ಫಲಕಾರಿ
ಕ್ಯಾನ್ಸರ್ ಬಂತೆಂದರೆ... ಅಂತ್ಯಕಾಣದ ಭೀತಿ. ಸರಿಯಾದ ಚಿಕಿತ್ಸೆ ಸಿಕ್ಕಿ, ಭೀತಿಯ ದಿನಗಳು ಮುಗಿದರೂ ಮತ್ತೇನೋ ಆತಂಕ. ಅದರಲ್ಲೂ ಮಗು ಪಡೆಯಬೇಕು ಎಂಬ ಆಸೆಯಲ್ಲಿರುವವರಿಗೆ ಬದುಕು ಮುಗಿದೇಹೋಯ್ತೇನೋ ಎಂಬ ತಳಮಳ. ಕಾರಣ, ರೇಡಿಯೇಶನ್, ಕಿಮೋಥೆರಪಿ ಮುಂತಾದ ಕ್ಯಾನ್ಸರ್ ಚಿಕಿತ್ಸೆಗಳು ಭವಿಷ್ಯದ ಫಲವಂತಿಕೆಯ ಮೇಲೆ ಉಂಟುಮಾಡುವ ಋಣಾತ್ಮಕ ಪರಿಣಾಮ.
ಹಲವಾರು ಕೇಸುಗಳಲ್ಲಿ ಈ ಚಿಕಿತ್ಸೆಗಳು ರೋಗಿಯ ಬಂಜೆತನಕ್ಕೆ ಕಾರಣವಾಗುವುದು ನಿಜ. ಕ್ಯಾನ್ಸರ್ ಜಗತ್ತಿನೊಳಗೆ ರೋಗಿಯು ನೂಕಲ್ಪಟ್ಟಾಗ ರೋಗವು ಗುಣವಾಗುವುದೇ ಎಂಬುದು ಪ್ರಾಥಮಿಕ ಆಸೆಯಾಗಿರುತ್ತದೆ. ರೋಗಿಗೂ ತನ್ನ ಫಲವಂತಿಕೆಯ ಮೇಲೆ ದುಷ್ಪರಿಣಾಮವಾಗಬಹುದೆಂಬ ಜ್ಞಾನವಿರುತ್ತದೆ. ಆದರೆ ಆಗ ಪರಿಸ್ಥಿತಿಯು ಎಷ್ಟೊಂದು ಎದೆಗುಂದುವಂತಿರುತ್ತದೆ ಎಂದರೆ, ಶೀಘ್ರವಾಗಿ ಗುಣಮುಖವಾಗುವ ನಿರೀಕ್ಷೆಯೊಂದೇ ಮನಸ್ಸಿನಲ್ಲಿರುತ್ತದೆ. ಆದರೆ ಭ್ರೂಣ ಶೀತಲೀಕರಣ ತಂತ್ರಜ್ಞಾನದಿಂದ ಫಲವಂತಿಕೆಯನ್ನು ಕಾದಿಡುವ ಆಯ್ಕೆಯ ಸಾಧ್ಯತೆ ಈಗಿನ ಹೊಸ ಭರವಸೆ.
ಕಳೆದ ದಶಕದಲ್ಲಿ, ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಉಂಟಾದ ಪ್ರಗತಿಗಳಿಂದಾಗಿ ಕ್ಯಾನ್ಸರ್ ರೋಗಿಗಳು ತಮ್ಮ ವೀರ್ಯ, ಅಂಡಾಣು ಹಾಗೂ ಭ್ರೂಣಗಳನ್ನು ಸಂಗ್ರಹಿಸಿ ಶೀತಲೀಕರಣ ವಿಧಾನದಲ್ಲಿ ಸಂರಕ್ಷಿಸಿ ಗುಣಮುಖರಾದ ನಂತರ ಪುನಃ ನಿರ್ವಹಿಸುವುದು ಸಾಧ್ಯವಾಗಿದೆ. ವೀರ್ಯ ಸಂಗ್ರಹಿಸುವ ಹಾಗೂ ಸಂರಕ್ಷಿಸುವ ವಿಧಾನ ಅಷ್ಟೇನೂ ಕ್ಲಿಷ್ಟವಾದುದಲ್ಲ. ಹಾಗೂ ಇದು ಫಲಕಾರಿಯಾದ ವಿಧಾನ. ಸ್ತ್ರೀಯರ ಅಂಡಾಣುಗಳನ್ನು ಸಂಗ್ರಹಿಸುವ ಹಾಗೂ ಸಂರಕ್ಷಿಸುವ ಕಾರ್ಯ ತುಸು ಸಂಕೀರ್ಣ ಹಾಗೂ ಹೆಚ್ಚಿನ ವೆಚ್ಚದಾಯಕ. ಮೊದಲು ಫಲವಂತಿಕೆಯ ಹಾರ್ಮೋನ್ ಸ್ರಾವವನ್ನು ಒಂದು ವಾರಕ್ಕೂ ಅಧಿಕ ಕಾಲ ಗಮನಿಸಲಾಗುತ್ತದೆ. ನಂತರ ಸಾಮಾನ್ಯ ಅರಿವಳಿಕೆ ನೀಡಿ ಶಸ್ತ್ರಕ್ರಿಯೆಯ ಮೂಲಕ ಸಂಗ್ರಹಿಸಲಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳು ಅಂಡಾಣುಗಳನ್ನು (15-20) ಶೀತಲೀಕರಣಕ್ಕೆ ನೀಡಲು ಹೆಚ್ಚಿನ ಅಂಡಾಣು ಬ್ಯಾಂಕುಗಳು ಶಿಫಾರಸು ಮಾಡುತ್ತವೆ. ಈ ಪ್ರಕ್ರಿಯೆ ಮಾಡಿಸಿಕೊಳ್ಳುವಷ್ಟು ಸಮಯ ರೋಗಿಗಳಿಗೆ ಲಭ್ಯವಿರದೇ ಇರುವುದು ಫಲವಂತಿಕೆಯನ್ನು ಸಂರಕ್ಷಿಸುವ ಕಾರ್ಯಕ್ಕಿರುವ ಅಡ್ಡಿ. ಆದರೆ ಈ ನಿಟ್ಟಿನಲ್ಲಿ ವಿಟ್ರೋ ಮ್ಯಾಚುರೇಶನ್ (ಐವಿಎಂ) ಎಂಬ ಪ್ರಯೋಗ ಚಾಲ್ತಿಯಲ್ಲಿದೆ. ಈ ವಿಧಾನದಲ್ಲಿ ಮಹಿಳೆಯ ಅಂಡಾಣುಗಳನ್ನು ಹಾರ್ಮೋನು ಉದ್ದೀಪನೆಯ ಪೂರ್ವವ್ಯವಸ್ಥಾಪನೆಯಿಲ್ಲದೆ ಸಂಗ್ರಹಿಸಲಾಗುತ್ತದೆ. ಒಮ್ಮೆ ಇದು ಪಕ್ಕಾ ಆಯಿತೆಂದರೆ ಅಂಡಾಣು ಸಂಗ್ರಹ ಹಾಗೂ ಸಂರಕ್ಷಣೆ ಸರಳಗೊಳ್ಳಬಹುದು. ಈ ವಿಧಾನವು ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭಿಸುವಲ್ಲಿ ವಿಳಂಬವನ್ನು ಕಡಿಮೆಗೊಳಿಸುತ್ತದೆ ಅಲ್ಲದೆ ಅಂಡಾಣು ಸಂಗ್ರಹದ ವೆಚ್ಚವನ್ನು ಕೂಡ ಕಡಿಮೆ ಮಾಡಬಹುದು. ಆದರೆ ಫಲಪ್ರದ ಅಂಡಾಣುಗಳನ್ನು ಐವಿಎಂ ಮೂಲಕ ಸಂಗ್ರಹಿಸುವ ಪರಿಣಾಮಕಾರಿ ಕ್ರಮ ಇದುವರೆಗೂ ಜಾರಿಯಾಗಿಲ್ಲ.
ಭ್ರೂಣ ಶೀತಲೀಕರಣ ವಿಧಾನವು ಕಾರ್ಯಸಾಧ್ಯ ಹಾಗೂ ಫಲದಾಯಕ ಎಂದು ಸಾಬೀತಾಗಿದೆ. ಆದರೆ, ಈ ಸೇವೆ ಕೇವಲ ಹಣವುಳ್ಳವರಿಗಷ್ಟೇ ದೊರೆಯುವಂತಾಗದೆ, ಅದನ್ನು ಬಯಸುವ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕಾಗಿದೆ.
-ಡಾ.ಮನಿಶಾ ಸಿಂಗ್
(ಲೇಖಕಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ತ್ರೀರೋಗ, ಸಂತಾನೋತ್ಪತ್ತಿ ಔಷಧಿ, ಶಸ್ತ್ರಚಿಕಿತ್ಸೆ ತಜ್ಞೆ)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.