ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕುಪ್ಪಣ್ಣ ಕಿಡ್ನಾಪ್

ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿ ದೊಂಬಿ, ಕೂನಿ, ಗಲಾಟೆಗಳಂಥ ಪ್ರಕರಣಗಳಿಗೆ ಸ್ವಲ್ಪ ಹೆಚ್ಚಿಗೆ ಎನ್ನುವಷ್ಟು ಹೆಸರುವಾಸಿ. ಕೊತ್ತಕೋಟೆ...

Rashmi Kasaragodu
Updated On : 2 Aug 2013, 7:19 am

ಕೆಂಪುಸೂರ್ಯ ಮುಳುಗಿದ!

ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿ ದೊಂಬಿ, ಕೂನಿ, ಗಲಾಟೆಗಳಂಥ ಪ್ರಕರಣಗಳಿಗೆ ಸ್ವಲ್ಪ ಹೆಚ್ಚಿಗೆ ಎನ್ನುವಷ್ಟು ಹೆಸರುವಾಸಿ. ಕೊತ್ತಕೋಟೆ, ಮಾಮಿಡಿಕಾಯಿಲಪಲ್ಲಿ, ಮಾರಗಾನಕುಂಟೆ ಮುಂತಾದ ಗ್ರಾಮಗಳಲ್ಲಿ ಸುಮಾರು ಕೊಲೆಗಳು ನಡೆದು ಪೊಲೀಸರಿಗೆ ತಲೆನೋವಾಗಿ ಕಾಡಿರುವುದು ಸುಳ್ಳಲ್ಲ. ಜೊತೆಗೆ ಚಿನ್ನೇಪಲ್ಲಿ ಎಂಬ ಗ್ರಾಮದಲ್ಲಿ ಚುನಾವಣೆ ವೇಳೆ ಮತಪತ್ರಗಳನ್ನು ಕದ್ದ ಪ್ರಸಂಗ ಇಡೀ ರಾಜ್ಯದಲ್ಲೇ ಸುದ್ದಿಯಾಗಿತ್ತು.
ಇಲ್ಲಿಂದ ಕೂಗಳತೆಯ ದೂರದಲ್ಲಿ ಆಂಧ್ರಪ್ರದೇಶದ ಗಡಿ ಇದೆ. ಆಂಧ್ರದ ಫ್ಯಾಕ್ಷನಿಸಂ ಎಂಬ ಮಾರಿ ಈ ಪ್ರದೇಶದಲ್ಲೂ ಹಬ್ಬಿದೆ. ಇದರ ಜೊತೆಗೆ ಆಗಿನ ಕಾಲದಲ್ಲಿ ಶಾಲಾ ಕಾಲೇಜುಗಳು ಈ ಪ್ರದೇಶದಲ್ಲಿ ಇರಲಿಲ್ಲ. ಇದರಿಂದ ಸಾಮಾನ್ಯರು ಹೆಚ್ಚಿನ ಓದಿಗಾಗಿ ದೂರದ ಬಾಗೇಪಲ್ಲಿಗೆ ಹೋಗಿಬರಲು ಸಾಧ್ಯವಾಗದೆ, ಪಟ್ಟಣದಲ್ಲಿ ಹಾಸ್ಟೆಲ್‌ಗಳಿಲ್ಲದ ಕಾರಣ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಈ ಶಿಕ್ಷಣ ವಂಚಿತ ಮತ್ತು ಆಂಧ್ರದ ಫ್ಯಾಕ್ಷನಿಸಂ ಪ್ರಭಾವ ಇಲ್ಲಿ ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾ? ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿ ಇಂದಿಗೂ ಸ್ವಲ್ಪ ಹೆಚ್ಚಿಗೆ ಎನ್ನುವಷ್ಟು ಅಪರಾಧಗಳು ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ.
ಇಲ್ಲಿ ಹೆಚ್ಚು ರೈತರು ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಮುಂಗಾರಿನಿಂದ ಆರಂಭವಾಗುವ ಕೃಷಿ ಕೆಲಸಗಳು ಸುಗ್ಗಿಯ ವೇಳೆಗೆ ಕೊನೆಗೊಂಡು ನಂತರ ಗ್ರಾಮಗಳ ಯುವಕರಿಗೆ ಬರೋಬ್ಬರಿ ಆರು ತಿಂಗಳು ಯಾವುದೇ ಕೆಲಸಗಳಿಲ್ಲದೆ ಕಟ್ಟೆಗಳ ಮೇಲೆ ಚೌಕಾಬಾರ ಆಡುತ್ತಲೋ, ಅಡ್ಡೆಗಳಲ್ಲಿ ಇಸ್ಪೀಟ್ ಆಡುತ್ತಲೋ ಕಾಲ ಕಳೆಯುವುದೇ ಕೆಲಸ. ಹೀಗೆ ಪೊರ್ಕಿ ಅಲೆಯುವ ಹಲವು ಯುವಕರನ್ನು ತಮ್ಮತ್ತ ಸೆಳೆಯುವಲ್ಲಿ ಈ ನಕ್ಸಲೀಯ ತಂಡಗಳು ಪ್ರಯತ್ನ ನಡೆಸಿದವು. ಆಗಲೇ ಪೊಲೀಸರಿಗೆ ಹೆಚ್ಚಿನ ತಲೆನೋವು ಆರಂಭವಾಗಿದ್ದು.
ನೇರವಾಗಿ ನಕ್ಸಲೀಯ ತಂಡಗಳಲ್ಲಿ ಪಾಲ್ಗೊಳ್ಳದಿದ್ದರೂ ಅವರ ಕಾರ್ಯ ಚಟುವಟಿಕೆಗಳಲ್ಲಿ ಕೆಲ ಯುವಕರು ಪಾಲ್ಗೊಳ್ಳುತ್ತಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಲಭ್ಯವಾಯಿತು. ಅದರಿಂದ ಅವರನ್ನು ದೂರಮಾಡುವ ಉದ್ದೇಶದಿಂದ ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಇದು ಗ್ರಾಮೀಣ ಜನರಲ್ಲಿ ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಯಿತು. ಜತೆಗೆ ಹಲವರನ್ನು ಪೊಲೀಸರು ಠಾಣೆಗೆ ಎಳೆದೊಯ್ದು ಹಿಂಸಿಸುತ್ತಿದ್ದಾರೆ ಎಂಬ ಸುದ್ದಿಗಳು ಗ್ರಾಮೀಣ ಪ್ರದೇಶದಲ್ಲಿ ಭೀತಿಗೆ ಕಾರಣವಾಯಿತು. ಕೆಲವು ಯುವಕರಂತೂ ಊರು ಬಿಟ್ಟು ನಗರಗಳಿಗೆ ವಲಸೆ ಹೋಗಿಬಿಟ್ಟರು.
ಸಾಗರ್ ತಂಡ ಗ್ರಾಪಂ ಅಧ್ಯಕ್ಷ ಸತ್ತಾರ್‌ಸಾಬ್‌ನನ್ನು ಜನರ ಎದುರಿಗೇ ಕೊಲೆ ಮಾಡುವ ಮೂಲಕ ತನ್ನ ಬಲ ಪ್ರದರ್ಶಿಸಿತ್ತು. ಆದರೆ, ಕಾರ್ತಿಕ್ ತಂಡ ಇಂಥ ಯಾವುದೇ ಕೃತ್ಯ ಎಸಗದೆ ಇದ್ದ ಕಾರಣ ಅದು ನಿಷ್ಕ್ರಿಯವಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ಇಂಥ ಗಾಳಿಮಾತುಗಳನ್ನೇ ಪೊಲೀಸರು ಕೂಡಾ ನಿಜ ಎಂದು ನಂಬಿದ ಪರಿಣಾಮ ಮುಂದೆ ಆಗಬೇಕಾದ ಅನಾಹುತ ಆಗಿಯೇಹೋಯಿತು. ಕಾರ್ತಿಕ್ ನೇತೃತ್ವದ ನಕ್ಸಲೀಯ ತಂಡ ಸಂದರ್ಭಕ್ಕಾಗಿ ಕಾಯುತ್ತಿದೆ ಎಂಬುದನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸಿದ್ದರೆ ಮತ್ತೊಂದು ಕೊಲೆ ತಡೆಯಬಹುದಿತ್ತಾ? ಗೊತ್ತಿಲ್ಲ.
