ಮಹಿಳೆ (ಸಾಂಕೇತಿಕ ಚಿತ್ರ) online desk
ಸಂಚಯ

ಪರಿತ್ಯಕ್ತೆಯರು...

ಈ ಇಂಟರ್ನೆಟ್ ಯುಗದಲ್ಲಿ 'ಗುರುತಿಸುವಿಕೆ' ಎಷ್ಟು ಸುಲಭವೋ ಅಷ್ಟೇ ಕಷ್ಟ. ಈ ಸಂದರ್ಭಗಳಲ್ಲಿ ಹುಟ್ಟಿಕೊಂಡ ಆಕರ್ಷಣೆಗಳಿಗೆ ಬಲಿಯಾದವರು ಹಲವರಿದ್ದಾರೆ.

-ಜಯಶ್ರೀ ಬಿ ಕದ್ರಿ, ಲೇಖಕಿ

ನಾನು ಚಿಕ್ಕವಳಿದ್ದಾಗ ನಮ್ಮ ಮನೆಗೆ ಒಬ್ಬರು ಅಜ್ಜಿ ಬರುತ್ತಿದ್ದರು. ನಮ್ಮ ಅಜ್ಜನಿಗೆ ಅವರು ದಾಯಾದಿ ಸಂಬಂಧ. ಕೂಡು ಕುಟುಂಬದಲ್ಲಿರುವಾಗ ನಮ್ಮ ಅಜ್ಜಿಗೆ ಕಣ್ಣೀರು ಹಾಕಿಸುತ್ತಿದ್ದರಂತೆ. ಹಾಗೆಂದು ವೃದ್ಧಾಪ್ಯದಲ್ಲಿ 'ಕರ್ಮ ರಿಟರ್ನ್ಸ್' ಎನ್ನುತ್ತಾರಲ್ಲ ಹಾಗೆ ಅವರ ಸೊಸೆ ಈ ಅಜ್ಜಿ ಅತಿಯಾಗಿ ಬಯಸುವ 'ಕಾಪಿ' ಕೂಡ ಕೊಡದೆ ಸತಾಯಿಸುತ್ತಿದ್ದರು.

ಒಂದು ಕಪ್ ಬಿಸಿ ಕಾಫಿಗೆ ಹಪಹಪಿಸುತ್ತ ಆಕೆ ನಮ್ಮ ಅಜ್ಜನ ಮನೆಗೆ ಬರುತ್ತಿದ್ದರು. ಇನ್ನೊಬ್ಬರು ಅಜ್ಜಿ ಕೂಡ ಹಾಗೆ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡ ಆಕೆಗೊಬ್ಬ ಬುದ್ಧಿ ಮಾಂದ್ಯ ಮಗ. ಗಂಡನ ಮನೆಯಿಂದ ಹೊರ ಹಾಕಲ್ಪಟ್ಟ ಆಕೆ ಅವರಿವರ ಮನೆಗಳಲ್ಲಿ, ಬಂಧುಗಳ ಮನೆಯಲ್ಲಿ, ತನ್ನ ಸ್ವಂತ ತಾಯಿ ಮನೆಯಲ್ಲಿ ಅವಜ್ನೆ, ತಿರಸ್ಕಾರ, ಕಟು ಮಾತುಗಳಿಂದ ನಿಂದಿಸಲ್ಪಡುತ್ತಿದ್ದುದನ್ನು ಕಣ್ಣಾರೆ ನೋಡಿದ್ದೇನೆ. ಆಗ ನಮ್ಮ ಹಳ್ಳಿಯಲ್ಲಿ 'ಗಂಡ ಬಿಟ್ಟಿದ್ದಾನೆ' ಎಂದು ಹೇಳಲ್ಪಡುವ ಹಲವಾರು ಹೆಣ್ಣು ಮಕ್ಕಳಿದ್ದರು. ಅವರೆಲ್ಲ ಬೀಡಿ ಕಟ್ಟುತ್ತಲೋ, ಕೂಲಿ ಕೆಲಸಕ್ಕೆ ಹೋಗುತ್ತಲೋ ,ಇನ್ನೂ ಧಾಡಸಿ ಸ್ವಭಾವದವರಾದರೆ

ತಮಗೆ ಪಿತ್ರಾರ್ಜಿತವಾಗಿ ಬಂದ (ಅದೂ ಅಳಿಯ ಕಟ್ಟು ಇದ್ದರೆ) ಆಸ್ತಿಯನ್ನು ಅಭಿವೃದ್ಧಿ ಪಡಿಸುತ್ತಲೋ ಹೇಗೋ ಬಾಳುತ್ತಿದ್ದರು. ಈ ಹೆಣ್ಣು ಮಕ್ಕಳ ಕರುಣ ಕಥನಗಳನ್ನು ಕೇಳಿದಾಗೆಲ್ಲ ಸ್ತ್ರೀ ವಾದದ ಅಗತ್ಯದ ಅರಿವಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಈ ನಿಷ್ಪಾಪಿ ಹೆಣ್ಣು ಮಕ್ಕಳು ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ನೆನಪಿಸಿಕೊಂಡರೆ ಬೇಸರವಾಗುತ್ತದೆ.

ಒಂಟಿ ವಿಧವೆಯಾಗಿ ಮಗುವನ್ನು ಸಾಕುವುದು, ವಿವಾಹವಾಗಬೇಕಾದ ವಯಸ್ಸಿನಲ್ಲಿ ಸಂಸಾರದ ಜವಾಬ್ದಾರಿ ಹೊತ್ತು ಅವಿವಾಹಿತೆಯಾಗಿಯೇ ಉಳಿಯುವುದು, ಯಾವುದೋ ಬೇಕೂಫ ಕೈ ಹಿಡಿದೆಳೆದನೆಂಬ ಕಾರಣಕ್ಕೆ ಬಂದ ಮದುವೆ ಪ್ರಸ್ತಾಪಗಳೆಲ್ಲ ಮುರಿದು ಬೀಳುವುದು.. ಹೀಗೆಲ್ಲ ಹೆಣ್ಣು ಮಕ್ಕಳ ನಿಟ್ಟುಸಿರುಗಳು ಯಾರಿಗೂ ಕೇಳುತ್ತಲೇ ಇರಲಿಲ್ಲವೇ ಅಥವಾ ಕೇಳಿದರೂ ಅದು ಸಹಜವಾಗಿ ಪರಿಗಣಿಸಲ್ಪಟ್ಟಿತ್ತೇ ಎಂದು ಆಶ್ಚರ್ಯವಾಗುತ್ತದೆ. ಬಾಣಂತಿ ಸನ್ನಿ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡವರು, ತನ್ನ ಚಾರಿತ್ರ್ಯದ ಬಗ್ಗೆ ಆಡಿಕೊಳ್ಳುವವರ ನಡುವೆ ಕಲ್ಲಾಗಿ ಹೋದವರು, ನಾಲ್ಕು ಮಕ್ಕಳನ್ನು ಕರುಣಿಸಿದ ಸೋಮಾರಿ ಗಂಡ ಸಂಸಾರ ನಿಭಾಯಿಸದೆ ಇದ್ದಾಗ ತಾಯಿ ಮನೆಗೆ ಬಂದು ಅಣ್ಣ ತಮ್ಮಂದಿರು, ಅವರ ಪತ್ನಿಯರಿಂದ ಭರ್ತ್ಸನೆ, ಹಂಗಿನ ಬಾಳಿನಲ್ಲಿ ಕಣ್ಣೀರಲ್ಲಿ ಕೈ ತೊಳೆದವರು.. ಹೀಗೆ ನಮ್ಮ ಹಳ್ಳಿಯೆಂದರೆ ಭಾರತದ ಅಸಂಖ್ಯಾತ ಗ್ರಾಮಗಳ ಪ್ರತೀಕವೇ ಆಗಿತ್ತೆಂದೆನಿಸುತ್ತದೆ. ಇದೀಗ ಕಾಲಚಕ್ರ ತಿರುಗಿದೆ.

ಇದೀಗ ಕಾಲಚಕ್ರ ತಿರುಗಿದೆ. ಅವರಿವರಲ್ಲಿ ತಿರಿದು ಆ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ಕೊಡಿಸಿದ ವಿದ್ಯೆ ಅವರ, ತನ್ಮೂಲಕ ಆ ಅಸಹಾಯಕ ತಾಯಂದಿರ ಬಾಳಿಗೆ ಬೆಳಕು ತಂದಿದೆ. ಅವರೆಲ್ಲ ನಗರಗಳಿಗೆ ವಲಸೆ ಹೋಗಿದ್ದಾರೆ, ಅಥವಾ ನಗರದ ನಿಕಟ ಸಂಪರ್ಕದಲ್ಲಿರುತ್ತಾ ಹಳ್ಳಿಯನ್ನೇ ನಗರೀಕರಣಗೊಳಿಸಿಕೊಂಡಿದ್ದಾರೆ. ಹಾಗಿದ್ದರೂ ಭಾರತದಂತಹ ಜನ ಸಂಖ್ಯೆ ಹೆಚ್ಚಿರುವ, ಅನೇಕ ಸಾಂಸ್ಕೃತಿಕ, ಸಾಮಾಜಿಕ, ಜಾತೀಯ ಸ್ತರಗಳುಳ್ಳ, ಬಹುತ್ವದ ಸಮಾಜದಲ್ಲಿ ನಾನು ಇಪ್ಪತ್ತೈದು ವರ್ಷಗಳ ಹೀಂದೆ ನೋಡಿದ ಸಮಸ್ಯೆಗಳು ಈಗಲೂ ಹಾಗೆಯೇ, ದಾರುಣವಾಗಿಯೇ ಹಲವಾರು ಕಡೆ ಇನ್ನೂ ಇದೆ ಎಂದರೆ ಅಶ್ಚರ್ಯವಾಗುತ್ತದೆ.

ಇದರಲ್ಲಿ ಜಿಲ್ಲಾವಾರು ವ್ಯತ್ಯಾಸವೂ ಇದೆ. ಸುಶಿಕ್ಷಿತ ಜಿಲ್ಲೆಗಳಲ್ಲಿ ಶೋಷಣೆಯ ಪ್ರಮಾಣ ಕಡಿಮೆ. ಉಳಿದಂತೆ ಬಾಲ್ಯ ವಿವಾಹ, ಪದವಿಯ ನಂತರ ಉದ್ಯೋಗಕ್ಕೆ ಹೋಗಲು ಬಿಡದಿರುವುದು, ಚಾರಿತ್ರ್ಯ ಹನನ ಮಾಡುವುದು, ಮದುವೆ ವಿಚಾರದಲ್ಲಿ ಆಯ್ಕೆಗೆ ಅವಕಾಶ ನೀಡದಿರುವುದು.. ಹೀಗೆ ಸಮಸ್ಯೆಗಳು ಇದ್ದೇ ಇವೆ. ಜೀವ ಮಾನವಿಡೀ ಮನೆಗೋಸ್ಕರ ಜೀವ ತೇಯ್ದರೂ ಒಂದೆಳೆ ಸರಕ್ಕೆ ಅತ್ತು ಕರೆದು ಮಾಡಬೇಕಾದವರು, ಕಪ್ಪೆಂದು ಮದುವೆ ಸಂಬಂಧಗಳೆಲ್ಲ ತಪ್ಪಿ ಹೋಗುವವರು, ಮಾರಣಾಂತಿಕ ಕಾಯಿಲೆಗಳಿದ್ದರೂ ಶುಶ್ರೂಷೆಗೆ ಯಾರೂ ಮುಂದೆ ಬಾರದಿರುವುದು, ಪಾತ್ರೆ ತೊಳೆಯಲು ನೀರು, ಶೌಚದಂತಹ ಮೂಲಭೂತ ಅಗತ್ಯಗಳಿಗೆ ಕೂಡ ಅನುಕೂಲತೆಗಳಿರದಿರದವರು. ಹೀಗೆ ಹೆಣ್ಣು ಮಕ್ಕಳ ಸಂಕಟಕ್ಕೆ ಕೊನೆ ಇಲ್ಲವೇನೋ ಎಂದೆನಿಸುತ್ತದೆ. ಹಾಗೂ 'ಲಿಂಗ'ದಿಂದಾಗಿ ಹೆಣ್ಣು ಅನುಭವಿಸುವ ಯಾತನೆ ಹೇಳಲಾರದಂತಹುದು. ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಕೂಡ ಹಣ ಇರುವುದಿಲ್ಲ. ಅವರು ಹೆರಬೇಕಾದ ಮಕ್ಕಳ ಸಂಖ್ಯೆಯ ಮೇಲೆ, ಲಿಂಗದ ಮೇಲೆ ನಿಯಂತ್ರಣ ಇರುವುದಿಲ್ಲ. ಆರ್ಥಿಕ ಸ್ವಾವಲಂಬನೆಯಿಂದ ಇವನ್ನೆಲ್ಲ ಮೀರಬಹುದಾದರೂ ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಮೀರುವುದು ಸುಲಭವೇನಲ್ಲ.

ಇನ್ನು ಪ್ರೀತಿಯ ಹೆಸರಿನಲ್ಲಿ ಮೋಸ ಹೋಗುವವರ ದೊಡ್ದ ದಂಡೇ ಇದೆ. ಹುಡುಗಿಯರೊಂದಿಗೆ ಸಾಕಷ್ಟು ಓಡಾಡಿ ಮದುವೆಯಾಗಲು ನಿರಾಕರಿಸುವವರು, ಪ್ಲೆಟೋನಿಕ್ ಲವ್ ಹೆಸರಿನಲ್ಲಿ ಯಾಮಾರಿಸುವವರು, ಸೈಬರ್ ಕ್ರೈಮ್ ನಂತಹ ದುರಂತಗಳಿಗೆ ತಾವಾಗಿಯೇ ಆಹ್ವಾನ ಕೊಟ್ಟುಕೊಳ್ಳುವವರು. ಹೀಗೆ, ಮಧ್ಯ ವಯಸ್ಸಿನವರನ್ನೂ ಈ ಮಾಯೆ ಬಿಟ್ಟಿಲ್ಲ. ಇದೊಂದು ರೀತಿಯ 'ಐಡೆಂಟಿಟಿ ಕ್ರೈಸಿಸ್ 'ಇರಬೇಕು. ಈ ಇಂಟರ್ನೆಟ್ ಯುಗದಲ್ಲಿ 'ಗುರುತಿಸುವಿಕೆ' ಎಷ್ಟು ಸುಲಭವೋ ಅಷ್ಟೇ ಕಷ್ಟ. 'ರೀಲ್ಸ್' ಮಾಡಿಕೊಂಡು ಒಂದು ರೀತಿಯ ಭ್ರಮೆಯಲ್ಲಿ ಬದುಕುವ ಹುಡುಗ ಹುಡುಗಿಯರಿಗೂ ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿ, ಸ್ಥಾನ ಮಾನ ಎಂದೆಲ್ಲ ಹಪಹಪಿಸುವ ಮಧ್ಯ ವಯಸ್ಸಿನವರಿಗೂ ಬಹುಶ: ಅಂತಹ ವ್ಯತ್ಯಾಸ ಇಲ್ಲ ಹಾಗೂ ಸಾಮಾಜಿಕ ಮಾಧ್ಯಮಗಳು ನಮ್ಮಲ್ಲಿ ಆ ರೀತಿಯ ಒಳ ತೋಟಿಯನು ಹುಟ್ಟು ಹಾಕುತ್ತವೆ. ಈ ಸಂದರ್ಭಗಳಲ್ಲಿ ಹುಟ್ಟಿಕೊಂಡ ಆಕರ್ಷಣೆಗಳಿಗೆ ಬಲಿಯಾದವರು ಹಲವರಿದ್ದಾರೆ.

ಒಟ್ಟಿನ ಮೇಲೆ ಹೆಣ್ಣು ಸಬಲಳಾಗಲು ಶಿಕ್ಷಣ, ವಿದ್ಯಾಬ್ಯಾಸ, ಆರ್ಥಿಕ ಸ್ವಾವಲಂಬನೆ.. ಹೀಗೆ ಹಲವಾರು ಮಾರ್ಗಗಳಿವೆ. ಅದೇ ಸಮಯ ಆಕೆ ತನ್ನ ಅಂತರಂಗದ ದನಿಗೆ ಕಿವಿ ಗೊಡುತ್ತ ಮಾನಸಿಕ ಸ್ವಾಸ್ಥ್ಯ, ಗಟ್ಟಿತನಗಳನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಈಗ ಇದೆ ಎಂದೆನಿಸುತ್ತದೆ.

-ಜಯಶ್ರೀ ಬಿ ಕದ್ರಿ

bjayashree97@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT