ಬಿಜೆಪಿ ಸಂಸದೆ ಕಂಗನಾ ರಣಾವತ್ ಸೋನಿಯಾ ಗಾಂಧಿ ಭಾರತೀಯ ರಾಜಕೀಯ ಪ್ರವೇಶಿಸಿದ ವಿಚಾರವನ್ನು ಪ್ರಶ್ನಿಸಿ, ಅವರನ್ನು 'ನಿಗೂಢ ವಿದೇಶಿ ಮಹಿಳೆ' ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಸೋನಿಯಾ ಗಾಂಧಿ ಅವರ ಆತ್ಮಕಥನ Belonging: A Journey of Love ಪುಸ್ತಕ ನಿನ್ನೆ ಮಾರುಕಟ್ಟೆಗೆ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೊಗೆ ಪ್ರತಿಕ್ರಿಯಿಸುವಾಗ ಕಂಗನಾ ರಣಾವತ್ ಈ ಹೇಳಿಕೆ ನೀಡಿದ್ದಾರೆ. ಈ ವಿಡಿಯೊದಲ್ಲಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಮೇನಕಾ ಗಾಂಧಿ ಹಾಗೂ ಬಾಲಕರಾಗಿದ್ದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಕುಟುಂಬದೊಂದಿಗೆ ಭೋಜನ ಮಾಡುತ್ತಿರುವ ದೃಶ್ಯಗಳಿವೆ.
ಕುಟುಂಬ ಸದಸ್ಯರು ಊಟದ ಮೇಜಿನ ಬಳಿ ಕುಳಿತಿರುವಾಗ ದೂರವಾಣಿ ಕರೆ ಬರುತ್ತದೆ. ಕರೆಯನ್ನು ಸ್ವೀಕರಿಸುವ ಸೋನಿಯಾ ಗಾಂಧಿ ಅವರಿಗೆ, ಅಮೇಠಿ ಲೋಕಸಭಾ ಉಪ ಚುನಾವಣೆಯಲ್ಲಿ ರಾಜೀವ್ ಗಾಂಧಿ 2,37,000 ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ನೀಡಲಾಗುತ್ತದೆ.
ಬಿಜೆಪಿ ಸಂಸದೆ ಕಂಗನಾ ರಣಾವತ್, ಕಿರಿಯ ಪುತ್ರ ಸಂಜಯ್ ಗಾಂಧಿಗೆ ಇಂದಿರಾ ಗಾಂಧಿ ಅಧಿಕೃತವಾಗಿ ತರಬೇತಿ ನೀಡುತ್ತಿದ್ದರು. ಆದರೆ, ಅವರು ನಿಗೂಢವಾಗಿ ಮೃತಪಟ್ಟರು. ಬಳಿಕ ಅಸಹಾಯಕ ಯುವ ವಿಧವೆ ಮೇನಕಾ ಅವರನ್ನು ಯಾವುದೇ ಸಮಂಜಸ ಕಾರಣವಿಲ್ಲದೆ ಮನೆಯಿಂದ ಹೊರಹಾಕಲಾಯಿತು. ಅದಾದ ಸ್ವಲ್ಪ ಸಮಯದಲ್ಲೇ ಅತ್ತೆ ಮತ್ತು ಪತಿ ಒಬ್ಬರ ಹಿಂದೆ ಒಬ್ಬರು ಹತ್ಯೆಗೀಡಾದರು. ಅಂತಿಮವಾಗಿ 'ನಿಗೂಢ ವಿದೇಶಿ ಮಹಿಳೆ' ಸೋನಿಯಾ ಗಾಂಧಿ ಸರ್ಕಾರದ ಚುಕ್ಕಾಣಿ ಹಿಡಿದರು ಎಂದು ಟೀಕಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಪುಸ್ತಕದಲ್ಲಿ ಮೇನಕಾ ಗಾಂಧಿ ಕುರಿತು ಉಲ್ಲೇಖಿಸಿರುವ ಅಂಶಗಳಿಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಪ್ರತಿಕ್ರಿಯಿಸಿದ್ದಾರೆ.
ಮೇನಕಾ ಗಾಂಧಿ ಅವರನ್ನು ಕುಟುಂಬದ ಮನೆಯಿಂದ ಹೊರಹಾಕುತ್ತಿದ್ದಾಗ ಸೋನಿಯಾ ಗಾಂಧಿ ಅವರಿಗೆ ನೋವಾಗಲಿಲ್ಲವೇ? ಈ ಪುಸ್ತಕದಲ್ಲಿ ಸೋನಿಯಾ ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ತಾವೊಬ್ಬರು ಬಹಳ ಒಳ್ಳೆಯ ವ್ಯಕ್ತಿ, ಜಗತ್ತಿನ ಉಳಿದವರೆಲ್ಲ ಕೆಟ್ಟವರು ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ದುಬೆ ಹೇಳಿದ್ದಾರೆ.
ತಮ್ಮ ಪುಸ್ತಕದಲ್ಲಿ ಮೇನಕಾ ಗಾಂಧಿ ಮತ್ತು ಅವರು ಗಾಂಧಿ ಕುಟುಂಬದ ಮನೆಯಿಂದ ಹೊರಹೋಗಿದ್ದ ಘಟನೆಯ ಕುರಿತು ಸೋನಿಯಾ ಗಾಂಧಿ ಬರೆದಿದ್ದಾರೆ.
ಮೇನಕಾ ಉತ್ಸಾಹದಿಂದ ತುಂಬಿದವರಾಗಿದ್ದರು. ಮನೆಯಲ್ಲಿ ಕಿರಿಯ ನಾದಿನಿಯೊಬ್ಬರ ಆಗಮನ ಆರಂಭದಲ್ಲಿ ಸಂತಸ ತಂದಿತ್ತು. ಆದರೆ, ಕ್ರಮೇಣ ಮನೆಯ ವಾತಾವರಣ ಬದಲಾಗತೊಡಗಿತು. ಮನೆಯಲ್ಲಿ ಅಸಮಾಧಾನಗಳು ಕಾಣಿಸಿಕೊಳ್ಳಲಾರಂಭಿಸಿದವು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಬರೆದಿದ್ದಾರೆ.