ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಾ... ಗುಬ್ಬಿ

ಬೆಂಗಳೂರಿನಲ್ಲಿ ಮನುಷ್ಯನೊಬ್ಬ ಗೂಡು ಕಟ್ಟಲಿಕ್ಕೇ ಜಾಗವಿಲ್ಲ. ಇನ್ನು, ಗುಬ್ಬಿ ಗೂಡೇ!?

Rashmi Kasaragodu
Updated On : 22 Apr 2013, 1:19 am

'ಗುಬ್ಬಿಗೆ ಎಷ್ಟು ಗಂಡಂದಿರು?'- ಲೆಕ್ಕಹಾಕಿ ಸೋತರು ಪಕ್ಷಿಸಂತ ಡಾ. ಸಲೀಂ ಅಲಿ. ಅವರ ಕುದುರೆ ಲಾಯದ ಚಾವಣಿಯ ಹೆಂಚಿನ ಸಂದಿಯನ್ನೇ ಅಪಾರ್ಟ್‌ಮೆಂಟನ್ನಾಗಿಸಿಕೊಂಡ ಹೆಣ್ಣು ಗುಬ್ಬಿ, ಆ ಗೂಡಿನಲ್ಲಿ ಎರಡು ತಾಸಿನ ಹಿಂದೆ ಇಟ್ಟಿದ್ದು ಮೂರು ಮೊಟ್ಟೆಗಳು. ಗುಬ್ಬಮ್ಮನಿಗೆ ಪಕ್ಕದಲ್ಲೇ ಜವಾಬ್ದಾರಿಯುತ ಹಸ್ಬೆಂಡು ಬೇರೆ! ಗಂಡು ಗುಬ್ಬಿ ಪ್ರತೀ ಅರ್ಧ ತಾಸಿಗೊಮ್ಮೆ ಬಾಣಂತಿ ಹೆಂಡತಿಗೆ ಆಹಾರ ಸಪ್ಲೈ ಮಾಡುತ್ತಿದ್ದುದ್ದನ್ನು ಕಂಡ ಅಲಿ ವಿಚಿತ್ರ ಆಲೋಚನೆಯ ಅಲೆದಾಟಕ್ಕೆ ಬಿದ್ದರು. ಏರ್‌ಗನ್ ಹಿಡಿದು, ಆ ಗಂಡು ಗುಬ್ಬಿಯ ಉಬ್ಬಿದ ಗಂಟಲಿಗೆ ಗುಂಡಿಟ್ಟು ಹೊಡೆದುರುಳಿಸಿ, ನಳಿಕೆಯ ತುದಿಯಲ್ಲಿ ಸಪೂರವಾಗುತ್ತಿದ್ದ ಹೊಗೆಯನ್ನು ಕಣ್ಣಲ್ಲೇ ಹೊಗಳಿಬಿಟ್ಟರು.
  ಗಂಡನಿಲ್ಲದ ಗುಬ್ಬಿ ಈಗೇನು ಮಾಡುತ್ತೆ? ಪ್ರಶ್ನೆಗೆ ಕಾವು ಕೊಟ್ಟು ಕಾದು ಕೂತಿದ್ದರು ಅಲಿ. ಅಚ್ಚರಿ! ತಕ್ಷಣವೇ ಮತ್ತೊಂದು ಗಂಡು ಗುಬ್ಬಿ ಬಂದು ಗುಬ್ಬಮ್ಮನ ಬಾಣಂತನದ ಆರೈಕೆಗಿಳಿಯಿತು. ಆ ಎರಡನೇ ಗಂಡುಗುಬ್ಬಿಯ ಬೆನ್ನಿಗೂ ಗುಂಡಿನ ಗುನ್ನ. ಅದೂ ಮುಚ್ಚಿದ ಕಣ್ಣು ತೆರೆಯಲಿಲ್ಲ. ಮತ್ತೆ ಅರ್ಧ ಗಂಟೆಗೆ ಇನ್ನೊಂದು ಗಂಡು ಗುಬ್ಬಿ ಆ ಗುಬ್ಬಮ್ಮನ ಆರೈಕೆಗೆ ಬಂತು. ಅದಕ್ಕೂ ಅಲಿ ಗುಂಡಿಟ್ಟರು. ಹೀಗೆ ಮೂರ್ನಾಲ್ಕು ಗಂಡು ಗುಬ್ಬಿಗಳು ಮತ್ತೆ ಮತ್ತೆ ಬಂದಾಗಲೆಲ್ಲ ಅಲಿ ಅವಕ್ಕೆ ತೋರಿಸಿದ್ದು ಮೃತ್ಯುದಾರಿ.
