ಚರ್ಮಶ್ಲೋಕ
ಬೇಸಿಗೆ ಈಗಾಗಲೇ ತನ್ನ ಪ್ರಖರತೆ ತೋರುತ್ತಿದೆ. ಈ ದಿನಗಳಲ್ಲಿ ಹೊರಗೆ ಓಡಾಡುವವರು ಬಿಸಿಲಿನ ತಾಪ ತಡೆಯಲು ಹಚ್ಚಿಕೊಳ್ಳುವ ವಿವಿಧ ರೀತಿಯ ಸನ್ಸ್ಕ್ರೀನ್ ಲೋಷನ್ ಮತ್ತು ಕ್ರೀಮುಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಕಾಣಸಿಗುತ್ತಿವೆ. ಸೂರ್ಯನ ಹೆಚ್ಚಿನ ತಾಪದಿಂದ ಚರ್ಮಕ್ಕೆ ಆಗಬಹುದಾದ ಉರಿ, ಚರ್ಮ ಒರಟಾಗುವಿಕೆಯನ್ನು ತಡೆಯಲು ಈ ದ್ರವಗಳು ಸಹಕಾರಿ.
ಆದರೆ, ಇವನ್ನು ಬಳಸುವವರು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳ ಗುಣಾವಗುಣಗಳನ್ನು ತಿಳಿದು ಉಪಯೋಗಿಸುವುದು ಸೂಕ್ತ. ಇದನ್ನು ಮಕ್ಕಳಿಗೂ ಬಳಕೆ ಮಾಡಬಹುದಾದರೂ, ಅವರ ಎಳೆಯ ಚರ್ಮಕ್ಕೆ ಯಾವುದೇ ದುಷ್ಪರಿಣಾಮ ಆಗದು ಎಂದು ಖಾತ್ರಿಪಡಿಸಿಕೊಳ್ಳುವ ಮುನ್ನ ಬಳಸದಿರಿ.
ಇತ್ತೀಚಿನ ಕೆಲವು ಸಂಶೋಧನೆಗಳು ಹೇಳುವಂತೆ ಸನ್ಸ್ಕ್ರೀನ್ ಬಳಕೆಯಿಂದ ಸಾಕಷ್ಟು ಜನರಿಗೆ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳು ಇವೆ. ಸಂಶೋಧಕರ ಪ್ರಕಾರ, ಈ ರೀತಿಯ ದ್ರವಗಳ ಬಳಕೆ ಮಾಡುವವರು ಹೆಚ್ಚಿನ ಕಾಲ ಸೂರ್ಯನ ತಾಪಕ್ಕೆ ಚರ್ಮವನ್ನು ಒಡ್ಡುವುದರಿಂದ ಅದರಲ್ಲಿನ ವಿಕಿರಣಗಳು ಈ ಲೇಪನವನ್ನೂ ಮೀರಿ ಚರ್ಮದೊಳಗೆ ಸೇರುತ್ತದೆ. ಅದಲ್ಲದೆ ಈ ದ್ರವಗಳಲ್ಲಿನ ರಾಸಾಯನಿಕಗಳು ಕೂಡ ಚರ್ಮವನ್ನು ಸೇರಿಕೊಳ್ಳುತ್ತವೆ.
ಬಹಳಷ್ಟು ಸನ್ಸ್ಕ್ರೀನ್ ಕ್ರೀಮ್ಗಳು ಸೂರ್ಯ ಕಿರಣದಲ್ಲಿನ ಅತಿನೇರಳೆ-ಬಿ ಕಿರಣಗಳನ್ನು ಮಾತ್ರ ತಡೆಯುವಂತಹವು. ಇದರಿಂದ ಚರ್ಮ ಕೆಂಪಾಗುವಿಕೆ ಅಥವ ಒರಟಾಗುತ್ತದೆ. ಆದರೆ ಇದಕ್ಕಿಂತ ಹೆಚ್ಚು ಆತಂಕಕಾರಿಯಾದುದು ಸೂರ್ಯಕಿರಣದ ಅತಿನೇರಿಳೆ-ಎ ಕಿರಣಗಳು. ಇದು ಚರ್ಮದ ಮೇಲೆ ಮಾಡಬಹುದಾದ ಪರಿಣಾಮ ತಡೆಯಲು ಸಾಮಾನ್ಯ ಕ್ರೀಮ್ಗಳು ಶಕ್ತವಲ್ಲ. ಇವುಗಳಿಂದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ನಾವು ಬಳಸುವ ಎಲ್ಲ ಕ್ರೀಮ್ಗಳಲ್ಲಿ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ (ಎಸ್ಪಿಎಫ್) ಬಗ್ಗೆ ಹೇಳಿರುತ್ತಾರೆ. ಇದು ಎಷ್ಟೇ ಹೆಚ್ಚಿನ ಮಟ್ಟದಲ್ಲಿದ್ದರೂ ಅದು ಯುವಿಎಗಳ ಕ್ರಿಯೆಯನ್ನು ತಡೆಯಲಾರದು. ಈ ಕ್ರೀಮುಗಳಲ್ಲಿರುವ ಫ್ರೀ ರ್ಯಾಡಿಕಲ್ಗಳು ದೇಹದ ಡಿಎನ್ಎ ಮತ್ತು ಚರ್ಮದ ಸೆಲ್ಗಳನ್ನೇ ಹಾಳು ಮಾಡಬಹುದು. ಇದರಿಂದ ಚರ್ಮ ಬೇಗನೆ ಸುರುಟಿಕೊಳ್ಳುವುದು ಮತ್ತು ಅದು ಚರ್ಮ ಕ್ಯಾನ್ಸರಿಗೆ ದಾರಿ ಮಾಡಿಕೊಡುವ ಸಾಧ್ಯತೆಯನ್ನು ಸಂಶೋಧಕರು ಹೇಳುತ್ತಾರೆ. ಹೀಗಾಗಿ ನಾವು ಬಳಸುವ ಸನ್ಸ್ಕ್ರೀನ್ಗಳು ಇವೆರಡೂ ಕಿರಣಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯ ಉಳ್ಳದ್ದಾಗಿರಬೇಕು.
ಸೂರ್ಯನ ಕಿರಣದ ತೀವ್ರತೆ ತಡೆದುಕೊಳ್ಳಲು ಬಳಸುವ ಈ ಸಾಧನಗಳಲ್ಲಿ ಅವೋ ಬೆಂಝೋನ್ ಮತ್ತು ಸತು(ಝಿಂಕ್) ಆಕ್ಸೈಡ್ ಮಿಶ್ರಿತ ರಾಸಾಯನಿಕವಿರುತ್ತದೆ. ಹೀಗೆ ಖನಿಜಯುಕ್ತ (ಟೈಟೇನಿಯಂ ಡೈ ಆಕ್ಸೈಡ್ ಕೂಡ) ಕ್ರೀಂಗಳು ಎರಡೂ ರೀತಿಯ ಅತಿನೇರಳೆ ಕಿರಣಗಳನ್ನು ತಡೆಯಬಲ್ಲವು. ಅವೋ ಬೆಂಝೋನ್ ಉಳ್ಳ ಕ್ರೀಮುಗಳ ಬಳಕೆ ಈಜುಕೊಳ ಮತ್ತು ಸಮುದ್ರ ತಟದ ವಿಹಾರ ಹೋಗುವವರಿಗೆ ಸೂಕ್ತವಲ್ಲ. ಏಕೆಂದರೆ ಇದು ಪರಿಸರಸ್ನೇಹಿಯಾಗಿದ್ದರೂ, ನೀರಿನಲ್ಲಿ ಸುಲಭವಾಗಿ ಸೇರಿಕೊಂಡು ಅಡ್ಡ ಪರಿಣಾಮಗಳು ಆಗುವ ಸಾಧ್ಯತೆ ಇದೆ.
ನಮ್ಮ ದೇಹದ ರಕ್ಷಣೆಯಲ್ಲಿ ಸೂರ್ಯನ ಕಿರಣಗಳ ಪಾತ್ರವೂ ಹಿರಿದೇ ಆಗಿದೆ. ನಗರವಾಸಿಗಳಿಗಂತೂ ಸೂರ್ಯನ ಬೆಳಕು ದೇಹದ ಮೇಲೆ ಬೀರುವುದೇ ಅಪರೂಪ. ಏಕೆಂದರೆ ಕಟ್ಟಡಗಳು ಸೂರ್ಯನ ನೈಸರ್ಗಿಕ ಬೆಳಕನ್ನು ಹೊರಗೇ ಇಟ್ಟಿರುತ್ತವೆ. ಸೂರ್ಯ ಬೆಳಕು, ಶಾಖ ಮೈಮೇಲೆ ನೇರ ಬೀಳುವುದರಿಂದ ದೇಹಕ್ಕೆ ಬೇಕಾದ ಬಹು ಮುಖ್ಯವಾದ ವಿಟಮಿನ್ ಡಿ ದೊರೆಯುತ್ತದೆ. ಇದು ದೇಹಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹಕ್ಕೆ ಸರಿಯಾದ ರೀತಿಯಲ್ಲಿ ಸೂರ್ಯನ ಬೆಳಕು ದೊರೆಯದಿದ್ದಲ್ಲಿ ಅದರಿಂದ ಚರ್ಮದಲ್ಲಿನ ವರ್ಣದ್ರವ್ಯ (ಪಿಗ್ಮೆಂಟೇಷನ್) ಮತ್ತು ಅತಿನೇರಳೆ ವಿಕಿರಣಗಳ ನಡುವೆ ಏರುಪೇರಾಗುವ ಸಾಧ್ಯತೆ ಹೆಚ್ಚು. ಇದರಿಂದ ದೇಹಕ್ಕೆ ದೊರೆಯಬೇಕಾದ ವಿಟಮಿನ್ ಡಿನಲ್ಲೂ ವ್ಯತ್ಯಯವಾಗುತ್ತದೆ. ನಮ್ಮ ಚರ್ಮದಲ್ಲಿರುವ ಮೆಲಾನಿನ್ ಪಿಗ್ಮೆಂಟ್ ಅದಕ್ಕೆ ಅವಶ್ಯವಾದ ಮಟ್ಟದಲ್ಲಿ ಸೂರ್ಯನ ಬೆಳಕನ್ನು ಹೀರುತ್ತದೆ. ಈ ಪಿಗ್ಮೆಂಟ್ಗಳು ವಿಕಿರಣದಿಂದ ವಿಟಮಿನ್ ಡಿ ನೀಡಿ ಅದರಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಪಡೆಯುವಲ್ಲಿ ಸಹಾಯ ಮಾಡುತ್ತದೆ.
ಅಲೋವೆರಾ ಉತ್ತಮ
ಸೂರ್ಯನ ಕಿರಣಗಳ ತೀವ್ರತೆ ಚರ್ಮದ ಮೇಲೆ ಅಗತ್ಯಕ್ಕಿಂತ ಹೆಚ್ಚಾಗಿ ಬಿದ್ದಾಗಲೂ ಅದರಿಂದ ಬೇರೆ ಪರಿಣಾಮಗಳು ಉಂಟಾಗುತ್ತವೆ. ಚರ್ಮದಲ್ಲಿನ ಫೋಲೆಟ್ಗಳನ್ನು ಅವು ನಾಶ ಮಾಡುವುದರಿಂದ ಚರ್ಮದ ಸೆಲ್ಗಳ ವಿಭಜನೆಯಲ್ಲಿ ವ್ಯತ್ಯಯವಾಗುತ್ತದೆ. ಹೀಗಾಗಿ ಸನ್ಸ್ಕ್ರೀನ್ ಕ್ರೀಮ್ಗಳ ಬಳಕೆಯಲ್ಲಿ ಆದಷ್ಟೂ ನೈಸರ್ಗಿಕ, ಅಂದರೆ ಸಸ್ಯಜನ್ಯ ವಸ್ತುಗಳಿಂದ ತಯಾರಾದವುಗಳ ಬಳಕೆ ಉತ್ತಮ. ಈ ನಿಟ್ಟಿನಲ್ಲಿ ಅಲೋವರಾ ಒಂದು ಉತ್ತಮ ಸಸ್ಯವಾಗಿದೆ. ಇದರಿಂದ ತಯಾರಿಸಿದ ಸನ್ಸ್ಕ್ರೀನ್ಗಳು ಚರ್ಮದ ಆರ್ದ್ರತೆ ಉಳಿಸುವುದಲ್ಲದೆ, ಸೂರ್ಯ ಕಿರಣಗಳ ಯಾವುದೇ ಅತೀತ ಗುಣಗಳಿಗೆ ತಡೆಗೋಡೆಯಾಗಬಲ್ಲುದು.
- ಉಷಾ ಎಸ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.