ದೇಶ

ನಿರ್ಭಯಾ ಪ್ರಕರಣ: ಕ್ಷಮಾದಾನ ಕೋರಿ ಮತ್ತೆ ರಾಷ್ಟ್ರಪತಿ ಮೊರೆಹೋದ ಅಕ್ಷಯ್, ಸೋಮವಾರ ಸುಪ್ರೀಂನಲ್ಲಿ ಕ್ಯುರೇಟಿವ್ ಅರ್ಜಿ ವಿಚಾರಣೆ

Raghavendra Adiga

ಸೋಮವಾರ ಪವನ್ ಗುಪ್ತಾ ಅರ್ಜಿ ವಿಚಾರಣೆ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ  ಅಕ್ಷಯ್ ಕುಮಾರ್ ಸಿಂಗ್ ರಾಷ್ಟ್ರಪತಿಗಳಿಗೆ ಹೊಸದಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಈ ಮುಖೇನ ನಿರ್ಭಯಾ ಅಪರಾಧಿಗಳಿಗೆ ನಿಗದಿತ ದಿನಾಂಕದಂದು ಗಲ್ಲು ಆಗುವುದು ಬಹುತೇಕ ಅಸಾಧ್ಯ ಎನ್ನುವಂತಾಗಿದೆ. "ತಾನು ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಸಂಪೂರ್ಣ ವಿವರಗಳಿರಲಿಲ್ಲ" ಎಂದು ಹೇಳಿರುವ ಅಪರಾಧಿ ಇದೀಗ ಮತ್ತೊಂದು ಬಾರಿ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದಾನೆ.

ಫೆಬ್ರವರಿ 25 ರಂದು ಅಕ್ಷಯ್ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. "ಈಗ ಅದು ರಾಷ್ಟ್ರಪತಿ ಭವನವನ್ನು ತಲುಪಿದೆ" ಅಕ್ಷಯ್ ಪರ ವಕೀಲ ಎ ಪಿ ಸಿಂಗ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.

"ಈ ಅಪರಾಧಿ ಶಿಕ್ಷೆಗೆ ಗುರಿಯಾದ ಏಕೈಕ ವ್ಯಕ್ತಿಯಲ್ಲ, ಕ್ರಿಮಿನಲ್ ವಿಚಾರಣೆಯ ಪರಿಣಾಮವಾಗಿ ಅವನ ಇಡೀ ಕುಟುಂಬವು ಬಹಳವಾಗಿ ನರಳಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಿರ್ಭಯಾ ಪ್ರಕರಣದಲ್ಲಿ ಅಕ್ಷಯ್ ಹಾಗೂ ಇಅತ್ರೆ ಮೂವರು ಅಪರಾಧಿಗಳನ್ನು ಮಾರ್ಚ್ 3 ರಂದು ಬೆಳಿಗ್ಗೆ 6 ಗಂಟೆಗೆಗಲ್ಲಿಗೇರಿಸಬೇಕೆಂದು ನ್ಯಾಯಾಲಯ ಡೆತ್ ವಾರಂಟ್ ಜಾರಿ ಮಾಡಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಹಿಂದೆ ಫೆ. 5ಕ್ಕೆ ಅಕ್ಷಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಜಾ ಮಾಡಿದ್ದರು. ನಾಲ್ವರಲ್ಲಿ ಪವನ್ ಕುಮಾರ್ ಮಾತ್ರವೇ ರಾಶ್ಃಟ್ರಪತಿಗೆ ಕ್ಷಮಾದಾನಕ್ಕೆ ಅರ್ಜಿ ಹಾಕಿಲ್ಲ.

ಸೋಮವಾರ ಪವನ್ ಗುಪ್ತಾ ಅರ್ಜಿ ವಿಚಾರಣೆ

ನಿರ್ಭಯಾ ಪ್ರಕರಣದಲ್ಲಿ ಅಪರಾಧಿಯಾಗಿರುವ ಪವನ್ ಕುಮಾರ್ ಗುಪ್ತಾ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.  ಪವನ್ ಗುಪ್ತಾ ಅವರು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠ ಸೋಮವಾರ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ, ನ್ಯಾಯಮೂರ್ತಿ ಆರ್.ಎಫ್.ನಾರಿಮನ್, ನ್ಯಾಯಮೂರ್ತಿ ಆರ್ ಬಾನುಮತಿ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್  ಇರಲಿದ್ದಾರೆ. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಬೇಕೆಂದು ಗುಪ್ತಾ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರು

SCROLL FOR NEXT