ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜೀವನ್ಮುಕ್ತಿಯ ದಾರಿ...(ವಿವೇಕ ವಿಚಾರ)

Rashmi Kasaragodu
Updated On : 21 Apr 2013, 3:53 am

ಪ್ರತಿಯೊಬ್ಬರೂ ಕೊನೆಗಾಲದಲ್ಲಿ ಜೀವನ್ಮುಕ್ತಿಯನ್ನು ಹೊಂದಲು ಬಯಸುತ್ತಾರೆ. ಆದರೆ ಆ ಮಾರ್ಗದಲ್ಲಿ ಜೀವನ ಸಾಗಿಸುವುದನ್ನು ಮರೆಯುತ್ತಾರೆ. ನಮ್ಮ ಮಾತಿನಲ್ಲಿ ಒಳಿತನ್ನು, ಕಾರ್ಯದಲ್ಲಿ ಪರೋಪಕಾರವನ್ನು, ಚಿಂತನೆಯಲ್ಲಿ ಪರಹಿತವನ್ನು ರೂಢಿಸಿಕೊಂಡಾಗ ನಮಗೆ ಮುಕ್ತಿಮಾರ್ಗದ ದರ್ಶನವಾಗುತ್ತದೆ. ಜೀವನದ ತುಂಬಾ ಪಾಪಕರ್ಮಗಳನ್ನು ಮಾಡಿ, ಕೊನೆಗಾಲದಲ್ಲಿ ದಾನಧರ್ಮ, ಹೋಮಹವನ ಕಾರ್ಯಗಳನ್ನು ಮಾಡಿ ಮುಕ್ತರಾಗುತ್ತೇವೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ನಾವು ಮಾಡುತ್ತಿರುವುದು ತಪ್ಪೆಂದು ತಿಳಿದೂ ಆ ಕಾರ್ಯದಲ್ಲಿ ಮುಂದುವರಿದಾಗ ನಮ್ಮನ್ನು ಆ ದೇವರಷ್ಟೇ ಅಲ್ಲ, ನಮ್ಮ ಮೆದುಳೂ ಕ್ಷಮಿಸಲಾರದು. ಪರರಿಂದ ಮುಕ್ತಿಪಡೆಯುವುದಕ್ಕಿಂತ ಮೊದಲು ನಮ್ಮಿಂದಲೇ ನಾವು ಮುಕ್ತಿಪಡೆಯದೇ ನರಳುತ್ತೇವೆ. ಆದ್ದರಿಂದ ಪರಿಶುದ್ಧ ಜೀವನವೇ ಜೀವನ್ಮುಕ್ತಿಯ ದಾರಿ.
ಇತರರಿಗೆ ಒಳಿತು ಮಾಡುವುದರಿಂದ ನಿಜಕ್ಕೂ ಒಳ್ಳೆಯದಾಗುವುದು ನಮಗೇ. ನೀವು ಇತರರ ಹಿತಕ್ಕಾಗಿ ಎಷ್ಟೆಷ್ಟು ತೀವ್ರವಾಗಿ ಭಾವಿಸುತ್ತೀರೋ ಅಷ್ಟಷ್ಟು ತೀವ್ರವಾಗಿ ನಿಮ್ಮ ಅಹಂಕಾರ ಕಣ್ಮರೆಯಾಗುತ್ತದೆ. ಇಂತಹ ನಿಷ್ಕಾಮ ಕರ್ಮದ ಮೂಲಕ ನಿಮ್ಮ ಹೃದಯ ಪರಿಶುದ್ಧವಾಗುತ್ತದೆ. ಕರ್ಮವು ಆತ್ಮಸಾಕ್ಷಾತ್ಕಾರಕ್ಕೆ ಸಾಧನ. ಆತ್ಮಸಾಕ್ಷಾತ್ಕಾರ, ಜ್ಞಾನಯೋಗ, ಭಕ್ತಿಯೋಗವೇ ಮೊದಲಾದ ಮಾರ್ಗಗಳಿಂದ ಯಾವ ಆತ್ಮಸಾಕ್ಷಾತ್ಕಾರವೆಂಬ ಗುರಿಯನ್ನು ಮುಟ್ಟಬಹುದೋ, ಅದನ್ನು ಪರಹಿತಕ್ಕಾಗಿ ಮಾಡುವ ನಿಷ್ಕಾಮ ಕರ್ಮದಿಂದಲೂ ಮುಟ್ಟಲು ಸಾಧ್ಯ. ಇದನ್ನೇ ಶಾಸ್ತ್ರಗಳು 'ಜೀವನ್ಮುಕ್ತಿ' ಎಂದು ಕರೆಯುವುದು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement