Delimitation ನಂತರ ರಾಜ್ಯದ ರಾಜಕೀಯ ನಕ್ಷೆಯೇ ಬದಲು; ಬೆಂಗಳೂರಿಗೆ ಸಿಗಲಿದೆ ಸೂಪರ್ ಪವರ್! ನಿಮ್ಮ ಜಿಲ್ಲೆಗೆ ಎಷ್ಟು ಲಾಭ? ಇಲ್ಲಿದೆ ಕರ್ನಾಟಕದ ಸಂಪೂರ್ಣ ಲೆಕ್ಕಾಚಾರ
ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಜಾರಿಯಾದರೆ, ಕರ್ನಾಟಕದ ವಿಧಾನಸಭಾ ಸ್ಥಾನಗಳ ಸಂಖ್ಯೆ 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾದ್ರೆ, ಯಾವ ಜಿಲ್ಲೆಗೆ ಎಷ್ಟು ಸೀಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದಂತಹ ಅತಿದೊಡ್ಡ ಮತ್ತು ಐತಿಹಾಸಿಕ ಬದಲಾವಣೆಗೆ ವೇದಿಕೆ ಸಜ್ಜಾಗುತ್ತಿದೆ. ದಶಕಗಳಿಂದ ಸ್ಥಿರವಾಗಿದ್ದ ರಾಜ್ಯದ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಭೌಗೋಳಿಕ ಗಡಿಗಳು ಹಾಗೂ ಅಧಿಕಾರದ ಸಮೀಕರಣಗಳು ಸಂಪೂರ್ಣವಾಗಿ ಬದಲಾಗುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆ ಹಾಗೂ ಮಹಿಳಾ ಮೀಸಲಾತಿ ಕಾಯ್ದೆ ಜಾರಿಯಾದರೆ, ಕರ್ನಾಟಕದ ರಾಜಕೀಯ ನಕ್ಷೆಯೇ ಹೊಸ ರೂಪ ಪಡೆದುಕೊಳ್ಳಲಿದೆ. ಈ ಮಹತ್ವದ ಬದಲಾವಣೆಯಿಂದ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಬರೋಬ್ಬರಿ 336ಕ್ಕೆ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ಕ್ಕೆ ಜಿಗಿಯಲಿದೆ. ಇದರಿಂದ ವಿಧಾನಸೌಧದ ಗದ್ದುಗೆ ಏರಲು ಬೇಕಾದ 'ಮ್ಯಾಜಿಕ್ ನಂಬರ್' ಕೂಡ 113 ರಿಂದ 169ಕ್ಕೆ ಏರಿಕೆಯಾಗಲಿದ್ದು, ರಾಜಕೀಯ ಪಕ್ಷಗಳ ಗೆಲುವಿನ ತಂತ್ರಗಾರಿಕೆಯೇ ಬದಲಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಯಾಗುವುದರಿಂದ ವಿಧಾನಸಭೆಯಲ್ಲಿ 112 ಮತ್ತು ಲೋಕಸಭೆಯಲ್ಲಿ 14 ಸ್ಥಾನಗಳು ಮಹಿಳಾ ಜನಪ್ರತಿನಿಧಿಗಳಿಗೆ ಮೀಸಲಾಗಲಿದ್ದು, ರಾಜ್ಯ ರಾಜಕಾರಣದಲ್ಲಿ ಮಹಿಳೆಯರ ಶಕ್ತಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.
ಮತ್ತೊಂದೆಡೆ, ಈ ಪುನರ್‌ವಿಂಗಡಣೆಯು ರಾಜ್ಯ ರಾಜಧಾನಿ ಬೆಂಗಳೂರನ್ನು ರಾಜ್ಯ ರಾಜಕಾರಣದ 'ಸೂಪರ್ ಪವರ್' ಆಗಿ ಪರಿವರ್ತಿಸಲಿದೆ. ರಾಜ್ಯದಲ್ಲಿ ಸೃಷ್ಟಿಯಾಗಲಿರುವ ಒಟ್ಟು 112 ಹೊಸ ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 25 ಕ್ಷೇತ್ರಗಳು ಬೆಂಗಳೂರು ನಗರವೊಂದರಲ್ಲೇ ರಚನೆಯಾಗಲಿದ್ದು, ನಗರದ ಒಟ್ಟು ಕ್ಷೇತ್ರಗಳ ಸಂಖ್ಯೆ 28 ರಿಂದ 53ಕ್ಕೆ ಏರಲಿದೆ. ಇದರಿಂದ ಗ್ರಾಮೀಣ ಮತಬ್ಯಾಂಕ್‌ನ್ನೇ ನೆಚ್ಚಿಕೊಂಡಿದ್ದ ಪ್ರಮುಖ ರಾಜಕೀಯ ಪಕ್ಷಗಳು ಇನ್ನು ಮುಂದೆ ನಗರ ಮತದಾರರ ಮನಗೆಲ್ಲಲು ಹೊಸ ರಣನೀತಿ ರೂಪಿಸುವುದು ಅನಿವಾರ್ಯವಾಗಲಿದೆ. 2011ರ ಅಧಿಕೃತ ಜನಗಣತಿ ಆಧಾರದ ಮೇಲೆ ಸಿದ್ಧಪಡಿಸಲಾದ ಸಂಭಾವ್ಯ ಲೆಕ್ಕಾಚಾರದ ಪ್ರಕಾರ, ನಿಮ್ಮ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಗಳು ಹೆಚ್ಚಾಗಲಿವೆ? ಯಾವೆಲ್ಲಾ ಲೋಕಸಭಾ ಕ್ಷೇತ್ರಗಳು ಇಬ್ಭಾಗವಾಗಲಿವೆ? ಮತ್ತು ಇದರ ಸಂಪೂರ್ಣ ರಾಜಕೀಯ ಲೆಕ್ಕಾಚಾರ ಏನು ಎಂಬುದರ ಸಮಗ್ರ ವರದಿ ಇಲ್ಲಿದೆ...
ಡಿಲಿಮಿಟೇಶನ್‌ನ ಪ್ರಮುಖ ಅಂಕಿ-ಅಂಶಗಳು:
ವಿಧಾನಸಭಾ ಕ್ಷೇತ್ರಗಳು:
ಪ್ರಸ್ತುತ ಇರುವ 224 ಸ್ಥಾನಗಳಿಂದ 336 ಸ್ಥಾನಗಳಿಗೆ ಏರಿಕೆಯಾಗಲಿದೆ (ಒಟ್ಟು +112 ಹೊಸ ಸ್ಥಾನಗಳು ಅಂದರೆ ಶೇ. 50ರಷ್ಟು ಹೆಚ್ಚಳ).
ಲೋಕಸಭಾ ಕ್ಷೇತ್ರಗಳು:
ಪ್ರಸ್ತುತ ಇರುವ 28 ಸ್ಥಾನಗಳಿಂದ 42 ಸ್ಥಾನಗಳಿಗೆ ಏರಿಕೆಯಾಗಲಿದೆ (ಒಟ್ಟು +14 ಹೊಸ ಸ್ಥಾನಗಳು ಅಂದರೆ ಶೇ. 50ರಷ್ಟು ಹೆಚ್ಚಳ).
ಸರ್ಕಾರ ರಚನೆಯ ಮ್ಯಾಜಿಕ್ ನಂಬರ್:
ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಸ್ಥಾನಗಳ ಸಂಖ್ಯೆ 113 ರಿಂದ 169ಕ್ಕೆ ಜಿಗಿಯಲಿದೆ (+56 ಹೆಚ್ಚುವರಿ ಸ್ಥಾನಗಳ ಅಗತ್ಯ).
ಮಹಿಳಾ ಮೀಸಲಾತಿ (ಶೇ. 33):
ವಿಧಾನಸಭೆಯಲ್ಲಿ 112 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ.
ಲೋಕಸಭೆಯಲ್ಲಿ 14 ಸ್ಥಾನಗಳು ಮಹಿಳಾ ಸಂಸದರಿಗೆ ದಕ್ಕಲಿವೆ.
ಎಸ್ಸಿ/ಎಸ್ಟಿ (SC/ST) ಮೀಸಲಾತಿ:
ಜನಸಂಖ್ಯಾ ಅನುಪಾತಕ್ಕೆ ಅನುಗುಣವಾಗಿ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರಗಳು 5 ರಿಂದ 7ಕ್ಕೆ ಮತ್ತು ಪರಿಶಿಷ್ಟ ಪಂಗಡದ (ST) ಮೀಸಲು ಕ್ಷೇತ್ರಗಳು 2 ರಿಂದ 3ಕ್ಕೆ ಏರಿಕೆಯಾಗಲಿವೆ.
ಜನಪ್ರತಿನಿಧಿಗಳ ಸರಾಸರಿ ಪ್ರಾತಿನಿಧ್ಯ:
2011ರ ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 6,10,95,297 (ಸುಮಾರು 6.11 ಕೋಟಿ) ಇದೆ.
ಶಾಸಕರು: ಪ್ರಸ್ತುತ ಒಬ್ಬ ಶಾಸಕ ಸರಾಸರಿ 2.72 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದು, ಪುನರ್ವಿಂಗಡಣೆ ನಂತರ ಇದು 1.81 ಲಕ್ಷ ಜನರಿಗೆ ಇಳಿಕೆಯಾಗಲಿದೆ.
ಸಂಸದರು: ಪ್ರಸ್ತುತ ಒಂದು ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 21.82 ಲಕ್ಷ ಜನಸಂಖ್ಯೆ ಇದ್ದು, ಹೊಸ ವ್ಯವಸ್ಥೆಯಲ್ಲಿ 14.55 ಲಕ್ಷಕ್ಕೆ ಇಳಿಕೆಯಾಗಲಿದೆ.
28 ರಿಂದ 42ಕ್ಕೆ ಏರಲಿದೆ ರಾಜ್ಯದ ಲೋಕಸಭಾ ಸೀಟು
2011ರ ಜನಗಣತಿಯ (6,10,95,297 ಜನಸಂಖ್ಯೆ) ಆಧಾರದ ಮೇಲೆ ಕರ್ನಾಟಕದ ಲೋಕಸಭಾ ಸ್ಥಾನಗಳನ್ನು 28 ರಿಂದ 42 ಕ್ಕೆ ಹೆಚ್ಚಿಸಿದರೆ, ಒಂದು ಕ್ಷೇತ್ರದ ಸರಾಸರಿ ಜನಸಂಖ್ಯೆ 14.55 ಲಕ್ಷ ಆಗಲಿದ್ದು, ರಾಜ್ಯಕ್ಕೆ ಒಟ್ಟು 14 ಹೊಸ ಲೋಕಸಭಾ ಕ್ಷೇತ್ರಗಳು ಸೇರ್ಪಡೆಯಾಗಲಿವೆ.
ಪ್ರದೇಶವಾರು ಸ್ಥಾನಗಳ ಹಂಚಿಕೆ: ಎಲ್ಲಿ ಎಷ್ಟು ಹೆಚ್ಚಳ?
ಬೆಂಗಳೂರು ಪ್ರದೇಶ
ಡಿಲಿಮಿಟೇಶನ್ ನಂತರ ಅತಿ ಹೆಚ್ಚು ಲಾಭ ಸಿಗೋದು ರಾಜ್ಯದಲ್ಲಿ ಬೆಂಗಳೂರಿಗೇನೆ.! ಹೌದು, 1,29,48,000 ಜನಸಂಖ್ಯೆಯೊಂದಿಗೆ ಹಾಲಿ ಇರುವ ಬೆಂ. ನಗರ (3), ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಒಟ್ಟು 5 ಸ್ಥಾನಗಳು 9ಕ್ಕೆ ಏರಲಿವೆ ಅಂದರೆ 4 ಹೆಚ್ಚುವರಿ ಸ್ಥಾನಗಳು ಸಿಗಲಿವೆ. ಅದರಂತೆ, ಬೆಂಗಳೂರು ಉತ್ತರ ವಿಭಜನೆಯಾಗಿ ಬೆಂಗಳೂರು ಪೂರ್ವ / ಮಹದೇವಪುರ ಹೊಸ ಕ್ಷೇತ್ರವಾಗಬಹುದು. ಜೊತೆಗೆ ಬೆಂಗಳೂರು ದಕ್ಷಿಣ ವಿಭಜನೆಯಾಗಿ ಬೆಂಗಳೂರು ದಕ್ಷಿಣ-ಪೂರ್ವ / ಬೊಮ್ಮನಹಳ್ಳಿ ರಚನೆಯಾಗಬಹುದು. ಹಾಗೂ ಬೆಂಗಳೂರು ಕೇಂದ್ರ ವಿಭಜನೆಯಾಗಿ ಬೆಂಗಳೂರು ಕೇಂದ್ರ / ಶಿವಾಜಿನಗರ-ಪುಲಕೇಶಿನಗರ ಆಗಬಹುದು. ಇದರೊಂದಿಗೆ ಬೆಂಗಳೂರು ಗ್ರಾಮಾಂತರ (ರಾಮನಗರ ಸೇರಿ) ವಿಭಜನೆಯಾಗಿ ರಾಮನಗರ / ಕನಕಪುರ ಹೊಸ ಕ್ಷೇತ್ರವಾಗಬಹುದು. ಅದರಲ್ಲೂ, ಬೆಂಗಳೂರು ನಗರ ಜಿಲ್ಲೆ ಸ್ಥಾನವು ತನ್ನ ಜನಸಂಖ್ಯೆ (96,21,551) ಆಧಾರದ ಮೇಲೆ 6.61 ಕೋಟಾ ಸಿಗಲಿದ್ದು, ಹಾಲಿ 3 ಸ್ಥಾನಗಳಿಂದ 7 ಸ್ಥಾನಗಳಿಗೆ ಏರಿಕೆಯಾಗಲಿದೆ.
ವಿಜಯಪುರ ಪ್ರದೇಶ
ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ 85,74,000 ಜನಸಂಖ್ಯೆಯೊಂದಿಗೆ ಹಾಲಿ ಇರುವ 4 ಸ್ಥಾನಗಳು 6ಕ್ಕೆ ಏರಲಿವೆ. ಅಂದರೆ 2 ಹೆಚ್ಚುವರಿ ಸ್ಥಾನಗಳು ಸಿಗಲಿವೆ. ಅದರಂತೆ ಬಾಗಲಕೋಟೆ ಹಾಗೂ ಹಾವೇರಿಯಿಂದ ಗದಗ ಪ್ರತ್ಯೇಕ ಕ್ಷೇತ್ರವಾಗುವುದರೊಂದಿಗೆ ಎಲ್ಲಾ 3 ಜಿಲ್ಲೆಗಳಿಗೂ ತಲಾ ಒಂದು. ಇದರೊಂದಿಗೆ, ವಿಜಯಪುರ ಜಿಲ್ಲೆಗೆ ಸಿಂದಗಿ / ಇಂಡಿ ಅಥವಾ ಧಾರವಾಡ ಜಿಲ್ಲೆಗೆ ಹುಬ್ಬಳಿ ಎಂದು ಯಾವುದಾದರೂ ಒಂದು ಹೊಸ ಕ್ಷೇತ್ರವು ಸೇರ್ಪಡೆಯಾಗಬಹುದು.
ಕಲಬುರಗಿ ಪ್ರದೇಶ
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳು 73,71,000 ಜನಸಂಖ್ಯೆಯೊಂದಿಗೆ ಹಾಲಿ 3 ಸ್ಥಾನಗಳನ್ನ ಹೊಂದಿದೆ. ಇದು 5ಕ್ಕೆ ಏರಲಿವೆ, ಅಂದ್ರೆ 2 ಹೆಚ್ಚುವರಿ. ಅರ್ಥಾತ್, ಕಲಬುರಗಿ ವಿಭಜನೆಯಾಗಿ ಕಲಬುರಗಿ ಗ್ರಾಮಾಂತರ / ಜೇವರ್ಗಿ ರಚನೆಯಾಗಬಹುದು ಹಾಗೂ ರಾಯಚೂರು ವಿಭಜನೆಯಾಗಿ ಯಾದಗಿರಿ ಪ್ರತ್ಯೇಕ ಕ್ಷೇತ್ರವಾಗಬಹುದು.
ಬಳ್ಳಾರಿ ಪ್ರದೇಶ
ಬಳ್ಳಾರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು 74,45,000 ಜನಸಂಖ್ಯೆಯೊಂದಿಗೆ ಹಾಲಿ 4 ಸ್ಥಾನಗಳನ್ನ ಹೊಂದಿದ್ದು, ಇದು 5ಕ್ಕೆ ಏರಿಕೆ ಆಗಬಹುದು. ಅಂದರೆ 1 ಸ್ಥಾನ ಹೆಚ್ಚಾಗಬಹುದು. ಇದರ ಪ್ರಕಾರ ಬಳ್ಳಾರಿ ಜಿಲ್ಲೆಯೇ ವಿಭಜನೆಯಾಗಿ ವಿಜಯನಗರ / ಹೊಸಪೇಟೆ ಕ್ಷೇತ್ರ ಬರಬಹುದು.
ತುಮಕೂರು ಪ್ರದೇಶ
ತುಮಕೂರು, ಕೋಲಾರ, ಹಾಸನ ಜಿಲ್ಲೆಗಳು 59,91,802 ಜನಸಂಖ್ಯೆಯೊಂದಿಗೆ ಹಾಲಿ ಇರುವ 3 ಸ್ಥಾನಗಳನ್ನ ಹೊಂದಿದ್ದು, ಇದು 4ಕ್ಕೆ ಏರಿಕೆ ಆಗಬಹುದು. ಅಂದರೆ 1 ಸ್ಥಾನ ಹೆಚ್ಚಾಗಬಹುದು. ಅದರಂತೆ, ತುಮಕೂರು ಜಿಲ್ಲೆಯೇ ವಿಭಜನೆಯಾಗಿ ತುಮಕೂರು ಗ್ರಾಮಾಂತರ / ಮಧುಗಿರಿ ಆಗಬಹುದು.
