ಸಾಮರಸ್ಯವೇ ಜೀವನ
ಸುಂಟ್ರಳ್ಳಿಯಲ್ಲಿ ಅನಾದಿಕಾಲದ ವಿಶಾಲವಾದ ಸುಂದರ ಆಲದಮರವಿತ್ತು.
ಸುಂಟ್ರಳ್ಳಿಯಲ್ಲಿ ಅನಾದಿಕಾಲದ ವಿಶಾಲವಾದ ಸುಂದರ ಆಲದಮರವಿತ್ತು. ಬಳಲಿ ಬಂದವರಿಗೆ ಅದು ಆಯಾಸ ನೀಗಿಸಿಕೊಳ್ಳುವ ತಂಗುದಾಣವಾಗಿತ್ತು. ಅದರಲ್ಲಿ ನಾನಾ ಜಾತಿಯ ಹಕ್ಕಿ-ಪಕ್ಷಿಗಳು ವಾಸವಿದ್ದವು. ಮರದ ಬುಡದ ಹುತ್ತದಲ್ಲಿ ಹಾವುಗಳಿದ್ದವು. ಹೀಗೆ ಅವೆಲ್ಲ ಜಾತಿ- ಬೇಧವಿಲ್ಲದೆ ಸಹಕಾರ ಮನೋಭಾವದಿಂದ ವಾಸಿಸುತ್ತಿದ್ದವು. ಆಲದ ಮರದಡಿ ಹಾದು ಹೋಗುವವರಿಗೆ ಹಕ್ಕಿಗಳ ಚಿಲಿಪಿಲಿ ಕಲರವ ಇಂಪಾದ ಗಾನದಂತೆ ಕೇಳಿಸುತ್ತಿತ್ತು.
ಒಮ್ಮೆ ಹಾವಿಗೇಕೋ ಮರದ ಮೇಲೇರುವ ಆಸೆಯಾಯಿತು. ಹಾಗೆಯೇ ನಿಧಾನವಾಗಿ ಮರವನ್ನು ಬಳಸಿ ಮೇಲೇರಿತು. ಮರದ ಮೇಲೆ ಪಕ್ಷಿಗಳ ನೂರಾರು ಗೂಡುಗಳು ಮತ್ತು ಅದರೊಳಗೆ ಇರುವ ಮೊಟ್ಟೆಗಳು ಕಂಡಿತದಕ್ಕೆ. ಹಾವಿನ ಬಾಯಲ್ಲಿ ನೀರೂರಿತ್ತು. ಹಕ್ಕಿಗಳೆಲ್ಲ ಆಹಾರಕ್ಕಾಗಿ ಹೊರಗೆ ಹೋಗಿದ್ದರಿಂದ ಹಾವು ದುರಾಸೆಯಿಂದ ಕೆಲವು ಮೊಟ್ಟೆಗಳನ್ನು ತಿಂದು ಬಿಟ್ಟಿತ್ತು. ಸಂಜೆ ಗೂಡಿಗೆ ಮರಳಿ ಬಂದಾಗ ಹಕ್ಕಿಗಳಿಗೆ ತಮ್ಮ ಮೊಟ್ಟೆ ಮಾಯವಾಗಿರುವುದು ತಿಳಿಯಿತು. ತುಂಬಾ ದುಃಖವೂ ಆಯಿತು. ನಂತರ ಗಮನಿಸಿದರೆ ಕೆಳಗಿನ ಹುತ್ತದ ಬಳಿಯಲ್ಲಿ ಮೊಟ್ಟೆಗಳ ಕವಚದ ಚೂರುಗಳು ಬಿದ್ದಿದ್ದು ಕಾಣಿಸಿತು. ಹಕ್ಕಿಗಳಿಗೆ ಖಾತರಿಯಾಯಿತು, ಹಾವೇ ತಮ್ಮ ಮೊಟ್ಟೆಗಳನ್ನು ಕಬಳಿಸಿರುವುದೆಂದು. ಹಕ್ಕಿಗಳೆಲ್ಲ ದುಃಖಿಸುವುದನ್ನು ಕಂಡು ದುಷ್ಟ ಹಾವು ಹುತ್ತದೊಳಗೇ ಮುಸಿಮುಸಿ ನಗುತ್ತಿತ್ತು. ಕೆಲವು ದಿನಗಳ ನಂತರ ಒಂದು ಹದ್ದು ಬಂದು ಆಲದ ಮರದಡಿಯ ಹುತ್ತದಲ್ಲಿರುವ ಹಾವಿನ ಮೊಟ್ಟೆಯನ್ನೂ ಮತ್ತು ಮರಿಗಳನ್ನೂ ಕಚ್ಚಿಕೊಂಡು ಹೋಯಿತು. ಹಾವು ತೀವ್ರ ದುಃಖದಿಂದ ಹೊರಗೆ ಬಂದು ಗೋಳಾಡುತ್ತಿತ್ತು. ಆಗ ಹಾವಿಗೆ ಜ್ಞಾನೋದಯವಾಯಿತು; ಅಂದು ಹಕ್ಕಿಗಳ ಮೊಟ್ಟೆಯನ್ನು ತಾನು ತಿಂದಾಗ ಆ ಹಕ್ಕಿಗಳಿಗೂ ತಮ್ಮ ಮೊಟ್ಟೆ ಕಳೆದುಕೊಂಡಿದ್ದಕ್ಕೆ ಇಷ್ಟೇ ನೋವನ್ನು ಅನುಭವಿಸಿದ್ದವು ಎಂದು. ಆಗ ಅಳುವ ಹಾವಿನ ಬಳಿ ಬಂದ ಹಕ್ಕಿಯೊಂದು 'ಹಾವೇ ಹೆತ್ತ ಕರುಳಿನ ಸಂಕಟ ನಿನಗೀಗ ಅರ್ಥವಾಗಿರಬೇಕಲ್ಲ? ನಾವು ಮೊದಲೆಲ್ಲ ಎಷ್ಟೋ ಬಾರಿ ನಿನ್ನ ಮರಿಗಳನ್ನು ಹದ್ದಿನಿಂದ ರಕ್ಷಿಸಿದ್ದೆವು. ಆದರೆ, ನಮ್ಮ ಮೊಟ್ಟೆಗಳನ್ನೇ ನೀನು ತಿಂದಿದ್ದರಿಂದ ನಮ್ಮ ನೋವು ನಿನಗೂ ಅರಿವಾಗಲೆಂದು ಈ ಬಾರಿ ನಿನ್ನ ಮೊಟ್ಟೆಗಳನ್ನು ರಕ್ಷಿಸಲು ಮುಂದಾಗಲಿಲ್ಲ, ಈಗಲಾದರೂ ಬುದ್ಧಿ ಕಲಿತುಕೋ' ಎಂದಿತು. ಆಗ ಹಾವಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಸಹಕಾರದಿಂದ ಬಾಳುತ್ತೇನೆಂದು ಮಾತು ಕೊಟ್ಟಿತು. ಮುಂದೊಂದು ದಿನ ಬೇಟೆಗಾರನೊಬ್ಬ ಕೈಲಿ ಬಂದೂಕು ಹಿಡಿದು ಆಲದಮರದ ಕಡೆ ಬಂದ. ಬಹುಶಃ ಆ ಬೇಟೆಗಾರ ಹಕ್ಕಿಗಳಿಗೆ ಮತ್ತು ಅವುಗಳ ಮರಿಗೆ ಅಪಾಯ ಉಂಟುಮಾಡುತ್ತಾನೆ ಎಂದು ತಿಳಿದು ಕೂಡಲೇ ಅವುಗಳ ರಕ್ಷಣೆಗೆ ಮುಂದಾಯ್ತು. ಹಾವು ಹುತ್ತದೊಳಗಿನಿಂದ ಹೊರಬಂದು 'ಭುಸ್' ಎಂದಿತು. ಈ ಸದ್ದು ಕೇಳಿಸಿಕೊಂಡ ಬೇಟೆಗಾರ ನಿಲ್ಲದೇ ಓಟಕಿತ್ತ. ಇದೆಲ್ಲವನ್ನೂ ನೋಡುತ್ತಿದ್ದ ಪಕ್ಷಿಗಳು ಬೇಟೆಗಾರನಿಂದ ತಮ್ಮನ್ನು ರಕ್ಷಿಸಿದ್ದಕ್ಕಾಗಿ ಹಾವಿಗೆ ಕೃತಜ್ಞತೆ ತಿಳಿಸಿದವು. ಸಾಮರಸ್ಯವೇ ಜೀವನ ಎಂದು ಹಾಡಿ ನಲಿದಾಡಿದವು.
ಕಪ್ಪು ಬಣ್ಣದ ಅಂಗಿ ಧರಿಸಬಾರದೇಕೆ?
ಕಪ್ಪು ಬಣ್ಣದ ಅಂಗಿಯಲ್ಲೇನು ಕರೆಂಟ್ ಇರುತ್ತಾ? ಇರಲ್ಲ. ಆದರೂ, ಅಮ್ಮ ಅದನ್ನು ಧರಿಸುವುದು ಬೇಡ ಎಂದಿರುತ್ತಾಳೆ. ನೀನು 'ಯಾಕೆ?' ಎಂದು ಕೇಳುತ್ತೀಯ. ಆಗ ಅಮ್ಮ 'ಅದರಲ್ಲಿ ಉಷ್ಣ ಜಾಸ್ತಿ' ಎನ್ನುತ್ತಾಳೆ. ನಿನಗೆ ಕಪ್ಪು ಬಣ್ಣದ ಅಂಗಿಯಾದರೆ ಮಾತ್ರ ಯಾಕೆ ಶಾಖ ಜಾಸ್ತಿ ಎಂಬ ಅನುಮಾನ. ನಿನ್ನ ಅನುಮಾನವನ್ನು ಈಗ ಪರಿಹರಿಸೋಣ. ಮೊದಲಿಗೆ ದೊಡ್ಡ ಐಸ್ ತುಂಡು ಮತ್ತು ನಾಲ್ಕು ಒಂದೇ ಅಳತೆಯ ಬಟ್ಟೆಯ ತುಂಡುಗಳನ್ನು ತೆಗೆದುಕೋ. ನಾಲ್ಕರಲ್ಲಿ ಒಂದು ಬಿಳಿ ಮತ್ತು ಒಂದು ಕಪ್ಪು ಬಣ್ಣದ ಬಟ್ಟೆ ತುಂಡಾಗಿರಬೇಕು. ಇನ್ನೆರಡು ನಿನಗೆ ಮೆಚ್ಚುಗೆಯಾದ ಬಣ್ಣವನ್ನೇ ತೆಗೆದುಕೋ. ಟೇಬಲ್ನ ಸಹಾಯದಿಂದ ಬಿಸಿಲಿನ ಕೆಳಗೆ ಐಸ್ ತುಂಡನ್ನು ಇಡು. ನಾಲ್ಕೂ ಬಣ್ಣದ ಬಟ್ಟೆ ಚೂರುಗಳನ್ನು ಐಸ್ ಮೇಲೆ ಹರವು. 5- 10 ನಿಮಿಷದ ನಂತರ ಬಟ್ಟೆಯನ್ನು ಐಸ್ ಮೇಲಿಂದ ತೆಗೆದುಬಿಡು. ನಾಲ್ಕೂ ಕಡೆ ಐಸ್ ಕರುಗುವಿಕೆಯಲ್ಲಿ ವ್ಯತ್ಯಾಸ ಆಗಿರುತ್ತದೆ. ಬಿಳಿಯ ಬಣ್ಣದ ಬಟ್ಟೆ ಮುಚ್ಚಿದ ಕಡೆ ಅತಿ ಕಡಿಮೆ ಕರಗಿರುತ್ತದೆ. ಅದೇ ಕಪ್ಪು ಬಟ್ಟೆ ಮುಚ್ಚಿದ ಭಾಗದಲ್ಲಿ ಜಾಸ್ತಿ ಕರಗಿರುತ್ತದೆ! ಬಟ್ಟೆಯನ್ನೂ ಗಮನಿಸು. ಕಪ್ಪು ಬಟ್ಟೆ ಹೆಚ್ಚು ಒದ್ದೆಯಾಗಿರುತ್ತದೆ. ಈಗ ಅರ್ಥವಾಯಿತಾ? ಯಾಕೆ ನಿನ್ನ ಅಮ್ಮ ಕಪ್ಪು ಬಣ್ಣದ ಬಟ್ಟೆ ಹಾಕಬೇಡ ಎನ್ನುತ್ತಾಳೆಂದು? ಇದರ ಅರ್ಥ ಬೇರೆ ಬೇರೆ ಬಣ್ಣಗಳ ಶಾಖ ಗ್ರಹಿಕೆ ವಿಭಿನ್ನವಾಗಿರುತ್ತವೆ ಎಂದು.
- ಮಾನಸ ಹೆಗಡೆ