ನವದೆಹಲಿ: ದೆಹಲಿ ಪೊಲೀಸರು ಪತ್ತೆ ಮಾಡಿದ ಮೊಬೈಲ್ ಕಳ್ಳತನ ಪ್ರಕರಣವೊಂದು ಇದೀಗ ಭಾರಿ ಟ್ವಿಸ್ಟ್ ಪಡೆದಿದ್ದು, ಪತ್ನಿಯೋರ್ವಳ ಅಕ್ರಮ ಸಂಬಂಧವನ್ನು ಬಟಾಬಯಲು ಮಾಡಿದೆ.
ಹೌದು.. ದೆಹಲಿಯಲ್ಲಿ ನಡೆದ ಫೋನ್ ಕಳ್ಳತನ ಘಟನೆ ಆಘಾತಕಾರಿ ಸಂಗತಿಗಳನ್ನು ಹೊರಗೆಳೆದಿದ್ದು, ವಿವಾಹೇತರ ಸಂಬಂಧವೊಂದು ಬಯಲಾಗಿದೆ. ಕಳ್ಳನಿಗೆ ಫೋನ್ ಕದಿಯುವಂತೆ ಸುಪಾರಿ ನೀಡಿದ್ದೇ ಹೆಂಡತಿ ಎಂಬ ವಿಚಾರ ಆಘಾತಕ್ಕೆ ಕಾರಣವಾಗಿದೆ. ಈ ಪ್ರಕರಣ ಬೇದಿಸಿದ ದೆಹಲಿ ಪೊಲೀಸರೇ ಆಘಾತಕ್ಕೊಳಗಾಗುವಂತೆ ಮಾಡಿದೆ.
ಇಷ್ಟಕ್ಕೂ ಆಗಿದ್ದೇನು?
ಕಳೆದ ಜೂನ್ 19 ರಂದು ದಕ್ಷಿಣ ದೆಹಲಿಯ ಓಲ್ಡ್ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ಸ್ಕೂಟಿಯಲ್ಲಿ ಬಂದ ಇಬ್ಬರು ಕಳ್ಳರು ಫೋನ್ ಕದ್ದು ಪರಾರಿಯಾಗಿದ್ದರು. ಬಳಿಕ ಫೋನ್ ಕಳೆದುಕೊಂಡ ವ್ಯಕ್ತಿ ಆರಂಭದಲ್ಲಿ ದಕ್ಷಿಣ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಲ್ಲಿಂದ ತೆರಳಿದ್ದ.
ಆದರೆ ನಂತರ, ಪೊಲೀಸರು ತನಿಖೆ ನಡೆಸಿ, ಆ ರಸ್ತೆಯಲ್ಲಿದ್ದ ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಂತ್ರಸ್ಥ ಅಂದರೆ ಫೋನ್ ಕಳೆದುಕೊಂಡ ವ್ಯಕ್ತಿಯ ಪತ್ನಿಯೇ ತನ್ನ ರಹಸ್ಯವನ್ನು ಮರೆಮಾಡಲು ಈ ಕಳ್ಳತನವನ್ನು ಸಂಘಟಿಸಿದ್ದಾರೆ ಎಂದು ಕಂಡುಬಂದಿದೆ.
ಅಕ್ರಮ ಸಂಬಂಧ ಬಯಲು ಭೀತಿ, ಫೋನ್ ಕದಿಯಲು ಸುಪಾರಿ
ಪತಿಯ ಮೊಬೈಲ್ ನಲ್ಲಿದ್ದ ತನ್ನ ಮತ್ತು ತನ್ನ ಪ್ರಿಯಕರನ ಏಕಾಂತದ ಚಿತ್ರಗಳು ಬಯಲಾಗುತ್ತವೆ ಎಂಬ ಭಯದಿಂದ ಪತ್ನಿಯೇ ಆತನ ಫೋನ್ ಕದಿಯುವಂತೆ ಸುಪಾರಿ ನೀಡಿದ್ದಳು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ದೆಹಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಂಕಿತ್ ಚೌಹಾಣ್ ಅವರು, 'ಜೂನ್ 19 ರಂದು, ಓಲ್ಡ್ ಯುಕೆ ಪೇಂಟ್ ಫ್ಯಾಕ್ಟರಿ ಬಳಿ ವ್ಯಕ್ತಿಯೊಬ್ಬರ ಫೋನ್ ಕಿತ್ತುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ಪ್ರದೇಶದಲ್ಲಿ ಅಳವಡಿಸಲಾದ 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸ್ಕ್ಯಾನ್ ಮಾಡಿದಾಗ, ಆರೋಪಿ ನೀಲಿ ಟಿ-ಶರ್ಟ್ ಧರಿಸಿ ಸ್ಕೂಟಿಯಲ್ಲಿ ಪ್ರಯಾಣಿಸಿರುವುದನ್ನು ಪತ್ತೆ ಹಚ್ಚಲಾಯಿತು.
ಈ ವೇಳೆ ಕೃತ್ಯಕ್ಕೆ ಬಳಸಲಾದ ಸ್ಕೂಟಿ ಯಾರದ್ದು ಎಂದು ವಿಚಾರಿಸಿದಾಗ ಅದು ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆದಿದ್ದ ವಾಹನವಾಗಿತ್ತು. ಬಳಿಕ ಈ ವಾಹನವನ್ನು ಯಾರು ಬಾಡಿಗೆಗೆ ಪಡೆದರು ಎಂದು ವಿಚಾರಿಸಿದ ಪೊಲೀಸರು ಕಳ್ಳ ಬೈಕ್ ಬಾಡಿಗೆಗೆ ಪಡೆಯುವಾಗ ನೀಡಿದ್ದ ಆಧಾರ್ ಕಾರ್ಡ್ ಮತ್ತು ವಾಹನ ಚಾಲನಾ ಪರವಾನಗಿ ಗಳನ್ನು ಪರಿಶೀಲಿಸಿದರು.
