ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ ಅವರ ಮನೆಯಿಂದಲೇ ವಾಚ್ ಕದ್ದಿದ್ದೇನೆಂದು ಹೇಳುವ ಮೂಲಕ ಬಿಜೆಪಿ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಮಂಗಳವಾರ ಸಿಎಂ ಸಿದ್ಧರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಗೆ ಬೆಳಗಿನ ಉಪಹಾರಕ್ಕೆ ಹೋದಾಗ ಇಬ್ಬರೂ ಸ ಮಾತುಕಥೆ ನಡೆಸುವ ವೇಳೆ ಒಂದೇ ರೀತಿಯ ವಾಚ್ ಧರಿಸಿದ್ದು ಕಂಡುಬಂದಿತ್ತು.
ಇದರೊಂದಿಗೆ ಹ್ಯುಬ್ಲೋಟ್ ಬಳಿಕ ಕಾರ್ಟಿಯರ್ ಸ್ಯಾಂಟೋಸ್ ವಾಚ್ ವಿವಾದ ಹುಟ್ಟಿಕೊಂಡಿದ್ದು, ಡಿಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡುತ್ತಿದೆ.
ಈ ಆರೋಪಗಳಿಗೆ ತೀವ್ರವಾಗಿಯೇ ತಿರುಗೇಟು ನೀಡಿರುವ ಡಿಕೆ.ಶಿವಕುಮಾರ್ ಅವರು, ನಿಮ್ಮ ಅಫಿಡವಿಟ್ ನಲ್ಲಿ ದುಬಾರಿ ವಾಚ್ ಬಗ್ಗೆ ತಿಳಿಸಿಲ್ಲ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಅವರಿಗೇನು ಗೊತ್ತು? ನನ್ನ ಅಫಿಡವಿಟ್ ನನಗೆ ಗೊತ್ತು, ಕಾಸು ಕೊಟ್ಟಿರುವುದು ನಾನು, ಕ್ರೆಡಿಟ್ ಕಾರ್ಡ್ ಬಳಸಿರೋದು ನಾನು. ನಾನು ಎಲ್ಲವನ್ನೂ ಪಾರದರ್ಶಕವಾಗಿ ಹೇಳಿದ್ದೇನೆ. ನನ್ನ ಬಳಿ ರೋಲೆಕ್ಸ್ ವಾಚ್ ಇರುವುದನ್ನೂ ಹೇಳಿದ್ದೇನೆ. ನಾರಾಯಣಸ್ವಾಮಿಯಿಂದ ಕಲಿಯುವುದೇನಿಲ್ಲ ಎಂದು ಹೇಳಿದರು.
ಇದು ಕದ್ದಿರುವ ವಾಚ್ ಎಂಬ ನಾರಾಯಣಸ್ವಾಮಿ ಅವರ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿದ, ಹೌದು, ಇದು ಕದ್ದಿರುವ ವಾಚ್. ನಾರಾಯಣಸ್ವಾಮಿಯವರ ಮನೆಯಿಂದಲೇ ಕದ್ದಿದ್ದೇನೆಂದು ಛೇಡಿಸಿದರು.
ಈ ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದೆ. ನಾನು ಇದನ್ನು ನನ್ನ ಕ್ರೆಟಿಡ್ ಕಾರ್ಡ್ ಮೂಲಕ 24 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್ ನಲ್ಲೂ ಘೋಷಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ಬಗ್ಗೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ನಮಗೆ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ ಎಂದರು.