ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಪ್ರಥಮ ಪ್ರತಾಪ

ರಾಜಕೀಯ ಅಂದರೆ ಮಾರು ದೂರ ಹಾರುತ್ತಿದ್ದ ಮಂದಿಯೇ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವುದು ಕುತೂಹಲಕರ ಸಂಗತಿ.

Srinivasa Murthy VN
Updated On : 22 Mar 2014, 1:42 am

ರಾಜಕೀಯ ಅಂದರೆ ಮಾರು ದೂರ ಹಾರುತ್ತಿದ್ದ ಮಂದಿಯೇ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವುದು  ಕುತೂಹಲಕರ ಸಂಗತಿ. ಇದು ಬದಲಾವಣೆಯ ಪರ್ವ ಅನ್ನೋಣವಾ? ಈ ಸಾರಿ, ಹೊಸಬರ ಬಾರಿ!

ಅದು ಕದನ ಕಣ. ಇಳಿದವರೆಲ್ಲಾ ಸಮರದಲ್ಲಿ ನುರಿತವರೆನ್ನುವಂತಿಲ್ಲ. ಈಗಷ್ಟೇ ಖಡ್ಗ ಬೀಸಲು ಕಲಿತವರೂ ಅಲ್ಲಿದ್ದಾರೆ. ಇನ್ನಷ್ಟೇ ಆಯುಧಗಳ ಪರಿಚಯ ಮಾಡಿಕೊಳ್ಳಬೇಕಾದವರೂ ಇದ್ದಾರೆ. ಇವರೇನು ಮಹಾ ಗೆದ್ದಾರು ಬಿಡು ಅಂದುಕೊಳ್ಳುವಂತಿಲ್ಲ. ನೋಟಕರಿಗೆ ಭರ್ಜರಿ ಮನರಂಜನೆ ಕೊಡುವವರೇ ಇವರು. ಇವರ ತೊದಲು ಮಾತು, ಎಡವು ನಡೆ, ಮೊದಲ ಹೆಜ್ಜೆಯ ಪ್ರಬುದ್ಧತೆ, ಗ್ಲಾಮರಸ್ ಎಡೆಬಿಡಂಗಿತನ, ತಿಕ್ಕಲು ಎನ್ನಬಹುದಾದ ಭಂಡ ಧೈರ್ಯ... ಇವೆಲ್ಲವೂ ಮತದಾರನನ್ನು ಒಂದಲ್ಲ ಒಂದು ಗಳಿಗೆ ಸೆಳೆದೇ ಸೆಳೆಯುತ್ತದೆ.
ಮೊದಲ ಬಾರಿ ಚುನಾವಣೆಗೆ ನಿಂತ ಈ ಹುದ್ದರಿಗಳನ್ನು ಒಮ್ಮೆ ನೋಡಿ.
ಇವರಲ್ಲಿ ಮೊದಲ ಬಾರಿಯ ವೋಟು ಹಾಕಬೇಕಾಗಿರುವ 18 ಪ್ಲಸ್ ಮಂದಿ ಇದ್ದಾರೆ; ಹತ್ತಾರು ಬಾರಿ ವೋಟ್ ಮಾಡಿ ವ್ಯವಸ್ಥೆಯ ಬಗ್ಗೆ ನಿರಾಶರಾದವರಿದ್ದಾರೆ; ಇನ್ನು ವೋಟ್ ಹಾಕಿದ್ದು ಸಾಕು, ನಾನೇ ಏನಾದರೂ ಮಾಡುತ್ತೇನೆ ಎಂದು ಹೊರಟವರಿದ್ದಾರೆ; ಲಕ್ಷಗಟ್ಟಲೆ ಸಂಬಳ ತರುತ್ತಿದ್ದ ವಾತಾನುಕೂಲಿತ ಕಚೇರಿಯ ಕೆಲಸ ಬಿಟ್ಟವರಿದ್ದಾರೆ; ಮೈ ಹುರಿಗಟ್ಟಿಸಿಕೊಂಡು ಎದುರಾಳಿಗಳನ್ನು ನಿಜವಾದ ಮಣ್ಣಿನಂಗಳದಲ್ಲಿ ಮುಖಾಮುಖಿಯಾಗುತ್ತಿದ್ದ ಕ್ರೀಡಾಳುಗಳಿದ್ದಾರೆ; ಕ್ಯಾಮೆರಾಗಳ ಮುಂದೆ ಬೆವರಿಳಿಸಿ ತೆರೆಯ ಮೇಲೆ ಮಿಂಚಿದವರಿದ್ದಾರೆ; ಇವರು ಪ್ರಬಲ ಪಕ್ಷಗಳಲ್ಲೂ ಇದ್ದಾರೆ; ಈಗಷ್ಟೇ ಕಣ್ಣು ಬಿಟ್ಟ ಪಾರ್ಟಿಗಳಲ್ಲೂ ಇದ್ದಾರೆ. ಇವರು ಸರ್ವಾಂತರ್ಯಾಮಿಗಳು.
2014ರ ಲೋಕಸಭೆ ಎಲೆಕ್ಷನ್, ಅತ್ಯಧಿಕ ಸಂಖ್ಯೆಯ ಹೊಸ ಮತದಾರ(150 ದಶಲಕ್ಷ)ರಿಂದಾಗಿ ಆಕರ್ಷಣೀಯವೆನಿಸಿದೆ. ಅಸೆಂಬ್ಲಿಗೆ ಹೊಗಬಯಸಿ ಕಣಕ್ಕಿಳಿದಿರುವ ಹೊಸ ಮುಖಗಳಿಂದಾಗಿಯೂ ಎಲ್ಲರನ್ನು ಸೆಳೆದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಆಪ್‌ಗಳು ಗಣನೀಯ ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿವೆ. ಅದರಲ್ಲಂತೂ ಆಪ್‌ನಲ್ಲಿ ಇರುವುದೆಲ್ಲ ಹೊಸ ಮುಖಗಳೇ. ಆಪ್‌ಗೆ ಹೊಸ ಮುಖಗಳೇ ಅನಿವಾರ್ಯ ಅನ್ನಿ. ಅಂತೂ ಇವರೆಲ್ಲ ಪ್ರವಾಹಕ್ಕೆ ಸೇರಬಂದಿರುವ ತಿಳಿನೀರಿನ ಹೊಳೆಗಳೆಂಬುದಂತೂ ನಿಜ.
ಹೀಗೆ ಪ್ರಚಾರದ ಬಿರುಸಿನಲ್ಲಿ ತೊಡಗಿರುವ ಒಂದಷ್ಟು ಪ್ರಾತಿನಿಧಿಕ ಹೊಸ ಮುಖಗಳನ್ನು ಇಲ್ಲಿ ನೋಡಬಹುದು.

ಗೀತಾ ಶಿವರಾಜ್‌ಕುಮಾರ್
ಇವರನ್ನು ಈಗ ರಾಜ್‌ಕುಮಾರ್ ಕುಟುಂಬದ ಸೊಸೆ ಅನ್ನುವುದಕ್ಕಿಂತಲೂ ಬಂಗಾರಪ್ಪ ಕುಟುಂಬದ ಕುಡಿ ಅನ್ನುವುದೇ ಮೇಲು. ಹಾಗೆಂದೇ ಜೆಡಿಎಸ್ ಇವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೆಳೆದುಕೊಂಡಿದೆ. ಬೆನ್ನಿಗೆ ಸಹೋದರ ಮಧು ಇದ್ದಾರೆ. ಎಲ್ಲ ದೃಷ್ಟಿಯಿಂದಲೂ ಇದೊಂದು ಅನಿರೀಕ್ಷಿತ ಆಯ್ಕೆ.

ವಿ. ಬಾಲಕೃಷ್ಣನ್
ಇನ್‌ಫೋಸಿಸ್ ಸಂಸ್ಥೆಯಿಂದ ರಾಜಕೀಯಕ್ಕಿಳಿದ ಇನ್ನೊಂದು ತಲೆ. ಆಪ್ ಪಕ್ಷದ ಹುದ್ದರಿ. ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್‌ಫೋಸಿಸ್‌ನ ವಾಣಿಜ್ಯ ಅಧಿಕಾರಿಯಾಗಿದ್ದವರ ಲೆಕ್ಕಾಚಾರ ಇಲ್ಲಿ ಎಷ್ಟು ನಡೆಯುತ್ತದೋ!

ಕೋಟಿಗಾನಹಳ್ಳಿ ರಾಮಯ್ಯ
ಆಪ್ ಪಕ್ಷದ ವತಿಯಿಂದ ಕಣಕ್ಕೆ ನಿಂತಿರುವ ಕೋಟಿಗಾನಹಳ್ಳಿ ರಾಮಯ್ಯ, ಕವಿ, ಸಾಹಿತಿ, ನಾಟಕಕಾರ. ದಲಿತ ಚಳವಳಿಯ ಹಿನ್ನೆಲೆ ಹಾಗೂ ತಾತ್ವಿಕತೆ ಹೊಂದಿರುವ ಇವರು ಕೋಲಾರದ 'ಆದಿಮ' ಸಂಸ್ಥೆಯ ರೂವಾರಿಯಾಗಿದ್ದು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಪ್ರತಾಪ್‌ಸಿಂಹ
ಕನ್ನಡದ ಯುವ, ಜನಪ್ರಿಯ ಪತ್ರಕರ್ತರಲ್ಲಿ ಮೊದಲ ಸಾಲಿನಲ್ಲಿರುವ ಪ್ರತಾಪ್‌ಸಿಂಹ ತಮ್ಮ ಬೆಂಕಿಯಂಥ ಬರಹಗಳಿಂದ, ರಾಷ್ಟ್ರೀಯತೆಯ ಕುರಿತಾದ ನಿಷ್ಠೆಯಿಂದ ಪ್ರಸಿದ್ಧರು. ಪರಿಶ್ರಮ, ತಮ್ಮ ಅಂಕಣಗಳ ಹವಾ, ಮೋದಿ ಒಲವು, ಆರೆಸ್ಸೆಸ್ ಬೆಂಬಲ ಅವರನ್ನು ಗೆಲುವಿನತ್ತ ಕೊಂಡೊಯ್ಯಬಹುದಾದ ಕೆಲವು ಸಾಧನಗಳು.

ಗುಲ್ ಪನಾಗ್
ಈಕೆ ಸುಂದರಿ. ಬಾಲಿವುಡ್ ಈಕೆಯ ಕೈಯನ್ನು ತಕ್ಕಮಟ್ಟಿಗೆ ಹಿಡಿದೆತ್ತಿದೆ. ಇನ್ನು ಮುಂದೆ ಅಲ್ಲಿ ಭವಿಷ್ಯವಿಲ್ಲ ಎಂಬುದು ಆಕೆಗೂ ಗೊತ್ತು. ಆಪ್ ಪಕ್ಷ ಈಗ ಆಕೆಯನ್ನು ಕೈಬೀಸಿ ಕರೆದಿದೆ. ಹೊಸ ಮುಖಗಳ ಹುಡುಕಾಟದಲ್ಲಿರುವ ಆಪ್, ಆಕೆಗೆ ಚಂಡೀಗಢದ ಟಿಕೆಟ್ ಕೊಟ್ಟು ಶುಭ ಹಾರೈಸಿದೆ.

ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿರುವ ಲಕ್ಷ್ಮಿ ಹೆಬ್ಬಾಳ್ಕರ್, ರಾಷ್ಟ್ರ ರಾಜಕಾರಣಕ್ಕೆ ಹೊಸ ಮುಖವೇ ಹೌದು. ಇವರು ಮೈಸೂರು ವಿವಿಯ ಎಂಎ ರಾಜಕೀಯ ಶಾಸ್ತ್ರ ಪದವೀಧರೆ.

ಮೊಹಮ್ಮದ್ ಕೈಫ್
ಉತ್ತರ ಪ್ರದೇಶದ ಫುಲ್‌ಫುರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಜವಾಹರಲಾಲ್ ನೆಹರೂ ಸ್ಪರ್ಧಿಸಿ ಲೋಕಸಭೆಗೆ ಆರಿಸಿ ಬಂದ ಈ ಕ್ಷೇತ್ರದಲ್ಲಿ ಕೈಫ್ ಬ್ಯಾಟಿಂಗ್ ಹೇಗಿರುತ್ತದೋ ನೋಡಬೇಕು. ಗಂಗೂಲಿ ಮತ್ತು ತೆಂಡುಲ್ಕರ್‌ರನ್ನು ಪ್ರಚಾರಕ್ಕೆ ಕರೆತರಲು ಆಲೋಚಿಸಿರುವ ಈ ಆಲ್‌ರೌಂಡರ್ ಹಿಟ್‌ವಿಕೆಟ್ ಆಗದಿದ್ದರೆ ಸಾಕು.  

ರಾಜವರ್ಧನ ರಾಥೋರ್
ನೆನಪಿದೆಯಾ? 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಈ ಕ್ರೀಡಾಳು ಈಗ ಬಿಜೆಪಿ ಅಭ್ಯರ್ಥಿ.

ಜಾದೂಗಾರ್ ಪಿ.ಸಿ.ಸರ್ಕಾರ್
ಇವರು ರೈಲು ಮಾಯ ಮಾಡಿದವರು. ತಾಜ್‌ಮಹಲ್ ಮಾಯ ಮಾಡಿದವರು. ಅಸೆಂಬ್ಲಿ ಕಟ್ಟಡವನ್ನೇ ಮಾಯ ಮಾಡಬಹುದಾ? ಪಶ್ಚಿಮ ಬಂಗಾಲದ ಬರಸಾತ್ ಕ್ಷೇತ್ರದಲ್ಲಿ ಬಿಜೆಪಿ ಇವರನ್ನು ಕಣಕ್ಕಿಳಿಸಿದೆ. ಮೋದಿಯ ಮೋಡಿ ಕೈಹಿಡಿದರೆ ಗೆಲುವೂ ಕೈಹಿಡಿದೀತೇನೋ?

ಭೈಚುಂಗ್ ಭುಟಿಯಾ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಆಶೀರ್ವಾದ ಈತನ ಮೇಲಿದೆ. ಭಾರತದ ಫುಟ್ಬಾಲ್ ತಂಡದ ಕ್ಯಾಪ್ಟನ್ ಅಗಿದ್ದ ಭೈಚುಂಗ್ ಈ ಬಾರಿ ಡಾರ್ಜಿಲಿಂಗ್‌ನಲ್ಲಿ ನಿಂತಿರುವ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ.

ಮೂನ್‌ಮೂನ್ ಸೇನ್
ಇತ್ತೀಚೆಗೆ ತಾನೆ ವಿಧಿವಶಳಾದ ಬಂಗಾಳಿ ನಟಿ ಸುಚಿತ್ರಾ ಸೇನ್ ಮಗಳಾದ ಮೂನ್‌ಮೂನ್ ಸೇನ್, ಯವ್ವನದಲ್ಲಿ ಬಾಲಿವುಡ್ಡನ್ನು ತಕ್ಕಮಟ್ಟಿಗೆ ಆಳಿದ ತಾರೆ. ಈಗ ತೃಣಮೂಲ ಕಾಂಗ್ರೆಸ್ ವತಿಯಿಂದ ಬಂಕುರಾ ಕ್ಷೇತ್ರಕ್ಕೆ ಟಿಕೆಟ್ ಪಡೆದು, ಬಿಸಿಲಿನಲ್ಲಿ ನಡೆಯುತ್ತಾ ಮತದಾರರನ್ನು ಓಲೈಸುತ್ತಿದ್ದಾಳೆ.

ಮೀಸಾ ಲಾಲು ಯಾದವ್
ಮೇವು ಹಗರಣದ ಆರೋಪಿ ಲಾಲು ಪ್ರಸಾದ್ ಯಾದವ್‌ರ ಇಬ್ಬರು ಪುತ್ರರು ಮತ್ತು ಪುತ್ರಿ ಮೀಸಾ, ಟಿಕೆಟ್‌ಗಾಗಿ ಸಮರಕ್ಕಿಳಿದಿದ್ದಾರೆ. ಪಾಟಲಿಪುತ್ರದಲ್ಲಿ ಆರ್‌ಜೆಡಿಯಿಂದ ಮೀಸಾಗೆ ಟಿಕೆಟ್ ದೊರೆತಿದೆ. ತಂದೆಯ ವರ್ಚಸ್ಸು ಈಗ ಕಳಂಕವಾಗಿರುವುದೇ ಆತಂಕ.

ರಾಜ್‌ಮೋಹನ್ ಗಾಂಧಿ
ಗಾಂಧಿವಾದಿ ಅಣ್ಣಾ ಹಜಾರೆಯವರ ತಿರಸ್ಕಾರದಿಂದ ನೊಂದಿದ್ದ ಕೇಜ್ರಿವಾಲ್‌ಗೆ ಬೆಂಬಲವಾಗಿ ಬಂದ ಇನ್ನೊಬ್ಬ ಗಾಂಧಿವಾದಿ, ಗಾಂಧಿ ಕುಟುಂಬದ ಕುಡಿ ರಾಜ್‌ಮೋಹನ್. ಶುದ್ಧ ಶುಭ್ರ ಸಾರ್ವಜನಿಕ ಚಾರಿತ್ರ್ಯ ಹೊಂದಿರುವ ರಾಜ್‌ಮೋಹನ್, ಈಗ ಪೂರ್ವ ದೆಹಲಿಯ ಆಪ್ ಅಭ್ಯರ್ಥಿ.

ಚಂದನ್ ಮಿತ್ರಾ
ಬಂಗಾಳದ ಹೂಗ್ಲಿ ನದಿ ತೀರದ ಹೂಗ್ಲಿ ಕ್ಷೇತ್ರ, ಪತ್ರಕರ್ತ ಚಂದನ್ ಮಿತ್ರಾ ಅವರ ತವರು. ಬಹುಕಾಲದಿಂದ ಬಿಜೆಪಿ ಬೆಂಬಲಿಗರಾಗಿದ್ದ ಅವರಿಗೆ ಬಿಜೆಪಿ ಅಲ್ಲಿಯ ಟಿಕೆಟ್ ಕೊಟ್ಟಿದೆ. ಹಿಂದುಸ್ತಾನ್ ಟೈಮ್ಸ್, ಪಯನೀರ್, ಸ್ಟೇಟ್ಸ್‌ಮನ್ ಮಂತಾದ ಪ್ರಭಾವಿ ಪತ್ರಿಕೆಗಳ ಮುಖ್ಯಸ್ಥನಾಗಿದ್ದವರು.

ಪವನ್ ಕಲ್ಯಾಣ್
ಖುಷಿ, ತೊಲಿಪ್ರೇಮ, ಜಲ್ಸಾ, ಗಬ್ಬರ್ ಸಿಂಗ್, ಅತ್ತಾರೆಂಟಿಕಿ ದಾರೇದಿ ಮುಂತಾದ ಚಿತ್ರಗಳಲ್ಲಿ ತೆಲುಗರ ಮನಗೆದ್ದ ಪವನ್ ಕಲ್ಯಾಣ್, ಹೊಸ ಪಕ್ಷ 'ಜನಸೇನಾ' ಕಟ್ಟಿದ್ದಾನೆ. ಪ್ರಜಾರಾಜ್ಯಂನ ಯುವ ಘಟಕದ ಅಧ್ಯಕ್ಷನಾಗಿದ್ದ. ಈತ ಸ್ಪರ್ಧಿಸುವುದಂತೂ ಖಚಿತವಾಗಿದ್ದು, ಚಿರಂಜೀವಿ ಹಾಗೂ ಕಾಂಗ್ರೆಸ್‌ನ ಸಿಂಹಪಾಲು ಕಬಳಿಸಲಿದ್ದಾನೆ.

-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments