ಪೋರ್ನ್ ಪ್ರಪಂಚ
ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುವ 100 ವೆಬ್ಸೈಟ್ಗಳ ಪಟ್ಟಿಯಲ್ಲಿ 6 ಪೋರ್ನ್ ವೆಬ್ಸೈಟ್ಗಳಿವೆ!
ಕಾಮದ ಕಣ್ಣಿಗೆ ಜಗತ್ತೆಲ್ಲ ನೀಲಿ
ಪೋರ್ನ್ ಅಪ್ಲೋಡ್ನಲ್ಲಿ ಕರ್ನಾಟಕ ದೇಶದಲ್ಲೇ 3ನೇ ರ್ಯಾಂಕು ಪಡೆದಿದೆ. ಸ್ವೀಟು ಕೊಟ್ಟು ಸಂಭ್ರವಿಸುವಂಥ, ಸಿಎಮ್ಮು ತಮ್ಮ ಭಾಷಣಗಳಲ್ಲಿ ಖುಷಿ ಖುಷಿಯಾಗಿ ಪ್ರಸ್ತಾಪಿಸುವಂಥ ಸಂಗತಿಯೇನಲ್ಲ ಇದು. ಆದರೂ, ಆ ನೀಲಿಜಗತ್ತಿನ ಸೀಕ್ರೇಟನ್ನು ತಿಳಿಯುವ ಕುತೂಹಲ ನಮ್ಮಲ್ಲಿದೆ...
ಯಥಾ ಪ್ರಜಾ ತಥಾ ರಾಜಾ!
ಕೆಲಸವೆಂದರೆ ನಂಗೆ ತುಂಬಾ ಇಷ್ಟ. ಅದಕ್ಕೇ ಅದನ್ನು ಯಾವತ್ತೂ ಪೂರ್ತಿಯಾಗಿ ಮಾಡಿ ಮುಗಿಸಿಬಿಡುವುದಿಲ್ಲ.
- ಲವ್ ವರ್ಕ್
ನಾವು ಎಂದಿಗೂ ಬೆಳೆಯುವುದಿಲ್ಲ. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯುತ್ತೇವಷ್ಟೇ.
- ಪಬ್ಲಿಕ್ ಬೂತ್
ಕರ್ನಾಟಕದ ಮಟ್ಟಿಗಿದು ನಿಜ. ನಮ್ಮ ಜನಪ್ರತಿಧಿಗಳಲ್ಲಿ ಮೂವರು ಸದನದಲ್ಲಿ ನೀಲಿಚಿತ್ರ ನೋಡಿ ಬ್ಲ್ಯೂಬಾಯ್ಸ್ ಆದರು. ಆದರೆ, ಅವರನ್ನಾರಿಸಿದ ಜನ ಅಂದರೆ ನಾವೇನು ಹಿಂದೆಬಿದ್ದಿಲ್ಲ. ನಾವು ಪೋರ್ನ್ ಅಪ್ಲೋಡ್ನಲ್ಲಿ ದೇಶದಲ್ಲಿ 3ನೇ ಸ್ಥಾನ ಗಳಿಸಿದ್ದೇವೆ. ಹೀಗಾಗಿ ಪ್ರಜೆಗಳು ಹೇಗಿದ್ದಾರೋ ಹಾಗೇ ರಾಜರೂ ಇರುತ್ತಾರೆ ಎಂದು ಸಮಾಧಾನಿಸಿಕೊಳ್ಳಬಹುದು!
ನಮ್ಮ ದೇಶದಲ್ಲಿ ದಾಖಲಾಗುವ ಪೋರ್ನ್ ಅಪ್ಲೋಡ್ ಪ್ರಕರಣಗಳ ಆಧಾರದಲ್ಲಿ ಈ ಸ್ಥಾನ ಲಭಿಸಿದೆ. ಪೋರ್ನ್ ಅಪ್ಲೋಡ್ನ ಶೇ.60ರಷ್ಟು ಪ್ರಕರಣಗಳು ದಕ್ಷಿಣಭಾರತದಲ್ಲೇ ದಾಖಲಾಗುತ್ತವೆ ಎನ್ನುತ್ತದೆ ಕೇಂದ್ರ ಗೃಹ ಇಲಾಖೆ ಮಾಹಿತಿ. ಆದರೆ ಹೆಚ್ಚು ಭೀಕರ ಅತ್ಯಾಚಾರಗಳು ಉತ್ತರಭಾರತದಲ್ಲೇ ಘಟಿಸುತ್ತವೆ ಎಂಬುದು ವಿಪರ್ಯಾಸ!
ಕರ್ನಾಟಕದಲ್ಲಿ 2010, 2011, 2012ರಲ್ಲಿ ಒಟ್ಟು 114 ಪ್ರಕರಣಗಳು ದಾಖಲಾಗಿವೆ. ನಮ್ಮ ಪಕ್ಕದ ರಾಜ್ಯ ಕೇರಳ 386 ಪ್ರಕರಣಗಳ ಮೂಲಕ ಅಗ್ರಸ್ಥಾನದಲ್ಲಿದೆ. ಈ ಮೂರು ವರ್ಷಗಳಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿ ದಾಖಲಾದ ಪ್ರಕರಣಗಳ ಸಂಖ್ಯೆ 1,413.
ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುವ 100 ವೆಬ್ಸೈಟ್ಗಳ ಪಟ್ಟಿಯಲ್ಲಿ 6 ಪೋರ್ನ್ ವೆಬ್ಸೈಟ್ಗಳಿವೆ!
ಯಾರೇನೇ ಹೇಳಲಿ, ಮೂಗು ಮುರಿಯಲಿ, ವಿರೋಧಿಸಲಿ ಪೋರ್ನ್ ಎಂಬುದು ಇಂಟರ್ನೆಟ್ ಲೋಕದ ಸತ್ಯ. ದೊಡ್ಡ ಉದ್ಯಮ. ಮನುಷ್ಯರ ಆರೋಗ್ಯದ ಕುರಿತಾಗಿರುವ ವೆಬ್ಸೈಟ್ಗಳಿಗಿಂತ ಹೆಚ್ಚು ಸಂಖ್ಯೆಯ ಪೋರ್ನ್ ಸೈಟ್ಗಳಿವೆ. ಇಂಟರ್ನೆಟ್ ಮನೆಯೊಳಗೆ ಸೇರಿಸಿದ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಪೋರ್ನ್ಗೆ ಕೂಡ ಎಂಟ್ರಿ ಕೊಟ್ಟಿದ್ದೇವೆ.
ಈಗ ನಡೆಯುತ್ತಿರುವ ಅತ್ಯಾಚಾರಗಳಿಗೆಲ್ಲ ಪೋರ್ನ್ ಮತ್ತು ಚಲನಚಿತ್ರಗಳಲ್ಲಿ ತೋರಿಸುವ ದೃಶ್ಯಗಳೇ ಕಾರಣ ಎಂಬ ಆರೋಪ ಬಲವಾಗಿದೆ. ಮಹಿಳೆಯನ್ನು ಭೋಗದ ವಸ್ತು ಎಂದು ತೋರಿಸುವುದರಿಂದಲೇ ಅತ್ಯಾಚಾರಗಳಾಗುತ್ತಿವೆ ಎಂದು ಹೇಳುವವರಿಗೂ ಕೊರತೆಯಿಲ್ಲ. ಚೆಂದಗೆ ಡ್ರೆಸ್ ಮಾಡಿ ಓಡಾಡೋ ಹುಡುಗಿಯರ ಕತೆಯೇ ಹೀಗಾದರೆ ಪೋರ್ನ್ ಉದ್ಯಮದಲ್ಲೇ ಇರುವವರ ಕತೆಯೇನು?
ನಮ್ಮ ಪಾಲಿಗೆ ಪೋರ್ನ್ ಅಂದರೆ ಅದು ಪುರುಷ ಪ್ರಪಂಚ. ಅದನ್ನು ನೋಡುವವರು, ತಯಾರಿಸುವವರು ಎಲ್ಲರೂ ಪುರುಷರೇ. ಅದರಲ್ಲಿ ಹುಡುಗಿಯರು ಭೋಗದ ವಸ್ತುವಾಗಿ ನಟಿಸಲು ಮಾತ್ರ ಬರುತ್ತಾರೆ ಎಂದೇ ಅಂದುಕೊಂಡಿದ್ದೇವೆ.
ಆದರದು ನಿಜವಲ್ಲ. ಪೋರ್ನ್ ಉದ್ಯಮದಲ್ಲಿ ಹೆಸರು ಮಾಡಿರುವ ಪೆಂಟ್ಹೌಸ್ ಎಂಬ ಸಂಸ್ಥೆಯಲ್ಲಿ ಮಹಿಳೆಯೇ ಆಡಳಿತ ನಿರ್ದೇಶಕಿ! ವಿವಿಡ್ ಎಂಟರ್ಟೇನ್ಮೆಂಟ್ ಸಂಸ್ಥೆಯಲ್ಲಿ ಮಹಿಳೆಯೇ ಉಪಾಧ್ಯಕ್ಷೆ! ಇವರು ಪೋರ್ನ್ ಚಿತ್ರಗಳನ್ನು ನಿರ್ದೇಶಿಸುತ್ತಾರೆ. ಅದಕ್ಕೊಂದು ಕತೆ ಬರೆಯುತ್ತಾರೆ ಎಂಬುದು ನಿಮಗೆ ಗೊತ್ತೇ?
ಸಾಲದ್ದಕ್ಕೆ ಅವರೇ ಹೇಳಿಕೊಳ್ಳುವಂತೆ ಅವರು ಹಿಂದೆ ಮಹಿಳಾವಾದಿ ಮತ್ತು ಎಡಪಂಥೀಯರಾಗಿದ್ದರಂತೆ!
ಆಕೆಯ ಹೆಸರು ಕೆಲ್ಲಿ ಹಾಲಂಡ್.
ಕೇವಲ ಪೋರ್ನ್ ಮಾತ್ರವಲ್ಲ, ಮನರಂಜನೆ ಉದ್ಯಮದಲ್ಲಿ ಈಕೆಗೆ ದೊಡ್ಡ ಹೆಸರಿದೆ. ಈಕೆ ಸೇರಿದಂತೆ ಪೋರ್ನ್ ಉದ್ಯಮದಲ್ಲಿ ಬರವಣಿಗೆ, ಚಿತ್ರೀಕರಣ, ನಿರ್ದೇಶನದಲ್ಲಿ ತೊಡಗಿಕೊಂಡಿರುವ ಮಹಿಳೆಯರು ಸಾಕಷ್ಟಿದ್ದಾರೆ. ಪೋರ್ನ್, ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದೆ ಎಂಬ ವಾದವನ್ನು ಇವರೆಲ್ಲ ಪರೋಕ್ಷವಾಗಿ ಅಲ್ಲಗಳೆಯುತ್ತಿದ್ದಾರೆ.
ಕೆಲ್ಲಿ ಹಾಲಂಡ್ ಮೊದಲು ಕಿರುಚಿತ್ರ ತಯಾರಕಿಯಾಗಿದ್ದರು. ಕಿರುಚಿತ್ರ ನಿರ್ಮಾಣಕ್ಕೆ ಅವಕಾಶ ನೀಡಿದರೆ ದುಡ್ಡು. ಇಲ್ಲವಾದಲ್ಲಿ ಇಲ್ಲ ಎಂಬ ಸ್ಥಿತಿ ಇತ್ತು. ಅದಕ್ಕಾಗಿ ಅವರೊಂದು ಚಿಕ್ಕ ಸ್ಟುಡಿಯೊ ಆರಂಭಿಸಿದರು. ಒಂದು ದಿನ ಸ್ಟುಡಿಯೊದಲ್ಲಿ ಒಬ್ಬರು ಗೇ (ಸಲಿಂಗಕಾಮ) ಪೋರ್ನ್ ಎಡಿಟ್ ಮಾಡುತ್ತಿರುವುದನ್ನು ಕೆಲ್ಲಿ ಹಾಲಂಡ್ ಗಮನಿಸಿದರು. ಆದರೆ ಅದು ಅಷ್ಟೇನೂ ಉತ್ತಮವಾಗಿರಲಿಲ್ಲ. ಅದನ್ನು ಗಮನಿಸಿದ ಕೆಲ್ಲಿ ಹಾಲಂಡ್ ಅವರು ಎಡಿಟಿಂಗ್ಗೆ ವೀಡಿಯೊ ಕಳುಹಿಸಿದ ವಿವಿಡ್ ಎಂಟರ್ಟೇನ್ಮೆಂಟ್ (ಪೋರ್ನ್ ಕ್ಷೇತ್ರದ ಇನ್ನೊಂದು ದೊಡ್ಡ ಕಂಪನಿ) ಸಂಸ್ಥೆಗೆ ಕರೆ ಮಾಡಿ, ಚಿತ್ರ ಸರಿಯಾಗಿ ಬರುವಂತೆ ಮಾಡುವ ಸಲಹೆ ನೀಡಿದರು.
ವಿವಿಡ್ ಕಂಪನಿಯ ಉಪಾಧ್ಯಕ್ಷರು 'ನಿಮಗೆ ಅಷ್ಟೆಲ್ಲ ಗೊತ್ತಿದ್ದರೆ ನಿರ್ದೇಶನ ಮಾಡಿ, ಪುಕ್ಕಟೆ ಸಲಹೆ ಕೊಡುವುದು ಒಳ್ಳೆಯದಲ್ಲ' ಎಂದು ತಿವಿದರು. ಆ ತಿವಿತವನ್ನೇ ಸವಾಲಾಗಿ ಸ್ವೀಕರಿಸಿದ ಅವರು, 1994ರಲ್ಲಿ ಮೊದಲ ಪೋರ್ನ್ ಚಿತ್ರ ನಿರ್ದೇಶಿಸಿಯೇಬಿಟ್ಟರು. ಅದೇ ಮುಂದೆ ಉದ್ಯೋಗವಾಗಿಬಿಟ್ಟಿತು.
'ಪೋರ್ನ್ ಚಿತ್ರಗಳು ನನಗೆ ಹೆಚ್ಚು ಖುಷಿ ಕೊಟ್ಟವು. ಕಾರಣ, ಅದರಲ್ಲಿ ಒಳ್ಳೆಯ ದುಡ್ಡಿತ್ತು. ಸಿನಿಮಾ ನಿರ್ದೇಶಕನಿಗಂತೂ ಅದಕ್ಕಿಂತ ದೊಡ್ಡ ಆಟದ ಮೈದಾನ ಇನ್ನೊಂದಿಲ್ಲ. ಒಬ್ಬ ಕಿರುಚಿತ್ರ ನಿರ್ದೇಶಕನಿಗೆ ಸಿಗುವುದಕ್ಕಿಂತ ಹೆಚ್ಚಿನ ಪ್ರಯೋಗಾವಕಾಶಗಳು ಇಲ್ಲಿದ್ದವು. ಇದೊಂಥರ ಸಿನಿಮಾ ಶಾಲೆಯಿದ್ದಂತೆ. ಜತೆಗೆ ವೇತನವೂ ದೊರೆಯುತ್ತದೆ. ಅತ್ಯಂತ ಉತ್ತಮ ಕಲಿಕಾ ಜಾಗವಾಗಿ ಪರಿಣಮಿಸಿತು' ಎನ್ನುತ್ತಾರೆ ಕೆಲ್ಲಿ ಹಾಲಂಡ್.
'ಪೋರ್ನ್ ಚಿತ್ರಗಳು ಬಜೆಟ್ ದೊಡ್ಡದಾಗಿರುವುದಿಲ್ಲ. ಜತೆಗೆ 1-2 ತಿಂಗಳು ಕೆಲಸ ಮಾಡಿದರೆ ಸಾಕು. ಒಂದೆರಡು ತಪ್ಪುಗಳಾದರೂ ತೊಂದರೆಯೇನೂ ಆಗುವುದಿಲ್ಲ. ಬಜೆಟ್ ಚಿಕ್ಕದಾಗಿರುವುದರಿಂದ ನಷ್ಟವೇನೂ ಆಗುವುದಿಲ್ಲ. ಇದರಿಂದಾಗಿ ಪ್ರಯೋಗಗಳಿಗೆ ಹೆಚ್ಚು ಅವಕಾಶವಿದೆ' ಎಂಬುದು ಅವರ ವಾದ.
'ಪೋರ್ನ್ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಬೇರೆ ದೇಶದ ಟಿವಿ ಚಾನೆಲ್ಗಳಿಗೆ ಪೋರ್ನ್ ಉದ್ಯಮದ ಬಗ್ಗೆ ಕಿರುಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಅಂಥ ಕಿರುಚಿತ್ರಗಳ ನಿರ್ಮಾಣದ ವೇಳೆ ಪೋರ್ನ್ ಚಿತ್ರಗಳಲ್ಲಿ ನಟಿಸುವ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಪೋರ್ನ್ ಕುರಿತು ಮತ್ತು ಅದರಲ್ಲಿ ನಟಿಸುವ ಹುಡುಗಿಯರ ಬಗ್ಗೆ ಇದ್ದ ಭಾವನೆಯೇ ಬದಲಾಯಿತು' ಎಂದು ಅವರು ಹೇಳಿಕೊಂಡಿದ್ದಾರೆ.
'ಹೊರಗಿನ ಮಹಿಳಾವಾದಿಗಳು ಪೋರ್ನ್ ಉದ್ಯಮದ ಬಗ್ಗೆ ಅರಿತುಕೊಳ್ಳದೆ, ಇದರಿಂದ ಮಹಿಳೆಯರ ಗೌರವ ಹಾಳಾಗುತ್ತಿದೆ ಎಂದು ಹೇಳುವಾಗ ಅವರ ಬಾಲಿಶ ಹೇಳಿಕೆಗಳ ಬಗ್ಗೆ ನನಗೆ ಮರುಕವಾಗುತ್ತದೆ. ನನ್ನ ಪ್ರಕಾರ ಮನೆಯಲ್ಲಿನ ಹಿಂಸೆ ಅಥವಾ ಲೈಂಗಿಕ ಹಿಂಸೆಗಳಿಗೆ ಪೋರ್ನ್ ಕಾರಣ ಎನ್ನುವವರು ಪೂರ್ವಾಗ್ರಹ ಪೀಡಿತರು' ಎಂಬುದು ಅವರ ಅಭಿಪ್ರಾಯ.
ಕೆಲ್ಲಿ ಹಾಲಂಡ್ರಂತೆ ಪೋರ್ನ್ ಉದ್ಯಮದಲ್ಲಿ ತೊಡಗಿರುವವರು ಸಾಕಷ್ಟಿದ್ದಾರೆ. ಅವರ ಸಮಾಜ ಬಹಳ ಮುಂದುವರಿದಿದೆ. ಅಲ್ಲೂ ಈ ಮಹಿಳೆಯರು ವಿರೋಧ, ಮುಜುಗರ, ತಿರಸ್ಕಾರ ಅನುಭವಿಸಿದ್ದಾರೆ. ಇತ್ತೀಚೆಗೆ ಪೋರ್ನ್ ಚಿತ್ರದಲ್ಲಿ ನಟಿಸಿದ ಯುವತಿಯೊಬ್ಬಳು ಅಲ್ಲಿನ ವಿಶ್ವವಿದ್ಯಾಲಯಕ್ಕೆ ಸೇರಿದ್ದಳು. ಆಕೆ ಪೋರ್ನ್ ನಟಿ ಎಂಬುದು ಪೋರ್ನ್ ನೋಡಿದ ಕೆಲ ಹುಡುಗರಿಗೆ ಗೊತ್ತಾಗಿ, ಅದೇ ದೊಡ್ಡ ಗುಲ್ಲಾಯಿತು. ಅಂದರೆ, ಅಮೆರಿಕದಂಥ ಮುಂದುವರಿದ ದೇಶದಲ್ಲೇ ಈ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲೂ ಅಂಥ ಸವಾಲು, ಅವಮಾನಗಳನ್ನು ಎದುರಿಸಿ ಮಹಿಳೆಯರು ತಮಗಿಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ಕ್ಷೇತ್ರದಲ್ಲೂ ದುಡಿಯುತ್ತಿದ್ದಾರೆ!