=
ಅದು ಸುಮಾರು ನೂರು ಮನೆಗಳ ಪುಟ್ಟ ಹಳ್ಳಿ. ಹೆಸರು ಚನ್ನರಾಯನಪಲ್ಲಿ. ಇದೇ ಗ್ರಾಮದಲ್ಲಿದ್ದರು ಕುಪ್ಪಣ್ಣ. ಹಿಂದುಳಿದ ಜಾತಿಗೆ ಸೇರಿದ ಇವರು ಹೋಬಳಿ ಮಟ್ಟದಲ್ಲಿ ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದರು. ಗ್ರಾಪಂ, ತಾಪಂ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆಗಷ್ಟೇ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ರಾಷ್ಟ್ರೀಯ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಗೆಲುವಿನ ಅಗತ್ಯವಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ಬಿರುಕು ಕಾಣಿಸಿ ಪಕ್ಷ ಎರಡು ಹೋಳಾಗಿತ್ತು. ಚುನಾವಣೆಯಲ್ಲಿ ಆ ಬಿರುಕು ಮುಂದುವರಿದರೆ ಸೋಲು ಖಚಿತ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕುಪ್ಪಣ್ಣ ಒಂದು ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಕುಪ್ಪಣ್ಣನ ಜಾತಿಯ ಮತಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಅದೇ ಕಾರಣಕ್ಕೆ ವಿರೋಧಿ ಗುಂಪಿನ ಕಡೆಯವರು ಕುಪ್ಪಣ್ಣನಿಗೆ ಹಲವು ಆಮಿಷಗಳನ್ನು ಒಡ್ಡಿದರು ಎಂಬ ಗುಸು ಗುಸು ಕೇಳಬರತೊಡಗಿತು.
ಇದರಿಂದ ಜಾಗೃತರಾದ ಮತ್ತೊಂದು ಗುಂಪು ಕುಪ್ಪಣ್ಣ ತನ್ನ ಬಣದಿಂದ ದೂರವಾಗದಂತೆ ಎಚ್ಚರಿಕೆ ತೆಗೆದುಕೊಂಡಿತು. ಇದೇ ಅವರ ಅಪಹರಣಕ್ಕೆ ಕಾರಣವಾಯಿತಾ? ಗೊತ್ತಿಲ್ಲ.

ಆದರೆ ವಿರೋಧಿ ಬಣಕ್ಕೆ ಕುಪ್ಪಣ್ಣ ಬೆಂಬಲ ನೀಡುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ ವ್ಯಕ್ತಿ ಕುಪ್ಪಣ್ಣನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದ ಎಂಬುದು ನಂತರ ಅವರ ಕುಟುಂಬದವರು ಮಾಡಿದ ಆರೋಪ. ಯಾವ ಬೆದರಿಕೆಗೂ ಕುಪ್ಪಣ್ಣ ಎಂಬ ವ್ಯಕ್ತಿ ಸೊಪ್ಪು ಹಾಕುತ್ತಿಲ್ಲ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳಲಾರಂಭಿಸಿದರು. ಅದೇ ಸಮಯದಲ್ಲಿ...

ಅಂದು ಬೆಳಗ್ಗೆ ತಿಂಡಿ ತಿಂದು ಹೊಲಕ್ಕೆ ಹೋಗುವ ಸಿದ್ಧತೆಯಲ್ಲಿದ್ದ ಕುಪ್ಪಣ್ಣನನ್ನು ಹುಡುಕಿಕೊಂಡು ನಾಲ್ವರು ಅಪರಿಚಿತರು ಮನೆಗೆ ಬಂದರು. ಬಂದವರು ಪಕ್ಷದ ವಿಷಯವಾಗಿ ಮಾತನಾಡಲು ಬರುವಂತೆ ಕರೆದರು. ಅದಕ್ಕೆ ಒಪ್ಪಿದ ಕುಪ್ಪಣ್ಣ ಅವರ ಹಿಂದೆ ಹೊರಟರು. ಅದೇ ಕೊನೆ... ಮತ್ತೆ ಕುಪ್ಪಣ್ಣನ ಹೆಣ ಸಹಿತ ಅವರ ಕುಟುಂಬದವರು ನೋಡಲಿಲ್ಲ.
ಆರಂಭದಲ್ಲಿ, ಎಲ್ಲಿಯೋ ಹೋಗಿರಬಹುದು ಬರ್ತಾರೆ ಎಂದು ಕಾದಿತ್ತಾಯಿತು. ಆದರೆ ಕುಪ್ಪಣ್ಣನ ಸುಳಿವಿಲ್ಲ. ತಿಂಗಳು ಕಳೆದರೂ ಆತ ಕಾಣದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದರು. ಕ್ಷೇತ್ರದ ಟಿಕೆಟ್ ಆಕಾಂಕ್ಷಿಯ ಮೇಲೆ ಅನುಮಾನ ವ್ಯಕ್ತಪಡಿಸಿದರು. ಪೊಲೀಸರು ತನಿಖೆಗಿಳಿದರೂ ಸುಳಿವು ದೊರೆಯಲೇ ಇಲ್ಲ. ಆದರೆ ಅದೇ ಸಮಯಕ್ಕೆ ಚುನಾವಣೆಗಳು ಸಮೀಪಿಸಿದ ಪರಿಣಾಮ ಕುಪ್ಪಣ್ಣನ ನಾಪತ್ತೆ ಪ್ರಕರಣ ರಾಜಕೀಯ ತಿರುವು ಪಡೆಯಿತು.
ರಾಜಕೀಯ ವಿರೋಧಿಗಳು ಕುಪ್ಪಣ್ಣನನ್ನು ಅಪಹರಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ಸಹಕರಿಸುತ್ತಿದ್ದಾರೆ. ಎಂಬಿತ್ಯಾದಿ ಆರೋಪಗಳು ಕೇಳಿ ಬಂದವು. ಇದಕ್ಕೆ ಪುಷ್ಟಿ ಎಂಬಂತೆ ಆರೋಪಿ ಆಕಾಂಕ್ಷಿಗೆ ಸೇರಿದ ಕಾರಿನಲ್ಲಿ ನಕ್ಸಲೀಯ ನಾಯಕ ಕಾರ್ತಿಕ್ ಕುಳಿತು ಪತ್ರಿಕೆ ಓದುತ್ತಿರುವ ಫೋಟೋಗಳು ಹೊರಬಂದವು. ಅವುಗಳನ್ನು ಕಾರ್ತಿಕ್ ತನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಡುಗಡೆ ಮಾಡಿದ್ದಾನೆ ಎಂಬ ಮಾತುಗಳು ಕೇಳಿಬಂದವಾದರೂ ಅದನ್ನು ನಂಬುವ ಸ್ಥಿತಿಯಲ್ಲಿ ಕುಪ್ಪಣ್ಣನ ಕುಟುಂಬ ಇರಲಿಲ್ಲ.
ಬೆಂಗಳೂರಿನ ವಿಧಾನಸೌಧ ಮತ್ತು ಶಾಸಕರ ಭವನದ ಮಧ್ಯದಲ್ಲಿ ತೆಗೆದಿದ್ದ ಆ ಫೋಟೋಗಳಲ್ಲಿ ಕಾರ್ತಿಕ್ ಕುಳಿತಿರುವುದು ಸ್ಪಷ್ಟವಾಗಿತ್ತು. ಆ ಕಾರು ನಾಯಕನದು ಎಂಬುದಕ್ಕೆ ಅದರ ರಿಜಿಸ್ಟ್ರೇಷನ್ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಇದಕ್ಕಿಂತ ಯಾವ ಸಾಕ್ಷ್ಯ ಬೇಕು ಪೊಲೀಸರಿಗೆ ಎಂಬುದು ನೊಂದವರ ಪ್ರಶ್ನೆಯಾಗಿತ್ತು. ಟಿಕೆಟ್ ಆಕಾಂಕ್ಷಿಯಾಗಿರುವ ವ್ಯಕ್ತಿ ನಕ್ಸಲೀಯ ನಾಯಕ ಕಾರ್ತಿಕ್ ಮೂಲಕ ಕುಪ್ಪಣ್ಣನನ್ನು ಅಪಹರಿಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆಗಳಾದವು.
