ಬೆಂಗಳೂರು: ಹತ್ಯೆಯಾದ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದು, ಇಂತಹ ಉಗ್ರನ ಬಗ್ಗೆ ಭಾರತೀಯರು ಹೇಗೆ ಅನುಕಂಪ ತೋರಿಸಲು ಸಾಧ್ಯ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡುವ ಅವರು ಭಾನುವಾರ ಹೇಳಿದ್ದಾರೆ.
ಬುರ್ಹಾನ್ ವಾನಿ ಹತ್ಯೆ ಕುರಿತು ಕೆಲ ಭಾರತೀಯರೂ ಕೂಡ ಅನುಕಂಪ ತೋರಿಸುತ್ತಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ಒಬ್ಬ ಉಗ್ರನ ಬಗ್ಗೆ ಅನುಕಂಪ ತೋರಿಸುತ್ತಿರುವ ಜನರನ್ನು ಇಂದು ಪ್ರತಿಭಟನಾಕಾರರು ಎಂದು ಬಿಂಬಿಸಲಾಗುತ್ತಿದೆ. ಬುರ್ಹಾನಿ ವಾನಿಯೊಬ್ಬ ಉಗ್ರ ಸಂಘಟನೆಯ ಕಮಾಂಡರ್ ಅಗಿದ್ದ. ಯಾವುದೇ ಭಾರತೀಯರಾಗಿ ಓರ್ವ ಉಗ್ರನ ಬಗ್ಗೆ ಅನುಕಂಪ ತೋರಿಸುವುದಾದರೂ ಹೇಗೆ ಸಾಧ್ಯ? ಸರ್ಕಾರ ಇರುವವರೆಗೂ ನಾವು ಇಂತಹ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಸಮಸ್ಯೆ ಈ ಕ್ಷಣಕ್ಕೆ ಬಂದಿದ್ದಲ್ಲ. ಸಾಕಷ್ಟು ಹಿಂದಿನಿಂದಲೂ ಈ ಸಮಸ್ಯೆಯಿದೆ. ಭಯೋತ್ಪಾದನೆ ಹಾಗೂ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಲು ಏನು ಮಾಡಬೇಕೋ ಅಂತಹ ಪ್ರಯತ್ನಗಳನ್ನು ಸರ್ಕಾರ ಮಾಡಲಿದೆ.
ಪ್ರಸ್ತುತ ಸೃಷ್ಟಿಯಾಗಿರುವ ವಾತಾವರಣವನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಲಿದೆ. ಪರಿಸ್ಥಿತಿ ನಿಯಂತ್ರಕ್ಕೆ ತರುವ ವಿಶ್ವಾಸ ನನಗಿದೆ. ಕೆಲವರು ಸ್ಥಳೀಯರ ಪ್ರಭಾವಕ್ಕೊಳಗಾಗಿ ಈ ರೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆಂದು ಹೇಳಿದ್ದಾರೆ.