ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೈಡ್ ಮುಗಿದ ಬಳಿಕವೂ ವಾಟ್ಸಾಪ್‌ನಲ್ಲಿ ಯುವತಿ ಸಂಪರ್ಕಿಸಿದ, ರೈಡರ್ ಯಾವ ರೀತಿಯ ಸಂದೇಶ ಕಳುಹಿಸಿದ್ದಾನೆ ಎಂಬುದನ್ನು ಅನುಷ್ಕಾ ಎಂಬ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆಯು ಬೈಕ್ ರೈಡರ್ ನಡವಳಿಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಡ್ರಾಪ್ ಮಾಡಿದ ಬಳಿಕ ತನನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ ರಾಪಿಡ್ ರೈಡರ್, ವಿಚಿತ್ರವಾದ ರೀತಿಯಲ್ಲಿ ಮೇಸೆಜ್ ಮಾಡುತ್ತಿದ್ದ ಎಂದು ಅನುಷ್ಕಾ ಹೇಳಿದ್ದಾರೆ. ಇದರ ಸ್ಕ್ರೀನ್ ಶಾಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ತ್ವರಿತಗತಿಯಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಬೈಕ್ ರೈಡರ್ ಹೇಗೆ ಮೊಬೈಲ್ ಸಂಖ್ಯೆ ಪಡೆದ ಎಂಬುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕಂಪನಿ ಪ್ರತಿಕ್ರಿಯೆ: ಈ ಪೋಸ್ಟ್ ಬಳಿಕ ಕಂಪನಿಯು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಂತಹ ನಡವಳಿಕೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಬೈಕ್ ರೈಡರ್ ನ ಅನುಚಿತ ವರ್ತನೆಗೆ ಕ್ಷಮೆಯಾಚಿಸುವುದಾಗಿ ರಾಪಿಡೋ ಹೇಳಿದೆ,
ಇದು ತನ್ನ ಸೇವಾ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ರೈಡ್ ಐಡಿಯನ್ನು ನೇರ ಸಂದೇಶದ ಮೂಲಕ ಹಂಚಿಕೊಳ್ಳುವಂತೆ ವಿನಂತಿಸಿದೆ, ಇದರಿಂದಾಗಿ ಈ ವಿಷಯವನ್ನು ಆದ್ಯತೆಯ ಮೇರೆಗೆ ತನಿಖೆ ಮಾಡಬಹುದು ಮತ್ತು ಕಠಿಣ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ.
ಸುರಕ್ಷತೆ ಬಗ್ಗೆ ಕಳವಳ: ಈ ಘಟನೆಯು ಬೈಕ್ ರೈಡಿಂಗ್ ಬಳಸುವಾಗ ಸುರಕ್ಷತೆ ಮತ್ತು ಡೇಟಾ ಗೌಪ್ಯತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ರೈಡ್ ಮುಗಿದ ನಂತರ ಯಾರ ವೈಯಕ್ತಿಕ ಸಂಪರ್ಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅನೇಕ ಬಳಕೆದಾರರು ಆಗ್ರಹಿಸಿದ್ದಾರೆ.