ಶ್ರೇಯಾ 
ವಿಶೇಷ

ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ಶ್ರೇಯಾ: NDA ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಿವಮೊಗ್ಗ ಯುವತಿ..!

ಬಾಲ್ಯದಿಂದಲೇ ದೇಶಸೇವೆ ಮಾಡುವ ಹಂಬಲ ಹೊಂದಿದ್ದ ಶ್ರೇಯಾ ಅವರ ಕನಸಿಗೆ ದಾರಿದೀಪವಾಗಿದ್ದು 2021ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು. 8ನೇ ತರಗತಿಯಲ್ಲಿದ್ದಾಗ ಮಹಿಳೆಯರಿಗೂ NDA ಪ್ರವೇಶಕ್ಕೆ ಅವಕಾಶ ನೀಡಿದ ಆದೇಶ ಹೊರಬಿದ್ದಾಗ, ಇವರು ಸೇನೆ ಸೇರುವ ದೃಢ ಸಂಕಲ್ಪ ಮಾಡಿದರು.

ಶಿವಮೊಗ್ಗ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ 19 ವರ್ಷದ ಯುವತಿ ಶ್ರೇಯಾ ಎನ್. ಗೌಡ, ದೇಶದ ಪ್ರತಿಷ್ಠಿತ 2026ರ ಯುಪಿಎಸ್‌ಸಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆ (ಎನ್‌ಡಿಎ-1)ಯಲ್ಲಿ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವಿಶೇಷವೆಂದರೆ, ಶ್ರೇಯಾ ತಮ್ಮ ಮೊದಲ ಪ್ರಯತ್ನದಲ್ಲೇ ಈ ಅಪ್ರತಿಮ ಸಾಧನೆ ಗೈದಿದ್ದಾರೆ.

ಭದ್ರಾವತಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿ ತಾಲ್ಲೂಕಿಗೆ ಟಾಪರ್ ಆಗಿದ್ದ ಶ್ರೇಯಾ, ನಂತರ ಬೆಂಗಳೂರಿನ ಬೇಸ್ (BASE) ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದರು. ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಎನ್ಐಟಿಕೆ (NITK), ಸೂರತ್ಕಲ್‌ನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಇವರು, ಈಗ ದೇಶಸೇವೆಯ ಬೃಹತ್ ಕನಸಿಗಾಗಿ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ತೊರೆದು ಎನ್‌ಡಿಎ ಸೇರಲಿದ್ದಾರೆ.

ಬಾಲ್ಯದಿಂದಲೇ ದೇಶಸೇವೆ ಮಾಡುವ ಹಂಬಲ ಹೊಂದಿದ್ದ ಶ್ರೇಯಾ ಅವರ ಕನಸಿಗೆ ದಾರಿದೀಪವಾಗಿದ್ದು 2021ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು. 8ನೇ ತರಗತಿಯಲ್ಲಿದ್ದಾಗ ಮಹಿಳೆಯರಿಗೂ NDA ಪ್ರವೇಶಕ್ಕೆ ಅವಕಾಶ ನೀಡಿದ ಆದೇಶ ಹೊರಬಿದ್ದಾಗ, ಇವರು ಸೇನೆ ಸೇರುವ ದೃಢ ಸಂಕಲ್ಪ ಮಾಡಿದರು.

ತಕ್ಷಣವೇ ಕಠಿಣ ಪರೀಕ್ಷಾ ಸಿದ್ಧತೆಯಲ್ಲಿ ತೊಡಗುವ ಬದಲು ಶ್ರೇಯಾ ತನ್ನ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿದಳು. ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ, ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಳು.

ಓದಿನಲ್ಲೂ ಮುಂಚೂಣಿಯಲ್ಲಿದ್ದ ಆಕೆ, ಹತ್ತನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಲ್ಲದೆ, ತಾಲ್ಲೂಕಿಗೂ ಮೊದಲಿಗಳಾಗಿದ್ದಳು. ಕಾರೇಹಳ್ಳಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ ಆಕೆ ವಿದ್ಯಾಭ್ಯಾಸ ಮಾಡಿದ್ದಳು.

