ಜೆಡಿಯು ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಜನಸಾಗರ; 5 ಲಕ್ಷ ಜನಕ್ಕೆ 150 ಬಗೆಯ ತಿಂಡಿ! 10km ಟ್ರಾಫಿಕ್ ಜಾಮ್‌ಗೆ ಕುದುರೆ ರೇಸ್ ಮುಂದೂಡಿಕೆ
ಜೆಡಿಯು ಶಾಸಕ ಅನಂತ್ ಸಿಂಗ್ ಅವರ ಪುತ್ರಿ ಶಿವಂಗಿ ಸಿಂಗ್ ವಿವಾಹ ಮಹೋತ್ಸವಕ್ಕೆ ಲಕ್ಷಾಂತರ ಜನರು ಹರಿದುಬಂದ ಪರಿಣಾಮ ಪಾಟ್ನಾ ಜಿಲ್ಲೆಯ ಸುತ್ತಮುತ್ತ 10 ಕಿ.ಮೀ. ಉದ್ದದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:
ಪಾಟ್ನಾ (ಬಿಹಾರ): ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ 'ಛೋಟೆ ಸರ್ಕಾರ್' ಖ್ಯಾತಿಯ ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಮಹೋತ್ಸವಕ್ಕೆ, ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದರಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದು, ಇದರ ಪರಿಣಾಮ ಪಾಟ್ನಾ ಜಿಲ್ಲೆಯ ನಾದ್ವಾನ್ ಗ್ರಾಮದ ಸುತ್ತಮುತ್ತ 10 ಕಿ.ಮೀ. ಉದ್ದದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹಾಗಾಗಿ, ಮದುವೆಯ ವಿಶೇಷ ಆಕರ್ಷಣೆಯಾಗಿದ್ದ ಕುದುರೆ ಓಟದ ಫೈನಲ್ ಪಂದ್ಯವನ್ನು ಮುಂದೂಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ವಿದ್ಯುತ್ ಕಂಬ ಏರಿದ ಜನ, ಕುದುರೆ ರೇಸ್ ಮುಂದೂಡಿಕೆ!
ಮದುವೆಯ ವಿಶೇಷ ಆಕರ್ಷಣೆಯಾಗಿ ಕುದುರೆ ರೇಸ್ ಆಯೋಜಿಸಲಾಗಿತ್ತು, ಇದರಲ್ಲಿ ವಿಜೇತರಿಗೆ ಮಹೀಂದ್ರಾ ಥಾರ್ ಕಾರನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಅದರಂತೆ, ಇ ರೇಸ್ ವೀಕ್ಷಿಸಲು ಲಕ್ಷಾಂತರ ಜನರು ಮುಗಿಬಿದ್ದಿದ್ದು, ಸ್ಪಷ್ಟವಾಗಿ ಕಾಣಲಿ ಎಂಬ ಕಾರಣಕ್ಕೆ ಅನೇಕರು ಹೈ-ವೋಲ್ಟೇಜ್ ವಿದ್ಯುತ್ ಟವರ್‌ಗಳು, ಕಂಬಗಳು ಮತ್ತು ಮರಗಳನ್ನು ಏರಿ ಕುಳಿತರು. ಸುರಕ್ಷತೆಯ ದೃಷ್ಟಿಯಿಂದ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಆಯೋಜಕರು ರೇಸ್‌ನ ಅಂತಿಮ ಸುತ್ತನ್ನು ಗುರುವಾರಕ್ಕೆ ಮುಂದೂಡಿದರು.
10 ಕಿ.ಮೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಗಣ್ಯರು
"ಇದೇನು ಸಿನಿಮಾ ಹಾಲ್ ಅಲ್ಲ ಟಿಕೆಟ್ ತೆಗೆದುಕೊಳ್ಳಲು, ಎಲ್ಲರೂ ಬನ್ನಿ" ಎಂದು ಅನಂತ್ ಸಿಂಗ್ ಮುಕ್ತ ಆಹ್ವಾನ ನೀಡಿದ್ದರು. ಇದರಿಂದ ನದ್ವಾನ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ 10 ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತವು. ಈ ಟ್ರಾಫಿಕ್ ಜಾಮ್‌ನಲ್ಲಿ ಬಿಹಾರ ವಿಧಾನಸಭೆಯ ಸ್ಪೀಕರ್ ಪ್ರೇಮ್ ಕುಮಾರ್ ಅವರ ಬೆಂಗಾವಲು ಪಡೆ ಹಾಗೂ ದಾನಾಪುರದಿಂದ ಬಂದ ವರ ಋಷಿಕೇಶ್ ಕುಮಾರ್ (ಅಂಕಿತ್) ಅವರ ದಿಬ್ಬಣವೂ ಸಿಲುಕಿಕೊಂಡಿತ್ತು. ಇದರೊಂದಿಗೆ, ಜನಸಂದಣಿ ಹೆಚ್ಚಾದ ಕಾರಣ ಸ್ಥಳೀಯವಾಗಿ ಮೊಬೈಲ್ ನೆಟ್‌ವರ್ಕ್ ಕೂಡ ಸ್ಥಗಿತಗೊಂಡಿತ್ತು.!
ಭರ್ಜರಿ ಭೋಜನ ಮತ್ತು ದುಬಾರಿ ಉಡುಗೊರೆ
ಸುಮಾರು 10 ಬಿಘಾ ಜಾಗದಲ್ಲಿ ತಾಜ್ ಮಹಲ್ ಮತ್ತು ಕೆಂಪು ಕೋಟೆಯ ಮಾದರಿಯ ಭವ್ಯ ಪೆಂಡಾಲ್‌ಗಳನ್ನು ನಿರ್ಮಿಸಲಾಗಿತ್ತು. 500ಕ್ಕೂ ಹೆಚ್ಚು ಬಾಣಸಿಗರು 150ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಮತ್ತು ಸುಮಾರು 30 ಲಕ್ಷ ರಸಗುಲ್ಲಾಗಳನ್ನು ಸಿದ್ಧಪಡಿಸಿದ್ದರು. ಅಲ್ಲದೆ, ವಧು-ವರರಿಗೆ ಸುಮಾರು ₹3 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.
ಇನ್ನು, ಕೇಂದ್ರ ಸಚಿವ ಲಲನ್ ಸಿಂಗ್, ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಂಡಿದ್ದರು. ಏತನ್ಮಧ್ಯೆ, ಜೆಡಿಯು ಪಕ್ಷದಿಂದ ಉಚ್ಚಾಟನೆಗೊಂಡಿರುವ ಅನಂತ್ ಸಿಂಗ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 1ರಂದು ನ್ಯಾಯಾಲಯಕ್ಕೆ ಶರಣಾಗುವ ಮುನ್ನ ಈ ಅದ್ಧೂರಿ ಮದುವೆ ನೆರವೇರಿಸಿದ್ದಾರೆ.