ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕನ್ನಡ ಕನ್ನಡ ಬಹರೇನ್ ನಮ್ಮ ಸಂಗಡ

ಗೂಡಿನಲ್ಲಿರುವವರದ್ದು ಒಂದು ಭ್ರಮೆ, ನಮ್ಮನ್ನು ಬಿಟ್ಟು ಹೋದ ಹಕ್ಕಿಗಳು ಮೂಲನೆಲೆಯನ್ನು ಮರೆತೇಬಿಡುತ್ತವೆ ಎಂದು.

Rashmi Kasaragodu
Updated On : 2 Aug 2013, 7:18 am

ಗೂಡಿನಲ್ಲಿರುವವರದ್ದು ಒಂದು ಭ್ರಮೆ, ನಮ್ಮನ್ನು ಬಿಟ್ಟು ಹೋದ ಹಕ್ಕಿಗಳು ಮೂಲನೆಲೆಯನ್ನು ಮರೆತೇಬಿಡುತ್ತವೆ ಎಂದು. ಕಾಳು ಅರಸಿ ಹಾರಿ ಹೋದ ಪಕ್ಷಿಗಳಿಗೋ ಸದಾ ತಮ್ಮ ಮೂಲದ್ದೇ ಕನವರಿಕೆ. ಎಲ್ಲಿದ್ದರೂ ಅವು ಮತ್ತೊಂದು ಗೂಡು ಕಟ್ಟುವುದು 'ಕನ್ನಡ' ಎನ್ನುವ ವಟವೃಕ್ಷದ ಮೇಲೆಯೇ. ಅವರಿಗೆ ನವೆಂಬರ್ ಮಾತ್ರವಲ್ಲ, ಪ್ರತಿದಿನವೂ ಕನ್ನಡದ ನಿತ್ಯೋತ್ಸವ.
ಅದನ್ನು ಪ್ರತ್ಯಕ್ಷ ನೋಡುವುದಿದ್ದರೆ ನೀವು ನಾಳೆ (ಆ.4) ಬೆಂಗಳೂರಿನಲ್ಲಿ ನಡೆಯುವ 'ಬಹರೇನ್ ಕನ್ನಡೋತ್ಸವ'ಕ್ಕೆ ಬರಬೇಕು.
ಬಹರೇನ್‌ನಲ್ಲಿ ಅಂದಾಜು 25 ಸಾವಿರ ಕನ್ನಡಿಗರಿದ್ದಾರೆ. ಕನ್ನಡ ಸಂಘವನ್ನೂ ಕಟ್ಟಿಕೊಂಡಿದ್ದಾರೆ. ವಾರಕ್ಕೊಮ್ಮೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ತರಗತಿಗಳನ್ನು ನಡೆಸುತ್ತಾರೆ. ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸುತ್ತಾರೆ. ಯಕ್ಷಗಾನ ತಂಡವನ್ನೂ ಕಟ್ಟಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ಭರತನಾಟ್ಯ, ಕನ್ನಡ ಗೀತೆಗಳ ಗಾಯನ, ಜನಪದ ಗೀತೆಗಳ ಗಾಯನ, ಜನಪದ ನೃತ್ಯಮೊದಲಾದವನ್ನು ಕಲಿಸುತ್ತಾರೆ. ಬಹರೇನ್ ಕನ್ನಡಿಗರ ಪ್ರತಿನಿಧಿಯಾಗಿ 50 ಕಲಾವಿದರ ತಂಡ ಬೆಂಗಳೂರಿಗೆ ಬಂದಿದೆ.
ಕನ್ನಡೋತ್ಸವದ ಪ್ರಮುಖ ರೂವಾರಿ ಕಿರಣ್ ಉಪಾಧ್ಯಾಯ. ಅವರ ಮುಖದಲ್ಲಿ ಕಂಡೂ ಕಾಣದಂತಹ ಆತಂಕ. ಇಲ್ಲಿರುವವನ್ನು ಅಲ್ಲಿಗೆ ಕರೆಸಿಕೊಂಡು ಕಾರ್ಯಕ್ರಮ ಏರ್ಪಡಿಸುವುದು ಬೇರೆ, ಅಲ್ಲಿಂದ ಇಲ್ಲಿಗೆ ಬಂದು ತಮ್ಮ ಪ್ರತಿಭೆ ತೋರುವುದು ಬೇರೆ. ಎಷ್ಟೆಂದರೂ 'ನಾವು ಇಲ್ಲಿನವರಷ್ಟು ಪಳಗಿದವರಲ್ಲ' ಎನ್ನುವ ಪುಟ್ಟ ಅಳುಕು. ಬಹರೇನ್ ಕನ್ನಡೋತ್ಸವ ಅವರದೇ ಪರಿಕಲ್ಪನೆ.