ಮೈಸೂರು ಪ್ರದೇಶ
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳು 63,80,000 ಜನಸಂಖ್ಯೆಯೊಂದಿಗೆ ಹಾಲಿ 3 ಸ್ಥಾನಗಳನ್ನ ಹೊಂದಿದ್ದು, ಇದು 5ಕ್ಕೆ ಏರಿಕೆ ಆಗಬಹುದು. ಅಂದರೆ 2 ಸ್ಥಾನ ಹೆಚ್ಚಾಗಬಹುದು. ಅದರಂತೆ, ಮೈಸೂರು ವಿಭಜನೆಯಾಗಿ ಮೈಸೂರು ನಗರ, ಮೈಸೂರು ಗ್ರಾಮಾಂತರ / ನಂಜನಗೂಡು, ಕೊಡಗು / ಹುಣಸೂರು ಆಗಬಹುದು.
ಕರಾವಳಿ + ಮಲೆನಾಡು ಪ್ರದೇಶ
ದ.ಕನ್ನಡ, ಉಡುಪಿ, ಉ.ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು 77,42,000 ಜನಸಂಖ್ಯೆಯೊಂದಿಗೆ ಹಾಲಿ ಇರುವ 4 ಸ್ಥಾನಗಳನ್ನ ಹೊಂದಿದ್ದು, ಇದು 5ಕ್ಕೆ ಏರಿಕೆ ಆಗಬಹುದು. ಅಂದರೆ 1 ಸ್ಥಾನ ಹೆಚ್ಚಾಗಬಹುದು. ಅದರಂತೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ವಿಭಜನೆಯಾಗಿ ಚಿಕ್ಕಮಗಳೂರು ಪ್ರತ್ಯೇಕ ಹಾಗೂ ಉಡುಪಿ ಪ್ರತ್ಯೇಕ ಕ್ಷೇತ್ರಗಳಾಗಬಹುದು.
ಬೆಳಗಾವಿ ಜಿಲ್ಲೆ
47,79,661 ಜನಸಂಖ್ಯೆಯೊಂದಿಗೆ ಹಾಲಿ ಇರುವ 2 ಸ್ಥಾನಗಳನ್ನ ಹೊಂದಿದ್ದು, ಇದು 3ಕ್ಕೆ ಏರಿಕೆ ಆಗಬಹುದು. ಅಂದರೆ 1 ಸ್ಥಾನ ಹೆಚ್ಚಾಗಬಹುದು. ಅದರಂತೆ, ಬೆಳಗಾವಿ ಜಿಲ್ಲೆಯೇ ವಿಭಜನೆಯಾಗಿ ಬೆಳಗಾವಿ ಗ್ರಾಮಾಂತರ / ಗೋಕಾಕ ಕ್ಷೇತ್ರ ಬರಬಹುದು.
ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಪುನರ್ವಿಂಗಡಣೆ:
ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಪುನರ್ವಿಂಗಡಣೆಯ ಕುರಿತ ಅಂಕಿಅಂಶಗಳು ಹೊರಬಿದ್ದಿದ್ದು, ಪ್ರಸ್ತುತ ಇರುವ 224 ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 336ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು, ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಕ್ಕೆ ಒಟ್ಟು 112 ಹೊಸ ಸ್ಥಾನಗಳು ಸೇರ್ಪಡೆಯಾಗಲಿವೆ. ಯಾವ ಜಿಲ್ಲೆಯಲ್ಲಿ ಎಷ್ಟು ಜನಸಂಖ್ಯೆಯಿದೆ ಮತ್ತು ಎಷ್ಟು ಸ್ಥಾನಗಳು ಹೆಚ್ಚಾಗಲಿವೆ ಎಂಬ ಜಿಲ್ಲಾವಾರು ಮಾಹಿತಿ ಇಲ್ಲಿದೆ:
ಬೆಂಗಳೂರು ನಗರ (ಅತಿ ಹೆಚ್ಚು ಜನಸಂಖ್ಯೆ ಮತ್ತು ಸ್ಥಾನ ಏರಿಕೆ):
ಬೆಂಗಳೂರು ನಗರ: 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 96,21,551 ಜನಸಂಖ್ಯೆಯನ್ನು ಹೊಂದಿರುವ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯು ಅತಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಪ್ರಸ್ತುತ ಇಲ್ಲಿರುವ 28 ಸ್ಥಾನಗಳಿಗೆ ಬರೋಬ್ಬರಿ 25 ಹೊಸ ಸ್ಥಾನಗಳು ಸೇರ್ಪಡೆಯಾಗುವ ಸಂಭವವಿದ್ದು, ಒಟ್ಟು ಸ್ಥಾನಗಳ ಸಂಖ್ಯೆ 53ಕ್ಕೆ ಏರಲಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳು:
ಬೆಳಗಾವಿ: 47,79,661 ಜನಸಂಖ್ಯೆಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 18 ಸ್ಥಾನಗಳಿದ್ದು, 8 ಹೊಸ ಸ್ಥಾನಗಳ ಸೇರ್ಪಡೆಯೊಂದಿಗೆ ಒಟ್ಟು ಸಂಖ್ಯೆ 26ಕ್ಕೆ ತಲುಪಲಿದೆ.
ಕಲಬುರಗಿ: 25,66,326 ಜನಸಂಖ್ಯೆಯಿರುವ ಕಲಬುರಗಿಯಲ್ಲಿನ 9 ಸ್ಥಾನಗಳಿಗೆ 5 ಹೊಸ ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 14 ಸ್ಥಾನಗಳಾಗಲಿವೆ.
ಬಳ್ಳಾರಿ ಮತ್ತು ವಿಜಯನಗರ: ಅವಿಭಜಿತ ಜಿಲ್ಲೆಯ 24,52,595 ಜನಸಂಖ್ಯೆಗೆ ಅನುಗುಣವಾಗಿ, ಪ್ರಸ್ತುತ ಇರುವ 9 ಸ್ಥಾನಗಳು 4 ಸ್ಥಾನಗಳ ಹೆಚ್ಚಳದೊಂದಿಗೆ 13ಕ್ಕೆ ಏರಲಿವೆ.
ವಿಜಯಪುರ: 21,77,331 ಜನಸಂಖ್ಯೆಯನ್ನು ಹೊಂದಿರುವ ವಿಜಯಪುರದಲ್ಲಿ ಪ್ರಸ್ತುತ ಇರುವ 8 ಸ್ಥಾನಗಳಿಗೆ 4 ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 12 ಸ್ಥಾನಗಳಾಗುವ ಸಾಧ್ಯತೆಯಿದೆ.
ರಾಯಚೂರು: 19,28,812 ಜನಸಂಖ್ಯೆಯಿರುವ ರಾಯಚೂರಿನ 7 ಸ್ಥಾನಗಳಿಗೆ 4 ಹೊಸ ಸ್ಥಾನಗಳು ಸೇರಿ ಒಟ್ಟು 11 ಸ್ಥಾನಗಳಾಗಲಿವೆ.
ಬಾಗಲಕೋಟೆ: 18,89,752 ಜನಸಂಖ್ಯೆ ಹೊಂದಿರುವ ಬಾಗಲಕೋಟೆಯಲ್ಲಿ ಪ್ರಸ್ತುತ 7 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 10 ಸ್ಥಾನಗಳಾಗಲಿವೆ.
ಧಾರವಾಡ: 18,47,023 ಜನಸಂಖ್ಯೆಯಿರುವ ಧಾರವಾಡದಲ್ಲೂ ಪ್ರಸ್ತುತ 7 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 10 ಸ್ಥಾನಗಳಾಗಲಿವೆ.
ಬೀದರ್: 17,03,300 ಜನಸಂಖ್ಯೆಯನ್ನು ಹೊಂದಿರುವ ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ 6 ಸ್ಥಾನಗಳಿದ್ದು, 3 ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 9 ಸ್ಥಾನಗಳಾಗಲಿವೆ.
ಹಾವೇರಿ: 15,97,668 ಜನಸಂಖ್ಯೆಯಿರುವ ಹಾವೇರಿಯಲ್ಲಿ ಪ್ರಸ್ತುತ 6 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 9 ಸ್ಥಾನಗಳಾಗಲಿವೆ.
ಕೊಪ್ಪಳ: 13,89,920 ಜನಸಂಖ್ಯೆ ಹೊಂದಿರುವ ಕೊಪ್ಪಳದ 5 ಸ್ಥಾನಗಳಿಗೆ 3 ಹೊಸ ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 8 ಸ್ಥಾನಗಳಾಗಲಿವೆ.
ಯಾದಗಿರಿ: 11,74,271 ಜನಸಂಖ್ಯೆಯಿರುವ ಯಾದಗಿರಿಯಲ್ಲಿ ಪ್ರಸ್ತುತ 4 ಸ್ಥಾನಗಳಿದ್ದು, 2 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಗದಗ: 10,64,570 ಜನಸಂಖ್ಯೆ ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರಸ್ತುತ 4 ಸ್ಥಾನಗಳಿದ್ದು, 2 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಹಳೆ ಮೈಸೂರು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳು:
ಮೈಸೂರು: 30,01,127 ಜನಸಂಖ್ಯೆಯನ್ನು ಹೊಂದಿರುವ ಮೈಸೂರಿನಲ್ಲಿ ಪ್ರಸ್ತುತ 11 ಸ್ಥಾನಗಳಿದ್ದು, 6 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 17 ಸ್ಥಾನಗಳಾಗಲಿವೆ.
ತುಮಕೂರು: 26,78,980 ಜನಸಂಖ್ಯೆಯಿರುವ ತುಮಕೂರಿನಲ್ಲಿ ಪ್ರಸ್ತುತ ಇರುವ 11 ಸ್ಥಾನಗಳಿಗೆ 4 ಹೊಸ ಸ್ಥಾನಗಳು ಸೇರಿ ಒಟ್ಟು 15 ಸ್ಥಾನಗಳಾಗುವ ಸಂಭವವಿದೆ.
ದಾವಣಗೆರೆ: 19,45,497 ಜನಸಂಖ್ಯೆ ಹೊಂದಿರುವ ದಾವಣಗೆರೆಯ 8 ಸ್ಥಾನಗಳಿಗೆ 3 ಹೊಸ ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 11 ಸ್ಥಾನಗಳಾಗಲಿವೆ.
ಮಂಡ್ಯ: 18,05,769 ಜನಸಂಖ್ಯೆಯಿರುವ ಮಂಡ್ಯದಲ್ಲಿ ಪ್ರಸ್ತುತ 7 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 10 ಸ್ಥಾನಗಳಾಗಲಿವೆ.
ಹಾಸನ: 17,76,421 ಜನಸಂಖ್ಯೆಯಿರುವ ಹಾಸನದಲ್ಲಿ ಪ್ರಸ್ತುತ 7 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 10 ಸ್ಥಾನಗಳಾಗಲಿವೆ.
ಶಿವಮೊಗ್ಗ: 17,52,753 ಜನಸಂಖ್ಯೆಯಿರುವ ಶಿವಮೊಗ್ಗದಲ್ಲಿ ಪ್ರಸ್ತುತ 7 ಸ್ಥಾನಗಳಿದ್ದು, 3 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 10 ಸ್ಥಾನಗಳಾಗಲಿವೆ.
ಚಿತ್ರದುರ್ಗ: 16,59,456 ಜನಸಂಖ್ಯೆ ಹೊಂದಿರುವ ಚಿತ್ರದುರ್ಗದಲ್ಲಿ ಪ್ರಸ್ತುತ ಇರುವ 6 ಸ್ಥಾನಗಳಿಗೆ 3 ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 9 ಸ್ಥಾನಗಳಾಗಲಿವೆ.
ಕೋಲಾರ: 15,36,401 ಜನಸಂಖ್ಯೆಯಿರುವ ಕೋಲಾರದ 6 ಸ್ಥಾನಗಳಿಗೆ 2 ಹೊಸ ಸ್ಥಾನಗಳು ಸೇರಿ ಒಟ್ಟು 8 ಸ್ಥಾನಗಳಾಗಲಿವೆ.
ಚಿಕ್ಕಬಳ್ಳಾಪುರ: 12,55,104 ಜನಸಂಖ್ಯೆಯನ್ನು ಹೊಂದಿರುವ ಈ ಜಿಲ್ಲೆಗೆ ಪ್ರಸ್ತುತ ಇರುವ 5 ಸ್ಥಾನಗಳ ಜೊತೆಗೆ 2 ಸ್ಥಾನಗಳು ಸೇರ್ಪಡೆಯಾಗಿ ಒಟ್ಟು 7 ಸ್ಥಾನಗಳಾಗಲಿವೆ.
ರಾಮನಗರ: 10,82,636 ಜನಸಂಖ್ಯೆಯಿರುವ ರಾಮನಗರದಲ್ಲಿ ಪ್ರಸ್ತುತ 4 ಸ್ಥಾನಗಳಿದ್ದು, 2 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಚಾಮರಾಜನಗರ: 10,20,791 ಜನಸಂಖ್ಯೆ ಹೊಂದಿರುವ ಚಾಮರಾಜನಗರದಲ್ಲಿ ಪ್ರಸ್ತುತ 4 ಸ್ಥಾನಗಳಿದ್ದು, 2 ಸ್ಥಾನಗಳ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಬೆಂಗಳೂರು ಗ್ರಾಮಾಂತರ: 9,90,923 ಜನಸಂಖ್ಯೆಯಿರುವ ಈ ಜಿಲ್ಲೆಯಲ್ಲಿ ಪ್ರಸ್ತುತ 4 ಸ್ಥಾನಗಳಿದ್ದು, 1 ಸ್ಥಾನ ಸೇರ್ಪಡೆಯಾಗಿ ಒಟ್ಟು 5 ಸ್ಥಾನಗಳಾಗಲಿವೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು:
ದಕ್ಷಿಣ ಕನ್ನಡ: 20,89,649 ಜನಸಂಖ್ಯೆ ಹೊಂದಿರುವ ಕರಾವಳಿಯ ಈ ಜಿಲ್ಲೆಯಲ್ಲಿ ಪ್ರಸ್ತುತ 8 ಸ್ಥಾನಗಳಿದ್ದು, 4 ಹೊಸ ಸ್ಥಾನಗಳ ಸೇರ್ಪಡೆಯೊಂದಿಗೆ ಒಟ್ಟು 12 ಸ್ಥಾನಗಳಾಗಲಿವೆ.
ಉತ್ತರ ಕನ್ನಡ: 14,37,169 ಜನಸಂಖ್ಯೆಯಿರುವ ಉತ್ತರ ಕನ್ನಡದಲ್ಲಿ ಪ್ರಸ್ತುತ ಇರುವ 6 ಸ್ಥಾನಗಳಿಗೆ 2 ಸ್ಥಾನಗಳು ಸೇರಿ ಒಟ್ಟು 8 ಸ್ಥಾನಗಳಾಗುವ ಸಾಧ್ಯತೆಯಿದೆ.
ಉಡುಪಿ: 11,77,361 ಜನಸಂಖ್ಯೆ ಹೊಂದಿರುವ ಉಡುಪಿಯಲ್ಲಿ ಪ್ರಸ್ತುತ 5 ಸ್ಥಾನಗಳಿದ್ದು, 1 ಸ್ಥಾನದ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಚಿಕ್ಕಮಗಳೂರು: 11,37,961 ಜನಸಂಖ್ಯೆಯಿರುವ ಚಿಕ್ಕಮಗಳೂರಿನಲ್ಲಿ ಪ್ರಸ್ತುತ 5 ಸ್ಥಾನಗಳಿದ್ದು, 1 ಸ್ಥಾನದ ಹೆಚ್ಚಳದೊಂದಿಗೆ ಒಟ್ಟು 6 ಸ್ಥಾನಗಳಾಗಲಿವೆ.
ಕೊಡಗು: 5,54,519 ಜನಸಂಖ್ಯೆಯೊಂದಿಗೆ ರಾಜ್ಯದಲ್ಲೇ ಅತಿ ಕಡಿಮೆ ಜನಸಂಖ್ಯೆ ಹಾಗೂ ಕ್ಷೇತ್ರಗಳನ್ನು ಹೊಂದಿರುವ ಕೊಡಗಿನಲ್ಲಿ ಪ್ರಸ್ತುತ 2 ಸ್ಥಾನಗಳಿದ್ದು, 1 ಸ್ಥಾನ ಸೇರ್ಪಡೆಯಾಗಿ ಒಟ್ಟು 3 ಸ್ಥಾನಗಳಾಗಲಿವೆ.
ಒಟ್ಟಿನಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಐತಿಹಾಸಿಕ ಹೆಜ್ಜೆಯಾಗಲಿದೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರಗೊಂಡು, ಕೇಂದ್ರ ಸರ್ಕಾರವು ಅಧಿಕೃತವಾಗಿ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ರಚಿಸಿದ ನಂತರವೇ ಯಾವ ಕ್ಷೇತ್ರಗಳ ಗಡಿ ಬದಲಾಗಲಿದೆ ಮತ್ತು ಯಾವ ಕ್ಷೇತ್ರಗಳು ಮೀಸಲಾಗಲಿವೆ ಎಂಬ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.