ಬೆಂಗಳೂರಿನಲ್ಲಿ ಕಾರ್ ವಾಶ್ ಸೆಂಟರ್‌ನಲ್ಲಿ ವಿದ್ಯುತ್ ಅವಘಡ; ಟೆಂಪೋ ಟ್ರಾವೆಲರ್ ಚಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ನವೆಂಬರ್ 23ರ ಸೋಮವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅರುಣ್ ತನ್ನ ಟೆಂಪೋ ಟ್ರಾವೆಲರ್ ವಾಹನವನ್ನು ಆಂಜನಾಪುರದ ಗೊಲ್ಲಹಳ್ಳಿಯ ಆದಿತ್ಯ ರೆಸಿಡೆನ್ಸಿ ಸಮೀಪದ ರಾಮಯ್ಯ ಸರ್ಕಲ್ ಬಳಿಯ ನಿಧಿ ಕಾರ್ ವಾಷಿಂಗ್ ಸೆಂಟರ್..
ಬೆಂಗಳೂರು: ವಾಹನ ತೊಳೆಯುವ ವೇಳೆ ವಿದ್ಯುತ್ ಪ್ರವಹಿಸಿ 22 ವರ್ಷದ ಟೆಂಪೋ ಟ್ರಾವೆಲರ್ ಮಾಲೀಕ ಹಾಗೂ ಚಾಲಕ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ.
ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತನನ್ನು ಅರುಣ್ ವಿ ಎಂದು ಗುರುತಿಸಲಾಗಿದೆ.
ನವೆಂಬರ್ 23ರ ಸೋಮವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅರುಣ್ ತನ್ನ ಟೆಂಪೋ ಟ್ರಾವೆಲರ್ ವಾಹನವನ್ನು ಆಂಜನಾಪುರದ ಗೊಲ್ಲಹಳ್ಳಿಯ ಆದಿತ್ಯ ರೆಸಿಡೆನ್ಸಿ ಸಮೀಪದ ರಾಮಯ್ಯ ಸರ್ಕಲ್ ಬಳಿಯ ನಿಧಿ ಕಾರ್ ವಾಷಿಂಗ್ ಸೆಂಟರ್‌ಗೆ ಕೊಂಡೊಯ್ದಿದ್ದ.
ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ವಾಹನ ತೊಳೆಯಲು ಸಹಾಯ ಮಾಡುತ್ತಿದ್ದ ಅರುಣ್‌ಗೆ ಏಕಾಏಕಿ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರೆಶರ್ ವಾಷರ್ ಗನ್‌ನಿಂದ ವಿದ್ಯುತ್ ಪ್ರವಹಿಸಿದ ಆರೋಪ
ಅರುಣ್ ಅವರ ಸಹೋದರ ಕಿರಣ್ ವಿ ನೀಡಿರುವ ಮಾಹಿತಿ ಪ್ರಕಾರ, ವಾಹನ ತೊಳೆಯುತ್ತಿದ್ದ ಅರುಣ್ ಪ್ರೆಶರ್ ವಾಷರ್ ಗನ್ ಹಿಡಿದುಕೊಂಡಿದ್ದಾಗ ಅದರ ಮೂಲಕ ವಿದ್ಯುತ್ ಪ್ರವಹಿಸಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ವೇಳೆ ಅರುಣ್ ಅವರ ಸ್ನೇಹಿತ ಶರಣ್ ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅರುಣ್ ಕೈಯಿಂದ ಜಾರಿದ ವಾಷರ್ ಗನ್ ನೀರಿನಲ್ಲಿ ಬಿದ್ದಿದ್ದು, ಆ ಸಮಯದಲ್ಲಿ ನೀರಿನಲ್ಲಿ ನಿಂತಿದ್ದ ಶರಣ್‌ಗೂ ವಿದ್ಯುತ್ ಪ್ರವಹಿಸಿದೆ ಎಂದು ಕಿರಣ್ ಆರೋಪಿಸಿದ್ದಾರೆ.
ಶರಣ್ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ಅರುಣ್ ಸ್ನೇಹಿತನಿಂದ ಕುಟುಂಬದವರಿಗೆ ಮಾಹಿತಿ ಬಂದಿತ್ತು. ಆಸ್ಪತ್ರೆಗೆ ಧಾವಿಸುವಂತೆ ತಿಳಿಸಲಾಗಿತ್ತು. ಆದರೆ ಕುಟುಂಬದವರು ತಲುಪುವಷ್ಟರಲ್ಲಿ ಅರುಣ್ ಮೃತಪಟ್ಟಿದ್ದರು ಎಂದು ಕಿರಣ್ ತಿಳಿಸಿದ್ದಾರೆ.
ಕಾರ್ ವಾಶ್ ಸೆಂಟರ್ ಮಾಲೀಕರು, ಸಿಬ್ಬಂದಿ ವಿರುದ್ಧ ಪ್ರಕರಣ
ಅರುಣ್ ಅವರ ತಾಯಿ ಗೌರಮ್ಮ (47) ಅವರು ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ ವಾಷಿಂಗ್ ಸೆಂಟರ್‌ನಲ್ಲಿ ವಿದ್ಯುತ್ ಉಪಕರಣಗಳ ಸರಿಯಾದ ನಿರ್ವಹಣೆ ಮಾಡದಿರುವುದು ಮತ್ತು ಮೂಲಭೂತ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದೇ ಘಟನೆಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಸೆಂಟರ್‌ನ ಮಾಲೀಕರು ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್, ಭಾಗ್ಯಮ್ಮ, ಅಕ್ಷಯ್ ಮತ್ತು ರಮ್ಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 106ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಯಾರನ್ನೂ ಬಂಧಿಸಿಲ್ಲ. ವಿದ್ಯುತ್ ಅವಘಡದ ನಿಖರ ಕಾರಣ ತಿಳಿಯಲು ವಿದ್ಯುತ್ ಪರಿವೀಕ್ಷಣಾ ಇಲಾಖೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಹಣ ಪಡೆದು ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಒತ್ತಡ?
ಈ ನಡುವೆ ಘಟನೆಯ ಬಳಿಕ ಪ್ರಕರಣವನ್ನು ಹಣ ಪಡೆದು ಇತ್ಯರ್ಥಪಡಿಸಿಕೊಳ್ಳುವಂತೆ ಕುಟುಂಬದವರಿಗೆ ಕರೆಗಳು ಬರುತ್ತಿವೆ ಎಂದು ಅರುಣ್ ಸಹೋದರ ಕಿರಣ್ ಆರೋಪಿಸಿದ್ದಾರೆ. ಆದರೆ, ವಿದ್ಯುತ್ ಶಾಕ್‌ಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಾರ್ ವಾಶ್ ಸೆಂಟರ್‌ನ ವಿದ್ಯುತ್ ಉಪಕರಣಗಳಲ್ಲಿ ದೋಷವಿತ್ತೇ ಅಥವಾ ಸುರಕ್ಷತಾ ಕ್ರಮಗಳ ಕೊರತೆಯಿಂದ ಅವಘಡ ಸಂಭವಿಸಿದೆಯೇ ಎಂಬುದನ್ನು ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಪರಿಶೀಲನೆಯ ಬಳಿಕ ತಿಳಿಯಲಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.