ಹಾಸನ: ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗಳ ಮನ್ಸೂಚನೆ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ಹೇಳಿದ್ದಾರೆ.
ಚಿಕ್ಕಮಗಳೂರಿಗೆ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕ್ಷಿಪ್ರ ರಾಜಕೀಯ ಬೆಳವಣೆಗಳು ನಡೆಯಲಿವೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅದರಂತೆ ಈಗ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ದಿನೇ ದಿನೇ ಒಳ ಜಗಳಗಳು ಹೆಚ್ಚಾಗಿವೆ. ಇದು ಕ್ಷಿಪ್ರ ರಾಜಕೀಯ ಬೆಳವಣಿಗೆಯ ಮುನ್ಸೂಚನೆ ಅಂತೆ ಕಾಣಿಸುತ್ತಿದೆ ಎಂದರು.
ಡಿಕೆಶಿ ದಿನೇ ದಿನೇ ಬಿಜೆಪಿಗೆ ಹತ್ತಿರವಾಗುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಶಾ ಫೌಂಡೇಶನ್ ಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಪಾಲ್ಗೊಂಡಿದ್ದರು ಎಂದಷ್ಟೇ ಹೇಳಿದರು. ಡಿಕೆ ಶಿವಕುಮಾರ್ ಬಿಜೆಪಿಗೆ ಬರುವುದಿಲ್ಲ ಎಂದರು.
ಬಿಜೆಪಿ ನಾಯಕರ ಒಂದು ಬಣ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ, ಪಕ್ಷ ಮತ್ತು ನಾಯಕತ್ವದ ವಿಷಯಗಳ ಬಗ್ಗೆ ಈ ರೀತಿ ಚರ್ಚಿಸುವುದು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಪಕ್ಷಕ್ಕೆ ಸಹಾಯ ಮಾಡುವ ಸರಿಯಾದ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಈಗಾಗಲೇ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಿದೆ ಮತ್ತು ಅನುಮೋದನೆಗಾಗಿ ಕೇಂದ್ರ ನಾಯಕತ್ವಕ್ಕೆ ಕಳುಹಿಸಿದೆ ಎಂದರು. ಬಿಜೆಪಿ ನಾಯಕ ಎಂ ಪಿ ರೇಣುಕಾಚಾರ್ಯ ನಡೆಸಿದ ಸಭೆಗಳ ಕುರಿತು ಪ್ರತಿಕ್ರಿಯಿಸಿದ ಅವರು, "ಇಂತಹ ಸಭೆಗಳಿಗೆ ನೇರ ಅಥವಾ ಪರೋಕ್ಷ ಬೆಂಬಲವಿಲ್ಲ. ರೇಣುಕಾಚಾರ್ಯ ಸೇರಿದಂತೆ ಎಲ್ಲರೂ, ಇಂತಹ ಸಭೆಗಳನ್ನು ನಡೆಸುವುದರಿಂದ ಯಾರಿಗೂ ಖ್ಯಾತಿ ಬರುವುದಿಲ್ಲ. ಇದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ನಾನು ಈ ಬಗ್ಗೆ ರೇಣುಕಾಚಾರ್ಯ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದರು.
ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತು ರಾಜಕೀಯ ಧ್ರುವೀಕರಣದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಾಮಾನ್ಯ ಜನರು ಮತ್ತು ಬಡವರಿಗಾಗಿ ವಾರ್ಷಿಕ ಬಜೆಟ್ ಮಂಡಿಸುವಂತೆ ಮತ್ತು ಅದನ್ನು ಅಭಿವೃದ್ಧಿ ಆಧಾರಿತವಾಗಿಡುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಮೊದಲ ಬಾರಿಗೆ ಶಾಸಕರಾಗುವವರಿಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದರು.
ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗೆ ಸಹ ಇದೇ ರೀತಿಯ ಒತ್ತು ನೀಡಬೇಕು. ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ವಿಫಲವಾದರೆ ಗ್ರಾಮೀಣ ಪ್ರದೇಶದ ಜನರನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಗ್ಯಾರಂಟಿ ಯೋಜನೆ ಕಡಿತಕ್ಕೆ ಸರ್ಕಾರ ಚಿಂತನೆ ಮಾಡಿದೆ ಎಂಬ ವಿಚಾರವಾಗಿ ಮಾತನಾಡಿ, "ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರೋ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದೆ. ಹೀಗಾಗಿ ಜನರ ನಿರೀಕ್ಷೆಯಂತೆ ಬಜೆಟ್ ಮಂಡನೆ ಮಾಡಲಿ. ಗ್ಯಾರಂಟಿಗಳೇ ಅಭಿವೃದ್ಧಿಗಳಾದ್ರೆ ನಾವ್ಯಾರೂ ಶಾಸಕರು ತಲೆ ಎತ್ತಿ ತಿರುಗಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡ್ಕೊಂಡು ಬಜೆಟ್ ಮಂಡನೆ ಮಾಡುವ ಆಶಾಭಾವನೆ ನಮಗಿದೆ" ಎಂದರು.