ಮುಳ್ಳಿನ ಗಿಡದ ಹೂವು
ಇಬ್ಬರು ಯಾತ್ರಿಕರು ಮೋದಲ ಬಾರಿಗೆ ಗುಲಾಬಿ ಗಿಡವೊಂದನ್ನು ನೋಡಿದರು. ಅದರಲ್ಲಿ ಒಬ್ಬನ ಉದ್ಗಾರ ಹೀಗಿತ್ತು: 'ಹೂವಿನ ಪೊದೆ ಮುಳ್ಳನ್ನು ಹೊಂದಿದೆ!' ಇನ್ನೊಬ್ಬನ ಪ್ರತಿಕ್ರಿಯೆ ಹೀಗೆ: 'ಮುಳ್ಳಿನ ಪೊದೆಯಲ್ಲಿ ಹೂವು ಬಿಟ್ಟಿದೆ!' ಇದರಲ್ಲಿ ಯಾವುದು ನಿಜ?
ಎರಡೂ ಪ್ರತಿಕ್ರಿಯೆಗಳೂ ನಿಜವೇ. ಇಬ್ಬರೂ ತಮಗೆ ಕಂಡ ಸತ್ಯವನ್ನೇ ಹೇಳಿದ್ದಾರೆ. ಆದರೆ ಇಬ್ಬರೂ ನೋಡಿದ ದೃಷ್ಟಿಯಲ್ಲೇ ಮೂಲಭೂತ ಭಿನ್ನತೆ ಇದೆ. ಇಲ್ಲಿ ಮುಳ್ಳಿನ ಗಿಡವನ್ನು ಕಂಡವನನ್ನು ನಿರಾಶಾವಾದಿಯೆಂದು ತೀರ್ಮಾನಿಸಲಾಗದು. ಯಾಕೆಂದರೆ ಅವನು ಅದರಲ್ಲಿ ಹೂವನ್ನು ಕಂಡಿದ್ದಾನೆ. ಹೂವಿನ ಗಿಡ ಎಂದವನನ್ನು ಆಶಾವಾದಿಯೆಂದು ನಿರ್ಧರಿಸಲೂ ಆಗದು. ಯಾಕೆಂದರೆ ಆತನಿಗೆ ಅದರಲ್ಲಿ ಮುಳ್ಳು ಕಾಣಿಸಿದೆ. ಬದುಕು ಇಂಥ ಸುಲಭದ ನಿರ್ಧಾರಗಳಲ್ಲಿ ಅಂತಿಮಗೊಳ್ಳುವುದಿಲ್ಲ. ಆದರೆ ಇದರಿಂದ, ಯಾರ ಚಿಂತನೆಯ ಪರಿ ಹೇಗೆ ಎಂಬುದನ್ನು ನಿರ್ಣಯಿಸಬಹುದು.
ಅರ್ಧ ತುಂಬಿದ ಕೊಡವನ್ನು ನೋಡಿದವನೊಬ್ಬ ಇದರಲ್ಲಿ ಅರ್ಧ ನೀರಿದೆ ಎಂದರೆ, ಇನ್ನೊಬ್ಬನು ಇದು ಅರ್ಧ ಖಾಲಿಯಾಗಿದೆ ಎನ್ನುತ್ತಾನೆ ಎಂಬ ಕತೆಯನ್ನು ನೀವು ಕೇಳಿರಬಹುದು. ಇದು ಕೂಡ ದೃಷ್ಟಿಕೋನದ ವ್ಯತ್ಯಾಸವನ್ನು ಸೂಚಿಸುತ್ತದೆ. ಒಂದೇ ದೃಶ್ಯವನ್ನು ಒಬ್ಬನು ಧನಾತ್ಮಕವಾಗಿ ನೋಡಿದರೆ, ಇನ್ನೊಬ್ಬ ವ್ಯಕ್ತಿ ಋಣಾತ್ಮಕವಾಗಿ ನೋಡುತ್ತಾನೆ. ಋಣಾತ್ಮಕ ಚಿಂತನೆಯಲ್ಲಿ ಸೋಲನ ಬೀಜಗಳಿವೆ. ಧನಾತ್ಮಕ ಚಿಂತನೆಯಲ್ಲಿ ಗೆಲುವಿನ ರಹಸ್ಯಗಳಿವೆ.
ನೀವು ಯಾವುದನ್ನು ಕಾಣುತ್ತೀರಿ? ಹೂವಿನ ಗಿಡದಲ್ಲಿ ಮುಳ್ಳೋ, ಮುಳ್ಳಿನ ಗಿಡದಲ್ಲಿ ಹೂವೋ? ಎಂಬುದರ ಮೇಲೆ ನಮ್ಮ ಜೀವನ ಪ್ರಯಾಣದ ಸುಖಸಂಕಟಗಳು ನಿರ್ಧಾರವಾಗುತ್ತವೆ. ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರೆಲ್ಲರೂ ಕಳ್ಳರೇ ಇರಬಹುದು. ಆದ್ದರಿಂದ ಇವರ್ಯಾರಿಗೂ ಮತ ಹಾಕದೆ ಆ ದಿನ ಮನೆಯಲ್ಲೇ ಇದ್ದುಬಿಡುತ್ತೇನೆ ಎಂಬುದು ಋಣಾತ್ಮಕ ಯೋಚನೆ. ಎಲ್ಲರೂ ವಂಚಕರೇ ಆದರೇನಾಯಿತು, ನಾನು ಕಡಿಮೆ ವಂಚಕನಿಗೆ ಮತ ಹಾಕುತ್ತೇನೆ. ನನ್ನ ಒಂದು ವೋಟಿನಿಂದಲೇ ಆತ ಗೆಲ್ಲಲಿಕ್ಕಿಲ್ಲವೆ ಎಂದು ಯೋಚಿಸಿದರೆ ಧನಾತ್ಮಕ ಚಿಂತನೆ. ಇಂಥ ಚಿಂತನೆಯು ನಮ್ಮನ್ನು ಮಾತ್ರವಲ್ಲ, ನಮ್ಮ ಸಮಾಜವನ್ನೂ ವಿವೇಕದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಒಬ್ಬ ವ್ಯಕ್ತಿಯ ವಿವೇಕವು ಸಾಮುದಾಯಿಕ ವಿವೇಕವೂ ಆಗಿ, ಎಲ್ಲರಿಗೂ ಒಳಿತನ್ನು ಸಾಧಿಸುವ ಪ್ರಕ್ರಿಯೆಯಾಗಿ ಬದಲಾಗುತ್ತದೆ. ಈಗ ಹೇಳಿ, ನಿಮ್ಮ ಆಯ್ಕೆ ಯಾವುದು?
- ಸಹನೆ