ವಾಷಿಂಗ್ಟನ್: ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ 12 ಮಂದಿಯ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸ್ಥಾನ ಸಂಪಾದಿಸುವ ಮೂಲಕ ಮತ್ತೊಮ್ಮೆ ದೇಶದ ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ನಾಸಾ ಮಾಹಿತಿ ನೀಡಿದ್ದು, 2017ರ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ಮೂಲದ ಬಾಹ್ಯಾಕಾಶ ವಿದ್ಯಾರ್ಥಿ ರಾಜಾಚಾರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದೆ. ಪ್ರಸ್ತುತ ನಾಸಾ ಆಯ್ಕೆ ಮಾಡಿರುವ 12ಮಂದಿಯ ಗಗನಯಾತ್ರಿಗಳ ತಂಡದಲ್ಲಿ ರಾಜಾಚಾರಿ ಆಯ್ಕೆಯಾಗಿದ್ದು, ಆಗಸ್ಟ್ ನಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
1999ರಲ್ಲಿ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗಗನಯಾತ್ರಿ ಎಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ವಿಜ್ಞಾನ ವಿಷಯಗಳಲ್ಲಿ ಪದವಿ ಪಡೆದ ರಾಜಾಚಾರಿ, ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಂತೆಯೇ ಯುಎಸ್ ನಾವಲ್ ಟೆಸ್ಟ್ ಪೈಲಟ್ ಸ್ಕೂಲ್ ನಲ್ಲಿ ಪದವಿ ಪಡೆದಿದ್ದಾರೆ. ಆಗಸ್ಟ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲಿರುವ ರಾಜಾಚಾರಿ ಮುಂದಿನ ಎರಡು ವರ್ಷಗಳ ಕಾಲ ಗಗನಯಾತ್ರಿ ಅಭ್ಯರ್ಥಿಯಾಗಿ ತರಬೇತಿ ಪಡೆಯಲಿದ್ದಾರೆ.