ಅಂತ್ಯಕ್ರಿಯೆ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆಗಳು 
ದೇಶ

ಸರಯು ನದಿಯಲ್ಲಿ ಅತ್ತೆ ಅಂತ್ಯಕ್ರಿಯೆ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆ, ದೇಹ ಛಿದ್ರ; ಸ್ಥಳೀಯರ ಆಕ್ರೋಶ, Video

ಸೋನೌಲಿ ಮೊಹಮ್ಮದ್‌ಪುರ ಉದಯಭಾನ್ ಪಾಹಿ ಘಾಟ್‌ನಲ್ಲಿ ಸರಯು ನದಿಯಲ್ಲಿ ಅಂತಿಮ ವಿಧಿವಿಧಾನದ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ದೀಪಕ್ ಶರ್ಮಾ ಎಂಬ ವ್ಯಕ್ತಿಯನ್ನು ಮೊಸಳೆದಳು ಎಳೆದೊಯ್ದಿವೆ.

ಲಖನೌ: ನದಿಯಲ್ಲಿ ತನ್ನ ಅತ್ತೆಯ ಅಂತ್ಯ ಸಂಸ್ಕಾರ ನಡೆಸುವ ವೇಳೆ ಮೊಸಳೆಗಳ ಹಿಂಡೊಂದು ವ್ಯಕ್ತಿಯನ್ನು ಎಳೆದೊಯ್ದಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಉಮ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಧವಾರ (ಮೇ 20, 2026) ಮಧ್ಯಾಹ್ನ ಸುಮಾರು 12:00 ಗಂಟೆಗೆ ಸೋನೌಲಿ ಮೊಹಮ್ಮದ್‌ಪುರ ಉದಯಭಾನ್ ಪಾಹಿ ಘಾಟ್‌ನಲ್ಲಿ ಸರಯು ನದಿಯಲ್ಲಿ ಅಂತಿಮ ವಿಧಿವಿಧಾನದ ಪ್ರಕ್ರಿಯೆಗಳು ನಡೆಯುತ್ತಿದ್ದಾಗ ದೀಪಕ್ ಶರ್ಮಾ ಎಂಬ ವ್ಯಕ್ತಿಯನ್ನು ಮೊಸಳೆದಳು ಎಳೆದೊಯ್ದಿವೆ.

ಮೂಲಗಳ ಪ್ರಕಾರ ಗ್ರೇಟರ್ ನೋಯ್ಡಾದ ಪ್ಯಾರಿ ಚೌಕ್ ಪ್ರದೇಶದ ನಿವಾಸಿಯಾದ ದೀಪಕ್ ಶರ್ಮಾ, ತಮ್ಮ ಪತ್ನಿ ರೇಖಾ ಅವರೊಂದಿಗೆ ಅತ್ತೆ ಊರ್ಮಿಳಾ ದೇವಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ, ಪತ್ನಿ ಮತ್ತು ಸಂಬಂಧಿಕರ ಎದುರೇ ಮೊಸಳೆಗಳು ದಾಳಿ ಮಾಡಿ ದೀಪಕ್ ಶರ್ಮಾ ಅವರನ್ನು ಎಳೆದೊಯ್ದಿವೆ. ಈ ವೇಳೆ ಭಯಭೀತರಾದ ಸಂಬಂಧಿಕರು ಕಿರುಚಿಕೊಂಡರೂ ಪ್ರಯೋಜನವಾಗಲಿಲ್ಲ. ನೋಡ ನೋಡುತ್ತಲೇ ದೀಪಕ್ ಶರ್ಮಾರನ್ನು ಮೊಸಳೆಗಳು ನೀರಿನೊಳೆಗೆ ಎಳೆದೊಯ್ದಿವೆ ಎನ್ನಲಾಗಿದೆ.

ರಕ್ಷಣಾ ತಂಡಗಳ ದೌಡು

ಈ ವಿಚಾರ ತಿಳಿಯುತ್ತಲೇ ಸ್ಥಳೀಯ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಪಡೆಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಬರೊಬ್ಬರಿ 24 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಕೊನೆಗೂ ದೀಪಕ್ ಶರ್ಮಾ ಅವರ ಛಿದ್ರಗೊಂಡ ದೇಹ ಪತ್ತೆಯಾಗಿದೆ.

ಆಗಿದ್ದೇನು?

ಗೊಂಡಾ ಜಿಲ್ಲೆಯ ಸೋನೌಲಿ ಮೊಹಮ್ಮದ್‌ಪುರ ಉದಯಭಾನ್ ಪಾಹಿ ಘಾಟ್‌ನಲ್ಲಿ ಬುಧವಾರ ಮಧ್ಯಾಹ್ನ ದೀಪಕ್ ಶರ್ಮಾ ಮತ್ತು ಅವರ ಪತ್ನಿ ಅಂತ್ಯ ಸಂಸ್ಕಾರಕ್ಕಾಗಿ ಬಂದಿದ್ದರು. ನದಿಯ ದಂಡೆಯ ಮೇಲೆ ಚಿತೆಯನ್ನು ಸಿದ್ಧಪಡಿಸಲು ಶರ್ಮಾ ಅವರು ಕುಟುಂಬದ ಸದಸ್ಯರಿಗೆ ಸಹಾಯ ಮಾಡಿದ್ದರು. ನಂತರ ಕೈಕಾಲು ತೊಳೆಯಲು ಮತ್ತು ಸ್ನಾನ ಮಾಡಲು ಸರಯು ನದಿಯಲ್ಲಿ ಇಳಿದಿದ್ದರು. ನದಿಯ ಆಳಕ್ಕೆ ಇಳಿಯದಂತೆ ಅಲ್ಲಿದ್ದವರು ಶರ್ಮಾ ಅವರಿಗೆ ಮೊಸಳೆಗಳಿರುವ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ದೀಪಕ್ ಶರ್ಮಾ ಅದನ್ನು ಗಮನಿಸಲಿಲ್ಲ ಎನ್ನಲಾಗಿದೆ.

ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ಅವರ ಪ್ರಕಾರ, ದೀಪಕ್ ಶರ್ಮಾ ನೀರಿನಲ್ಲಿ ಮುಳುಗುತ್ತಿದ್ದಂತೆ, ಒಂದು ದೊಡ್ಡ ಮೊಸಳೆ ಇದ್ದಕ್ಕಿದ್ದಂತೆ ನೀರಿನಿಂದ ಮೇಲೆ ಬಂದು ಅವರ ತಲೆಯನ್ನು ಬಲವಾಗಿ ಕಚ್ಚಿ, ಕೆಲವೇ ಸೆಕೆಂಡುಗಳಲ್ಲಿ ಆಳವಾದ ನದಿಯೊಳಗೆ ಎಳೆದುಕೊಂಡು ಹೋಯಿತು. ಮೊಸಳೆಯ ದಿಢೀರ್ ದಾಳಿಯಿಂದಾಗಿ ಅಂತ್ಯಕ್ರಿಯೆಗೆ ಬಂದಿದ್ದ ಜನರಲ್ಲಿ ತೀವ್ರ ಆತಂಕ ಮೂಡಿತು. ಅಲ್ಲಿದ್ದವರು ಕೂಗಾಡುತ್ತಾ ಅವರನ್ನು ರಕ್ಷಿಸಲು ನದಿಯ ದಡದ ಉದ್ದಕ್ಕೂ ಓಡಿದರು. ಆದರೆ, ನೀರಿನ ಆಳ ಮತ್ತು ಅಪಾಯದ ತೀವ್ರತೆಯಿಂದಾಗಿ ಯಾರೂ ನೀರಿಗೆ ಧುಮುಕಲು ಧೈರ್ಯ ಮಾಡಲಿಲ್ಲ. ಕೆಲವೇ ಕ್ಷಣಗಳಲ್ಲಿ ದೀಪಕ್ ಶರ್ಮಾ ಶರ್ಮಾ ಮತ್ತು ಮೊಸಳೆ ಇಬ್ಬರೂ ನೀರಿನ ಆಳದಲ್ಲಿ ಕಣ್ಮರೆಯಾದರು.

24 ಗಂಟೆಗಳ ನಿರಂತರ ಕಾರ್ಯಾಚರಣೆ

ಮಾಹಿತಿ ತಿಳಿದ ತಕ್ಷಣ ಉಮ್ರಿ ಬೇಗಂಗಂಜ್ ಪೊಲೀಸ್ ಠಾಣಾಧಿಕಾರಿ (SHO) ಚಂದನ್ ಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ದೋಣಿ ಚಾಲಕರು ಮತ್ತು ಮುಳುಗು ತಜ್ಞರು ಬಲೆ ಹಾಗೂ ದೋಣಿಗಳನ್ನು ಬಳಸಿ ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿದರು.

ರಾತ್ರಿಯಾದರೂ ಯಾವುದೇ ಸುಳಿವು ಸಿಗದಿದ್ದಾಗ, ತಾರಾಬ್‌ಗಂಜ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಸೇರಿದಂತೆ ಹಿರಿಯ ಆಡಳಿತ ಅಧಿಕಾರಿಗಳು ಹೆಚ್ಚಿನ ರಕ್ಷಣಾ ಪಡೆಗಳನ್ನು ನಿಯೋಜಿಸಿದರು. ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಕ್ನೋದಿಂದ ರಾಜ್ಯ ವಿಪತ್ತು ಸ್ಪಂದನಾ ಪಡೆಯನ್ನು (SDRF) ಕರೆಯಿಸಲಾಯಿತು. ಸುಮಾರು 24 ಗಂಟೆಗಳ ನಿರಂತರ ಶೋಧದ ನಂತರ, ಮುಳುಗು ತಜ್ಞರು ಶರ್ಮಾ ಅವರ ಮೃತದೇಹವನ್ನು ಪತ್ತೆಹಚ್ಚಿದರು.

ಸಾರ್ವಜನಿಕ ಆಕ್ರೋಶ ಮತ್ತು ಆಡಳಿತದ ಬೇಜವಾಬ್ದಾರಿತನ

ಈ ದುರಂತವು ಸ್ಥಳೀಯ ಗ್ರಾಮದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ ಮತ್ತು ಜನರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಸರಯು ನದಿಯ ಈ ನಿರ್ದಿಷ್ಟ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಎಂದು ಸ್ಥಳೀಯ ಗ್ರಾಮಸ್ಥರು ಮತ್ತು ದೋಣಿ ಚಾಲಕರು ತಿಳಿಸಿದ್ದಾರೆ.

ಈ ಘಟನೆಯು ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಪ್ರದೇಶದಲ್ಲಿ ಮೊಸಳೆಗಳ ಕಾಟ ಇರುವುದು ತಿಳಿದಿದ್ದರೂ, ಪ್ರಮುಖ ಅಂತ್ಯಕ್ರಿಯೆಯ ಘಾಟ್‌ನಲ್ಲಿ ಆಡಳಿತ ಮಂಡಳಿಯು ಯಾವುದೇ ಎಚ್ಚರಿಕೆ ಫಲಕಗಳು, ಸುರಕ್ಷತಾ ಜಾಲಗಳು ಅಥವಾ ಬ್ಯಾರಿಕೇಡ್‌ಗಳನ್ನು ಏಕೆ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಮತ್ತು ನಾಯಕರು ಪ್ರಶ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ, ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!

ಇಂಡೋನೇಷ್ಯಾ ಸಂಸತ್ತಿನಲ್ಲಿ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಪರಾಕ್ರಮ ಬಣ್ಣಿಸಿದ ಪ್ರಧಾನಿ ಮೋದಿ!

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

E20 ಪೆಟ್ರೋಲ್‌ನಿಂದಾಗಿ ಎಂಜಿನ್‌ ಹಾಳಾದ ಒಂದೇ ಒಂದು ಕಾರನ್ನು ತೋರಿಸಿ: ಗಡ್ಕರಿ ಬಹಿರಂಗ ಸವಾಲು

ಭಯಾನಕ ಅಪಘಾತ: ಫುಟ್​ಪಾತ್​ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದ ಟಿಪ್ಪರ್; ತಂದೆ, ಮೂವರು ಮಕ್ಕಳು ಸ್ಥಳದಲ್ಲೇ ಸಾವು - Video