ಕೊಬ್ಬಿದ್ದವರಿಗೆ...
ನಮ್ಮಲ್ಲಿನ ಬಾಬಾಗಳಿಗೆ, ಸಾಧುಗಳಿಗೆ ಇಲ್ಲದ 'ವ್ಯವಹಾರ ಜ್ಞಾನ' ಫಾರಿನ್ನರಿಗೆ ಬಂದುಬಿಡುತ್ತದೆ. ಇವರನ್ನು ಕಾಪಿ ಹೊಡೆದೂ, ಇವರಿಗಿಂತಲೂ ಹೆಚ್ಚು ಫೇಮಸ್ಸಾಗಿಬಿಡುತ್ತಾರೆ!
ಸಾಧುಗಳ ಬೇರೆ ಜ್ಞಾನದ ಕಥೆ ಈಗ ಬೇಡ. ನಿತ್ಯಕರ್ಮವೆಂಬಂತೆ ಮಾಡುವ ಪ್ರಾಣಾಯಾಮವಿದೆಯಲ್ಲ, ಅದೀಗ ಜಗತ್ತಿನ ಬಹುಬೇಡಿಕೆಯ ಡಯೆಟ್ಟಿನ ಸಂಗತಿ. ಸರಿಯಾಗಿ ಐವತ್ತು ದಿನ ನಿಮ್ಮ ಉಸಿರಿನಲ್ಲಿ ಸರ್ಕಸ್ ಮಾಡಿಬಿಟ್ಟರೆ ನೀವೆಷ್ಟೇ ದಪ್ಪಗಿರಿ, ಶಿಲ್ಪಾಶೆಟ್ಟಿಯ ಸೈಝಿಗೆ ಇಳಿದುಬಿಡುತ್ತೀರಿ!
ಹಾಗಂತ 'ಮಿಕಿ ರ್ಯೊಸುಕಿ' ಎಂಬ ಜಪಾನಿನ ನಟ ಬಾಬಾ ರಾಮ್ದೇವ್ಗಿಂತ ಜೋರಾಗಿ ಅರಚಿಕೊಳ್ಳುತ್ತಿದ್ದಾನೆ. ಒಮ್ಮೆ ದಿನವಿಡೀ ಸ್ಟಂಟ್ಗಳಲ್ಲಿ ಪಾಲ್ಗೊಂಡ ಆತನಿಗೆ ದಿಢೀರನೆ ಸೊಂಟನೋವೊಂದು ಅಟಕಾಯಿಸಿಕೊಳ್ಳುತ್ತದೆ. ಜಪ್ಪಯ್ಯ ಅಂದರೂ ಅದು ಗುಣವಾಗುವುದಿಲ್ಲ. ಆಗ ಆತ ಶುರುಮಾಡಿದ್ದು, ಇದೇ ಪ್ರಾಣಾಯಾಮವನ್ನೇ. ಐವತ್ತು ದಿನ ದೀರ್ಘ ಉಸಿರಾಟ ಕ್ರಿಯೆಗೆ ಒಳಪಟ್ಟ. ನಂತರ ನೋಡಿದರೆ, ಸೊಂಟನೋವು ಮಂಗಮಾಯ. ಅಲ್ಲದೆ, ಆತ 12 ಕಿಲೋಗ್ರಾಂ ಇಳಿದಿದ್ದ!
ಮಿಕಿ ತನ್ನೀ ರಹಸ್ಯಕ್ಕೆ 'ಲಾಂಗ್ಬ್ರೆತ್ ಡಯೆಟ್' ಎಂದು ಹೆಸರಿಟ್ಟ. ಸಿನಿಮಾ ಪ್ರಚಾರವನ್ನು ಸೈಡಿನಲ್ಲಿಟ್ಟು, ಈಗ ಈ ಡಯೆಟ್ಟಿನ ಸಾಹಸಗಳಿಗೆ ಡಿವಿಡಿ ರೂಪ ಕೊಟ್ಟು ಮಿಲಿಯನ್ಗಟ್ಟಲೆ ಹಣ ಎಣಿಸುತ್ತಿದ್ದಾನೆ. ಒಂದು ನಿಮಿಷಕ್ಕೆ ಒಮ್ಮೆ ಮಾತ್ರ ಉಸಿರು. ಅದನ್ನು ಮತ್ತಷ್ಟು ವಿಸ್ತರಿಸುತ್ತಾ, ಎರಡು- ಮೂರು ನಿಮಿಷಕ್ಕೆ ಒಮ್ಮೆ ಉಸಿರಾಡುವ ಆತನ ಕ್ರಿಯೆಯ ವಿಡಿಯೋಗಳು ಕೊಬ್ಬಿದ ಜಗತ್ತಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಸಹಸ್ರಾರು ದಢೂತಿಗಳೆಲ್ಲ ಈ ಕ್ರಿಯೆಯಿಂದಲೇ ಸ್ಲಿಮ್ಮಾಗಿದ್ದಾರಂತೆ. ಸಿನಿಮಾ ವೃತ್ತಿ ಬಿಟ್ಟು, ಡಯೆಟ್ ವೃತ್ತಿಗೆ ಇಳಿದ ಮಿಕಿ ಈಗ ಮಿಲಿಯನೇರ್. ಇಷ್ಟೆಲ್ಲ ಕಾಪಿಹೊಡೆದ ಸಂಗತಿಯನ್ನು ಬಾಬಾಗಳಿಗೆ ಹೇಳೋಣವೆಂದರೆ, ಅವರು ಧ್ಯಾನಸ್ಥರಾಗಿದ್ದಾರಲ್ಲ!
- ಮಿಲೀ