ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜೀವ ಹಿಂಡುವ ಪ್ರಾಣವಾಯು! (ಬೆಳ್ಳಿ ತಟ್ಟೆ 175)

Rashmi Kasaragodu
Updated On : 23 Apr 2013, 3:05 am

ನಿಮಗೆ ಆಶ್ಚರ್ಯ ಆಗಬಹುದು. ಆಮ್ಲಜನಕ ನಮ್ಮ ಪ್ರಾಣವಾಯು. ಆದರೆ ಅದುವೇ ನಮ್ಮ ಅನಾರೋಗ್ಯಕ್ಕೂ ಕಾರಣವಾದೀತು. ಮಾತ್ರವಲ್ಲ, ನಮ್ಮ ಜೀವವನ್ನೇ ತೆಗೆದೀತು!
ಆಹಾರ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿ ಅನೇಕ ಸಂಶೋಧನೆಗಳು ನಡೆಯುತ್ತಿವೆಯಷ್ಟೆ. ಅವೆಲ್ಲವುಗಳ ಸಾರಾಂಶವಾಗಿ ಮೂರು ಮುಖ್ಯ ಸಿದ್ಧಾಂತಗಳನ್ನು ಒಪ್ಪಲಾಗಿದೆ. ಅವು ಆಹಾರ-ಆರೋಗ್ಯ-ಅನಾರೋಗ್ಯದ ವಿಚಾರದಲ್ಲಿ ಹೊಸ ದಿಕ್ಕು ತೋರಿಸಿದ್ದಾವೆ ಎನ್ನುವುದೂ ನಿಜವೇ. ರೋಗದ ವಿರುದ್ಧ ಹೋರಾಡುವ ಆ್ಯಂಟಿ ಆಕ್ಸಿಡೆಂಟ್‌ಗಳು, ಕೊಬ್ಬಿನಲ್ಲಿರುವ ಊಹಾತೀತ ಗುಣಗಳು, ಹೊಸಹೊಸ ರೀತಿಯ ಆಹಾರ ಅಲರ್ಜಿಗಳು- ಇವೇ ಆ ಮೂರು ಪ್ರಮುಖ ಸಿದ್ಧಾಂತಗಳು. ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಆಹಾರ ಹೇಗೆ ರೋಗಕ್ಕೆ ಜನ್ಮ ನೀಡುತ್ತದೆ ಮತ್ತು ಹೇಗೆ ವಾಸಿ ಮಾಡುತ್ತದೆ ಎನ್ನುವುದು ಗೊತ್ತಾಗುತ್ತದೆ. ಆಗ ಅದಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿ ಬದಲಿಸಿಕೊಳ್ಳುವುದೂ ಸಾಧ್ಯವಾಗುತ್ತದೆ.
ನಮ್ಮ ಬಹಳಷ್ಟು ಆರೋಗ್ಯ ಸಮಸ್ಯೆಗಳ ಮೂಲವೇ ಆಮ್ಲಜನಕ. ನಮಗೆ ಗೊತ್ತಿರುವುದು ಆಕ್ಸಿಜನ್‌ನ ಒಂದು ರೂಪ ಮಾತ್ರ. ಹೀಗಾಗಿಯೇ ಅದನ್ನು ಪ್ರಾಣವಾಯು ಎನ್ನುವುದು. ಇಂಥ ಅನಿಲ ನಮ್ಮನ್ನು ಕಾಯಿಲೆಗೆ ದೂಡಿ, ಮರಣದ ಅಂಚಿಗೆ ಕೊಂಡೊಯ್ದು ನಿಲ್ಲಿಸುತ್ತದೆ ಎಂದು ಹೇಳಿದರೆ ಆಶ್ಚರ್ಯವಾಗುವುದು ಸ್ವಾಭಾವಿಕವೇ. ನಮ್ಮ ದೇಹದಲ್ಲಿರುವ ಕೋಶಗಳನ್ನು ಆಮ್ಲಜನಕದ ವಿಷಕಾರಿ ಅಣುಗಳು ಸುತ್ತುವರಿದಿರುತ್ತವೆ. ಅವನ್ನೇ ನಾವು 'ಆಕ್ಸಿಡೆಂಟ್‌'ಗಳು ಎನ್ನುವುದು. ಇವೇ ನಮ್ಮ ಅಸ್ತಿತ್ವವನ್ನೇ ನಾಶಪಡಿಸುವಂಥವು. ಇವಕ್ಕಿರುವ ವಿಧ್ವಂಸಕ ಸಾಮರ್ಥ್ಯ ಬೆರಗು ಮೂಡಿಸುತ್ತದೆ. ಈ 'ಆಕ್ಸಿಡೆಂಟ್‌'ಗಳು ರಕ್ತನಾಳಗಳನ್ನು ಹಾಳು ಮಾಡಬಲ್ಲವು. ಸಂಧುಗಳಲ್ಲಿ ನೋವು ಹುಟ್ಟಿಹಾಕಬಲ್ಲವು. ನರವ್ಯೂಹವನ್ನೇ ದಿಕ್ಕುತಪ್ಪಿಸಬಲ್ಲವು. ಕೊನೆಗೆ ಕ್ಯಾನ್ಸರ್ ಅನ್ನೂ ತರಬಲ್ಲವು. ಆಮ್ಲಜನಕದ ಬಗೆಗಿನ ಈ ಹೊಸ ಸಿದ್ಧಾಂತ ವಿಜ್ಞಾನ ಪ್ರಪಂಚದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ರೋಗದ ಮೂಲ ಮತ್ತು ಅದರ ನಿರ್ಮೂಲನೆ ಕುರಿತು ವಿಜ್ಞಾನಿಗಳಿಗೆ ಹೊಸ ದೃಷ್ಟಿಕೋನ ಒದಗಿಸಿದೆ. ಶರೀರಕ್ಕೆ ಘಾಸಿಯಾಗುವುದನ್ನು ತಡೆಯುವ ಸಾಮರ್ಥ್ಯ ಆಹಾರಕ್ಕೆ ಇದೆ ಎನ್ನುವ ವಾದಕ್ಕೆ ಈ ಸಿದ್ಧಾಂತ ಪುಷ್ಟಿ ನೀಡಿದೆ.
ಈವರೆಗಿನ ಮಾಹಿತಿಗಳಂತೆ ಶರೀರದೊಳಗೆ ನಡೆಯುವ ಆಮ್ಲಜನಕದ ವಿಧ್ವಂಸಕ ರಾಸಾಯನಿಕ ಪ್ರಕ್ರಿಯೆ ಕನಿಷ್ಠ 60 ವಿಧದ ಸೋಂಕು ರೋಗಗಳಿಗೆ ಕಾರಣ ಎನ್ನುವುದನ್ನು ಪತ್ತೆ ಮಾಡಲಾಗಿದೆ. ಅಲ್ಲದೆ ಮುಪ್ಪಿಗೂ, ಆಮ್ಲಜನಕಕ್ಕೂ ನಿಕಟ ಸಂಬಂಧವಿದೆ ಎನ್ನುವ ಹೊಸ ವಾದವನ್ನು ವಿಜ್ಞಾನಿಗಳು ಮುಂದಿಟ್ಟಿದ್ದಾರೆ.

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement