ರಾಜಕೀಯ

ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ಸಿದ್ದರಾಮಯ್ಯ- ಜಿಟಿ ದೇವೇಗೌಡ: 'ದಳಪತಿ'ಗಳಿಗೆ ಮತ್ತೊಂದು ಶಾಕ್!

Shilpa D

ಮೈಸೂರು: ನವೆಂಬರ್ 9ರಂದು ಚಾಮುಂಡೇಶ್ವರಿ  ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯರನ್ನು ಸ್ವಾಗತಿಸಲು ಜಿ.ಟಿ.ದೇವೇಗೌಡರು ಸಿದ್ಧತೆ ನಡೆಸುತ್ತಿದ್ದಾರೆ.

ಹಿನಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರು ಮತ್ತು ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದಾದ ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ ಉಭಯ ನಾಯಕರು ಭೇಟಿಯಾಗಲಿದ್ದಾರೆ.

ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದೆ. ಅದಕ್ಕೆ ಸಿದ್ದರಾಮಯ್ಯ ಬರುತ್ತಿದ್ದಾರೆ. ಸ್ಥಳೀಯ ಶಾಸಕನಾಗಿ ನಾನು‌ ಭಾಗಿಯಾಗುತ್ತೇನೆ.  ಕ್ಷೇತ್ರದ ಜನರು ಕರೆದಾಗ ನಾನು ಹೋಗಲೇಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

ನಾನು ಎಲ್ಲಿರಬೇಕು ಅಂತ ಜನರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ಇರಲಿಲ್ಲ. ಬೆಳವಾಡಿ ದೇವಾಲಯಕ್ಕೆ ಹಣವನ್ನು ನೀಡಿದ್ದೆ. ಆದ್ರೂ ಆಹ್ವಾನ ಮಾಡಲಿಲ್ಲ. ಅದೇ ರೀತಿ ರಮ್ಮನಹಳ್ಳಿಗೂ ಆಹ್ವಾನ ಮಾಡಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ,ದೇವೇಗೌಡರು ದಳಪತಿಗಳಿಗೆ ಶಾಕ್ ಕೊಟ್ಟಿದ್ದು, ಕಾಂಗ್ರೆಸ್  ಸೇರುವುದು ಬಹುತೇಕ ಖಚಿತವಾಗಿದೆ. ಮೊದಲ ಹಂತವಾಗಿ ನವೆಂಬರ್ 9ರಂದು ಮಾಜಿ ಸಿಎಂ ಸಿದ್ದರಾಮಯ್ಯರ ಜೊತೆ ಜಿ.ಟಿ.ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇದೇ ಕ್ಷೇತ್ರದಿಂದ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು ಕಣದಲ್ಲಿದ್ದರು. ಇತ್ತ ಸಿದ್ದರಾಮಯ್ಯನವರು ಬದಾಮಿಯಿಂದಲೂ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರು ಬದಾಮಿಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದರು.

ಇದೇ ವೇಳೆ, ಜೆಡಿಎಸ್‌ನಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ನಿರ್ಧಾರವನ್ನು ಜಿಟಿ ದೇವೇಗೌಡರಿಗೆ ಬಿಡಲಾಗಿದೆ ಎಂದು ಕುಮಾರಸ್ವಾಮಿ ಇತ್ತೀಚೆಗೆ ಹೇಳಿದ್ದರು. ಜೆಡಿಎಸ್‌ನಲ್ಲಿಯೇ ಇರುವಂತೆ ದೇವೇಗೌಡರ ಜತೆ ಮಾತನಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಕಳೆದ ಎರಡು ವರ್ಷಗಳಿಂದ ನಾನು ಅವರ ಸಂಪರ್ಕದಲ್ಲಿಲ್ಲ, ಪಕ್ಷದಲ್ಲಿ ಉಳಿಯಲು ನಿರ್ಧರಿಸಿದಾಗ ಮಾತ್ರ ಅವರೊಂದಿಗೆ ಮಾತನಾಡುವ ಪ್ರಶ್ನೆ ಬರುತ್ತದೆ ಎಂದು ಹೇಳಿದ್ದರು.

SCROLL FOR NEXT