ನಂತರ ಬೆಂಗಳೂರಿಗೆ ತೆರಳಿ ಬೇಸ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಶ್ರೇಯಾ, ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಗೂ ಸಿದ್ಧತೆ ನಡೆಸಿದಳು. ಗಣಿತ ಮತ್ತು ವಿಜ್ಞಾನ ವಿಷಯಗಳ ಮೇಲೆ ಹೆಚ್ಚಿನ ಗಮನ ಹರಿಸಿ ಎರಡು ವರ್ಷ ನಡೆಸಿದ ಕಠಿಣ ಅಭ್ಯಾಸ ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಸಾಕಷ್ಟು ನೆರವಾಯಿತು. ಜೆಇಇ ಪರೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಲಿಖಿತ ಪರೀಕ್ಷೆ ಸುಲಭವೆನಿಸಿತು.

ಆದರೆ, ಐದು ದಿನಗಳ ಸೇವಾ ಆಯ್ಕೆ ಮಂಡಳಿ (ಎಸ್‌ಎಸ್‌ಬಿ) ಸಂದರ್ಶನ ಹೆಚ್ಚು ಸವಾಲಿನಿಂದ ಕೂಡಿತ್ತು. ಇದಕ್ಕಾಗಿ ಪ್ರತಿದಿನ ಓಟದ ಅಭ್ಯಾಸ, ದಿನಪತ್ರಿಕೆಗಳ ಓದು, ಜಾಗತಿಕ ರಾಜಕೀಯ ಬೆಳವಣಿಗೆಗಳ ಗಮನ ಮತ್ತು ನಾಗಪುರದಲ್ಲಿ 14 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಿದ್ಧತೆ ಮಾಡಿಕೊಂಡಿದ್ದರು.

ಲಿಖಿತ ಪರೀಕ್ಷೆಯ ಬಗ್ಗೆ ನನಗೆ ವಿಶ್ವಾಸವಿತ್ತು. ಆದರೆ, ಎಸ್‌ಎಸ್‌ಬಿ ಸಂಪೂರ್ಣ ಭಿನ್ನವಾಗಿತ್ತು. ಅದು ವ್ಯಕ್ತಿತ್ವ, ನಾಯಕತ್ವ ಗುಣ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ತಂಡವಾಗಿ ಕೆಲಸ ಮಾಡುವ ಕೌಶಲ್ಯವನ್ನು ಪರೀಕ್ಷಿಸುತ್ತದೆ ಎಂದು ಶ್ರೇಯಾ ಅವರು ಹೇಳಿದ್ದಾರೆ.

ನನ್ನ ತಂದೆ ನಾಗೇಂದ್ರ ಜೆ., ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ (ವಿಐಎಸ್‌ಎಲ್) ಕೆಲಸ ಮಾಡುತ್ತಿದ್ದು. ತಾಯಿ ಆಶಾ ಬಿ.ಎಂ. ಉಪನ್ಯಾಸಕಿಯಾಗಿದ್ದಾರೆ. ನನ್ನ ಈ ಸಾಧನೆಯ ಹಿಂದೆ ತಂದೆ, ತಾಯಿ ಮತ್ತು ಸೋದರ ಸಂಬಂಧಿಗಳ ನಿರಂತರ ಪ್ರೋತ್ಸಾಹವಿದೆ ಎಂದು ತಿಳಿಸಿದ್ದಾರೆ.

ಅಂಕಗಳ ವಿಚಾರವಾಗಲಿ, ವೃತ್ತಿ ಆಯ್ಕೆಯ ವಿಚಾರವಾಗಲಿ ತಂದೆ ಎಂದಿಗೂ ಒತ್ತಡ ಹೇರಿರಲಿಲ್ಲ. ತನಗೆ ಸಂತೋಷ ನೀಡುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯುವಂತೆ ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ಶ್ರೇಯಾ ಸ್ಮರಿಸಿದ್ದಾರೆ.

ಪ್ರಸ್ತುತ ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್‌ಐಟಿಕೆ) ವ್ಯಾಸಂಗ ಮಾಡುತ್ತಿರುವ ಶ್ರೇಯಾ, ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಪುಣೆಯ ಖಡಕ್‌ವಾಸ್ಲಾದಲ್ಲಿರುವ ಎನ್‌ಡಿಎಗೆ ಸೇರಲು ನಿರ್ಧರಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿರುವ ಆಕೆಗೆ ರಕ್ಷಣಾ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯಿದೆ.

ಯುವತಿಯರಿಗೆ ತಮ್ಮ ಮಹತ್ವಾಕಾಂಕ್ಷೆಗಳ ಬಗ್ಗೆ ಸ್ಪಷ್ಟತೆ ಇರಬೇಕು ಮತ್ತು ಅವುಗಳನ್ನು ಕುಟುಂಬದವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು.

ನಿಮಗೆ ಏನಾದರೂ ಮಾಡಬೇಕೆಂಬ ಆಸೆಯಿದೆ ಎಂಬುದನ್ನು ಜಗತ್ತಿಗೆ ಹೇಳುವ ಧೈರ್ಯ ತೋರಿಸಿ. ನಿಮ್ಮ ಗುರಿಗಳಿಗೆ ಆದ್ಯತೆ ನೀಡಿ. ಅಗತ್ಯವಿದ್ದರೆ, ಅವುಗಳನ್ನು ಸಾಧಿಸಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ ಎಂದು ಶ್ರೇಯಾ ಅವರು ಸಲಹೆ ನೀಡಿದ್ದಾಳೆ.

ಶ್ರೇಯಾ ಬಾಲ್ಯದಿಂದಲೂ ಓದಿನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಳು. ಸೇನೆಯಲ್ಲಿ ಸೇರುವುದು ಆಕೆಯ ಬಹುದಿನಗಳ ಕನಸಾಗಿತ್ತು. ಹೆಣ್ಣುಮಕ್ಕಳಿಗೂ ಎನ್‌ಡಿಎ ಪ್ರವೇಶದ ಅವಕಾಶ ದೊರೆತ ಬಳಿಕ ಆಕೆಯ ಸಂಪೂರ್ಣ ಗಮನ ಅಕಾಡೆಮಿಗೆ ಸೇರುವುದರ ಮೇಲಿತ್ತು. ಇದೀಗ ತಾನು ಅಂದುಕೊಂಡಿದ್ದ ಗುರಿಯನ್ನು ಸಾಧಿಸಿದ್ದಾಳೆ ಎಂದು ಶ್ರೇಯಾ ಅವರ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೇಯಾ, ಆಕೆಯ ಪೋಷಕರು ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಬಾಲ್ಯದಿಂದಲೂ ಸಶಸ್ತ್ರ ಪಡೆಗಳಿಗೆ ಸೇರಿ ದೇಶಸೇವೆ ಮಾಡಬೇಕೆಂಬ ಕನಸು ಕಂಡಿದ್ದ ಶ್ರೇಯಾ, ತನ್ನ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಈ ಸಾಧನೆ ಮಾಡಿರುವುದು ಸಂತಸದ ಸಂಗತಿ. ಆಕೆ ತನ್ನ ಕುಟುಂಬ ಮಾತ್ರವಲ್ಲದೆ ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾಳೆ. ತನ್ನ ಕನಸನ್ನು ನನಸಾಗಿಸುವ ಮುಂದಿನ ಹಾದಿಯಲ್ಲಿ ಆಕೆಗೆ ಶುಭವಾಗಲಿ” ಎಂದು ಡಿ.ಕೆ. ಶಿವಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಳ್ಳಿ ಗುಗ್ಗು v/s ಬಲಿತ ದಲಿತ ಸಮರ: ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ದೇಶಾದ್ಯಂತ ದೀಪಾವಳಿ ಸಂಭ್ರಮ: ದೀಪಾಲಂಕಾರದಿಂದ ಕಂಗೊಳಿಸಿದ ದೇವಾಲಯ, ಸ್ಮಾರಕಗಳು; ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ ಭಕ್ತರು

ಜಪಾನ್‌ನಲ್ಲಿ ಪ್ರಬಲ ಭೂಕಂಪ: 5.7 ತೀವ್ರತೆಯ ಕಂಪನಕ್ಕೆ ಜನಜೀವನ ಅಸ್ತವ್ಯಸ್ತ; 22 ಮಂದಿಗೆ ಗಾಯ, ಮುಂದಿನ 2-3 ದಿನಗಳಲ್ಲಿ ಪ್ರಬಲ ಕಂಪನ ಸಾಧ್ಯತೆ..!

BJP ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಗೆಲುವು: ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಹೈಕೋರ್ಟ್..!

ಹೈಜಾಕ್ ಬೆದರಿಕೆ: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಮರಳಿದ ಇಂಡಿಗೋ ವಿಮಾನ..!