ಮುಂಬೈ ರೈಲು ನಿಲ್ದಾಣದಲ್ಲಿ ಘೋರ ಕೃತ್ಯ; ರೈಲು ನಿಲ್ದಾಣದ ಶೌಚಾಲಯಕ್ಕೆ ನುಗ್ಗಿ ವೃದ್ದೆ ಮೇಲೆ ಹಲ್ಲೆ, ಅತ್ಯಾಚಾರ..!
ಗುರುವಾರ ರಾತ್ರಿ ಕೆಲಸ ಮುಗಿಸಿದ ಬಳಿಕ, ತಮ್ಮ ಮಗಳೊಂದಿಗೆ ಮನೆಗೆ ತೆರಳಲು ಘಾಟ್ಕೋಪರ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಮಗಳು ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ರಾತ್ರಿ 11:12ರ ಸುಮಾರಿಗೆ ಮಹಿಳೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ರಹಿತ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದಾರೆ.
ಮುಂಬೈ: ಮುಂಬೈನ ಘಾಟ್ಕೋಪರ್ ರೈಲು ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ 60 ವರ್ಷದ ವೃದ್ಧ ಮಹಿಳೆ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಸರ್ಕಾರಿ ರೈಲ್ವೆ ಪೊಲೀಸರು (GRP), ಶುಕ್ರವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಘಾಟ್ಕೋಪರ್ ನಿವಾಸಿ, ವೃತ್ತಿಯಲ್ಲಿ ಟೈಲರ್ ಆಗಿರುವ ತಸ್ಲೀಮ್ ನೂರ್ ಮೊಹಮ್ಮದ್ ಶಾ (25) ಎಂದು ಗುರುತಿಸಲಾಗಿದೆ.
ಥಾಣೆ ಜಿಲ್ಲೆಯ ಖಡಾವ್ಲಿ ನಿವಾಸಿಯಾಗಿರುವ ಸಂತ್ರಸ್ತೆ ಘಾಟ್ಕೋಪರ್‌ನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ರಾತ್ರಿ ಕೆಲಸ ಮುಗಿಸಿದ ಬಳಿಕ, ತಮ್ಮ ಮಗಳೊಂದಿಗೆ ಮನೆಗೆ ತೆರಳಲು ಘಾಟ್ಕೋಪರ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಮಗಳು ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ರಾತ್ರಿ 11:12ರ ಸುಮಾರಿಗೆ ಮಹಿಳೆ ನಿಲ್ದಾಣದಲ್ಲಿದ್ದ ಸಿಬ್ಬಂದಿ ರಹಿತ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದಾರೆ.
ಇದೇ ಸಮಯವನ್ನು ಹೊಂಚುಹಾಕಿ ಶೌಚಾಲಯದೊಳಗೆ ನುಗ್ಗಿದ ಆರೋಪಿ ತಸ್ಲೀಮ್, ಒಳಗಿನಿಂದ ಬಾಗಿಲು ಲಾಕ್ ಮಾಡಿದ್ದಾನೆ. ಭಯಭೀತರಾದ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಾಗ, ಆಕೆಯ ಹಣೆ, ಮುಖ ಹಾಗೂ ಎದೆಗೆ ಮನಬಂದಂತೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ.
ಕೃತ್ಯ ಎಸಗಿದ ಬಳಿಕ ರಾತ್ರಿ 11:19ರ ಸುಮಾರಿಗೆ ಆರೋಪಿ ಶೌಚಾಲಯದಿಂದ ಹೊರಬಂದು ಘಾಟ್ಕೋಪರ್ ಮೆಟ್ರೋ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾನೆ. ರಾತ್ರಿ 11:22ಕ್ಕೆ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಹೊರಬಂದ ಮಹಿಳೆ, ಮಗಳಿಗೆ ವಿಷಯ ತಿಳಿಸಿ ಪ್ಲಾಟ್‌ಫಾರ್ಮ್ 4ರಲ್ಲಿರುವ ಜಿಆರ್‌ಪಿ (GRP) ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ತಕ್ಷಣವೇ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷೆಗಾಗಿ ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಕುರ್ಲಾ ಜಿಆರ್‌ಪಿ ಪೊಲೀಸರು, ಆರೋಪಿಯ ಪತ್ತೆಗಾಗಿ 7 ವಿಶೇಷ ತಂಡಗಳನ್ನು ರಚಿಸಿದ್ದರು. ರೈಲು ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯ ಎಸಗುವ ವೇಳೆ ಆರೋಪಿ ಮಾದಕವಸ್ತುಗಳ ಅಮಲಿನಲ್ಲಿದ್ದ ಎಂದು ಪೊಲೀಸರು ಶಂಕಿಸಿದ್ದು, ಆತನ ಹಳೆಯ ಅಪರಾಧ ಹಿನ್ನೆಲೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.