ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಶಭಾಷ್!

ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ರಂತಹ ಘಟಾನುಘಟಿ ಸುಗಮ ಸಂಗೀತಗಾರರ ಸಾಲಿನಲ್ಲೇ ಮಿನುಗಬೇಕಾಗಿದ್ದ ತಾರೆ ಸುಭಾಷ್, ನಮ್ಮಿಂದ ...

Rashmi Kasaragodu
Updated On : 26 Apr 2013, 1:12 am

ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್ರಂತಹ ಘಟಾನುಘಟಿ ಸುಗಮ ಸಂಗೀತಗಾರರ ಸಾಲಿನಲ್ಲೇ ಮಿನುಗಬೇಕಾಗಿದ್ದ ತಾರೆ ಸುಭಾಷ್, ನಮ್ಮಿಂದ ಶಾಶ್ವತವಾಗಿ ಮರೆಯಾದದ್ದು ಮೂರು ವರ್ಷಗಳ ಹಿಂದೆ. 2010 ಏಪ್ರಿಲ್ ನಾಲ್ಕರಂದು ಸಂಗೀತ ಪ್ರೇಮಿಗಳನ್ನು ಅಗಲಿದ ಸುಭಾಷ್ ಹಲವಾರು ಮಧುರ ಗೀತೆಗಳನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ.
ಚದುರಿ ಹೋಗಿದ್ದ ಅವರ ಗೀತರತ್ನಗಳನ್ನು ಹೆಕ್ಕಿ ತಂದಿರುವ ಅವರ ಪತ್ನಿ ಪದ್ಮಶ್ರೀ, ಅವುಗಳನ್ನು ಧ್ವನಿಸುರುಳಿಯ ರೂಪದಲ್ಲಿ ಸುಗಮ ಸಂಗೀತ ಲೋಕಕ್ಕೆ ನೀಡುತ್ತಿದ್ದಾರೆ. ಸುಹಾಸಂ (ಸುಭಾಷ್ ಹಾರೆಗೊಪ್ಪ ಸಂಗೀತ) ಪ್ರತಿಷ್ಠಾನ ಇದಕ್ಕೆ ಸಾಥ್ ನೀಡುತ್ತಿದೆ.
ನಾಲ್ಕು ವರ್ಷ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿದ್ದ 'ಏಕೆ ಹೀಗೆ ನಮ್ಮ ನಡುವೆ' ಎಂಬ ಧಾರಾವಾಹಿಯ ಶೀರ್ಷಿಕೆ ಗೀತೆಗೆ ರಾಗಸಂಯೋಜಿಸಿ ಹಾಡಿದ್ದವರು ಇದೇ ಸುಭಾಷ್. ಅದೇ ಗೀತೆಯ ಸಂಗೀತಕ್ಕೆ ಕಿರುತೆರೆ ಸಂಘದಿಂದ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಯ ಪಕ್ಕದ ಹಾರೆಗೊಪ್ಪ ಎಂಬ ಊರಿನ ಎಚ್.ಎಸ್.ಶ್ರೀಪಾದ್ ಭಟ್ ದಂಪತಿಗಳ ಮಗನಾಗಿ ಜನಿಸಿದ ಸುಭಾಷ್ ಕೇವಲ 34 ವರ್ಷ ಬದುಕಿದ್ದರು.
ಸೊರಬ ನಾರಾಯಣಪ್ಪ ಹಾಗು ಹುಮಾಯುನ್ ಹರ್ಲಾಪುರ ಅವರಲ್ಲಿ ಆರಂಭಿಕ ಹಿಂದುಸ್ತಾನಿ ಸಂಗೀತ ಅಭ್ಯಾಸ. ಧಾರವಾಡ ವಿವಿಯಲ್ಲಿ ಸಂಗೀತ ವಿಭಾಗದ ಸ್ನಾತಕೋತ್ತರ ಪದವಿ. ಮುಂದೆ ವೆಂಕಟೇಶ್ ಕುಮಾರ್, ಕೈವಲ್ಯ ಕುಮಾರ್ ಗುರವ್ ಹಾಗು ಪರಮೇಶ್ವರ ಭಟ್ ಅವರಲ್ಲಿ ಶಿಷ್ಯವೃತ್ತಿ. ತುಮಕೂರಿನ ಟಿವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಂಟು ವರ್ಷ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಸಾವಿರಾರು ಸಂಗೀತ ಕಾರ್ಯಕ್ರಮಗಳು ಹಾಗು ಸಾವಿರಾರು ಪುರಸ್ಕಾರಗಳು. ಶಾಸ್ತ್ರೀಯ, ಸುಗಮ, ರಂಗ ಸಂಗೀತ, ಜಾನಪದ ಸಂಗೀತ ಹೀಗೆ ಎಲ್ಲದರಲ್ಲೂ ಪರಿಣಿತರಾಗಿದ್ದರು. ಹೆಗ್ಗೋಡಿನ ನೀನಾಸಂ ನಾಟಕಗಳಿಗೆ ಹಲವಾರು ಶೈಲಿಯಲ್ಲಿ ಪ್ರಯೋಗ ಮಾಡಿ ರಂಗಭೂಮಿಯ ಪಂಡಿತರಿಂದಲೂ ಸೈ ಎನಿಸಿಕೊಂಡಿದ್ದರು. 'ನಮ್ಮ ರಂಗನ ಕಂಡಿರೇನೆ' ಹಾಗು 'ರಾಮ ರಾಘವ ಕೃಷ್ಣ ಮಾಧವ' ಇವರ ಜನಪ್ರಿಯ ಧ್ವನಿಮುದ್ರಿಕೆಗಳು. ಸಿಡಿಗಳಿಗಾಗಿ: 08183-212180, 260092, 9686054906 


ಗೀತಗುಚ್ಛ ಸುಭಾಷ್


ಸುಭಾಷ್ ರಾಗ ಸಂಯೋಜಿಸಿ ಹಾಡಿರುವ 80 ಗೀತೆಗಳ ಗುಚ್ಛ 'ನೆನಪಿನಲ್ಲಿ' ಎಂಬ ಅಡಕ ಮುದ್ರಿಕೆ ಸಾಗರದ ಶ್ರೀ ಶಾರದಾಂಬಾ ಸಭಾಭವನದಲ್ಲಿ ಇಂದು(ಎ.23) ಬಿಡುಗಡೆ.  ನೀನಾಸಂನ ರಂಗಕರ್ಮಿ ಕೆ.ವಿ. ಅಕ್ಷರ ಸುಹಾಸಂ ಸಂಸ್ಥೆಗೆ ಚಾಲನೆ ನೀಡುತ್ತಿದ್ದಾರೆ. ನಿರ್ದೆಶಕ ಚಿದಂಬರ ರಾವ್ ಜಂಬೆ, ನಟ ರಮೇಶ್ ಬೇಗಾರ್ ಉಪಸ್ಥಿತರಿರುತ್ತಾರೆ. ಸುಭಾಷ್ ಅವರ ಹಾಡುಗಳನ್ನು ಗಾಯಕ ರವಿ ಮೂರೂರು ಹಾಗು ಪಂಡಿತ್ ನಾಗಭೂಷಣ ಹೆಗಡೆ ಹಾಡಲಿದ್ದಾರೆ.


-ಚಿನ್ಮಯ ಎಂ.ರಾವ್ ಹೊನಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments