ನವದೆಹಲಿ: ಅಂಗವೈಕಲ್ಯ ಮತ್ತು ಅಪರೂಪದ ಅನುವಂಶಿಕ ಅಸ್ವಸ್ಥತೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಹಾಸ್ಯನಟ ಮತ್ತು ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ನಿರೂಪಕ ಸಮಯ್ ರೈನಾ ಸೇರಿದಂತೆ ಐವರು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ತಮ್ಮ ತಮ್ಮ ವೇದಿಕೆಗಳಲ್ಲಿ ಸಾರ್ವಜನಿಕ, ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ದುರ್ಬಲ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಆಕ್ರಮಣಕಾರಿ ಅಥವಾ ತಾರತಮ್ಯ ಮಾಡುವ ಕಮರ್ಷಿಯಲ್ ವಿಚಾರಗಳಿಗೆ ವಾಕ್ ಸ್ವಾತಂತ್ರ್ಯವನ್ನು ರಕ್ಷಣೆಯಾಗಿ ಬಳಸುವಂತಿಲ್ಲ ಎಂದು ಒತ್ತಿ ಹೇಳಿದೆ.
'ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿನ ಯಾವುದೇ ವಿಚಾರವು ವ್ಯಕ್ತಿಯ ಘನತೆಗೆ ಧಕ್ಕೆ ತರಬಾರದು' ಎಂದು ನ್ಯಾಯಾಲಯ ಹೇಳಿತು.
ಸಾಮಾಜಿಕ ಮಾಧ್ಯಮ ಇನ್ಫ್ಲುಯೆನ್ಸರ್‌ಗಳು ತಮ್ಮ ಪಾಡ್‌ಕ್ಯಾಸ್ಟ್ ಎಪಿಸೋಡ್‌ಗಳು ಮತ್ತು ಆನ್‌ಲೈನ್ ಕಂಟೆಂಟ್ ಮಾಡುವ ಸಮಯದಲ್ಲಿ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA), ದೃಷ್ಟಿಹೀನತೆ ಮತ್ತು ಇತರ ಅಂಗವೈಕಲ್ಯಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಮಯ್ ರೈನಾ ಅವರ ಅಫಿಡವಿಟ್ ಅನ್ನು ಟೀಕಿಸಿದ ನ್ಯಾಯಾಲಯ, ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲು ಅವರು ಅವರ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆರೋಪಿಗಳಿಗೆ ದಂಡ ವಿಧಿಸುವ ಕುರಿತು ಪರಿಗಣಿಸಬಹುದು ಎಂದು ಪೀಠ ಎಚ್ಚರಿಸಿತು.
ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಅಂಗವಿಕಲರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವ ವಿಷಯವನ್ನು ನಿಯಂತ್ರಿಸಲು ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ನೆರವಾಗುವಂತೆ ನ್ಯಾಯಾಲಯವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ಸೂಚಿಸಿತು.
'ಸಾಮಾಜಿಕ ಮಾಧ್ಯಮ ನಿಯಮಗಳಿಗೆ ಮಾರ್ಗಸೂಚಿಗಳು ಮೇಲ್ನೋಟಕ್ಕೆ ಪ್ರತಿಕ್ರಿಯಿಸುವ ಪ್ರತಿಕ್ರಿಯೆಯಾಗಿರಬಾರದು, ಬದಲಾಗಿ ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ಹೊಂದಿರುವ ವಿಶಾಲ ನಿಯತಾಂಕಗಳನ್ನು ಆಧರಿಸಿರಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿನ ಹೇಳಿಕೆಗಳ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಜುಲೈ 15 ರಂದು ನ್ಯಾಯಾಲಯದ ಮುಂದೆ ಈ ವಿಚಾರವನ್ನು ತರಲಾಗಿತ್ತು. ತಮ್ಮ ಕ್ರಮಗಳ ಬಗ್ಗೆ ವಿವರಿಸಲು ಐದು ಪ್ರಭಾವಿಗಳಿಗೆ ಸಮನ್ಸ್ ಜಾರಿ ಮಾಡಿತು.