   ಹನ್ನೆರಡು ದಿನದ ಬಳಿಕ... ಅಲ್ಲಿ ಕಂಡಿದ್ದು ಮೊಟ್ಟೆಯೊಡೆದು ಹೊರಬಂದ ಮೂರು ಮರಿಗಳು! ಗುಬ್ಬಮ್ಮನ ಜತೆಯಲ್ಲಿ ಇನ್ನೊಬ್ಬ ಗಂಡ. ಎಂಟನೇ ಗಂಡ! ಅಲಿ, ಸಾಯಿಸಲು ಹೋಗಲಿಲ್ಲ. ಅದರ ತಾಕತ್ತು ಸಾಬೀತಾಗಿತ್ತು, ಗುಬ್ಬಮ್ಮ ನಿತ್ಯ ಸುಮಂಗಲಿ!
   ಗಲ್ಲಿ ಗಲ್ಲಿ ಹುಡುಕಿದರೂ ಇಂದು ಆ ಸುಮಂಗಲಿ ಕಾಣಸಿಗಲ್ಲ. ಗುಬ್ಬಿಗಳನ್ನೆಲ್ಲ ಹೊರದಬ್ಬಿದ್ದೇವೆ. ಮುಂಜಾನೆಯೇ ಮನೆಯೊಳಗಿನದನ್ನೆಲ್ಲ ಲೂಟಿ ಮಾಡಿ, ಸಂಜೆಯ ವೇಳೆ ಕರೆಂಟು ಲೈನಿನ ಮೇಲೆ ಮೀಟಿಂಗು ಮಾಡುತ್ತಿದ್ದ ಗುಬ್ಬಿಗಳ ಜಾಗ ಈಗ ಖಾಲಿ ಖಾಲಿ. ಬೊಗಸೆ ಕಾಳು, ಬೊಗಸೆಯಷ್ಟು ಗೂಡಿಗೆ ಜಾಗ, ಬೊಗಸೆಯಷ್ಟು ಎದೆಗೂಡಿನಲ್ಲಿ ಪ್ರೀತಿ ಇದ್ದಲ್ಲಿ ಎದೆಯುಬ್ಬಿಸಿ ಬರುತ್ತಿದ್ದ ಗುಬ್ಬಿ ಮೊಬೈಲ್ ಟವರಿನ ಕಾರಣದಿಂದಾಗಿ ವ್ಯಾಪ್ತಿ ಪ್ರದೇಶದ ಹೊರಗೆ!
ಗುಬ್ಬಿಗಳೇ, ಬನ್ನಿ ಬೆಂಗಳೂರಿಗೆ...
ಇದೆಂಥ ಕರೆ? ಬೆಂಗಳೂರಿನಲ್ಲಿ ಮನುಷ್ಯನೊಬ್ಬ ಗೂಡು ಕಟ್ಟಲಿಕ್ಕೇ ಜಾಗವಿಲ್ಲ. ಇನ್ನು, ಗುಬ್ಬಿ ಗೂಡೇ!? ಯಾರಾದರೂ ಹೀಗೆ ಕೇಳಬಹುದು. ಆದರೆ, ಅಪರೂಪವಾಗುತ್ತಿರುವ ಗುಬ್ಬಿಗಳಿಗೆ ಹೀಗೊಂದು ಕರೆಕೊಟ್ಟಿದ್ದು ಬೆಂಗಳೂರಿನ ಬಿಸಿಐಎಲ್ (ಬಯೋಡೈವೆರ್ಸಿಟಿ ಕನ್ಸರ್ವೇಶನ್ ಇಂಡಿಯಾ ಲಿ.) ಸಂಸ್ಥೆ. ಬಿದಿರಿನಿಂದ ಗುಬ್ಬಿಗಳ ಗೂಡು ಕಟ್ಟಿ, ಕರಗಿಹೋದ ಪ್ರೀತಿಯನ್ನು ಗಟ್ಟಿಮಾಡುತ್ತಿರುವ ಸಂಸ್ಥೆ ಇದು. ಗುಬ್ಬಿಗಳನ್ನು ಉಳಿಸಲೆಂದು ಕಳೆದ ವರ್ಷ 50 ಸಾವಿರ ಗೂಡುಗಳನ್ನು ಈ ಸಂಸ್ಥೆ ಝೆಡ್ (ಝೀರೋ ಎನರ್ಜಿ ಡ್ರೈವನ್) ವಿಭಾಗದಿಂದ ಉಚಿತವಾಗಿ ಹಂಚಿದ್ದು ಸಾವಿರಾರು ಗುಬ್ಬಿಗಳ ಗಮನಕ್ಕೂ ಬಂದಿದೆ.
ಅವಕ್ಕೊಂದು ಪರಿಸರ
ಸಂಸ್ಥೆಯ ದೊಡ್ಡಬಳ್ಳಾಪುರದ ಫ್ಯಾಕ್ಟರಿಯಲ್ಲಿ ಸಿದ್ಧವಾಗುವ ಈ ಗೂಡುಗಳು ಸಂಪೂರ್ಣ ಬಿದಿರಿನದ್ದು. ಮಧ್ಯದಲ್ಲೊಂದು ಕಿಬ್ಬಾಗಿಲು. ಇನ್ನೊಂದು ಸೈಡು, ಫುಲ್ಲು ಓಪನ್ನು. ಗುಬ್ಬಿಗಳದ್ದು ಮೊದಲೇ ದುರ್ಬಲ ಕಾಲು. ಅದರಲ್ಲೂ ಇಂದಿನ ಕೆಮಿಕಲ್ ಫುಡ್ ಸೇವಿಸಿ, ಆ ಕಾಲುಗಳಲ್ಲೂ ಮೊದಲಿನ ಕಸುವಿಲ್ಲದಂತಾಗಿದೆ. ಬೆರಳುಗಳಿಂದ ಹುಲ್ಲು, ಕಡ್ಡಿ ಎತ್ತಿ ತಂದು ಅಥವಾ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ನಾಲ್ಕೇ ದಿನದಲ್ಲಿ ಮಾಯವಾಗುವಂಥ ಗೂಡು ಕಟ್ಟುವುದೂ ಅವುಗಳಿಗೆ ರಿಸ್ಕಿನ ಕೆಲಸ. ಹೀಗಾಗಿ ಬಿಸಿಐಎಲ್ ಈ ಬಿದಿರಿನ ಗೂಡುಗಳನ್ನು ಸಿದ್ಧಗೊಳಿಸಿ, ಬೆಂಗಳೂರಿನ ಪ್ರತಿ ಬಡಾವಣೆಗಳಿಗೂ ಮುಟ್ಟಿಸುವ ಕೆಲಸಕ್ಕಿಳಿದಿದೆ.
ಈ ಬಾರಿಯೂ ಹಂಚ್ತಾರೆ...
ಗುಬ್ಬಿ ಗೂಡುಗಳನ್ನು ಈ ವರ್ಷವೂ ಹಂಚುವ ಯೋಜನೆ ಬಿಸಿಐಎಲ್‌ನದ್ದು. ಕಳೆದ ವರ್ಷ 50 ಸಾವಿರ ಗೂಡುಗಳಲ್ಲಿ ಸಾವಿರ ಮನೆಗಳ ಗೂಡಿಗಷ್ಟೇ ಗುಬ್ಬಿಗಳು ಬಂದಿವೆ. ಕೇವಲ ಗೂಡೊಂದನ್ನು ಕಟ್ಟಿ ಬಿಡೋದಲ್ಲ. ಅದಕ್ಕೆ ನೆರಳಿನ ವಾತಾವರಣ ಸೃಷ್ಟಿಸಬೇಕು. ಯಾವುದೋ ಸಣ್ಣಕಾಡು ಎಂದೆನ್ನಿಸುವಷ್ಟು ಹುಲ್ಲು, ಸೊಪ್ಪುಗಳನ್ನು ಮರೆಮಾಡಬೇಕು. ಆದರೆ, ಆ ಕೆಲಸವನ್ನು ಅನೇಕರು ಮಾಡಿಲ್ಲ ಅಂತಾರೆ ಸಂಸ್ಥೆಯ ನಿರ್ದೇಶಕ ಹರಿಕೃಷ್ಣ. ಹೀಗಾಗಿ, ಈ ಬಾರಿ ಗೂಡುಗಳನ್ನು ಅರ್ಹರಿಗಷ್ಟೇ ಹಂಚಲಾಗುತ್ತದಂತೆ. ಇದಕ್ಕಾಗಿ ಬಿಸಿಐಎಲ್ ನೋಂದಣಿಯನ್ನೂ ಹಮ್ಮಿಕೊಂಡಿದೆ. ಗುಬ್ಬಿ ಗೂಡಿಗಾಗಿಯೇ ಹೆಲ್ಪ್‌ಲೈನ್ (9901054321) ತೆರೆಯಲಾಗಿದೆ. ಆಸಕ್ತರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ಸೇಫ್ ಎನ್ನಿಸಬೇಕು...
ಗೂಡಿನ ಬಳಿ ನೀರು, ಕಾಳುಗಳನ್ನಿಟ್ಟ ಕೂಡಲೇ ಗುಬ್ಬಿಗಳು ಬರಲ್ಲ. ಗುಬ್ಬಿಗಳಿಗಾಗಿ ನಾವು ಕಾಯಲೇಬೇಕು. ಲಕ್ಷಲಕ್ಷ ಕಾಂಕ್ರೀಟ್ ಶಿಖರಗಳ ನಡುವೆ ತನ್ನ ಗೂಡೆಲ್ಲಿದೆ ಎಂಬ ಸೂಕ್ಷ್ಮತೆಯು ಗಂಟೆಗೆ ಮೂವತ್ತೈದು ಕಿ.ಮೀ. ಸ್ಪೀಡಿನಲ್ಲಿ ಹಾರಾಡುವ ಗುಬ್ಬಿಗೆ ಗೊತ್ತಾಗಬೇಕು. ಆ ಗೂಡಿನಲ್ಲಿದ್ದರೆ ತಾನು ಸೇಫ್ ಎಂಬ ಭಾವ ಅದರ ಎದೆಗುಂಡಿಯೊಳಗಿಳಿದರಷ್ಟೇ ಅದು ನಿಮ್ಮ ಮನೆಯೆದುರು ಚಿಕ್ ಚಿಕ್, ಚೀಂವ್ ಚೀಂವ್ ಅನ್ನಬಲ್ಲದಷ್ಟೇ.
ಏಕೆ ಕಾಣೆಯಾದವು?
ಕಾಳುಗಳನ್ನು ಕೇರಿ ಸಂಸ್ಕರಿಸುವುದು ಈಗಿನವರಿಗೆ ಕಿರಿಕಿರಿ. ಹೀಗಾಗಿ, ಜೊಳ್ಳುಗಳು- ಕಾಳುಗಳು ಗುಬ್ಬಿಗೆ ಕಾಣಿಸುತ್ತಲೇ ಇಲ್ಲ. ಎಲ್ಲೋ ಎಪಿಎಂಸಿ ಯಾರ್ಡ್‌ಗಳಲ್ಲಿ, ಕೆ.ಆರ್. ಮಾರುಕಟ್ಟೆಗಳಲ್ಲಿ ಕಾಳುಗಳು ಕಾಣಿಸಿದರೆ ನಾಲ್ಕಾರು ಗುಬ್ಬಿಗಳು ಓಡಿಬರುತ್ತವೆ. ಮಾಲ್ ಸಂಸ್ಕೃತಿಯೇ ಮೇಳೈಸುತ್ತಿರುವುದರಿಂದ ಕ್ಲೀನ್ ಆ್ಯಂಡ್ ಪ್ಯಾಕ್ಡ್ ಫುಡ್‌ಗಳಲ್ಲಿನ ಕಾಳುಗಳನ್ನು ಯಾರೂ ಕೇರಲೂ ಹೋಗುವುದಿಲ್ಲ, ಗುಬ್ಬಿಗಳಿಗೂ ಹಾಕುವುದಿಲ್ಲ. ಆಹಾರವೇ ಇಲ್ಲದ ನಾಡಲ್ಲಿ ಇನ್ನು ಗುಬ್ಬಿಗಳು ಇರ್ತಾವಾ? ಇನ್ನು ನೆಲವೇ ಕಾಣದ ಸಿಮೆಂಟು ಭೂಮಿ ಸೃಷ್ಟಿಸಿರುವ ಉಷ್ಣ ವಾತಾವರಣ, ಮೊ ಬೈಲ್ ರೇಡಿಯೇಶನ್‌ಗಳ ಕಾರಣಗಳೂ ಗುಬ್ಬಿಯ ನಾಪತ್ತೆ ಪ್ರಕರಣಗಳಲ್ಲಿ ಭಾಗಿಯಾಗುತ್ತವೆ.
  ಬೆಂಗಳೂರಿನ ಏರ್‌ಪೋರ್ಟಿನ ಟರ್ಮಿನಲ್‌ನಲ್ಲಿ ಉಪವಾಸ ಕುಳಿತ ಗುಬ್ಬಿಗೆ ನಿಮ್ಮ ಮನೆಯಲ್ಲಿನ ಒಂದು ಕಾಳು ಸಿಕ್ಕರೆ ಅದೇ ಮೃಷ್ಟಾನ್ನ. ಗುಬ್ಬಿಯನ್ನುಳಿಸಬೇಕೆಂಬ ಕಾಳಜಿ ನಿಮ್ಮಲ್ಲಿ ಟಿಸಿಲೊಡೆದರೆ, ಅದಕ್ಕೆ ಹುರುಪು ತುಂಬಲು ಬಿಸಿಐಎಲ್ ರೆಡಿ.
ಗುಬ್ಬಿ ಕೇಳೋದು ಇಷ್ಟೇ... ನಾಲ್ಕು ಕಾಳು, ಹಿಡಿ ಪ್ರೀತಿ, ಐವತ್ತು ಸೆಂಟಿಮೀಟರ್ ಜಾಗ! ಈ ಕನಿಷ್ಠ ಬೇಡಿಕೆಯನ್ನೂ ಈಡೇರಿಸಲಾಗದಿದ್ದರೆ ನಾವೆಷ್ಟು ದರಿದ್ರರು?



-ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments