ಮೋಸ್ಟ್ ವಾಂಟೆಡ್ ಉಗ್ರರ ಪೋಸ್ಟರ್ 
ದೇಶ

ಸ್ವಾತಂತ್ರ್ಯ ದಿನ ಸಂಭ್ರಮದ ಮೇಲೆ ಉಗ್ರರ ಕರಿನೆರಳು: ದೆಹಲಿಯಲ್ಲಿ ಹೈ ಅಲರ್ಟ್, 19 ಮೋಸ್ಟ್ ವಾಂಟೆಡ್ ಉಗ್ರರ ಪೋಸ್ಟರ್ ರಿಲೀಸ್!

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಯಾವುದೇ ಸಂಭವನೀಯ ಭಯೋತ್ಪಾದಕ ಬೆದರಿಕೆ ಎದುರಾಗದಂತೆ ದೆಹಲಿ ಪೊಲೀಸರು ಭದ್ರತಾ ಏಜೆನ್ಸಿಗಳೊಂದಿಗೆ ಸಮನ್ವಯ ಹೆಚ್ಚಿಸಿದ್ದಾರೆ.

ನವದೆಹಲಿ: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಪೊಲೀಸರು 19 ಮೋಸ್ಟ್‌ ವಾಂಟೆಡ್‌ ಉಗ್ರರ ಭಾವಚಿತ್ರಗಳನ್ನು ಒಳಗೊಂಡ ಪೋಸ್ಟರ್‌ಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರಕಟಿಸಿದ್ದು, ಅವರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಿದ್ದಾರೆ.

ವರದಿಗಳ ಪ್ರಕಾರ, ಇಂಡಿಯನ್‌ ಮುಜಾಹಿದ್ದೀನ್‌, ಅಲ್‌ಖೈದಾ ಹಾಗೂ ವಿವಿಧ ಖಲಿಸ್ತಾನಿ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಶಂಕಿತ ಉಗ್ರರ ಪೋಸ್ಟರ್‌ಗಳನ್ನು ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಹಾಕಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಯಾವುದೇ ಸಂಭವನೀಯ ಭಯೋತ್ಪಾದಕ ಬೆದರಿಕೆ ಎದುರಾಗದಂತೆ ದೆಹಲಿ ಪೊಲೀಸರು ಭದ್ರತಾ ಏಜೆನ್ಸಿಗಳೊಂದಿಗೆ ಸಮನ್ವಯ ಹೆಚ್ಚಿಸಿದ್ದಾರೆ.

ಸೂಕ್ಷ್ಮ ಪ್ರದೇಶಗಳು, ಪ್ರಮುಖ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಬಸ್‌ ನಿಲ್ದಾಣಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ನಿಗಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೂ ಪೊಲೀಸರು ಮನವಿ ಮಾಡಿದ್ದಾರೆ.

ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಪೋಸ್ಟರ್‌ಗಳಲ್ಲಿ ವಾಂಟೆಡ್‌ ಉಗ್ರರ ಭಾವಚಿತ್ರ ಮತ್ತು ಗುರುತಿನ ವಿವರಗಳನ್ನು ನೀಡಲಾಗಿದೆ.

ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಗೆ ಸಂಬಂಧಿಸಿದ ರಿಯಾಜ್‌ ಭಟ್ಕಳ್ ಹಾಗೂ ಶಬಂದ್ರಿ ಮೊಹಮ್ಮದ್‌ ಇಕ್ಬಾಲ್‌ ಅಲಿಯಾಸ್‌ ಇಕ್ಬಾಲ್‌ ಭಟ್ಕಳ್ ಹೆಸರುಗಳು ಪಟ್ಟಿಯಲ್ಲಿವೆ.

ಅಲ್‌ಖೈದಾಗೆ ಸಂಬಂಧಿಸಿದ ಮೊಹಮ್ಮದ್‌ ಶರ್ಜೀಲ್‌ ಅಖ್ತರ್‌, ಅಬು ಸುಫಿಯಾನ್ ಮತ್ತು ಸೈಯ್ಯದ್‌ ಮೊಹಮ್ಮದ್‌ ಅರ್ಷಿಯಾನ್‌ ಅವರ ಹೆಸರೂ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿವೆ.

ಖಲಿಸ್ತಾನಿ ಉಗ್ರರ ಪೈಕಿ ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌ಗೆ ಸೇರಿದ ರಂಜಿತ್‌ ಸಿಂಗ್‌ ಅಲಿಯಾಸ್‌ ನೀತಾ ಹಾಗೂ ಪರಮ್‌ಜಿತ್‌ ಸಿಂಗ್‌ ಪಮ್ಮಾ, ಖಲಿಸ್ತಾನ್‌ ಟೈಗರ್‌ ಫೋರ್ಸ್‌ಗೆ ಸೇರಿದ ಅರ್ಷದೀಪ್‌ ಸಿಂಗ್‌ ಅಲಿಯಾಸ್‌ ಅರ್ಷ್‌ ದಲ್ಲಾ ಅವರ ಹೆಸರುಗಳನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆ.

ಇದರ ಜೊತೆಗೆ ಬಬ್ಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (BKI)ಗೆ ಸಂಬಂಧಿಸಿದ ಹರ್ವಿಂದರ್ ಸಿಂಗ್‌ ಸಂಧು ಅಲಿಯಾಸ್‌ ರಿಂಡಾ, ವಾಧವಾ ಸಿಂಗ್ ಬಬ್ಬರ್ ಹಾಗೂ ಗುರ್ಮೀತ್‌ ಸಿಂಗ್‌ ಬಗ್ಗಾ ಸೇರಿದಂತೆ ಇತರ ವಾಂಟೆಡ್‌ ಉಗ್ರರ ಪೋಸ್ಟರ್‌ಗಳನ್ನೂ ಹಾಕಲಾಗಿದೆ.

ರೈಲು ನಿಲ್ದಾಣ, ಮಾರುಕಟ್ಟೆಗಳಲ್ಲಿ ತೀವ್ರ ನಿಗಾ

ಈ ನಡುವೆ ಆಗಸ್ಟ್‌ 15 ಹಾಗೂ ಜನವರಿ 26ರಂತಹ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ರೈಲು ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು, ಧಾರ್ಮಿಕ ಸ್ಥಳಗಳು ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ನಿಗಾ ಇರಿಸಲಾಗುತ್ತದೆ.

ಸಾರ್ವಜನಿಕರಿಗೆ ವಿಶೇಷ ಮನವಿ

ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅಥವಾ ಅವರು ಎಲ್ಲಾದರೂ ಕಂಡುಬಂದರೆ, ತಕ್ಷಣ ಪೊಲೀಸರಿಗೆ ತಿಳಿಸುವಂತೆ ದೆಹಲಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ 112 ಪೊಲೀಸ್‌ ನಿಯಂತ್ರಣ ಕೊಠಡಿ ಅಥವಾ ವಿಶೇಷ ಘಟಕದ ಸಂಪರ್ಕ ವ್ಯವಸ್ಥೆಯನ್ನು ಬಳಸಬಹುದು. ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಹಾಗೂ ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Parliament Monsoon Session: ರಾಹುಲ್ ವಿರುದ್ಧ ಆಕ್ರೋಶ; ಸಂಸತ್ ಆವರಣದಲ್ಲಿ NDA ಸಂಸದರ ಬೃಹತ್ ಪ್ರತಿಭಟನಾ ಮೆರವಣಿಗೆ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ..!

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಬರ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ; ಅಗತ್ಯವಿದ್ದರೆ ನ್ಯಾಯಾಲಯದ ಮೊರೆ: DCM ಡಾ. ಪರಮೇಶ್ವರ್‌