ಸಂಪ್ರದಾಯಸ್ಥರೇ ಹೆಚ್ಚು!
ಸಾಮಾನ್ಯವಾಗಿ ಫುಲ್ ಫ್ರೀಯಾಗಿ ಸೆಕ್ಸ್ ಬಗ್ಗೆ ಮಾತನಾಡುವವರನ್ನು ನಾವು ಅನುಮಾನದಿಂದ ಕಾಣುತ್ತೇವೆ. ಆದರೆ ಪೋರ್ನ್ ನೋಡುವವರಲ್ಲಿ ಸಂಪ್ರದಾಯಸ್ಥರೇ ಹೆಚ್ಚಂತೆ! ಇದರರ್ಥ ಸಂಪ್ರದಾಯಸ್ಥ ಮನಸ್ಥಿತಿ ಹೊಂದಿರುವ, ಸೆಕ್ಸ್ ವಿಷಯಗಳ ಬಗ್ಗೆ ಮಡಿವಂತಿಕೆ ಹೊಂದಿರುವವರಿಗೇ ಆ ಬಗ್ಗೆ ಹೆಚ್ಚು ಆಸಕ್ತಿ, ಕುತೂಹಲ. ಅಮೆರಿಕದಲ್ಲಿ ನಡೆಸಿದ ಅಧ್ಯಯನದಲ್ಲಿ ಸಂಪ್ರದಾಯಸ್ಥ ಮನಸ್ಥಿತಿಯ ಜನರೇ ಹೆಚ್ಚಿರುವಲ್ಲಿ ಪೋರ್ನ್ ಬಳಕೆ ಹೆಚ್ಚು ಕಂಡುಬಂದಿದೆ.
ಹುಡುಗರು ಮುಖ ನೋಡೋದೇ ಹೆಚ್ಚಂತೆ!
ಹುಡುಗರ ಬಗ್ಗೆ ಕೆಟ್ಟ ಅಬಿಪ್ರಾಯಗಳಿವೆ. ಆದರೆ ಪಾಪ ಹುಡುಗರು ಎಷ್ಟು ಒಳ್ಳೆಯೋರು ಅಂದರೆ ಪೋರ್ನ್ ವೀಕ್ಷಿಸುವಾಗ ಹೆಚ್ಚಿನ ಸಂದರ್ಭದಲ್ಲಿ ಅವರು ಹುಡುಗಿಯ ಮುಖ ಮತ್ತು ಅದರಲ್ಲಾಗುವ ಬದಲಾವಣೆಗಳನ್ನೇ ಹೆಚ್ಚು ನೋಡುತ್ತಾರಂತೆ! ನಾನು ಹೇಳ್ತಾ ಇಲ್ಲ ಸ್ವಾಮಿ. ಅಮೆರಿಕ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ಗೊತ್ತಾಗಿರುವ ಸಂಗತಿ ಇದು. ಆದರೆ ಹುಡ್ಗೀರು ಹಂಗಲ್ವಂತೆ! ನೋಡಿ ಪಾಪ ಹುಡುಗರು ಎಷ್ಟು ಒಳ್ಳೆಯವರು!!
ಮರೆವು ಹೆಚ್ಚಬಹುದು!
ಪೋರ್ನ್ ನೋಡುವುದರ ಸೈಡ್ ಎಫೆಕ್ಟ್ಗಳು ಏನೂ ಇಲ್ಲ ಅಂದುಕೊಳ್ಳಬೇಡಿ. ಒಂದು ಸೈಡ್ ಎಫೆಕ್ಟ್ ಅಂದರೆ ಮರೆವು ಹೆಚ್ಚಾಗುತ್ತಂತೆ. ಶಾಶ್ವತವಾಗಲ್ಲ, ತಾತ್ಕಾಲಿಕವಾಗಿ. ಅಂದರೆ ನಿಮಗೊಂದು ಕೆಲಸ ಹೇಳಿರುತ್ತಾರೆ. ಆ ಸಂದರ್ಭದಲ್ಲಿ ನೀವು ಪೋರ್ನ್ ವೀಕ್ಷಣೆ ಮಾಡಿದರೆ ನಿಮ್ಮ ಗಮನವೆಲ್ಲ ಅತ್ತ ಕೇಂದ್ರೀಕರಿಸುವುದರಿಂದ ಮೊದಲು ಮಾಡಬೇಕು ಅಂದುಕೊಂಡಿದ್ದ ಕೆಲಸ ಅಲ್ಲೇ ಉಳಿದುಬಿಡುತ್ತದೆ.
ಕೃತಿಗೂ ವಿಕೃತಿಗೂ ಸಂಬಂಧವಿಲ್ಲ!
ಪೋರ್ನ್ನಿಂದ ಸಮಾಜದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಹೆಚ್ಚಿದೆ ಎನ್ನುವವರಿಗೆ ಇಲ್ಲಿದೆ ಉತ್ತರ. ಅಮೆರಿಕದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಅಂಶ ಸುಳ್ಳು ಎಂದು ಸಾಬೀತಾಗಿದೆ. ಪೋರ್ನ್ ನೋಡುವವರು, ಲೈಂಗಿಕ ಅಪರಾಧದಲ್ಲಿ ಭಾಗಿಯಾದವರು ಮತ್ತು ಲೈಂಗಿಕ ವಿಕೃತಿಗಳಲ್ಲಿ ತೊಡಗಿರುವವರನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ಸತ್ಯ ಗೊತ್ತಾಗಿದೆ. ಲೈಂಗಿಕ ಅಪರಾಧ ಮತ್ತು ವಿಕೃತಿಗಳಲ್ಲಿ ತೊಡಗಿದವರು ಪೋರ್ನ್ಗೆ ಹೆಚ್ಚು ಆಕರ್ಷಿತರಾದವರಾಗಿರಲಿಲ್ಲ. ಆದ್ದರಿಂದ ಪೋರ್ನ್ ನೋಡುವುದಕ್ಕೂ ನಿಮ್ಮ ವರ್ತನೆಗೂ ಯಾವುದೇ ಸಂಬಂಧವಿಲ್ಲ!
ಹುಡ್ಗೀರೂ ನೋಡ್ತಾರೆ!
ಪೋರ್ನ್ ಅನ್ನೋದು ಕೇವಲ ಹುಡುಗರ ಪ್ರಪಂಚವಲ್ಲ. ಹುಡ್ಗೀರೂ ಅದನ್ನು ನೋಡ್ತಾರೆ ಮತ್ತು ಎಂಜಾಯ್ ಮಾಡ್ತಾರೆ ಅನ್ನುತ್ತೆ ಅಧ್ಯಯನ ವರದಿ. ಡೇನಿಯಲ್ ಬೆರ್ಗನರ್ ನಡೆಸಿದ ಅಧ್ಯಯನದಲ್ಲಿ 3ರಲ್ಲಿ ಒಬ್ಬರು ಹುಡುಗಿ ಪೋರ್ನ್ ನೋಡುತ್ತಾಳಂತೆ. ಆದರಿದು ವಿದೇಶದಲ್ಲಿ! ಭಾರತದ ಹುಡ್ಗೀರು ಇನ್ನೂ ಸಂಭಾವಿತರಾಗೇ ಇದ್ದಾರೆ!!
-ವಿನಾಯಕ ಭಟ್ಟ ಮೂರೂರು
vakradanta@gmail.com