ಆರ್.ಅಶೋಕ್ 
ರಾಜಕೀಯ

ಹೇಳಿದ್ದೊಂದು, ಮಾಡಿದ್ದೊಂದು; ಗ್ಯಾರಂಟಿ ಯೋಜನೆ ನಿರ್ವಹಿಸಲಾಗಲಿದ್ದರೆ ಕ್ಷಮೆ ಕೇಳಿ ರದ್ದು ಮಾಡಿ, ಬೆಲೆ ಏರಿಕೆ ವಾಪಸ್‌ ಪಡೆಯಿರಿ; ಸರ್ಕಾರಕ್ಕೆ BJP ಆಗ್ರಹ

ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದುಗೊಳಿಸಬೇಕು ಹಾಗೂ ಬೆಲೆ ಏರಿಕೆಗಳನ್ನು ವಾಪಸ್‌ ಪಡೆಯಬೇಕು.

ಬೆಂಗಳೂರು: ನಿಮ್ಮ ಗ್ಯಾರಂಟಿಗಳಿಗಾಗಿ ಜನರು ಬೆಲೆ ತೆರಬೇಕಾಗಿದೆ. ನಿಮ್ಮ ಸುಳ್ಳಿನ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿಗಳ ನಿರ್ವಹಿಸಲು ಆಗದೇ ಇದ್ದರೆ, ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದು ಮಾಡಿ, ಬೆಲೆ ಏರಿಕೆಗಳನ್ನು ವಾಪಸ್‌ ಪಡೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.

ಬೆಲೆ ಏರಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಹೇಳುವುದೊಂದು, ಮಾಡುವುದೊಂದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸುವುದಾಗಿ ಹೇಳಿದ್ದ ಸರ್ಕಾರ, ಕೆಲವು ವಿಧದ ಹಾಲಿನ ದರವನ್ನು 12ರಿಂದ 13 ರೂ.ವರೆಗೆ ಏರಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಲೆಕ್ಕಾಚಾರಗಳನ್ನು ತಿರುಚಿ, ತಾವು ಮಾಡಿದ ಸಾಲ ಮಿತಿಯಲ್ಲೇ ಇದೆ ಎಂದು ತೋರಿಸಿದ್ದರು. ಇದೀಗ ನಿಮ್ಮ ಸರ್ಕಾರವೂ ಬೆಲೆ ಏರಿಕೆಯಲ್ಲೂ ಗೋಲ್‌ಮಾಲ್‌ ಲೆಕ್ಕಾಚಾರ ಮಾಡಿ ಮ್ಯಾಜಿಕ್‌ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಸರ್ಕಾರ ಪ್ರಕಟಿಸಿರುವ ದರ ಏರಿಕೆಯ ವಿವರಗಳನ್ನು ಉಲ್ಲೇಖಿಸಿರುವ ಅಶೋಕ್‌ ಅವರು, ಸ್ಟ್ಯಾಂಡರ್ಡ್‌ ಹಾಲಿನ ದರವನ್ನು ಲೀಟರ್‌ಗೆ 52 ರೂ.ನಿಂದ 64 ರೂ.ಗೆ ಏರಿಸಲಾಗಿದ್ದು, 12 ರೂ. ಹೆಚ್ಚಳವಾಗಿದೆ. ಶುಭಂ ಹಾಲಿನ ದರ 53 ರೂ.ನಿಂದ 66 ರೂ.ಗೆ ಏರಿಕೆಯಾಗಿದ್ದು, 13 ರೂ. ಹೆಚ್ಚಿಸಲಾಗಿದೆ. ಮೊಸರಿನ ಅರ್ಧ ಲೀಟರ್‌ ಪ್ಯಾಕೆಟ್‌ ದರ 28 ರೂ.ನಿಂದ 34 ರೂ.ಗೆ ಏರಿಕೆಯಾಗಿದ್ದು, 6 ರೂ. ಹೆಚ್ಚಳವಾಗಿದೆ.

ಗಣಿತದ ಲೆಕ್ಕಾಚಾರದಲ್ಲಿ ಪಳಗಿರುವ ಕಾಂಗ್ರೆಸ್‌, ಜನರ ಮುಂದೆ ಒಂದು ಹೇಳಿ, ಹಿಂದಿನಿಂದ ಮನಬಂದಂತೆ ಬೆಲೆ ಏರಿಕೆ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಜನರು ಈ ಬೆಲೆ ತೆರಬೇಕಾಗಿದೆ ಎಂದು ಟೀಕಿಸಿದ್ದಾರೆ.

ಇದೇ ರೀತಿಯಲ್ಲಿ ಬಸ್‌ ಪ್ರಯಾಣ ದರ ಏರಿಕೆಯಲ್ಲೂ ಹೇಳುವುದೊಂದು, ಮಾಡುವುದೊಂದು ಎಂಬ ವಂಚನೆ ನಡೆಯುವುದು ಖಚಿತ. ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದುಗೊಳಿಸಬೇಕು ಹಾಗೂ ಬೆಲೆ ಏರಿಕೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಪ್ರಚಾರ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಟೀಕೆ

ಇದೇ ವೇಳೆ ಬೆಂಗಳೂರಿನ ಬಫರ್‌ ರಸ್ತೆ ಯೋಜನೆಯ ಅನುಷ್ಠಾನದಲ್ಲಿನ ವಿಳಂಬದ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

425 ಕಿ.ಮೀ. ರಸ್ತೆ ಘೋಷಣೆ, ಕಾಮಗಾರಿ ಆರಂಭವಾಗಿದ್ದು 10 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ. ಬೆಂಗಳೂರಿನ ಜನರಿಗೆ ಸುಗಮ ಸಂಚಾರದ ಭರವಸೆ ನೀಡಿ, ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ, ನಿಮ್ಮ ಸರ್ಕಾರದ ಅಭಿವೃದ್ಧಿಯ ವೇಗ ಎಷ್ಟಿದೆ ಎಂಬುದಕ್ಕೆ ಬಫರ್‌ ರಸ್ತೆ ಯೋಜನೆಯೇ ಸಾಕ್ಷಿ ಎಂದು ಟೀಕಿಸಿದ್ದಾರೆ.

2025-26ನೇ ಸಾಲಿನ ಬಜೆಟ್‌ನಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ 425 ಕಿ.ಮೀ. ಉದ್ದದ ಬಫರ್‌ ರಸ್ತೆ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಮೊದಲ ಹಂತದ ಕಾಮಗಾರಿಯಲ್ಲೇ ಸರ್ಕಾರದ ಆಡಳಿತ ವೈಫಲ್ಯ ಬಯಲಾಗಿದೆ.

ಒಟ್ಟು 3,000 ಕೋಟಿ ರೂ. ವೆಚ್ಚದಲ್ಲಿ 425 ಕಿ.ಮೀ. ರಸ್ತೆ ನಿರ್ಮಿಸುವ ಯೋಜನೆ ಘೋಷಿಸಲಾಗಿತ್ತು. ಮೊದಲ ಹಂತದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 67.69 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಹಲವು ತಿಂಗಳು ಕಳೆದರೂ ಕೇವಲ 10 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ಆರಂಭವಾಗಿದೆ ಎಂದು ಕಿಡಿಕಾರಿದ್ದಾರೆ.

ವಿಂಡ್‌ ಟನಲ್‌ ರಸ್ತೆಯಲ್ಲಿ ಎಚ್‌ಎಎಲ್‌ ಸಂಸ್ಥೆಯಿಂದಲೇ 51,367.29 ಚದರ ಮೀಟರ್‌ ಜಾಗ ಹಸ್ತಾಂತರವಾಗಿದ್ದರೂ ಕಾಮಗಾರಿ ಆರಂಭಿಸಲು ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.50 ಕೋಟಿ ದಾಟಿದ್ದು, ಪ್ರತಿದಿನ 2,700ಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಸಂಚಾರ ದಟ್ಟಣೆ, ಪ್ರವಾಹ ಹಾಗೂ ರಸ್ತೆ ಸಂಪರ್ಕದ ಸಮಸ್ಯೆಗಳಿಂದ ಜನರು ನಿತ್ಯ ಪರದಾಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ ಎಂದು ಟೀಕಿಸಿದ್ದಾರೆ.

ಹಣವಿಲ್ಲ, ಅಭಿವೃದ್ಧಿಯಿಲ್ಲ, ಯೋಜನೆಗಳ ಅನುಷ್ಠಾನವೂ ಇಲ್ಲ. ಕಾಂಗ್ರೆಸ್‌ ಸರ್ಕಾರಕ್ಕೆ ಪ್ರಚಾರವೇ ಆದ್ಯತೆಯಾಗಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಮರೀಚಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಬೇಕು. ಘೋಷಿಸಿದ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವ ಸಾಮರ್ಥ್ಯ ಇಲ್ಲದಿದ್ದರೆ ಮತ್ತಷ್ಟು ಸುಳ್ಳು ಭರವಸೆಗಳನ್ನು ನೀಡುವುದಾದರೂ ಏಕೆ ಎಂದು ಪ್ರಶ್ನಿಸಿದ್ದಾರೆ.

ಘೋಷಣೆ ಮಾತ್ರ ಇದೆ, ಯೋಜನೆ ಜಾರಿಯಿಲ್ಲ; ಪ್ರಚಾರ ಮಾತ್ರ ಇದೆ, ಅಭಿವೃದ್ಧಿಯಿಲ್ಲ. ಕಾಂಗ್ರೆಸ್‌ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ. ಬೆಂಗಳೂರಿನ ಜನರಿಗೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಮಾನ್ಯ ಜನತೆಗೆ ಬರೆ: ಹಾಲು, ಮೊಸರು ಬೆಲೆ ಏರಿಕೆ ಬೆನ್ನಲ್ಲೇ ಬಸ್ ದರ ಹೆಚ್ಚಳ; ನೂತನ ದರ ಇಂದು ಮಧ್ಯರಾತ್ರಿ ಜಾರಿ

'ಅವರಿಗೂ ಯುದ್ಧ ಬೇಡ': ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ ಕುರಿತು ಇರಾನ್ ಪ್ರತಿಕ್ರಿಯೆ

US midterm poll results: ಯುಎಸ್ ಕಾಂಗ್ರೆಸ್ ನ ಎರಡೂ ಸದನಗಳಲ್ಲಿ ಡೆಮೋಕ್ರಾಟ್ ಗೆಲುವು, ಟ್ರಂಪ್ ಗೆ ಹೀನಾಯ ಸೋಲು

'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ

ನಾಲ್ವರು ಸಾವಿಗೀಡಾಗಿದ್ದ ಮೇಲ್ಸೇತುವೆ ಮೇಲೆ ಮಹಿಳಾ ಪೊಲೀಸ್‌ ಅಧಿಕಾರಿ ಬರ್ತ್‌ಡೇ ಪಾರ್ಟಿ! ವ್ಯಾಪಕ ಆಕ್ರೋಶ