ವಿಶೇಷ

ಕೈಮಗ್ಗ ಕಾರ್ಖಾನೆಯಾಗಿ ಬದಲಾದ ಸೆಂಟ್ರಲ್ ಜೈಲು: ಕೈದಿಗಳು ತಯಾರಿಸಿದ ವಸ್ತ್ರ ಮಾರಿ 40 ಲಕ್ಷ ರೂ. ಆದಾಯ

Harshavardhan M

ಭೋಪಾಲ್: 2016ರಲ್ಲಿ 22 ವರ್ಷದವನಾಗಿದ್ದ ಯುವಕ ಮಣಿರಾಂ ಎಂಬಾತನಿಗೆ ಅತ್ಯಾಚಾರ ಪ್ರಕರಣದಡಿ 10  ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಮಧ್ಯಪ್ರದೇಶ ಹೈಕೋರ್ಟ್ ನಿಂದ ಭರವಸೆಯ ಆಶಾಕಿರಣ ಮೂಡಿ ಆತ ಬಿಡುಗಡೆಯಾಗಿದ್ದಾನೆ. 

ಸೆಂಟ್ರಲ್ ಜೈಲಿನಿಂದ ಹೊರಬಂದಿರುವ ಆತುದ್ಯೋಗಕ್ಕಾಗಿ ಏನು ಮಾಡುವುದು, ತನಗೆ ಯಾರು ಕೆಲಸ ಕೊಡುತ್ತಾರೆ, ಭವಿಷ್ಯ ಹೇಗೆ ಎಂಬುದರ ಚಿಂತೆ ಮಾಡುತ್ತಿಲ್ಲ. ಜೈಲಿನ ಜೀವನ ಆತನನ್ನು ಬದಲಿಸಿದೆ. ಕೈಮಗ್ಗದಲ್ಲಿ ಸೀರೆ ತಯಾರಿ ಮಾಡುವ ಕಲೆಯನ್ನು ತರಬೇತಿ ನೀಡುವ ಕೇಂದ್ರವನ್ನು ಆತ ಶುರುಮಾಡುತ್ತಿದ್ದಾನೆ. 

ಮಣಿರಾಂ ರೀತಿಯೇ ಅವನ ಜೊತೆಯಿದ್ದ 175 ಮಂದಿ ಸಹಕೈದಿಗಳು ಕೂಡ ಜೈಲಿನಲ್ಲಿ ಕೈಮಗ್ಗ ತರಬೇತಿ ಪಡೆದು ಸೀರೆ ಸೇರಿದಂತೆ ವಸ್ತ್ರ ತಯಾರಿಯಲ್ಲಿ ತೊಡಗಿದ್ದರು. ಮೂರು ವರ್ಷಗಳ ಕಾಲ ಕಠಿಣ ತರಬೇತಿ ಪಡೆದು ಅವರೆಲ್ಲರೂ ಹುರಿಗೊಂಡಿದ್ದಾರೆ. ಹಲ ವರ್ಷಗಳಿಂದ ಜೈಲಿನಿಂದಲೇ ತಯಾರಿಸುತ್ತಿದ್ದ ವಸ್ತ್ರಗಳು ಜಾಗತಿಕ ಮಟ್ತದಲ್ಲಿ ಮಾರುಕಟ್ಟೆಯನ್ನು ಪಡೆದುಕೊಂಡಿದೆ. 

ಜೈಲಿನಿಂದ ಬಿಡುಗಡೆಯಾಗಿರುವ ಮಣಿರಾಂ ತನ್ನ ಗ್ರಾಮದಲ್ಲಿ ಕೈಮಗ್ಗ ಘಟಕ ಹಾಗೂ ತರಬೇತಿ ಕೇಂದ್ರವನ್ನು ತೆರೆಯುತ್ತಿದ್ದಾರೆ. ದಿಗಂಬರ್ ಜೈನ್ ಸಮುದಾಯ ಮತ್ತು ಸೆಂಟ್ರಲ್ ಜೈಲು ಸಹಯೋಗದೊಂದಿಗೆ ತಾನು ಕೈಮಗ್ಗ ತರಬೇತಿ ಪಡೆಯುವಂತಾಯಿತು ಎಂದು ಮಣಿರಾಂ ಸ್ಮರಿಸುತ್ತಾರೆ. 

ಜೈಲಿನಲ್ಲಿದ್ದುಕೊಂಡೇ ಅವರು 70,000 ರೂ. ಸಂಪಾದಿಸಿದ್ದಾಗಿ ಮಣಿರಾಂ ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲದೆ ಈಗ ಘತಕ ಶುರುಮಾಡಲು ಬ್ಯಾಂಕ್ ಸಾಲ ತೆಗೆಯಲು ಜೈಲು ಆಡಳಿತ ಮಂಡಳಿಯೇ ಸಹಕಾರ ನೀಡಿದೆ.

ಮಧ್ಯಪ್ರದೇಶ ಸೆಂಟ್ರಲ್ ಜೈಲ್ ಕೈದಿಗಳು ತಯಾರಿಸಿದ ವಸ್ತ್ರ ಮಾರಾಟದಿಂದ 40 ಲಕ್ಷ ಆದಾಯ ಗಳಿಸಿದೆ ಎನ್ನುವುದು ಗಮನಾರ್ಹ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಇಲ್ಲಿನ ವಸ್ತ್ರಗಳಿಗೆ ಬೇಡಿಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT