ತರಬೇತಿನಿರತ ಆನಂದ್ ಪ್ರಸಾದ್ 
ವಿಶೇಷ

ಜಾರ್ಖಂಡ್ ನಲ್ಲೊಬ್ಬ ಜಬರ್ ದಸ್ತ್ ಕೋಚ್: ರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿಗಳಿಗೆ 25 ಮಂದಿ ಶಿಷ್ಯಂದಿರು ಆಯ್ಕೆ

ಬಾಲ್ಯವಿವಾಹಕ್ಕೆ ಸಿಕ್ಕು ಬಾಡಿಹೋಗಬೇಕಿದ್ದ ಹೆಣ್ಣುಮಕ್ಕಳು ಆನಂದ್ ಬಳಿ ತರಬೇತಿ ಪಡೆದು ಫೀಫಾ ಕ್ಯಾಂಪ್, ನ್ಯಾಷನಲ್ ಪಂದ್ಯಾವಳಿಗಳಲ್ಲಿ ಹೆಸರು ಮಾಡುತ್ತಿದ್ದಾರೆ. ಚಕ್ ದೇ ಇಂಡಿಯಾ, ದಂಗಲ್ ಸಿನಿಮಾಗಳನ್ನು ಸಂಭ್ರಮಿಸುವ ನಮಗೆ ಅಂಥಾ ಸಿನಿಮಾಗಳಿಗೆ ಪ್ರೇರಣೆಯಾಗುವ ಆನಂದ್ ರಂಥ ವ್ಯಕ್ತಿಗಳು ಕಾಣಿಸುವುದೇ ಇಲ್ಲ. 

ರಾಂಚಿ: ಸೂಪರ್ 30 ಎನ್ನುವ ನೈಜ ಘಟನೆಯಾಧಾರಿತ ಸಿನಿಮಾ ಕಥೆ ನಿಮಗೂ ಗೊತ್ತಿರಬಹುದು. ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆ ಐಐಟಿ ಪ್ರವೇಶಕ್ಕೆ ಉತ್ಸುಕರಾದ ಬಡ ವಿದ್ಯಾರ್ಥಿಗಳಿಗೆ ಓರ್ವ ವ್ಯಕ್ತಿ ತರಬೇತಿ ನೀಡುವ ಕತೆಯದು. ಸತ್ಯ ಘಟನೆಯದು. ಅಂಥದ್ದೇ ಒಂದು ಕಥೆ ಜಾರ್ಖಂಡ್ ನಿಂದ ವರದಿಯಾಗಿದೆ. ಆದರೆ ಇಲ್ಲಿ ಒಂದು ವ್ಯತ್ಯಾಸವಿದೆ. ಇಲ್ಲಿ ಮಾದರಿ ಗುರು ಓರ್ವ ರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಆಡುವ ಕನಸುಳ್ಳ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಅವರ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಆ ಮಾದರಿ ಗುರುವಿನ ಹೆಸರು ಆನಂದ್ ಪ್ರಸಾದ್ ಗೋಪೆ. ರಾಂಚಿ ನಗರದ ಹೊರವಲಯದಲ್ಲಿ ಅವರ ವಾಸ. ಅವರ ಜೀವನದ ಧ್ಯೇಯ ಆಟಗಾರನಾಗಿ ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಪ್ರತಿನಿಧಿಸುವುದು. ಆದರೆ ಅವರ ಜೀವನದ ಏಕೈಕ ಮಹೋನ್ನತ ಗುರಿ ಈಡೇರಲಿಲ್ಲ. ಆದರೆ ತನ್ನ ಕನಸು ಕಮರಿ ಹೋಯಿತೆಂದು ಆನಂದ್ ಪ್ರಸಾದ್ ಎಂದೂ ಸುಮ್ಮನೆ ಕೂರಲಿಲ್ಲ. ಬದಲಾಗಿ ತನ್ನಂತೆಯೇ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡುವ ಆಸೆ ಇರುವ ಬಡ ಮಕ್ಕಳಿಗೆ ತರಬೇತಿ ನೀಡುವ ಪುಣ್ಯ ಕೆಲಸವನ್ನು ಅವರು ಪ್ರಾರಂಭಿಸಿದರು.

ಈಗ ಅವರ ಬಳಿ ತರಬೇತುಪಡೆದ 25 ಮಂದಿ ಮಕ್ಕಳು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಒಟ್ಟು ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಆನಂದ್ ಪ್ರಸಾದ್ ಫುಟ್ಬಾಲ್ ತರಬೇತಿ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಿನ ಹೆಮ್ಮೆಯೆಂದರೆ ಅವರ ಬಳಿ ತರಬೇತಿ ಪಡೆದ ಮಕ್ಕಳಲ್ಲಿ 8 ಮಂದಿ ಇಂಗ್ಲೆಂಡ್ ಹಾಗೂ 6 ಮಕ್ಕಳು ಡೆನ್ಮಾರ್ಕ್ ನಲ್ಲಿ ಭಾರತದ ಅಂಡರ್೧೭ ತಂಡದಲ್ಲಿ ಆಟವಾಡಿದ್ದರು. ಅಲ್ಲದೆ ಅವರ ಇಬ್ಬರು ಶಿಷ್ಯೆಯರು ಸೋನಿ ಮುಂಡ ಮತ್ತು ಅನಿತಾ ಕುಮಾರಿ 2022ರ ಫೀಫಾ ವಿಶ್ವಕಪ್ ಕ್ಯಾಂಪ್ ಗೆ ಆಯ್ಕೆಯಾಗಿದ್ದಾರೆ. 

ಆನಂದ್ ಪ್ರಸಾದ್ ಅವರ ಬಳಿ ತರಬೇತಿ ಪಡೆಯುತ್ತಿರುವ 300 ಮಂದಿಯಲ್ಲಿ 250 ಮಂದಿ ಬಾಲಕಿಯರು ಎನ್ನುವುದು ವಿಶೇಷ. ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಒದಗುತ್ತಿರುವ ದುಸ್ಥಿತಿಯನ್ನು ಆನಂದ್ ಚಿಕ್ಕಂದಿನಿಂದಲೇ ನೋಡಿದ್ದರು. ಬಾಲಕಿಯರಿಗೆ ಶಾಲೆ ಭಾಗ್ಯ ಸಿಗುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಹೆಣ್ಣುಮಕ್ಕಳನ್ನು ರಾಜಸ್ಥಾನ, ಹರಿಯಾಣ ಮೊದಲಾದ ರಾಜ್ಯಗಳಿಗೆ ಮದುವೆ ಮಾಡಿಕೊಡಲಾಗುತ್ತಿತ್ತು. ಇವೆಲ್ಲವನ್ನೂ ನೋಡಿಯೇ ಹೆಣ್ಣುಮಕ್ಕಳಿಗೆ ಫುಟ್ ಬಾಲ್ ಕಲಿಸಬೇಕೆನ್ನುವ ಛಲ ಆನಂದ್ ಅವರಲ್ಲಿ ಮೂಡಿತ್ತು. 

ಎಲ್ಲಾ ಕ್ಷೇತ್ರಗಳಲ್ಲಿಯೂ ಹಣದ ಮಸಲತ್ತು ತುಂಬಿರುವಾಗ ಆನಂದ್ ಪ್ರಸಾದ್ ರಂಥ ವ್ಯಕ್ತಿಗಳು ಮರುಭೂಮಿಯಲ್ಲಿ ಓಯೆಸಿಸ್ ಕಂಡಂತೆ ಪ್ರತ್ಯಕ್ಷರಾಗುತ್ತಾರೆ. ಮನುಷ್ಯರಲ್ಲಿ ಮಾನವೀಯತೆ, ನಿಸ್ವಾರ್ಥತೆ ಇನ್ನೂ ಬತ್ತಿಲ್ಲ ಎನ್ನುವುದಕ್ಕೆ ಕುರುಹಾಗಿ ನಿಲ್ಲುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಲು ಶಿಕ್ಷೆಗೆ ಗುರಿಯಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಿಸಿ: ಭಾರತಕ್ಕೆ ಬಾಂಗ್ಲಾದೇಶ ಆಗ್ರಹ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು ಮಾಡಿದ ಹೈಕೋರ್ಟ್!

Delhi blast: ಪ್ರಮುಖ ಆರೋಪಿಯ ಸಹಚರನನ್ನು ಬಂಧಿಸಿದ NIA

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ

'ವಿದೇಶದಲ್ಲಿ ವಾಸ, 20 ಕೋಟಿ ರೂ ಆದಾಯ': Piracy ಮಾಸ್ಟರ್ ಮೈಂಡ್ Ravi immadi ಸಿಕ್ಕಿಬಿದ್ದಿದ್ದೇ ರೋಚಕ; ಪತ್ನಿಯೇ ತೋಡಿದ್ದಳು ಗುಂಡಿ!

SCROLL FOR NEXT