ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾರ್‌ವಾಲೊ

Lingaraj Badiger
Updated On : 22 Apr 2013, 4:33 am

ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ ಇತ್ಯಾದಿ ಸಾಮಾನ್ಯ. ಆದರೆ ಹಳೆಯ ಕಾರುಗಳ ಪ್ರದರ್ಶನ ಅಪೂರ್ವ. ಕೊಡಗಿನ ಉದ್ಯಮಿ, ಕಾಫಿ ಬೆಳೆಗಾರರೊಬ್ಬರಿಗೆ ಅತಿ ದುಬಾರಿಯ ಅತ್ಯಂತ ಪುರಾತನ ಕಾರುಗಳ ಸಂಗ್ರಹಣೆ ಮತ್ತು ಪ್ರದರ್ಶನವೇ ನೆಚ್ಚಿನ ಹವ್ಯಾಸ.

ಎನಿಲ್ಲವೆಂದರೂ ಆ ಸುಂದರಿಗೆ ಈಗ 90ರ ಹರೆಯ. ಆದರೂ ಯಾವ ಜವ್ವನೆಗೆ ಸಾಟಿಯಿಲ್ಲದ ಬೆಡಗು. ಎಂಥವರೂ ಒಮ್ಮೆ ತಿರುಗಿ ನೋಡಲೇಬೇಕೆನಿಸುವ ಸೌಂದರ್ಯ ಆಕೆಯದ್ದು. ಅಲ್ಲಿ ಆಕೆಯೊಬ್ಬಳೇ ಅಲ್ಲ. ಇಂಥ ಸುಂದರಿಯರ ಸ್ವರ್ಗವೇ ಅಲ್ಲಿ ನಿರ್ಮಾಣವಾಗಿದೆ. ಒಬ್ಬರಿಗಿಂಥ ಒಬ್ಬರು ಚಲುವೆಯರು. ಈ ಎಲ್ಲ ಕನ್ನಿಕೆಯರಿಗೊಬ್ಬನೇ ಇಂದ್ರ. ಮಹಾಸುಂದರಿಯರ ಸರದಾರ. ಆತ ವಿಹಾರಕ್ಕೆ ಹೊರಟರೆ ಜತೆಗೂಡಲು ಈ ಚಿರಸುಂದರಿಯರ ಪೈಪೋಟಿ. ಇನ್ನೇನು ಬೇಕು, ಬದುಕು ಸ್ವರ್ಗವಾಗಲು?
ಹೌದು, ಕೊಡಗಿನ ಸಿದ್ದಾಪುರದ ಅಹಮ್ಮದ್ ಕುಟ್ಟಿಹಾಜಿ ಈ ಎಲ್ಲ ಸುಂದರಿಯರ ಸರದಾರ. ಅವರ ಬಳಿ ದೇಶವಿದೇಶಗಳ 100ಕ್ಕೂ ಹೆಚ್ಚು ಪುರಾತನ ಕಾರುಗಳಿವೆ. ಇವುಗಳ ಪೈಕಿ 85 ಕಾರುಗಳು ಇಂದಿಗು ಉತ್ತಮ ಚಲಿಸುವ ಸ್ದಿತಿಯಲ್ಲಿವೆ. ವಿವಿದ ಬಣ್ಣಗಳಲ್ಲಿ ತಮ್ಮದೆ ಶೈಲಿಯಲ್ಲಿ ಗಮನ ಸೆಳೆಯುವ ಕಾರುಗಳು ಒಂದನ್ನೊಂದು ಮೀರಿಸುತ್ತವೆ.
ಇತ್ತೀಚೆಗೆ ಎರಡು ದಿನ ಕಾಲ ಸಾರ್ವಜನಿಕರಿಗೆ ಕುಟ್ಟಿಹಾಜಿಯವರ ಸಂಗ್ರಹದಲ್ಲಿನ ಪುರಾತನ ಸುಂದರಿಯರ  ಉಚಿತ ದರ್ಶನ ಭಾಗ್ಯ ಸಿಕ್ಕಿತ್ತು. ಇದೇ ಪ್ರಥಮ ಬಾರಿಗೆ ಕಾರಿನ ಬಗ್ಗೆ ವಿವರಣೆ, ಮಾಹಿತಿಯೊಂದಿಗೆ ಇಂಥ ಪ್ರದರ್ಶನ ರಾಜಧಾನಿಯಿಂದ ಹೊರಗೆ ನಡೆದಿತ್ತು. ಇದಕ್ಕಾಗೇ ತಮ್ಮ ತೋಟದ ಎರಡು ಎಕರೆ ಜಾಗವನ್ನು ಕುಟ್ಟಿಹಾಜಿ ಮೀಸಲಿಟ್ಟಿದ್ದರು. ಹಲವಾರು ವರ್ಷಗಳಿಂದ ಆಸ್ಥೆಯಿಂದ ತಾವು ಸಂರಕ್ಷಿಸಿಕೊಂಡು ಬಂದ ಬಲು ಅಪರೂಪದ ಕಾರುಗಳನ್ನು ವಿಕ್ಷಿಸಿ ಅಚ್ಚರಿಗೊಳಗಾಗುತ್ತಿದ್ದ ಸಾರ್ವಜನಿಕರನ್ನು ಕಂಡಾಗ ಸಾಹೇಬರಿಗೆ ಒಳಗೊಳಗೇ ಹೆಮ್ಮೆ.

ಮನೆಯ ಪಕ್ಕದಲ್ಲಿ ಶೆಡ್ ನಿರ್ಮಿಸಿ ಎಲ್ಲ ಕಾರುಗಳನ್ನು ಸುಸ್ಥಿತಿಯಲ್ಲಿರುವಂತೆ ಬಲು ಎಚ್ಚರಿಕೆಯಿಂದ ಜೋಪಾನ ಮಾಡಿದ್ದಾರೆ ಅವರು. ವಿಶ್ವದ ಎಲ್ಲೆಲ್ಲಿಂದಲೋ ಹಳೇಯ ಕಾರುಗಳನ್ನು ತಂದು ಅವುಗಳನ್ನು ಸರಿಪಡಿಸಿ ಬಣ್ಣ ಹಚ್ಚಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತೆ ಮದುಮಗಳ ರೀತಿಯಲ್ಲಿ ಶೃಂಗರಿಸುವುದರಲ್ಲೇ ಸಾರ್ಥಕ್ಯ ಕಂಡಿದ್ದಾರೆ ಅವರು.  ಕೇವಲ ಚಲನ ಚಿತ್ರ, ಪತ್ರಿಕೆ, ಅಂತರ್ಜಾಲದಲ್ಲಿ ಲಭ್ಯ ಈ ಕಾರುಗಳು ನಮ್ಮ ನಾಡಿನಲ್ಲೇ ಸುಲಭದಲ್ಲಿ ಕಾಣಲು ಸಿಗುವಂತೆ ಮಾಡಿರುವುದು ಹೆಮ್ಮೆಯ ವಿಷಯ.
ಮುಂದಿನ ದಿನಗಳಲ್ಲಿ ಮುಕ್ತ ಹಾಗೂ ನಿರಂತರ ವೀಕ್ಷಣಾ ಅವಕಾಶಕ್ಕಾಗಿ ಮ್ಯೂಸಿಯಂ ಒಂದನ್ನ ತೆರೆಯುವ ಯೋಜನೆ ಅಹಮ್ಮದ್ ಕುಟ್ಟಿಹಾಜಿ ಅವರದ್ದು. ಅದಕ್ಕೆ ಸರಕಾರದ ನೆರವಿನ ನಿರೀಕ್ಷೆ ಅವರಿಗೆ. ಇಂಥ ಉತ್ಸಾಹ, ಹವ್ಯಾಸ ಹೇಗೆ ಬಂತೆಂದು ಕೇಳಿದರೆ ಮುಗುಳ್ನಗುವ ಕುಟ್ಟಿಹಾಜಿ 'ತಂದೆಯವರ ಕಾಲದಿಂದಲೂ ಅಪರೂಪದ ಕಾರುಗಳನ್ನು ಸಂಗ್ರಹಿಸಿಕೊಂಡು ಬರುತ್ತಿದ್ದೇವೆ. ನಿರ್ವಹಣೆ ಬಲು ದುಬಾರಿ. ಆದರೆ ಅವರ ಬಳಿ ಇಷ್ಟೊಂದು ಬೃಹತ್ ಪ್ರಮಾಣದ ಶೇಖರಣೆ ಇರಲಿಲ್ಲ' ಎನ್ನುತ್ತಾರೆ.
1926ರಿಂದ 1965ರವರೆಗಿನ ಅಪರೂಪದ ಕಾರುಗಳನ್ನು ಇಲ್ಲಿ ಉತ್ತಮ ಸ್ಥಿತಿಯಲ್ಲಿ ಇಡಲಾಗಿದೆ. ತಮಿಳುನಾಡು, ಕೇರಳ ರಾಜ್ಯಗಳಲ್ಲೂ ಹಲವು ರ್ಯಾಲಿ ಹಾಗು ಪ್ರದರ್ಶನಗಳಲ್ಲಿ ಇವರು ಕಾರುಗಳೊಂದಿಗೆ ಭಾಗವಹಿಸಿದ್ದಾರೆ. ಈ ಅಪರೂಪದ ಕಾರುಗಳನ್ನು ನೋಡಲೆಂದೇ ದೇಶ ವಿದೇಶಗಳಿಂದ ಜನ ಬಂದು ಹೋಗುತ್ತಾರೆ.

ಅವರ ತಂದೆಯವರ ಸಂಗ್ರಹದಲ್ಲಿನ ಎತ್ತಿನಗಾಡಿಗೆ ಈಗ ಬರೋಬ್ಬರಿ 200 ವರ್ಷಗಳು.1925 ಮಾದರಿಯ ಒಂದು ಕಾರು ಇವರ ಸಂಗ್ರಹದಲ್ಲಿನ ಅತ್ಯಂತ ಹಳೆಯ ಕಾರು. ರಾಜ್ಯದ ಧರ್ಮಸ್ಥಳ ಹೊರತುಪಡಿಸಿದರೆ ಯಾವುದೇ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಳೆಯ ಕಾರುಗಳ ಸಂಗ್ರಹ ಮತ್ತೆಲ್ಲೂ ಇಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ 'ವಿಂಟೇಜ್ ಕಾರ್ ಫೆಸ್ಟಿವಲ್‌'ನಲ್ಲಿ ಇವರು ತಮ್ಮ ಕಾರುಗಳ ಪ್ರದರ್ಶನ ನಡೆಸಿದ್ದಾರೆ.

ಹಳೆಯದನ್ನೆಲ್ಲಾ ಗುಜುರಿಗೆ ಎಸೆಯುವ ಸಂಸ್ಕೃತಿಯ ಇಂದಿನ ದಿನಗಳಲ್ಲಿ ಕುಟ್ಟಿಹಾಜಿ ಗಮನ ಸೆಳೆಯುತ್ತಾರೆ. ಕಳೆದ ಮೂರುವರೆ ದಶಕಗಳಿಂದ ತಮ್ಮ ಜೀವಾಳವಾಗಿ ಈ ಹವ್ಯಾಸವನ್ನು ಇಟ್ಟುಕೊಂಡಿದಾದರೆ ಹಾಚಿ. ಬೆಂಗಳೂರು ಸೇರಿದಂತೆ ಯಾವುದೇ ಸ್ಥಳಕ್ಕೆ ಹೋದರೆ ಅವರ ಕಣ್ಣು ಹತ್ತಿರದ ಹಳೆಯ ವರ್ಕ್‌ಶಾಪ್‌ನ ಕಡೆಗೆ ಹೋಗುತ್ತದೆ.  ಅಲ್ಲಿನ ಅತ್ಯಂತ ಹಳೆಯ ಕಾರುಗಳನ್ನು ಹುಡುಕುತ್ತದೆ ಕಣ್ಣು. ಸಿಕ್ಕರೆ ಹಿಂದೆ ಮುಂದೆ ಯೋಚಿಸದೇ ಖರೀದಿಸಿಕೊಂಡು ಬರುತ್ತಾರೆ. ನಂತರ ಅವುಗಳಿಗೆ ಬಣ್ಣ ಬಳಿದು ಉತ್ತಮ ನಿರ್ವಹಣೆ ಮಾಡಿ ಓಡಾಡುವ ಸ್ಥಿತಿಗೆ ತರುತ್ತಾರೆ. ತಮ್ಮಲ್ಲಿರುವ ಎಲ್ಲ ಕಾರುಗಳೂ ಸುಸ್ಥಿತಿಯಲ್ಲಿ ಇವೆ ಎನ್ನುತ್ತಾರೆ ಹಾಜಿಯವರು. <

ಸಂಗ್ರದಲ್ಲಿ ಏನೇನಿವೆ?
86
ಹಳೆಯ ಕಾರುಗಳು

20
ಹಳೆಯ ಮಾದರಿ ದ್ವಿಚಕ್ರ ವಾಹನ

125
ವರ್ಷ ಹಿಂದಿನ ಸೈಕಲ್

200
ವರ್ಷ ದಾಟಿರುವ ಎತ್ತಿನಗಾಡಿ

15ಕ್ಕೂ ಹೆಚ್ಚು ಹಳೆಯ ಮಾದರಿ ಪೆಟ್ರೋಲ್ ಜೀಪು

-ಎಸ್.ಎಂ.ಮುಬಾರಕ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments