ಉಪವಾಸ ಎಂದರೆ ಏನು ಎಂಬ ಪ್ರಶ್ನೆಗೆ ಎಲ್ಲರಿಂದಲೂ ಬರುವ ಉತ್ತರ, ಹೊಟ್ಟೆಗೆ ಏನೂ ತೆಗೆದುಕೊಳ್ಳದೆ ನಿರಾಹಾರದಲ್ಲಿರುವುದು ಎಂದು. ಆದರೆ ಈ 'ಉಪವಾಸ'ಕ್ಕೆ ಅರ್ಥ ಬೇರೆಯೇ ಇದೆ. ಈ ಬಗ್ಗೆ ಹೇಳಬೇಕೆಂದರೆ ನನಗಾಗಿದ್ದ ಅನುಭವವನ್ನು ನಿಮ್ಮ ಮುಂದೆ ಹಂಚಿಕೊಳ್ಳಲೇ ಬೇಕು.
ನಾನಾಗ 9ನೇ ತರಗತಿ. ನನ್ನ ಸಂಬಂಧಿಕರ ಮನೆಗೆ ರಜೆಗೆಂದು ತೆರಳಿದ್ದೆ. ಅಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಲೆನಾಡಲ್ಲಿ, ಅದೂ ಹವ್ಯಕರ ಮನೆಯಲ್ಲಿ ವಿಶೇಷ ಕಾರ್ಯಕ್ರಮವಿದೆ ಎಂದಾದರೆ ಅಲ್ಲಿ ಸಾಕಷ್ಟು ಜನ ಸೇರಿರುತ್ತಾರೆ. ಹಾಗೇ ನೆಂಟರಿಷ್ಟರೆಲ್ಲ ಸೇರಿದ್ದರು. ನಮಗೋ ಇಸ್ಪೀಟ್ ಆಡೋ ಚಟ. (ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. 9ನೇ ತರಗತಿಯಲ್ಲೇ ಇಸ್ಪೀಟ್ ಆಡುತ್ತಿದ್ದೆನೆಂದರೆ ನಮ್ಮಲ್ಲಿ ಮಹಾಪರಾಧವೇನಲ್ಲ. ಇದು ನಮಗೆ ಆಟವಷ್ಟೆ, ಜೂಜಲ್ಲ. 3-4 ನೇ ತರಗತಿಯ ಮಕ್ಕಳೂ ಇಸ್ಪೀಟ್ ಕಲಿತಿರುತ್ತಾರೆ. ಗಂಡು-ಹೆಣ್ಣು ಭೇದವಿಲ್ಲದೇ) ಸರಿ. ಇಲ್ಲಿ ವಿಷಯ ಅದಲ್ಲ, ಉಪವಾಸದ್ದು.
ಸಂಜೆ 7 ಗಂಟೆ ಸುಮಾರಿಗೆ ಇಸ್ಪೀಟ್ ಮಂಡಲ ರೆಡಿಯಾಗಿತ್ತು. ನಾವೊಂದು 8 ಮಂದಿ ವಯಸ್ಸಿನ ಭೇದವಿಲ್ಲದೆ ಆಟಕ್ಕೆ ಕುಳಿತಿದ್ದೆವು. ಎಲ್ಲರೂ ಸಂಬಂಧಿಕರೇ. ಹಾಗಾಗಿ ಮುಜುಗರ ಪಡಬೇಕಾದ ಪರಿಸ್ಥಿತಿ ಅಲ್ಲಿರಲಿಲ್ಲ. ನಮ್ಮ ಜತೆ ಇಬ್ಬರು ದಂಪತಿ ಸಹ ಆಟಕ್ಕೆ ಕುಳಿತಿದ್ದರು. ಆಟ ಸಾಗುತ್ತಿತ್ತು, ನಡು ನಡುವೆ ಹಾಸ್ಯಗಳು, ನಗುವಿನ ಅಲೆಗಳು, ಅವರಿವರ ಮನೆ ಕಥೆಗಳು ಹೀಗೆ ಸಾಗುತ್ತಿತ್ತು. ಏತನ್ಮಧ್ಯೆ ಇಬ್ಬರು ದಂಪತಿಯಲ್ಲಿ ಒಂದು ಜೋಡಿ ತಮ್ಮ ಮಧ್ಯೆಯೇ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಗಂಡನ ಮಾತುಗಳಿಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾದ ಈ ಮಡದಿ ಕೊನೆಗೊಂದು ಮಾತು ಹೇಳಿದಳು. ನೋಡಿ... ನೀವು ಹೀಗೇ ಮಾತನಾಡುತ್ತಿದ್ದರೆ ರಾತ್ರಿ ನಿಮ್ಮನ್ನು ಉಪವಾಸ ಕೆಡವುತ್ತೀನಿ... ಇಷ್ಟಕ್ಕೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಕ್ಕರು. ಆದರೆ ಸಮಸ್ಯೆ ಆಗಿದ್ದು ಮಾತ್ರ ಆ ಗಂಡನಿಗಿಂತ ಹೆಚ್ಚು ನನಗೇ..!
ಕಾರಣ ಇಷ್ಟೆ. ಈ ಉಪವಾಸ ಕೆಡವುತ್ತೀನಿ ಅಂದಿದ್ದಕ್ಕೆ ಉಳಿದವರೆಲ್ಲ ಏಕೆ ನಕ್ಕರು, ಅರೆ ಈಕೆ ಊಟ ಹಾಕಲಿಲ್ಲ ಎಂದರೆ ಮನೆಯಲ್ಲಿ ಊಟ ಹಾಕಲು ಯಾರೂ ಇಲ್ಲವೇ ಅಥವಾ ಈ ವ್ಯಕ್ತಿಯೇ ಹೋಗಿ ಊಟ ಬಡಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬರುವುದಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ತಲೆಯಲ್ಲಿ ಕೊರೆಯಿತು. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಅಷ್ಟಕ್ಕೆ ಅದನ್ನು ಮರೆತೂ ಬಿಟ್ಟಿದ್ದೆ. ಆ ಗಂಡನಿಗೇ ಇಲ್ಲದ ಚಿಂತೆ ನನಗೇಕೆ ಎಂಬ ಪ್ರಶ್ನೆಯೂ ಇದ್ದಿರಿಬಹುದು. ಒಟ್ಟಿನಲ್ಲಿ ಮರೆತಿದ್ದೆ.
ಕೊನೆಗೊಂದು ದಿನ ಇದಕ್ಕೆ ಉತ್ತರ ಸಿಕ್ಕಿತು. ಆಗ ನಾನು ಡಿಗ್ರಿ ಓದುತ್ತಿದ್ದ ಸಮಯ. ರಜೆಯಲ್ಲಿ ಬೆಳಕಿರುವವರೆಗೆ ಕ್ರಿಕೆಟ್, ಕತ್ತಲಾದ ಮೇಲೆ ಇಸ್ಪೀಟ್ ಆಡುವುದು ಮಾಮೂಲಿ. ಹೀಗೆ ಮಂಡಲದಲ್ಲಿ ಗಂಡು-ಹೆಣ್ಣು ಭೇದವಿಲ್ಲದೇ ಆಟವಾಡುತ್ತಿದ್ದೆವು. ಇಲ್ಲಿ ಸ್ಥಳ ಬೇರೆ, ಆಟಗಾರರೂ ಬೇರೆ. ಆದರೆ ನನ್ನನ್ನು ಸೇರಿಸಿಕೊಂಡು ಈ ಮೇಲಿನ ಪಾತ್ರಗಳು ಕೆಲವು ಹಾಗೇ ಇದ್ದವು. ಅಂದರೆ ಇಲ್ಲೂ ವಿವಾಹಿತ ಜೋಡಿಯಿತ್ತು. ಆಟದ ಮಧ್ಯೆ ನಾನು ಆಗ ಕೇಳಿದ್ದ ಡೈಲಾಗ್ ಉದುರಿಬಿತ್ತು. ಪಕ್ಕನೆ ನನ್ನ ಕಿವಿ ನೆಟ್ಟಗಾಯಿತು. ಆಕೆಯ ಕಾಲೆಳೆಯುತ್ತಿದ್ದ ಗಂಡನಿಗೆ ಹೇಳಿದ್ದು, ನೀವು ಹೀಗೇ ಮಾಡಿದರೆ ಇಂದು ರಾತ್ರಿ ಉಪವಾಸ ಗ್ಯಾರೆಂಟಿ. ಇಷ್ಟೇ ಹೇಳಿದ್ದರೆ ಮಾತ್ರ ನಾನು ತಲೆ ಕೆರೆದುಕೊಳ್ಳಬೇಕಿತ್ತು. ಆದರೆ ಜತೆಗೆ ಇನ್ನೂ ಒಂದು ಮಾತು ಸೇರಿಸಿದ್ದಳು. ಬರೀ ಚಾಪೆ, ದಿಂಬೇ ಗತಿ ಎಂದು. ಆಗ ನನಗೆ ಈ ಉಪವಾಸದ ವನವಾಸ ತಿಳಿಯಿತು!
-ಆದರ್ಶ ಎಸ್. ಅಂಚೆ
adianche@gmail.com