ನೀವು ಕೋವಿ ಸಮೇತ ಗಾಡಿಯಲ್ಲಿ ಬರಬೇಕು. ಬರದಿದ್ದಲ್ಲಿ ನಾನಾ ಕಡೆ ಗಾಡಿ ಹೊಡೆಯುವುದಿಲ್ಲ. ನಾಳೆ ನಮ್ಮ ಈ ಸಾವಿರ ರುಪಾಯಿ ಬೆಳೆಯ ಗಾಡಿ ಹೋರಿಗಳಿಗೆ ಆ ಕಾಡುಕಡವೆಯಿಂದ ಏನಾದರೂ ಅಪಾಯವು ಬಂದರೆ ಸುಬ್ರಹ್ಮಣ್ಯಕ್ಕೆ ಹೋಗಿರುವ ಯಜಮಾನರಿಂದ ನಾನು ಮೆಟ್ಟಿನಲ್ಲಿ ಹೊಡಿಸಿಕೊಳ್ಳಬೇಕಾದೀತು' ಎಂದುದು ಸಮಯೋಚಿತ ಎಚ್ಚರಿಕೆಯೂ ಆಗಿತ್ತು.