ಇಷ್ಟೆಲ್ಲಾ ರಾದ್ಧಾಂತಗಳ ನಡುವೆ ಸಾಗರ್ ಎಂಬ ಮತ್ತೊಬ್ಬ ನಕ್ಸಲೀಯ ನಾಯಕನನ್ನು ಆಂಧ್ರ ಪೊಲೀಸರು ಬಂಧಿಸಿದರು. ಇದರಿಂದ ಸಾಗರ್ ಗುಂಪಿನ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡವು. ಇನ್ನು ಉಳಿದಿದ್ದ ಏಕೈಕ ಗುಂಪು ಕಾರ್ತಿಕ್‌ದಾಗಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ತನ್ನ ಇರುವಿಕೆ ತೋರ್ಪಡಿಸಲು ಕಾರ್ತಿಕ್ ಗುಂಪು ಕುಪ್ಪಣ್ಣನ ಪ್ರಕರಣವನ್ನು ಬಳಸಿಕೊಳ್ಳಬೇಕಿತ್ತು. ಹಾಗಾಗಿಯೇ ನಂತರ ನಡೆದ ಪ್ರತಿಯೊಂದು ಘಟನೆ ರಾಜಕೀಯ ಬಣ್ಣ ಬಳಿದುಕೊಳ್ಳಲಾರಂಭಿಸಿತು.

ಆರು ತಿಂಗಳು ಕಳೆದರೂ ಕುಪ್ಪಣ್ಣ ಪತ್ತೆಯಾಗಲಿಲ್ಲ. ಆತನ ಸಾವು ಖಚಿತವಾಗಲಿಲ್ಲ. ಚುನಾವಣೆಗಳು ಮುಗಿದವು. ರಾಜಕೀಯ ಕಾವು ಆರಿತ್ತು. ಕುಪ್ಪಣ್ಣನ ಜೀವಂತಿಕೆ ಮೇಲೆ ಆಸೆ ಬಿಟ್ಟ ಅವರ ಕುಟುಂಬ ಹೋರಾಟವನ್ನು ಕೈಬಿಟ್ಟಿತ್ತು. ಒತ್ತಡವಿದ್ದಾಗಲೇ ಭೇದಿಸಲಾಗದ ಪ್ರಕರಣ ಯಾವುದೇ ಒತ್ತಡ ಇಲ್ಲದಿದ್ದಾಗ ಪೊಲೀಸರು ಆಸಕ್ತಿ ತೋರುವುದಾದರೂ ಸಾಧ್ಯವೇ ಎಂದು ಜನರು ಭಾವಿಸಿದ್ದಾಗಲೇ ನಕ್ಸಲೀಯ ನಾಯಕ ಕಾರ್ತಿಕ್‌ನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದರು.
ಒಂದು ಮೂಲದ ಪ್ರಕಾರ, ಜೀವ ಭಯದಿಂದ ಆತನೇ ಶರಣಾದ ಎಂಬ ಮಾತುಗಳಿವೆ. ಆದರೆ ಆತನ ಬಂಧನದ ನಂತರ ಪೊಲೀಸರು ಕ್ಯಾಮೆರಾಗಳಿಗೆ ಪೋಸು ನೀಡಿ ತಾವೇ ಬಂಧಿಸಿದ್ದಾಗಿ ಹೇಳಿಕೆ ನೀಡಿದರು. ಆದರೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಬಂದಾಗ ಪತ್ರಕರ್ತರೊಂದಿಗೆ ಮಾತನಾಡಿದ ಕಾರ್ತಿಕ್ ತಾನೇ ಶರಣಾಗಿರುವುದಾಗಿ ಹೇಳಿಕೆ ನೀಡಿದ್ದ. ಜೊತೆಗೆ ಕುಪ್ಪಣ್ಣನ ಅಪಹರಣ ಮತ್ತು ಕೊಲೆಯ ಪ್ರಮುಖ ರೂವಾರಿ ತಾನೇ ಎಂಬುದನ್ನು ಪೊಲೀಸರ ಮತ್ತು ಮಾಧ್ಯಮದವರ ಮುಂದೆ ಒಪ್ಪಿಕೊಂಡಿದ್ದ. ಅಂದು ಆತ ನೀಡಿದ ಹೇಳಿಕೆಯೆಂದರೆ, 'ಕುಪ್ಪಣ್ಣನನ್ನು ಅಪಹರಿಸಿದ್ದು ನಮ್ಮ ಗುಂಪು. ಅದರಲ್ಲಿ ಯಾವುದೇ ಸಂಶಯವಿಲ್ಲ. ಆತನನ್ನು ಆಂಧ್ರಪ್ರದೇಶದ ಅನಂತಪುರಂನಲ್ಲಿ ಕೊಲೆ ಮಾಡಿದೆವು. ಒಂದೇ ಏಟಿಗೆ ಆತನ ಜೀವ ತೆಗೆದಿದ್ದು ನಿಜ. ಆತ ಪೊಲೀಸರ ಮಾಹಿತಿದಾರನಾಗಿ ನಮ್ಮ ಗುಂಪಿಗೆ ಕೆಟ್ಟ ಹೆಸರು ತರುತ್ತಿದ್ದ ಕಾರಣ ಈ ಕೆಲಸ ಮಾಡಿದೆವು' ಎಂದು ಹೇಳಿದ.
ಶರಣಾಗಲು ಕಾರಣವೇನು ಎಂಬ ಪ್ರಶ್ನೆಗೆ ಆತ ಉತ್ತರಿಸಿ, 'ಆಂಧ್ರದಲ್ಲಿ ನಕಲಿ ಎನ್‌ಕೌಂಟರ್ ಹಾವಳಿ ಮಿತಿ ಮೀರಿದೆ. ತೆಲುಗುದೇಶಂ ಪಕ್ಷ ಅಧಿಕಾರದಲ್ಲಿರುವಷ್ಟು ದಿನ ಸಂಘಟನೆಯ ಸದಸ್ಯರಿಗೆ ಕ್ಷೇಮವಲ್ಲ. ಆದರೆ ಕರ್ನಾಟಕದಲ್ಲೂ ಹಲವು ಪ್ರಕರಣಗಳಲ್ಲಿ ನಾನು ಭಾಗಿಯಾಗಿರುವುದರಿಂದ ಕರ್ನಾಟಕ ಪೊಲೀಸರಿಗೆ ಶರಣಾದರೆ ನನ್ನ ಜೀವಕ್ಕೆ ಅಪಾಯವಿಲ್ಲ ಎಂಬ ಕಾರಣಕ್ಕೆ ಶರಣಾದೆ' ಎಂದು ಹೇಳಿದ.
ಇಂಥ ಕಾರ್ತಿಕ್ ನಂತರ ಜಾಮೀನಿನ ಮೇಲೆ ಬಿಡುಗಡೆಯಾದ. ಅಷ್ಟರಲ್ಲಿ ಆಂಧ್ರದಲ್ಲಿ ತೆಲುಗುದೇಶಂ ಸರ್ಕಾರ ಹೋಗಿ ವೈ.ಎಸ್. ರಾಜಶೇಖರರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಜತೆಗೆ ನಕ್ಸಲೀಯರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಹಾಗಾಗಿ ನಕ್ಸಲೀಯ ಚಟುವಟಿಕೆಗಳಲ್ಲಿ ಪೊಲ್ಗೊಂಡಿದ್ದವರು ಧೈರ್ಯವಾಗಿ ಜನರ ಮಧ್ಯ ಓಡಾಡತೊಡಗಿದರು. ಹಾಗಾಗಿಯೇ ಬಂಧಿತನಾಗಿದ್ದ ಸಾಗರ್ ಜಾಮೀನಿನ ಮೇಲೆ ಹೊರಗೆ ಬಂದು ಅನಂತಪುರದಲ್ಲಿ ತನ್ನ ವಕೀಲ ವೃತ್ತಿ ಮುಂದುವರಿಸಿದರೆ, ಕಾರ್ತಿಕ್ ತಂಬಾಲ್ಲಪಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮಿದೇವಮ್ಮ ಜೊತೆ ಗುರುತಿಸಿಕೊಂಡು ರಾಜಕಾರಣಿಯಾಗುವ ಹವಣಿಕೆಯಲ್ಲಿದ್ದಾನೆ.
ಕುಪ್ಪಣ್ಣನ ಸಾವಿನ ನಂತರ ಉಭಯ ನಕ್ಸಲೀಯ ತಂಡಗಳ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎನ್ನುವಷ್ಟರಲ್ಲಿ ಪಶ್ಚಿಮಘಟ್ಟಗಳಲ್ಲಿ ಕೆಂಪುಬಾವುಟ ಹಾರಾಡಿತು. ಸಾಕೇತರಾಜನ್ ಎಂಬ ವ್ಯಕ್ತಿ ನಾಯಕನಾಗಿ ಸಂಘಟನೆ ಮುಂದುವರಿಸಲು ಟೊಂಕ ಕಟ್ಟಿ ನಿಂತಿದ್ದ.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement