ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಪೋಖರಾ ಎಂಬ ಪ್ರೇಮ ಕಾವ್ಯ

ಪೋಖರಾ ಹಿಮಾಲಯದ ಪ್ರೇಮಕಾವ್ಯ, ದೃಶ್ಯ ಕಾವ್ಯ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡ ಪೋಖರಾ, ನೇಪಾಳದ ಎರಡನೇ ದೊಡ್ಡ ನಗರ...

Srinivasa Murthy VN
Updated On : 22 Mar 2014, 1:48 am

ಪೋಖರಾ ಹಿಮಾಲಯದ ಪ್ರೇಮಕಾವ್ಯ, ದೃಶ್ಯ ಕಾವ್ಯ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡ ಪೋಖರಾ, ನೇಪಾಳದ ಎರಡನೇ ದೊಡ್ಡ ನಗರ...

ನೇಪಾಳ ಒಂದರ್ಥದಲ್ಲಿ ಆಯಸ್ಕಾಂತ. ಆ ಲೆಕ್ಕದಲ್ಲಿ ವಿಶ್ವಪ್ರವಾಸಿಗರು ಕಬ್ಬಿಣ. ಪ್ರವಾಸಿಗರನ್ನು ಸೆಳೆದು, ತನ್ನ ಹಿಮದೊಳಗೆ ಕರಗಿಸಿಬಿಡುವ ಮಹಾನ್ ಶಕ್ತಿ ಈ ಪುಟ್ಟ ದೇಶಕ್ಕಿದೆ. ಭಾರತೀಯರು ನೇಪಾಳಕ್ಕೆ ಹೋಗಿ ಬರುವುದು ಬಹಳ ಸುಲಭ. ಯಾವುದೇ ವೀಸಾದ ಅವಶ್ಯಕತೆಯಿಲ್ಲ.
ನೇಪಾಳಕ್ಕೆ ಬರುವ ಪ್ರತಿ ಪ್ರವಾಸಿಗ ಮೊದಲು ನೋಡಲು ಆಯ್ದುಕೊಳ್ಳುವುದು ಕಠ್ಮಂಡು ನಗರವನ್ನ. ಆತನ ಎರಡನೇ ಭೇಟಿ, 'ಪೋಖರಾ' ಕಡೆಗೆ. ಪೋಖರಾ ಹಿಮಾಲಯದ ಪ್ರೇಮಕಾವ್ಯ, ದೃಶ್ಯ ಕಾವ್ಯ. ಹಿಮಾಲಯದ ಚೆಲುವೆಲ್ಲವನ್ನೂ ಮೈಗೂಡಿಸಿಕೊಂಡ ಪೋಖರಾ, ನೇಪಾಳದ ಎರಡನೇ ದೊಡ್ಡ ನಗರ. ಆದರೂ ನಗರೀಕರಣದ ಭರಾಟೆ ಅಷ್ಟಾಗಿ ತಾಕಿಲ್ಲ. ನೇಪಾಳದ ಪಶ್ಚಿಮ ಗಂಡಕಿ ವಿಭಾಗದ ಕಾಸ್ಕಿ ಜಿಲ್ಲೆಯ ರಾಜಧಾನಿಯೂ ಆಗಿರುವ ಪೋಖರಾ, ಕಠ್ಮಂಡುವಿನಿಂದ 200 ಕಿ.ಮೀ. ದೂರದಲ್ಲಿದೆ. ಜಗತ್ತಿನ 10 ಅತಿ ಎತ್ತರದ ಪರ್ವತ ಶ್ರೇಣಿಗಳಲ್ಲಿ 3 ಈ ನಗರದ ಸುತ್ತಮುತ್ತಲಿವೆ; ಅನ್ನಪೂರ್ಣ, ದೌಲಾಗಿರಿ, ಮನಸ್ಸೂ. ಹಿಮಾಲಯದ ಅತ್ಯಂತ ರೋಮಾಂಚನಕಾರಿ ಅನುಭವ ನೀಡುವ ಸಾಹಸಿಗರ ಚಾರಣ, ಪರ್ವತಾರೋಹಣ, ಪ್ಯಾರಾಗ್ಲೈಡಿಂಗ್, ರಿವರ್ ರ್ಯಾಪ್ಟಿಂಗ್‌ನಷ್ಟು ಮಳೆ ಬೀಳುವ ಇಲ್ಲಿನ ಪ್ರದೇಶದ ಸುತ್ತಮುತ್ತಲಿನ ನದಿಗಳು ಸದಾ ಭೋರ್ಗರೆಯುತ್ತಲೇ ಇರುತ್ತವೆ. ದಾರಿಯುದ್ದಕ್ಕೂ ಹತ್ತಾರು ಜಲಪಾತಗಳು. ಆಕಾಶದೆತ್ತರಕ್ಕೆ ಹಬ್ಬಿದ ಹಿಮಾಲಯದ ಪರ್ವತಗಳನ್ನಂತೂ ನೋಡುವುದೇ ಹಬ್ಬ. ನಗರವನ್ನು ಸೀಳಿ ಹರಿವ ಸೇಂಟಿ ಗಂಡಕಿ ನದಿಯಂತೂ ನೂರಾರು ಕೊರಕಲ್ಲುಗಳನ್ನು ನಿರ್ಮಿಸಿದೆ. ಈ ನಗರ ಎಲ್ಲ ವಿಧದ ಪ್ರವಾಸಿಗರಿಗೂ ಒಂದು ನೆಚ್ಚಿನ ತಾಣ. ಚಾರಣಿಗರಿಗೆ, ಪ್ರೇಮಿಗಳಿಗೆ, ಅಧ್ಯಾತ್ಮದಾಸರಿಗೆ, ಶಾಂತಿ ಬಯಸುವ ತಪಸ್ವಿಗಳಿಗೆ... ಎಲ್ಲರಿಗೂ ಪ್ರಶಸ್ತ. ಇಂಥ ಪೋಖರಾದಲ್ಲಿ ನೋಡತಕ್ಕ ಹತ್ತಾರೂ ಸ್ಥಳಗಳಿವೆ.

