ಕೂತಿ ಎಂದರೆ ಹೊಡಿ ಸೀಟಿ: ಕೊಡಗಿನಲ್ಲೊಂದು ಮಾದರಿ ಆತ್ಮನಿರ್ಭರ್ ಗ್ರಾಮ

ಗ್ರಾಮ ಸಮಿತಿಯೇ ಪೊಲೀಸ್ ಠಾಣೆ, ನ್ಯಾಯಾಲಯ ಎಲ್ಲಾ. ಯಾರಾದರೂ ಸತ್ತರೆ ಪ್ರತಿ ಮನೆಯಿಂದ ಕಟ್ಟಿಗೆ. ಮೂಲಸೌಕರ್ಯ ಅಭಿವೃದ್ಧಿಗೆ ದೇಣಿಗೆ ಸಂಗ್ರಹ. ಸ್ಥಳೀಯರ ನಡುವೆ ಮದುವೆ ಸಂಬಂಧ ನಿಷಿದ್ಧ. ವೆಲ್ಕಂ ಟು ಕೂತಿ ಗ್ರಾಮ.
ಕೂತಿ ಗ್ರಾಮ
ಕೂತಿ ಗ್ರಾಮ

ಲೇಖನ: ಪ್ರಜ್ಞಾ ಜಿ. ಆರ್
ಅನುವಾದ: ಹರ್ಷವರ್ಧನ್ ಸುಳ್ಯ

ಮಡಿಕೇರಿ: ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದರು ಮಹಾತ್ಮಾ ಗಾಂಧಿ. ಅವರ ಮಾತುಗಳನ್ನೇ ಆದರ್ಶವಾಗಿಟ್ಟುಕೊಂಡು ಕೊಡಗಿನ ಕೂತಿ ಎನ್ನುವ ಗ್ರಾಮ ಪ್ರಜಾಪ್ರಭುತ್ವದ ಆಶಯವನ್ನು ಮೂಲವಾಗಿಟ್ಟುಕೊಂಡು ಸ್ವಾಡಳಿತವನ್ನು ನಡೆಸಿಕೊಂಡುಬರುತ್ತಿದೆ. 

ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತದ ಕನಸನ್ನು ಭಾರತೀಯರಲ್ಲಿ ಬಿತ್ತಿದರು. ಮೋದಿ ಕರೆ ನೀಡುವ ಮೊದಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಕೊಡಗಿನ ಗ್ರಾಮವೊಂದು ನೂರಕ್ಕೂ ಹೆಚ್ಚು ವರ್ಷಗಳಿಂದ ಸ್ವಾಡಳಿತ (ಸೆಲ್ಫ್ ಗವರ್ನೆನ್ಸ್) ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದೆ.  

ಸ್ವಾಡಳಿತವೇ ಅಭಿವೃದ್ಧಿ ಮಂತ್ರ
ಮಡಿಕೇರಿಯಿಂದ 53 ಕಿ.ಮೀ ದೂರದ ಕೂತಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಗ್ರಾಮ ಸಮಿತಿಯ ಕಟ್ಟಡ ಗೋಚರಿಸುತ್ತದೆ. ಗ್ರಾಮದಲ್ಲಿ ವೊಕ್ಕಲಿಗರು ಮತ್ತು ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಜೀವಿಸುತ್ತಿದ್ದಾರೆ. ಒಗ್ಗಟ್ಟೇ ನಮ್ಮ ಗ್ರಾಮದ ಶಕ್ತಿ ಎನ್ನುತ್ತಾರೆ ಕೂತಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಎಂ.ಡಿ ಮೋಹನ್. 

ಕೂತಿ ಗ್ರಾಮ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಅದರ ಹೊರತಾಗಿಯೂ ಕೂತಿ ಗ್ರಾಮ ತಮ್ಮದೇ ಗ್ರಾಮ ಸಮಿತಿಯನ್ನು ಹೊಂದಿದೆ. ಒಂದು ಶತಮಾನಕ್ಕೂ ಹಿಂದಿನಿಂದಲೂ ಕೂತಿಯಲ್ಲಿ ಸ್ವಾಡಳಿತ ನಡೆದುಕೊಂಡುಬಂದಿದೆ ಎನ್ನುವುದು ಅಚ್ಚರಿಯ ಸಂಗತಿಯೇ ಸರಿ. 

ಗ್ರಾಮ ಸಮಿತಿಯೇ ಸರ್ಕಾರ
ಗ್ರಾಮ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಮಿತಿಯ ಸದಸ್ಯರು ಆಯ್ಕೆ ಮಾಡುತ್ತಾರೆ. ಗ್ರಾಮ ಸಮಿತಿ ರಾಜಕೀಯ ಪಕ್ಷಗಳಿಂದ ಮುಕ್ತವಾಗಿದೆ. ಗ್ರಾಮದಲ್ಲಿ 160 ಮನೆಗಳಿದ್ದು, 600 ಜನಸಂಖ್ಯೆಯನ್ನು ಹೊಂದಿದೆ. ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಮಿತಿಯ ಸಭೆಗೆ ಪ್ರತಿ ಮನೆಯಿಂದ ಕನಿಷ್ಟ ಒಬ್ಬರು ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಗೈರಾದರೆ ಆ ಮನೆಯವರಿಗೆ ದಂಡ ವಿಧಿಸಲಾಗುವುದು. 

ಗ್ರಾಮದ ಮಂದಿ ಪೊಲೀಸರ ಬಳಿ ಹೋದ ನಿದರ್ಶನಗಳು ಬೆರಳೆಣಿಕೆಯಷ್ಟು. ಏನೇ ಸಮಸ್ಯೆಗಳು, ವ್ಯಾಜ್ಯೆಗಳು ಬಂದರೂ ಗ್ರಾಮ ಸಮಿತಿಯ ಗಮನಕ್ಕೆ ಮೊದಲು ತರುತ್ತಾರೆ.  ಕೌಟುಂಬಿಕ ಕಲಹವೇ ಇರಲಿ, ಅಸ್ತಿ ತಕರಾರೇ ಇರಲಿ  ಗ್ರಾಮ ಸಮಿತಿಯೇ ಇಲ್ಲಿನ ಜನರಿಗೆ ನ್ಯಾಯಾಲಯ, ಪೊಲೀಸ್ ಠಾಣೆ.  

ಸೋಮೇಶ್ವರ ಯುವಕ ಸಂಘದ ಕಾರ್ಯದರ್ಶಿ ಲಕ್ಷ್ಮಿಕಾಂತ, ಗ್ರಾಮ ಸಮಿತಿ ಸಲಹೆಗಾರ ಕೆ.ಟಿ.ಜೋಯಪ್ಪ ಮತ್ತು ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಎಂ.ಡಿ
ಸೋಮೇಶ್ವರ ಯುವಕ ಸಂಘದ ಕಾರ್ಯದರ್ಶಿ ಲಕ್ಷ್ಮಿಕಾಂತ, ಗ್ರಾಮ ಸಮಿತಿ ಸಲಹೆಗಾರ ಕೆ.ಟಿ.ಜೋಯಪ್ಪ ಮತ್ತು ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಎಂ.ಡಿ

ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ
ಗ್ರಾಮ ಸಮಿತಿಗೆ ದೂರು ಸಲ್ಲಿಸಿದ ನಂತರ ಸಭೆಯಲ್ಲಿ ದೂರಿನ ವಿಚಾರಣೆ ನಡೆಯುತ್ತದೆ. ಆಸ್ತಿ ಸಂಬಂಧಿಸಿದ ತಕರಾರು ಅದಲ್ಲಿ ಸಮಿತಿಯ ಸದಸ್ಯರು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ನಂತರ ವಿಚಾರಣೆ ನಡೆಸುತ್ತಾರೆ. ದೂರಿಗೆ ಸಂಬಂಧಿಸಿದ ದಾಖಲೆಗಲನ್ನು ಮೊದಲೇ ಸಮಿತಿಗೆ ನೀಡಬೇಕಾಗುತ್ತದೆ. ಕೇವಲ ಎರಡೇ ಸಭೆಯಲ್ಲಿ ತೀರ್ಪು ನೀಡಲಾಗುತ್ತದೆ ಎನ್ನುವುದು ಮೆಚ್ಚತಕ್ಕ ವಿಷಯ. 

ದಂಡ ಮತ್ತು ದೇಣಿಗೆ
ವಿಚಾರಣೆಯ ಎಲ್ಲಾ ವಿಚಾರಗಳನ್ನು ಲೆಡ್ಜರ್ ನಲ್ಲಿ ದಾಖಲು ಮಾಡಲಾಗುತ್ತದೆ. ಲೆಡ್ಜರನ್ನು ಪೊಲೀಸರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ. ಗ್ರಾಮ ಸಮಿತಿ ತಾನು ವಸೂಲಿ ಮಾಡಿದ ದಂಡವನ್ನು ಸಂಗ್ರಹಿಸಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಹೊಂದಿದೆ. ಸಂಗ್ರಹವಾದ ದಂಡ ಶುಲ್ಕವನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಲಾಗುತ್ತದೆ. 

ಸಮುದಾಯ ಭವನ ನಿರ್ಮಾಣ
ಎರಡು ವರ್ಷಗಳ ಹಿಂದೆ ಹಳ್ಳಿಗೆ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ನಿಶ್ಚಯವಾಗಿತ್ತು. ಆಗ ಹಣದ ಕೊರತೆ ಬಂದಾಗ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ಪ್ರತಿ ಮನೆಯವರು 17,000 ರೂ. ಹಾಕಿದ್ದರಿಂದ ಸಮುದಾಯ ಭವನ ಕೂತಿ ಗ್ರಾಮದಲ್ಲಿ ತಲೆಯೆತ್ತಿ ನಿಂತಿದೆ. ಹೀಗಾಗಿ ಹಳ್ಳಿಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಇಲ್ಲಿನ ಜನರು ಯಾರ ಮೇಲೂ ಅವಲಂಬಿತರಾಗಲು ಇಚ್ಛಿಸದೆ ಗ್ರಾಮ ಸಮಿತಿಯ ಮೂಲಕ ತಮ್ಮ ಬೇಡಿಕೆಗಳನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. 

ಸ್ಥಳೀಯರನ್ನು ಮದುವೆಯಾಗುವುದು ನಿಷಿದ್ಧ
ಈ ಗ್ರಾಮದ ಇನ್ನೊಂದು ವೈಶಿಷ್ಟ್ಯವೆಂದರೆ. ಇಲ್ಲಿ ಯಾರೂ ಅದೇ ಗ್ರಾಮದವರನ್ನು ಮದುವೆಯಾಗುವಂತಿಲ್ಲ. ಗ್ರಾಮಸ್ಥರು ಎಲ್ಲರೂ ಸಹೋದರ ಸಹೋದರಿಯರಂತೆ ಬಾಳ್ವೆ ನಡೆಸುತ್ತಿದ್ದೇವೆ. ತಲೆ ತಲಾಂತರಗಳಿಂದಲೂ ರಕ್ತ ಸಂಬಂಧಿಗಳಂತೆ ಜೀವನ ನಡೆಸುತ್ತಿರುವುದರಿಂದ ಇಲ್ಲಿನವರೇ ಒಬ್ಬರನ್ನೊಬ್ಬರು ವಿವಾಹವಾಗುವುದು ನಿಷಿದ್ಧ. ಒಂದು ವೇಳೆ ಆ ನಿಯಮ ಮೀರಿದಲ್ಲಿ ದಂಡ ವಿಧಿಸಲಾಗುತ್ತದೆ. 

ಹೆಣ ಸುಡಲು ಪ್ರತಿ ಮನೆಯಿಂದ ಕಟ್ಟಿಗೆ
ಯಾರಾದರೂ ನಿಧನರಾದಾಗ ಅಂತ್ಯಸಂಸ್ಕಾರದ ಖರ್ಚನ್ನು ಇಡೀ ಗ್ರಾಮವೇ ಭರಿಸುತ್ತದೆ. ಪ್ರತಿ ಮನೆಯಿಂದ ಒಂದೊಂದು ಸೌದೆಯನ್ನು ನೀಡಲಾಗುತ್ತದೆ. ಹೀಗೆ ಅಂತ್ಯಸಂಸ್ಕಾರದಲ್ಲಿ ಇಡೀ ಗ್ರಾಮವೇ ಪಾಲ್ಗೊಳ್ಳುತ್ತದೆ. ದುಃಖತಪ್ತರ ಕುಟುಂಬಕ್ಕೆ ಇಡೀ ಗ್ರಾಮಸ್ಥರೇ ಸಾಂತ್ವನ ಹೇಳುತ್ತಾರೆ. ನೋವು ಹಂಚಿಕೊಳ್ಳಲು ಹೆಗಲೊಂದಿದ್ದಲ್ಲಿ ಬೆಟ್ಟದಂಥಾ ಕಷ್ಟ ಬಂದರೂ ಮೀರುತ್ತೇವೆ ಎನ್ನುವಷ್ಟು ಶಕ್ತಿ ಬರುತ್ತದೆ. ಈ ಮಾತಿಗೆ ಸಾಕ್ಷಿಯಾಗಿದೆ ಕೂತಿ ಗ್ರಾಮ. ಇಂದಿನ ಆಧುನಿಕ ಜೀವನದ ಭರಾಟೆಯಲ್ಲೂ ಭಾರತೀಯ ಮೌಲ್ಯಗಳನ್ನು ಕಾಪಾಡಿಕೊಂಡು ಮೂಲಸೌಕರ್ಯಗಳ ಕೊರತೆಗೆ ಅಧಿಕಾರಿಗಳನ್ನೇ ದೂಷಿಸದೆ ಸಾಂಘಿಕ ಪ್ರಯತ್ನದಿಂದ ಜೀವನ ಸಾಗಿಸುತ್ತಿರುವ ಮಾದರಿ ಗ್ರಾಮ ಕೂತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com