ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಮಿತ್ ಶಾರನ್ನು ಭೇಟಿಯಾದ 'ರಾಮಾಯಣ' ಚಿತ್ರತಂಡ; ರಾಮನ ಆದರ್ಶಗಳನ್ನು ಯುವಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಮೆಚ್ಚುಗೆ!

ನಟರಾದ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಸಹ-ನಿರ್ಮಾಪಕ ನೀರಜ್ ಸಂಘಾಯಿ ಈ ವೇಳೆ ಉಪಸ್ಥಿತರಿದ್ದರು.

ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ರಾಮಾಯಣ ಚಿತ್ರತಂಡ
Ramyashree GN
Updated On : 26 Nov 2026, 2:44 pm

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರತಂಡವನ್ನು ಭೇಟಿಯಾದರು. ಶ್ರೀರಾಮನಿಗೆ ಸಂಬಂಧಿಸಿದ ಕರ್ತವ್ಯ, ತ್ಯಾಗ ಮತ್ತು ಪ್ರಾಮಾಣಿಕತೆಯ ಆದರ್ಶಗಳನ್ನು ಆಧುನಿಕ ಚಿತ್ರ ತಂತ್ರಜ್ಞಾನದ ಮೂಲಕ ಯುವ ಪೀಳಿಗೆಗೆ ತಲುಪಿಸುವ ಅವರ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ನಟರಾದ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಸಹ-ನಿರ್ಮಾಪಕ ನೀರಜ್ ಸಂಘಾಯಿ ಈ ವೇಳೆ ಉಪಸ್ಥಿತರಿದ್ದರು.

'ನವದೆಹಲಿಯಲ್ಲಿ 'ರಾಮಾಯಣ' ಚಿತ್ರತಂಡವನ್ನು ಭೇಟಿಯಾದೆ. ಧರ್ಮದ ಸಾಕಾರಮೂರ್ತಿಯಾದ ಶ್ರೀರಾಮನು ತನ್ನ ಜೀವನದ ಮೂಲಕ ಎತ್ತಿಹಿಡಿದ ಕರ್ತವ್ಯ, ತ್ಯಾಗ ಮತ್ತು ಪ್ರಾಮಾಣಿಕತೆಯ ಆದರ್ಶಗಳನ್ನು, ಆಧುನಿಕ ಚಲನಚಿತ್ರ ತಂತ್ರಜ್ಞಾನದ ಮೂಲಕ ಹೊಸ ಪೀಳಿಗೆಗೆ ತಲುಪಿಸುವ ಈ ನವೀನ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

Advertisement

Advertisement

ಸಚಿವರು ಈ ಭೇಟಿಯ ಫೋಟೊಗಳನ್ನು ಸಹ ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ.

ನವೆಂಬರ್ 5 ರಂದು ಬಿಡುಗಡೆಯಾದ 'ರಾಮಾಯಣ: ಭಾಗ 1', ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 1,500 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಮೂಲಕ ಈ ವರ್ಷದ ಕಮರ್ಷಿಯಲ್ ಯಶಸ್ಸು ಕಂಡ ಪ್ರಮುಖ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಭಾರತೀಯ ಮಹಾಕಾವ್ಯವನ್ನು ಆಧರಿಸಿದ ಈ ಮೊದಲ ಭಾಗದ ಚಿತ್ರದಲ್ಲಿ, ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ರಾವಣನ ಪಾತ್ರದಲ್ಲಿ ಯಶ್ ಮತ್ತು ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಕಾಣಿಸಿಕೊಂಡಿದ್ದಾರೆ.

Also Read

Ramayana: ಆಸ್ಕರ್ ರೇಸ್‌ಗೆ 'ರಾಮಾಯಣ' ಎಂಟ್ರಿ; VFX ಟಾಪ್ 20ಯಲ್ಲಿ ಸ್ಥಾನ ಪಡೆದ ಯಶ್ ಸಿನಿಮಾ!

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಝಿಮ್ಮರ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರವು 99ನೇ ಅಕಾಡೆಮಿ ಪ್ರಶಸ್ತಿಗಳ 'ವಿಷುವಲ್ ಎಫೆಕ್ಟ್ಸ್' (ದೃಶ್ಯ ಪರಿಣಾಮಗಳು) ವಿಭಾಗದಲ್ಲಿ ಅಗ್ರ 20 ಸ್ಪರ್ಧಿಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಪಟ್ಟಿಯಲ್ಲಿ 'ದಿ ಒಡಿಸ್ಸಿ' (The Odyssey) ಮತ್ತು 'ಅವೆಂಜರ್ಸ್: ಡೂಮ್ಸ್‌ಡೇ' (Avengers: Doomsday) ನಂತಹ ಪ್ರಮುಖ ಹಾಲಿವುಡ್ ಚಿತ್ರಗಳು ಕೂಡ ಇವೆ.

'ರಾಮಾಯಣ'ದ ಎರಡನೇ ಭಾಗವು ಸದ್ಯ 2028ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ನಿಗದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement