ಬರೆಯುವವರ ಟೈಪು
ಬರಹಗಾರರು ಮನುಷ್ಯರೂ ಹೌದಷ್ಟೆ. ಲೋಕದಲ್ಲಿ ಎಷ್ಟು ಬಗೆ ಮನುಷ್ಯರು ಇದ್ದಾರೆ ಎಂದರೆ ಏನುತ್ತರ? ಎಷ್ಟು ಮನುಷ್ಯರಿದ್ದಾರೋ ಅಷ್ಟೇ ಬಗೆ ಎನ್ನಬಹುದು. ಹಾಗೇ ಸಾಹಿತಿಗಳಲ್ಲಿ ಕೂಡ. ಆದರೆ ಸಾಹಿತಿಗಳನ್ನು ಸ್ಥೂಲವಾಗಿ ಐದು ಬಗೆಯಲ್ಲಿ ವಿಂಗಡಿಸಬಹುದಂತೆ- ದರ್ಶನಶೀಲ, ತುಲನಶೀಲ, ವಿವರಣಶೀಲ, ಕಥನಶೀಲ ಮತ್ತು ಅನುನಯಶೀಲ.
ದರ್ಶನಶೀಲ ಸಾಹಿತಿಗಳು ತಮ್ಮ ಪಂಚೇಂದ್ರಿಯಗಳು ಕಂಡು ಉಂಡದ್ದನ್ನು ಯಥಾರೀತಿ ಓದುಗನಿಗೆ ದಾಟಿಸಲು ಹೆಣಗುವವರು. ಇವರು ನೋಡಿದ ದೃಶ್ಯ, ಕೇಳಿದ ಮಾತು, ಅನುಭವಿಸಿದ ಪಾಡುಗಳನ್ನು ಚಿತ್ರಣವಾಗಿ ಓದುಗನ ಮುಂದಿಟ್ಟು ಅವರೂ ಅನುಭವಿಸುವಂತೆ ಮಾಡುತ್ತಾರೆ. ನಮ್ಮಲ್ಲಿ ಈ ಬಗೆಗೆ ಉತ್ತಮ ಉದಾಹರಣೆ ಎಂದರೆ ಜಯಂತ ಕಾಯ್ಕಿಣಿ.
ಕೆಲವರಿಗೆ ತಾವು ಕಂಡದ್ದನ್ನು ಇನ್ನೊಂದರ ಜತೆಗೆ ತುಲನೆ ಮಾಡಿ ನೋಡದೆ ಸಮಾಧಾನವಿಲ್ಲ. ವಸ್ತು, ವಿಷಯ, ವ್ಯಕ್ತಿಗಳಲ್ಲಿರುವ ಸಾಮ್ಯ ವೈಷಮ್ಯಗಳನ್ನು ಮುಖಾಮುಖಿಯಾಗಿಸಿ ನೋಡುತ್ತಾರೆ ಇವರು. ಇವರು ತುಲನಶೀಲರು. ಜಗಲಿ- ಹಿತ್ತಲು, ನಾರಣಪ್ಪ- ಪ್ರಾಣೇಶಾಚಾರ್ಯಗಳ ಕರ್ತೃ ಯು.ಆರ್.ಅನಂತಮೂರ್ತಿ ಇದಕ್ಕೊಪ್ಪುವ ಉದಾಹರಣೆ.
ಇನ್ನು ಕೆಲವರಿಗೆ ಕತೆ ಹೇಳುವುದೆಂದರೇ ಇನ್ನಿಲ್ಲದ ಪ್ರೀತಿ. ಇವರು ಕತೆಯನ್ನು ಬಿಟ್ಟು ಬೇರಿನ್ನೇನು ಹೇಳಲೂ ಅಂಜಿಕೊಳ್ಳುತ್ತಾರೆ. ಪರಿಸರ ವಿಜ್ಞಾನವನ್ನೂ ಕಥೆಗಳ ಮೂಲಕವೇ ನಮ್ಮ ಹತ್ತಿರ ತಂದ ಪೂರ್ಣಚಂದ್ರ ತೇಜಸ್ವಿ ಇಂಥ ಕಥನಶೀಲ ವ್ಯಕ್ತಿ. ಹಲವರ ಸಾಹಿತ್ಯ ಕೃತಿಗಳನ್ನು ತಮ್ಮ ವಿಮರ್ಶೆ ವಿವರಣೆಗಳ ಮೂಲಕ ನಮಗೊಪ್ಪಿಸಲು ಕಷ್ಟಪಡುತ್ತಿರುವ ಜಿ.ಎಚ್.ನಾಯಕ, ಟಿ.ಪಿ.ಅಶೋಕರಂಥವರು ವಿವರಣಶೀಲರು.
ಅನುನಯಶೀಲರು ಕತೆಯನ್ನು ಚೆನ್ನಾಗಿ ಹೇಳಿದರೂ, ಅದರೊಳಗೆ ಬೇರೇನೋ ಉದ್ದೇಶ ಇರುತ್ತದೆ. ತಮ್ಮ ವೈಚಾರಿಕತೆ, ತಾತ್ವಿಕತೆಯನ್ನು ನಿಮ್ಮಲ್ಲಿ ತುಂಬಲು ಯತ್ನಿಸುತ್ತಿರುತ್ತಾರೆ ಅವರು. ನಮ್ಮಲ್ಲಿ ಇದಕ್ಕೆ ಭೈರಪ್ಪನವರಲ್ಲದೆ ಬೇರೆ ಉದಾಹರಣೆ ಬೇಕೆ?
ಓದಬೇಕೆಂದರೆ
'ಇಂದು ನಿಮ್ಮ ಭಾಷಣ ಹೇಗಿತ್ತು?' ಎಂದು ಭಾಷಣಕಾರನನ್ನು ಕೇಳಿದರೆ ಏನು ಹೇಳಬಹುದು? ಸತ್ಯವಂತನಾದರೆ 'ನಾನು ಭಾಷಣ ಮಾಡಿದವನು, ಕೇಳಿದವನಲ್ಲ' ಎನ್ನಬೇಕು. ಹಾಗೇ ನಮ್ಮಲ್ಲಿ ಕೆಲವು ಪುಸ್ತಕ ಬರೆದವರು ಕೂಡ ತನ್ನ ಪುಸ್ತಕದ ಬಗ್ಗೆ ಕೇಳಿದರೆ 'ನಾನದನ್ನು ಓದಿಲ್ಲ' ಎನ್ನಬಹುದು. ಓದುಗರೂ ಓದಿರುವುದಿಲ್ಲ. ಹಾಗಾಗೇ ಬೆಂಜಮಿನ್ ಡಿಸ್ರೇಲಿ ಹೇಳಿದ್ದು- 'ನನಗೆ ಯಾವುದಾದ್ರೂ ಪುಸ್ತಕ ಓದಬೇಕೆಂದೆನಿಸಿದರೆ ನಾನೇ ಅದನ್ನು ಬರೆದುಬಿಡ್ತೇನೆ!'
-ಸತೀಶ್ ಕೇರ
harishkera@gmail.com