ಅಲ್ಲದೆ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ವಸಂತ್ ಕುಂಜ್‌ನ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾದಿಂದ ಪೊಲೀಸರು ಕಂಡುಕೊಂಡರು. ಪೊಲೀಸರ ತಂಡವು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾವನ್ನು ತಲುಪಿ ಆರೋಪಿಗಳಲ್ಲಿ ಒಬ್ಬನಾದ ಅಂಕಿತ್ ಗೆಹ್ಲೋಟ್ ನನ್ನು ವಶಕ್ಕೆ ಪಡೆದರು. ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಆತನ ಕಳ್ಳತನದ ಹಿಂದಿನ ಉದ್ದೇಶವನ್ನು ಬಯಲು ಮಾಡಿದ.
ಮೊಬೈಲ್ ಕಳ್ಳತನಕ್ಕೆ ಸುಪಾರಿ ಕೊಟ್ಟಿದ್ದ ಪತ್ನಿ
ಅಂಕಿತ್ ತನ್ನನ್ನು ಸಂತ್ರಸ್ಥನ ಹೆಂಡತಿಯೇ ಮೊಬೈಲ್ ಕದಿಯಲು ನೇಮಿಸಿಕೊಂಡಿದ್ದಳೆಂದು ಹೇಳಿದ್ದಾನೆ. ಪತಿಯ ಮೊಬೈಲ್ ನಲ್ಲಿದ್ದ ತನ್ನ ರಹಸ್ಯ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಲು ಈ ಯೋಜನೆ ರೂಪಿಸಿದ್ದಳು ಎಂದು ಹೇಳಲಾಗಿದೆ.
ವಿವಾಹೇತರ ಸಂಬಂಧ
ಅಲ್ಲದೆ ಆಕೆಗೆ ಬೇರೊಬ್ಬ ಪುರುಷನೊಂದಿಗೆ ವಿವಾಹೇತರ ಸಂಬಂಧವಿತ್ತು. ಮಹಿಳೆ ತನ್ನ ಪ್ರೇಮಿಯೊಂದಿಗೆ ಇದ್ದ ಖಾಸಗಿ ಕ್ಷಣಗಳ ಚಿತ್ರಗಳು ಪತಿಯ ಮೊಬೈಲ್ ನಲ್ಲಿತ್ತು. ಇವುಗಳನ್ನು ಡೀಲೀಟ್ ಮಾಡಲೆಂದೇ ಈ ಸಂಚು ರೂಪಿಸಿದ್ದಳು. ಇದಕ್ಕಾಗಿ ತನ್ನ ಗಂಡನ ದಿನಚರಿ, ಕಚೇರಿ ಸಮಯ ಮತ್ತು ಆತ ಮನೆಗೆ ಬರುವ ಮಾರ್ಗದ ಬಗ್ಗೆ ಅವಳು ಅಂಕಿತ್ ಜೊತೆ ವಿವರಗಳನ್ನು ಹಂಚಿಕೊಂಡಿದ್ದಳು.
ಗಂಡನಿಗೂ ತಿಳಿದಿತ್ತು ಪತ್ನಿ ಕಳ್ಳಾಟ
ಇನ್ನು ಅಚ್ಚರಿ ಅಂಶ ಎಂದರೆ ಸಂತ್ರಸ್ಥ ಗಂಡನಿಗೂ ಪತ್ನಿಕಳ್ಳಾಟ ತಿಳಿದಿತ್ತು. ಅಲ್ಲದೆ ಆಕೆಯ ಕಳ್ಳಾಟವನ್ನು ಕುಟುಂಬಸ್ಥರಿಗೆ ತಿಳಿಸಬೇಕು ಎಂದು ಹವಣಿಸುತ್ತಿದ್ದ. ಅಲ್ಲದೆ ಆಕೆ ಮಲಗಿದ್ದ ಸಂದರ್ಭದಲ್ಲಿ ಆಕೆಯ ಮೊಬೈಲ್ ನಲ್ಲಿದ್ದ ಆಕೆಯ ರಹಸ್ಯ ವಿಡಿಯೋಗಳನ್ನು ತನ್ನ ಮೊಬೈಲ್ ಗೆ ರವಾನಿಸಿಕೊಂಡಿದ್ದ.
ಮಹಿಳೆಗೆ ಈ ವಿಷಯ ತಿಳಿದಾಗ, ತನ್ನ ಕುಟುಂಬದ ಮುಂದೆ ಬಹಿರಂಗಗೊಳ್ಳುವ ಭಯವಿತ್ತು. ಹೀಗಾಗಿ ಮೊಬೈಲ್ ಕದ್ದು ವಿಡಿಯೋ ಡಿಲೀಟ್ ಮಾಡಲು ಈ ಕಳ್ಳತನದ ಯೋಜನೆ ರೂಪಿಸಿದ್ದಳು ಎಂದು ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಇದೀಗ ಇಡೀ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಆರೋಪಿ ಅಂಕಿತ್ ನನ್ನು ವಶಕ್ಕೆ ಪಡೆದಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಸಂತ್ರಸ್ಥನ ಪತ್ನಿಯನ್ನೂ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.