ದೇವರಾಣಿ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಂಡತಿ ಚೆನ್ನಮ್ಮ ಯಾವತ್ತೂ ಬ್ಯುಸಿ. ಮಕ್ಕಳ, ಮೊಮ್ಮಕ್ಕಳ ಮೇಲಿನ ಅವರ ಕಾಳಜಿ ಲೋಕಕ್ಕೆ ಮಾದರಿ...
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೀಗ ಬ್ಯುಸೀ ಬ್ಯುಸಿ. ಆದರೆ, ಅವರ ಹೆಂಡತಿ ಚೆನ್ನಮ್ಮ ಯಾವತ್ತೂ ಬ್ಯುಸಿ. ಮಕ್ಕಳ, ಮೊಮ್ಮಕ್ಕಳ ಮೇಲಿನ ಅವರ ಕಾಳಜಿ ಲೋಕಕ್ಕೆ ಮಾದರಿ...
ನಿಮ್ಮ ಮನೆಯಲ್ಲಿ ಎಲ್ಲರೂ ರಾಜಕೀಯಕ್ಕಿಳಿದಿದ್ದಾರೆ. ನೀವು ಯಾಕೆ ರಾಜಕೀಯಕ್ಕಿಳಿಯಲಿಲ್ಲ?
ನಂಗೆ ಮನೇಲೇ ಹೆಚ್ಚು ಜವಾಬ್ದಾರಿ. ಮಕ್ಕಳು, ಮೊಮ್ಮಕ್ಕಳು, ಎಲ್ಲರ ಕ್ಷೇಮವೂ ನನ್ನ ಹೊಣೆಯಾಗಿದೆ. ಅವರ ಹಿತಕ್ಕಾಗಿ ನಾನು ಸದಾ ಕಣ್ಣಿಟ್ಟಿರುತ್ತೇನೆ ಮತ್ತು ಕಣ್ಗಾವಲಾಗಿರುತ್ತೇನೆ.
ದೇವೇಗೌಡರು ಪ್ರಧಾನಮಂತ್ರಿ ಆದಾಗ ನಿಮಗಾದ ಖುಷಿ ಬಗ್ಗೆ ಹೇಳಿ...
ತುಂಬಾ ಖುಷಿಯಾಯ್ತು. ಅವರು ತುಂಬಾ ಚೆನ್ನಾಗಿ ಕೆಲಸ ಮಾಡ್ತಿದ್ರು. ಬಿಡುವಿಲ್ಲದಂತೆ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 'ಬನ್ನಿ, ಪ್ರಧಾನಿಯಾಗಿ ಅಂತ ಕರೆದು ಕೊಟ್ರಲ್ಲ' ದೇಶದ ಜನ ಆಗ ನನಗಾದ ಪುಳಕ ಅಷ್ಟಿಷ್ಟಲ್ಲ.
ದೆಹಲಿಯಲ್ಲಿದ್ದಾಗ ನೀವು ಹಿಂದಿ ಕಲಿಯಲು ಪ್ರಯತ್ನ ಪಟ್ಟಿದ್ರಾ?
ನಾನು ಅಲ್ಲಿ ಇಲ್ಲಿ ಎರಡೂ ಕಡೆ ಇರ್ತಿದ್ದೆ. ಇಲ್ಲಿ ನಮ್ಮ ಅತ್ತೆಯವರಿಗೆ ಸ್ವಲ್ಪ ಹುಷಾರಿರಲಿಲ್ಲ. ಹಾಗಾಗಿ ಇಲ್ಲಿಗೆ ಆಗಾಗ ಬರ್ತಿದ್ದೆ, ನಂಗೆ ಹಿಂದಿ ಕಲಿಯೋದಿಕ್ಕೆ ತುಂಬಾ ಇಷ್ಟ ಇತ್ತು. ನಾನು ಹೊಳೆನರಸೀಪುರದಲ್ಲಿದ್ದಾಗ, ಹಿಂದಿ ಟೀಚರ್ ಇದ್ರು, ರಾಂಪ್ರಸಾದ್ ಅಂತ. ಅವರ ಬಳಿ ಹಿಂದಿ ಕಲಿಯು ಆಸೆ ಇತ್ತು. ನಿತ್ಯ ಸಂಜೆ 4.30ಕ್ಕೆ ಕ್ಲಾಸ್ ನಡೀತಿತ್ತು. ಆದ್ರೆ, ಆಗ ಮಕ್ಕಳ ವಿದ್ಯಾಭ್ಯಾಸ, ಬರೋರು ಹೋಗೋರು... ಏನೇನೋ ಅಡೆತಡೆ. ಹೀಗಾಗಿ ಕಲಿಯೋದಿಕ್ಕೆ ಆಗಲಿಲ್ಲ. ಡೆಲ್ಲೀಲಿ ಸ್ವಲ್ಪ ಸ್ವಲ್ಪ ಟ್ರೈ ಮಾಡಿದೆ. ಆದ್ರೆ ಮಧ್ಯ ಮಧ್ಯ ಇಲ್ಲಿಗೂ ಬರ್ಬೇಕಾದ್ರಿಂದ ಆ ಅವಕಾಶವೂ ತಪ್ಪಿಹೋಯಿತು.
ಅವರು ಪ್ರಧಾನಮಂತ್ರಿಗಳಾಗಿದ್ದಾಗ ನಿಮ್ಮ ಪ್ರೊಟೋಕಾಲ್ ಹೇಗಿತ್ತು?
ಅವರು ಫಾರಿನ್‌ಗೆ ಹೋದಾಗ್ಲೆಲ್ಲ ನಾನೂ ಜೊತೇಲಿ ಹೋಗ್ತಿದ್ದೆ. ಇಂಡಿಪೆಂಡೆನ್ಸ್ ಡೇ, ರಿಪಬ್ಲಿಕ್ ಡೇ ಮುಂತಾದ ಫಂಕ್ಷನ್ಸ್‌ಗೆಲ್ಲ ನಾನೂ ಅವರ ಜೊತೆಗೆ ಹೋಗ್ತಿದ್ದೆ. ಯುರೋಪ್‌ನಲ್ಲಿ ಎಲ್ಲ ದೇಶದ ಪ್ರಧಾನಿಗಳ ಮೀಟಿಂಗ್ ಇತ್ತು. ಆಗ್ಲೂ ಹೋಗಿದ್ದೆ. ನಾನು ಯಾವಾಗ್ಲೂ ರೇಷ್ಮೆ ಸೀರೆ ಉಟ್ಕೊಂಡು ಹೋಗ್ತಿದ್ದೆ. ಎಲ್ಲರೂ ತುಂಬಾ ಇಷ್ಟಪಡ್ತಿದ್ರು.
ಡೆಲ್ಲೀಲಿದ್ದಾಗ ಮರೆಯಲಾಗದ ಘಟನೆ?
ಅವರು ಪ್ರಧಾನಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದಾಗ.
ದೇವೇಗೌಡರು ತುಂಬಾ ಸೀರಿಯಸ್. ಆದರೆ ಅವರನ್ನು ಹತ್ತಿರದಿಂದ ಕಂಡ ನಿಮಗೆ, ಅವರ ಸ್ವಭಾವ ಹೇಗನಿಸುತ್ತೆ?
ಅವ್ರು ತುಂಬಾ ಸೀರಿಯಸ್ ಆಗಿದ್ದಾಗ ನಾನು ಸುಮ್ಮನೆ ಇದ್ದುಬಿಡುತ್ತೇನೆ. ಖುಷಿ ಖುಷಿಯಲ್ಲಿ ಮಾತಾಡಿದಾಗ ಮಾತಾಡೋದು. ಅವರಿಗೆ ಕೆಲಸಗಳು ಅಚ್ಚುಕಟ್ಟಾಗಿ ನಡೀಬೇಕಷ್ಟೇ. ಇಲ್ದಿದ್ರೆ ತುಂಬಾ ಸಿಟ್ಟು ಬಂದುಬಿಡುತ್ತೆ. ಸನ್ನಿವೇಶ ನೋಡ್ಕೊಂಡು ಮಾತಾಡೋದುಅಷ್ಟೆ.
ಮನೆಯಲ್ಲಿ ಎಲ್ಲರೂ ರಾಜಕಾರಣಿಗಳು, ಅಲ್ಲಿಯೂ ಅದೇ ವಾತಾವರಣ ಇರುತ್ತಾ?
ಹಾಗೇನೂ ಇಲ್ಲ. ಏನೋ ಎಲೆಕ್ಷನ್ ಟೈಮ್‌ನಲ್ಲಿ ಅಂಥ ವಾತಾವರಣ ಇರುತ್ತಷ್ಟೇ.
ದೇವೇಗೌಡರು ನಿಮ್ಮಿಂದೇನಾದರೂ ರಾಜಕೀಯ ಸಲಹೆ ಪಡೆಯುತ್ತಾರಾ?
ಆ ಥರ ಏನಿಲ್ಲ. ಅವರಿಗೆ ಎಲ್ಲಾ ಗೊತ್ತಿರುತ್ತೆ. ಎಲ್ಲ ನಿರ್ವಹಿಸ್ತಾರೆ. ಅವರಿಗೆ ತೊಂದರೆಯಾಗದಂತೆ, ಮನೇ ಕಡೆ ಯೋಚ್ನೆ ಇಲ್ಲದಂತೆ ನಾವೆಲ್ಲ ನೋಡ್ಕೊತೀವಷ್ಟೇ.
ದೇವೇಗೌಡರಲ್ಲಿ ನೀವು ಅತಿಯಾಗಿ ಮೆಚ್ಚಿಕೊಂಡ ಗುಣ?
ಕೈಗೆ ತಗೊಂಡ ಕೆಲ್ಸ ಪೂರ್ಣವಾಗುವವರೆಗೆ ಅವರಿಗೆ ನೆಮ್ಮದಿಯಿರಲ್ಲ, ಅದು ನಂಗೆ ತುಂಬಾ ಇಷ್ಟ.
ನಿಮ್ಮ ಬಾಲ್ಯದ ಬಗ್ಗೆ ಹೇಳಿ.
ನಾನು ಹುಟ್ಟಿದ್ದು ಹಾಸನ ತಾಲೂಕಿನ ಶಾಂತಿಗ್ರಾಮದ ಮುತ್ತಿಗೇ ಹಿರಳ್ಳೀಲಿ. ನಮ್ಮ ತಂದೆ ಪಟೇಲರಾಗಿದ್ರು. ನಾವು 8 ಜನ ಮಕ್ಳು. ನಮ್ಮೂರಿನ ಪ್ರೈಮರಿ ಸ್ಕೂಲ್‌ನಲ್ಲಿ ಓದಿದೆ. ಆಗೆಲ್ಲ ಹೈಸ್ಕೂಲ್‌ಗೆ ಹೆಣ್ಣುಮಕ್ಕಳನ್ನು ಕಳಿಸ್ತಿರಲಿಲ್ಲ. ಆಮೇಲೆ ಮಿಡ್ಲ್‌ಸ್ಕೂಲ್‌ಗೆ ಹೋದೆ. ನಾಲ್ಕು ಮೈಲಿ ನಡ್ಕೊಂಡು ಹೋಗ್ಬೇಕಿತ್ತು. 17 ವರ್ಷಕ್ಕೆ ನನ್ಗೆ ಮದ್ವೆ ಆಯ್ತು. ನಮ್ಮ ತಂದೆಯವರ ಹೆಸ್ರೂ ದೇವೇಗೌಡ ಅಂತ್ಲೇ! ಅಮ್ಮ ಕಾಳಮ್ಮ. ನಾನು ಮದುವೆಯಾಗಿ ಬಂದಾಗ, ಇವರದ್ದು ಅವಿಭಕ್ತ ಕುಟುಂಬ. ನಮ್ಮೆಜಮಾನ್ರು ಮುಂಚೆ ಕಂಟ್ರಾಕ್ಟರ್ ಆಗಿದ್ರು, ಆಮೇಲೆ ತಾಲೂಕು ಬೋರ್ಡ್ ಮೆಂಬರ್ ಆದ್ರು, ಹಾಗೇನೇ ರಾಜಕೀಯಕ್ಕೆ ಇಳಿದರು. ಆಗ್ಲಿಂದ್ಲೂ ಬರೋರು ಹೋಗೋರಿಗೆ ಊಟ ಉಪಚಾರ, ಮಕ್ಳನ್ನ ನೋಡ್ಕೋ, ಇದೇ ಸರಿಯಾಗ್ತಿತ್ತು. ಮದ್ವೆಯಾಗಿ ಬಂದಾಗ ಅಡುಗೆ ಮಾಡಕ್ಕೆ ಬರ್ತಿರ್ಲಿಲ್ಲ. ಎಲ್ಲ ಇಲ್ಲಿ ಬಂದು ಕಲಿತೆ.
ನಿಮ್ಮ ಹವ್ಯಾಸಗಳೇನು?
ಓದೋದು ಅಂದ್ರೆ ತುಂಬಾ ಇಷ್ಟ. ಆಗಿನ ಕಾಲದಲ್ಲಿ ಬೇರೆಡೆ ಕಳಿಸಿ ಓದಿಸ್ತಿರಲಿಲ್ಲ. ಹಾಗಾಗಿ ಮುಂದಕ್ಕೆ ಓದಕ್ಕಾಗ್ಲಿಲ್ಲ. ನಂಗೆ ಓದಬೇಕು, ಇಂಗ್ಲಿಷಿನಲ್ಲಿ ಮಾತಾಡಬೇಕು, ಕಲೀಬೇಕು ಅಂತ ತುಂಬಾ ಆಸೆಯಿತ್ತು. ನನ್ನ ಮುಖ್ಯ ಹವ್ಯಾಸ ಅಂದ್ರೆ ದೇವ್ರ ಪೂಜೆ. ಅದರಿಂದ ನನಗೆ ತುಂಬಾ ನೆಮ್ಮದಿ ಸಿಗುತ್ತೆ. ರಾಮಾಯಣ, ಮಹಾಭಾರತ ಓದಿದ್ದೀನಿ. ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಹಗ್ಗದಾಟ, ಕೇರಂ ತುಂಬಾ ಆಡ್ತಿದ್ದೆ.
ಮರೆಯಲಾಗದ ಒಂದು ಘಟನೆ ಹೇಳಿ...
ಅಂದು ಮಹಾಶಿವರಾತ್ರಿ. ನಮ್ಮೂರ ದೇಗುಲಕ್ಕೆ ನಾನೂ ನನ್ನ ಸೊಸೆ ಹೋಗಿದ್ವಿ. ಶಿವನ ಮುಂದೆ ಧ್ಯಾನ ಮಾಡ್ತಾ ಕೂತಿದ್ವಿ. ಬೆಳಗ್ಗಿಂದ ಉಪವಾಸ. ಆಗ ಇದ್ದಕ್ಕಿದ್ದಂತೆ, ನನ್ನ ತಲೆ ಮೇಲಿಂದ ಬೆಂಕಿ ಸುರಿದಂತಾಯ್ತು. ಉರಿ ತಡೆಯಲಾಗದೆ ಕಣ್ಮುಚ್ಚಿ ಮುಂದೆ ಬಗ್ಗಿದ್ದಷ್ಟೇ ಗೊತ್ತು... ಕ್ಷಣಾರ್ಧದಲ್ಲಿ ತಲೆ, ಕತ್ತು, ಬೆನ್ನು, ಮುಖ, ಕೈ ಎಲ್ಲ ಸುಟ್ಟುಬಿಟ್ಟಿತ್ತು. ನಮ್ಮೆಜಮಾನ್ರ ತಮ್ಮನ ಮಗ ಚೊಂಬಲ್ಲಿ ತೀರ್ಥ ತಂದಹಾಗೆ ಆ್ಯಸಿಡ್ ಬುಟ್ಟೀಲಿಟ್ಕೊಂಡು ಬಂದು ನನ್ನ ಮೇಲೆ ಎರಚಿಬಿಟ್ಟ. ಅದೇ ಸ್ಥಿತಿಯಲ್ಲಿ ಹತ್ತಿರದ ಹಳ್ಳಿಗೆ ಹೋಗಿ ನೀರೆರಚಿಕೊಂಡೆ. ಉರೀ ಉರಿ. ಆ ಕರಾಳ ದಿನದ ದುರ್ಘಟನೆಯನ್ನು ಮರೆಯುವ ಹಾಗಿಲ್ಲ. ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರ್ಕೊಂಡು ಬಂದ್ರು. 2 ತಿಂಗಳು ಪ್ರಜ್ಞೆ ಇರಲಿಲ್ಲ. ಸುಮಾರು ದಿನ ಮನೇಲಿ ಕನ್ನಡಿ ಮುಂದೆ ಪೇಪರ್ ಮುಚ್ಚಿಬಿಟ್ಟಿದ್ರು. ನಾನು ಹೆದರ್ಕೋತೀನಿ ಅಂತ. ಆಮೇಲೆ ನಾನು ಹೇಳ್ದೆ 'ತಲೆ ಕೆಡಿಸಿಕೊಳ್ಳಬೇಡಿ. ಏನೂ ಆಗಲ್ಲ' ಅಂತ ನಾನೇ ಧೈರ್ಯ ಹೇಳಿದೆ. ಏನೋ ಇಷ್ಟರ ಮಟ್ಟಿಗೆ ಆ ದೇವಿ ಕಾಪಾಡಿದ್ದಾಳೆ.
ಪತಿ ಮೆಚ್ಚಿಕೊಂಡ ನಿಮ್ಮ ಗುಣ-ತಾಳ್ಮೆಯಿಂದ ಎಲ್ಲನೂ ನಿಭಾಯಿಸಿಕೊಂಡು ಹೋಗ್ತೀಯ ಅಂತ ಯಾವಾಗ್ಲೂ ಮೆಚ್ಚಿಕೊಳ್ತಾರೆ.
ಇಷ್ಟದ ತಿಂಡಿ- ಚಕ್ಕುಲಿ
ಸಿನಿಮಾ- ಸತಿ ಸಾವಿತ್ರಿ, ಸತ್ಯ ಹರಿಶ್ಚಂದ್ರ.
ನಟ- ಡಾ. ರಾಜ್‌ಕುಮಾರ್
ನಟಿ- ಪಂಡರೀಬಾಯಿ
ಆಟ- ಹಗ್ಗದಾಟ, ಕೇರಂ.
ವ್ಯಕ್ತಿ- ಗಾಂಧೀಜಿ
ಪುಸ್ತಕ- ರಾಮಾಯಣ, ಮಹಾಭಾರತ.
-ಸಂದರ್ಶನ: ಗೀತಾ ಶ್ರೀನಿವಾಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.