ಫೇವಾ ಸರೋವರ
ನಗರದ ಹೊರ ಭಾಗದ ಈ ಪ್ರಾಕೃತಿಕ ಸರೋವರದ ಸುತ್ತಲೂ ಹಚ್ಚ ಹಸುರಿನ ಬೆಟ್ಟಗುಡ್ಡಗಳ ಸೆಕ್ಯೂರಿಟಿ ಇದೆ. 4-5 ಚ.ಕಿ.ಮೀ. ಹಬ್ಬಿರುವ ತಿಳಿ ನೀರಿನ ಈ ಸರೋವರ, 2 ಕಿ.ಮೀ.ನಷ್ಟು ಅಗಲವಿದೆ. ಬೋಟಿಂಗ್, ಜಲಕ್ರೀಡೆಗಳ ಸ್ವರ್ಗವಿದು. ಇದು ನೇಪಾಳದ 2ನೇ ಅತಿ ದೊಡ್ಡ ಸರೋವರವಾಗಿದೆ. ಇದರ ಮಧ್ಯದಲ್ಲಿ ದ್ವೀಪವಿದ್ದು, ಅಲ್ಲಿ ಅಂಬಾಮಾತೆಯ ಮಂದಿರವಿದೆ.

ಮಾಚಪುಚ್ಛ್ರೆ
ಇದೊಂದು ಪರ್ವತ. ಮಾಚಪುಚ್ಛ್ರೆ ಅಂದ್ರೆ ನೇಪಾಳಿಯಲ್ಲಿ 'ಮೀನಿನ ಬಾಲ' ಎಂದರ್ಥ. ಪರ್ವತವೂ ಮೀನಿನ ಬಾಲದಂತೆಯೇ ಇದೆ. 6,993 ಮೀ. ಎತ್ತರ. ಈ ಪರ್ವತ ಪೋಖರಾದ ಹೊರಭಾಗದಲ್ಲಿದೆ. ಶಿವನ ಲಿಂಗದಂತೆ ಗೋಚರಿಸುವ ಈ ಪರ್ವತವನ್ನು ಪವಿತ್ರವೆಂದು ನಂಬಲಾಗಿದೆ. ಹೀಗಾಗಿ, ಯಾರೂ ಇದನ್ನು ಹತ್ತುವುದಿಲ್ಲ.

ಜಪಾನೀಸ್ ಫೀಸ್ ಪಗೋಡ

ಬೌದ್ಧರ ಪಗೋಡವಾದ ಇದನ್ನು 'ಪೋಖರಾ ಶಾಂತಿ ಸ್ತೂಪ' ಅಂತಲೂ ಕರೆಯುತ್ತಾರೆ. ವಿಶ್ವಶಾಂತಿಗಾಗಿ ಇದನ್ನು ನಿರ್ಮಿಸಲಾಗಿದೆ. 2100 ಮೀ. ಎತ್ತರದ ಪರ್ವತದ ಮೇಲೆ ನಿರ್ಮಾಣವಾದ ಈ ಪ್ರದೇಶದಿಂದ ಪೋಖರಾ ನಗರ, ಫೇವಾ ಸರೋವರ, ಅನ್ನಪೂರ್ಣ ಶ್ರೇಣಿ ಎಲ್ಲವನ್ನೂ ನೋಡಬಹುದು. ಪ್ರವಾಸಿಗರ ಅಚ್ಚುಮೆಚ್ಚಿನ ಈ ತಾಣವನ್ನು ಬೌದ್ಧ ಭಿಕ್ಷುಗಳು 1992ರಲ್ಲಿ ನಿರ್ಮಿಸಿದರು. ವಿಶಾಲ ಪ್ರಾರ್ಥನಾ ಮಂದಿರ, ಬುದ್ಧನ ಸುಂದರ ಮೂರ್ತಿ ಇಲ್ಲಿದೆ.

ಡೇವಿಸ್ ಜಲಪಾತ
ಸ್ಥಳೀಯರಿಂದ ಪಾಟಾಲೆ ಚಾಂಗೊ ಎಂದು ಕರೆಸಿಕೊಳ್ಳುವ ಈ ಜಲಪಾತ ಪೋಖರಾದಿಂದ 2 ಕಿ.ಮೀ. ದೂರದಲ್ಲಿದೆ. ರಭಸವಾಗಿ, ವಿವಿಧ ಮಜಲುಗಳಲ್ಲಿ ಹರಿಯುವ ಸೇಟಿ ನದಿಯನ್ನು ನೋಡುವುದೇ ಚೆಂದ. ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತಕ್ಕೆ ರಾತ್ರಿ ವೇಳೆಯಲ್ಲಿ ವಿವಿಧ ಬಣ್ಣಗಳ ಫ್ಲೆಡ್‌ಲೈಟ್ ಹಾಕಿ ಮತ್ತಷ್ಟು ಚಿತ್ತಾರಗೊಳಿಸುತ್ತಾರೆ.

ಪರ್ವತ ವಸ್ತು ಸಂಗ್ರಹಾಲಯ
ಕೇವಲ ಪರ್ವತಗಳಿಗಾಗಿ ಸೀಮಿತವಾದ ಬೃಹತ್ ವಸ್ತು ಸಂಗ್ರಹಾಲಯವಿದು. ಪರ್ವತಗಳ ರಚನೆ, ಹುಟ್ಟು, ಪರಿಕಲ್ಪನೆ ಎಲ್ಲವನ್ನೂ ಇಲ್ಲಿ ಸೂಕ್ತವಾಗಿ ವಿವರಿಸಲಾಗಿದೆ. ಪರ್ವತಾರೋಹಣದ ಬಗ್ಗೆ ತರಗತಿ- ತರಬೇತಿ ಎರಡೂ ಇಲ್ಲಿದೆ. ಪರ್ವತಾರೋಹಿಗಳು ಬಳಸುವ ವಸ್ತು, ಹಿಂದೆ ಶಿಖರಗಳನ್ನು ಏರಿದವರ ವಸ್ತು... ಎಲ್ಲವನ್ನೂ ನೋಡಬಹುದು.

ಹೋಗುವುದು ಹೇಗೆ?
ನೇಪಾಳದ ಕಠ್ಮಂಡುವಿಗೆ ತೆರಳಿ ಅಲ್ಲಿಂದ ಬಸ್, ವಿಮಾನ (ಭಾರತದ ಉತ್ತರ ಪ್ರದೇಶದ ಗೋರಖ್‌ಪುರನಿಂದ), ಹೆಲಿಕಾಪ್ಟರ್ ಸೇವೆ ಲಭ್ಯವಿದೆ. ಅಲ್ಲದೆ ನವದೆಹಲಿ, ಮಧ್ಯಪ್ರದೇಶದ, ಭೂಪಾಲ್‌ನಿಂದ ನೇರ ಬಸ್ ಲಭ್ಯವಿದೆ. ಪ್ರವಾಸಕ್ಕೆ ಅಕ್ಟೋಬರ್‌ನಿಂದ ಫೆಬ್ರವರಿ ಸೂಕ್ತ ಕಾಲ. ಭಾರತೀಯ ಶೈಲಿ ಊಟ, ನಮ್ಮ ಅನುಕೂಲಕ್ಕೆ ತಕ್ಕ ರೂಮ್‌ಗಳು ಲಭ್ಯವಿವೆ.

-ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement