ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 
ದೇಶ

"ಮಾಲಿನ್ಯ ಹೆಚ್ಚಾದರೇನಂತೆ, ತಾನಾಗೇ ಕಡಿಮೆಯಾಗುತ್ತೆ", ದೀಪಾವಳಿ ಪಟಾಕಿಗಷ್ಟೇ ವಿರೋಧವೇಕೆ?: ಟೀಕಾಕಾರರಿಗೆ ಯೋಗಿ ಆದಿತ್ಯನಾಥ್ ತಿರುಗೇಟು

ತಮ್ಮ ಭ್ರಷ್ಟ ಕೃತ್ಯಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಸಾರ್ವಜನಿಕರು ಒಂದು ದಿನ ಪಟಾಕಿ ಸಿಡಿಸಿ ಹಬ್ಬ ಆಚರಿಸಿದರೆ ತಕ್ಷಣ ಮಾಲಿನ್ಯದ ವಿಚಾರ ಮುನ್ನೆಲೆಗೆ ಬರುತ್ತದೆ.

ಲಖನೌ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಕಳವಳಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಾಕರಿಸಿದ್ದು, ಒಂದು ದಿನ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹೆಚ್ಚಾದರೇನಂತೆ? ಅದು ತಾನಾಗಿಯೇ ಕಡಿಮೆಯಾಗುತ್ತದೆ ಎಂದು ಹಬ್ಬದ ಆಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ, ಭ್ರಷ್ಟಾಚಾರದ ಮೂಲಕ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರ ಬಗ್ಗೆ ಪ್ರಶ್ನೆ ಎತ್ತದವರು, ಜನರು ಒಂದು ದಿನ ಪಟಾಕಿ ಸಿಡಿಸಿದಾಗ ಮಾತ್ರ ಮಾಲಿನ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.

ಲಖನೌದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ ಮತ್ತು ಸರ್ಕಾರ ಹಬ್ಬದ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ದೀಪಾವಳಿಯಿಂದ ಮಾಲಿನ್ಯ ಹೆಚ್ಚಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ ಹೆಚ್ಚಾದರೆ ಏನಂತೆ? ಅದು ಮತ್ತೆ ಕಡಿಮೆಯಾಗುತ್ತದೆ. ಇದಕ್ಕೆ ನೀವು ಯಾಕೆ ಚಿಂತಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಭ್ರಷ್ಟ ಕೃತ್ಯಗಳ ಮೂಲಕ ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದವರನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ, ಸಾರ್ವಜನಿಕರು ಒಂದು ದಿನ ಪಟಾಕಿ ಸಿಡಿಸಿ, ಸಿಡಿಮದ್ದುಗಳೊಂದಿಗೆ ಹಬ್ಬ ಆಚರಿಸಿದರೆ ತಕ್ಷಣ ಮಾಲಿನ್ಯದ ವಿಚಾರ ಮುನ್ನೆಲೆಗೆ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಅಯೋಧ್ಯೆಯಲ್ಲಿ ನಡೆದ ಪಟಾಕಿ ಸಂಭ್ರಮದಲ್ಲೂ ತಾವು ಭಾಗವಹಿಸಿದ್ದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಅಲ್ಲಿ ನಡೆದ ಅದ್ಧೂರಿ ದೀಪೋತ್ಸವ, ಗೋವರ್ಧನ ಪೂಜೆ ಮತ್ತು ಭಾಯ್ ದೂಜ್ ಹಬ್ಬದ ಸಂಭ್ರಮವನ್ನು ಉಲ್ಲೇಖಿಸಿದ ಅವರು, ರಾಜ್ಯಾದ್ಯಂತ ಈಗ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಳಿಕ 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನದ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಆದಿತ್ಯನಾಥ್, ಹೋಳಿ, ದೀಪಾವಳಿ, ವಿಜಯದಶಮಿ, ಜನ್ಮಾಷ್ಟಮಿ, ಶಿವರಾತ್ರಿ, ಕ್ರಿಸ್‌ಮಸ್‌, ಈದ್‌, ಗುರುಪರ್ವ ಮತ್ತು ಮಕರ ಸಂಕ್ರಾಂತಿಯಂತಹ ಹಬ್ಬಗಳ ಸಂದರ್ಭದಲ್ಲಿ ಕೋಮು ಉದ್ವಿಗ್ನತೆ ಹಾಗೂ ಗಲಭೆಗಳು ನಡೆಯುತ್ತಿದ್ದವು ಎಂದು ಆರೋಪಿಸಿದ್ದಾರೆ.

2017ಕ್ಕೂ ಮೊದಲು ಯಾವುದೇ ಹಬ್ಬ ಹತ್ತಿರ ಬಂದರೂ, ಅದು ಹೋಳಿಯಾಗಿರಲಿ, ದೀಪಾವಳಿಯಾಗಿರಲಿ, ವಿಜಯದಶಮಿ, ಜನ್ಮಾಷ್ಟಮಿ, ಶಿವರಾತ್ರಿ, ಕ್ರಿಸ್‌ಮಸ್‌, ಈದ್‌, ಗುರುಪರ್ವ ಅಥವಾ ಮಕರ ಸಂಕ್ರಾಂತಿಯಾಗಿರಲಿ, ಗಲಭೆಗಳು ಆರಂಭವಾಗುತ್ತಿದ್ದವು. ಪ್ರತಿಯೊಬ್ಬರೂ ಅಭದ್ರತೆಯ ಭಾವನೆಯಲ್ಲಿದ್ದರು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಕರ್ಫ್ಯೂ ಅಥವಾ ಗಲಭೆ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕರ್ಫ್ಯೂ ಜಾರಿಯಾಗುತ್ತಿದ್ದ ಕಾರಣ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಮಾರುಕಟ್ಟೆಗಳು ಮುಚ್ಚಲ್ಪಟ್ಟು, ಅಂಗಡಿಗಳಲ್ಲಿದ್ದ ಸರಕುಗಳು ಹಾಳಾಗುತ್ತಿದ್ದವು. ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಇಲ್ಲ, ಗಲಭೆಗಳೂ ಇಲ್ಲ. ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾಯ್ ದೂಜ್ ಹಬ್ಬದ ಸಂದರ್ಭದಲ್ಲಿ ಸಹೋದರರನ್ನು ಭೇಟಿಯಾಗಲು ಪ್ರಯಾಣಿಸುವ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನೂ ಯೋಗಿ ಆದಿತ್ಯನಾಥ್ ಅವರು ಉಲ್ಲೇಖಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಹೊಸದಾಗಿ ಆಯ್ಕೆಯಾದ 1,146 ಕಿರಿಯ ಸಹಾಯಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಅಲ್ಲದೆ, ಮುಖ್ಯಮಂತ್ರಿ ಕೃಷಕ್ ದುರ್ಘಟನಾ ಕಲ್ಯಾಣ ಯೋಜನೆಯಡಿ 4,300 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘INDIA ಒಕ್ಕೂಟದ ವಿಭಜನೆಗೆ ಅವರೇ ಕಾರಣ’: ಸೋನಿಯಾ ಗಾಂಧಿ ಆತ್ಮಕಥನದಲ್ಲಿ ನಿತೀಶ್ ಕುಮಾರ್‌ಗೆ ಅಪಮಾನ?; JDU ತೀವ್ರ ಆಕ್ರೋಶ..!

Air India ವಿಮಾನಕ್ಕೆ Hijack ಬೆದರಿಕೆ: ಶೌಚಾಲಯದ ಕನ್ನಡಿಯಲ್ಲಿ ಸಂದೇಶ ಪತ್ತೆ; Kolkata ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ..!

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

'ಭಕ್ತಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ', '1,200 ಕೊಟ್ಟು Ramayana ನೋಡಲ್ಲ, ನಿರ್ಮಾಪಕರಿಗೆ ದುಡ್ಡು ಕೊಡಲ್ಲ': ನಟ ಮುಕೇಶ್ ಖನ್ನಾ

'2 ರೂಪಾಯಿ ವಿಮರ್ಶಕ'.. 'ಬಂಗಲೆ ಕಟ್ಟಿಕೊಂಡಿದ್ದಾನೆ'!; KRKಗೆ ರಾಮಾಯಣ ನಿರ್ದೇಶಕರಿಂದ ಲೀಗಲ್ ನೋಟಿಸ್, ನೆಟ್ಟಿಗರ ತಿರುಗೇಟು