'ಸಾಮಾನ್ಯವಾಗಿ ಇಲ್ಲಿನ ಕಲಾವಿದರು ವಿದೇಶಗಳಿಗೆ ಬಂದು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ನಾವು ಸ್ವಲ್ಪ ಭಿನ್ನವಾಗಿ ಅಂದರೆ ಅಲ್ಲಿ ಕಲಿತಿರುವುದನ್ನು ಇಲ್ಲಿ ಪ್ರದರ್ಶಿಸಬಾರದೇಕೆ ಎಂದು ಆಲೋಚಿಸಿದೆವು. ದೂರದಲ್ಲಿದ್ದರೂ ಮಾತೃಭಾಷೆ, ತಾಯ್ನಾಡಿನ ಸಂಸ್ಕೃತಿಯನ್ನು ನಾವು ಮರೆತಿಲ್ಲ ಎಂದು ತೋರಿಸುವ ಆಶಯವೂ ಇದೆ. ರಂಗಕರ್ಮಿ ಯಶವಂತ ಸರದೇಶಪಾಂಡೆ ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ' ಎನ್ನುತ್ತಾರೆ ಕಿರಣ್. ಹುಬ್ಬಳ್ಳಿಯ ಗುರು ಸಂಸ್ಥೆ ಮತ್ತು ಬೆಂಗಳೂರಿನ ಗುರು ಎಂಟರ್‌ಟೇನರ್ಸ್ ಕಾರ್ಯಕ್ರಮ ಆಯೋಜಿಸಿವೆ.
ಉತ್ಸವದ ರೂಪುರೇಷೆ ರೂಪಿಸುವಲ್ಲಿ ಕಿರಣ್ ಜತೆಗೆ ರಮೇಶ್ ಮಂಜೇಶ್ವರ, ಅರುಣ್ ಐರೋಡಿ, ರಮೇಶ್ ರಾಮಚಂದ್ರನ್, ಸತೀಶ್ ಎಡನೀರು, ಆಸ್ಟಿನ್ ಸಂತೋಷ್ ಮತ್ತು ಶ್ರೀಕೃಷ್ಣ ಭಟ್ ಹೆಗಲು ನೀಡಿದ್ದಾರೆ. ಕಿರಣ್ ಗಿರೀಶ್, ಶ್ರೀನಿವಾಸ ಭಟ್, ಮೋಹನ ರಾವ್, ನಾರಾಯಣ ಪಂಜತ್ತೊಟ್ಟಿ ಮೊದಲಾದವರ ಸಹಕಾರದಲ್ಲಿ ಆಸ್ತಿಕಾ ಶೆಟ್ಟಿ ಮತ್ತು ರಘುರಾಮ್ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆಯ ಹೊಣೆ ಹೊತ್ತಿದ್ದಾರೆ. ಭರತನಾಟ್ಯ, ಗಾಯನ, ಯಕ್ಷಗಾನ, ಫ್ಯಾಶನ್ ಶೋ, ಜನಪದ ಮತ್ತು ಸಿನಿಮಾ ಹಾಡುಗಳಿಗೆ ನೃತ್ಯ ಮೊದಲಾದವನ್ನು ಪ್ರಸ್ತುತಪಡಿಸಲಿದ್ದಾರೆ. ನಡುವೆ ಬಹರೇನ್ ಕನ್ನಡಿಗರನ್ನು ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ. ಬರೋಬ್ಬರಿ ಮೂರು ಗಂಟೆಗಳ ಎಂಟರ್‌ಟೇನ್‌ಮೆಂಟ್ ಪ್ಯಾಕೇಜ್. <

ಬಹರೇನ್ ಕನ್ನಡೋತ್ಸವ

ಎಲ್ಲಿ?
ಕೆ.ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರು.

ಎಂದು?
ಆ.4, 2013, ಭಾನುವಾರ. ಸಂಜೆ 6ರಿಂದ.

ವೇದಿಕೆಯಲ್ಲಿ ಯಾರ್ಯಾರು?

ವಿಶ್ವೇಶ್ವರ ಭಟ್, ಡಾ.ಪಿ.ಸದಾನಂದ ಮಯ್ಯ, ಕೋಮಲ್‌ಕುಮಾರ್, ದುನಿಯಾ ವಿಜಯ್.

- ರಾಜೇಶ ಮುಂಡಿಗೇಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments