ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಿಷ್ಠೆ ಎನ್ನುವುದು ಗಾಳಿ ಗೋಪುರ ತಿಳಿದದ್ದೆಲ್ಲವೂ ಸತ್ಯವೆ?

Mainashree
Updated On : 4 Aug 2013, 2:30 am

ಪತ್ರಿಕೆಗಳಲ್ಲಿ ಓದುತ್ತಿದ್ದ ಹಾಗೂ ಅವರಿವರಿಂದ ಕೇಳುತ್ತಿದ್ದ ಪಾಶ್ಚಿಮಾತ್ಯ ಜೀವನ ಶೈಲಿ ಈಗ ಕಣ್ಣೆದುರೇ ಕಾಣತೊಡಗಿತ್ತು. ಕಂಪ್ಯೂಟರ್ಗಳು, ಅಂತರ್ಜಾಲ, ಮೊಬೈಲ್, ಟಿವಿ, ಸಿನಿಮಾ ಮೊದಲಾದವು ಭಾರತೀಯ ಯುವ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿ ಪಾಶ್ಚಿಮಾತ್ಯ ಜೀವನ ಶೈಲಿಯತ್ತ ಹೊರಳಿಸಿತು. ತೊಂಬತ್ತರ ನಂತರ ಜನಿಸಿದ ಮಕ್ಕಳು ಇವೆಲ್ಲವನ್ನು ಹುಟ್ಟುತ್ತಲೇ ನೋಡುತ್ತಿದ್ದರಿಂದ ಇವೆಲ್ಲಾ ಸಹಜವೆಂಬಂತಹ ವಾತಾವರಣದಲ್ಲಿ ಬೆಳೆದರು. ಆದರೆ ಅವರ ಅಪ್ಪ- ಅಮ್ಮಂದಿರು ಮಾತ್ರ ಬಾಲ್ಯದಿಂದ ಬೆಳೆಸಿಕೊಂಡ ನಂಬಿಕೆಗಳ ಉರುಳಿನಲ್ಲೇ ಸಿಕ್ಕಿಕೊಂಡು ತ್ರಿಶಂಕುಗಳಾಗಿದ್ದಾರೆ. ವೈವಾಹಿಕ ಶಿಕ್ಷಣ ಎನ್ನುವುದು ಲೈಂಗಿಕ ಶಿಕ್ಷಣದ ಮತ್ತೊಂದು ಮುಖವೇ. ಇವತ್ತಿನ ಮಕ್ಕಳಿಗೆ ವಿಕೃತ ಲೈಂಗಿಕ ಮಾಹಿತಿಗಳು ಮತ್ತು ಹದಿವಯಸ್ಸಿನ ಲೈಂಗಿಕ ಸಾಹಿತ್ಯಕ್ಕೆ ಅವಕಾಶಗಳು ವಿಫುಲವಾಗಿ ಸಿಗುತ್ತಿವೆ. ಮಕ್ಕಳು ತಮಗೆ ಸ್ನೇಹಿತರಿಂದ, ಅಂತರ್ಜಾಲದಲ್ಲಿ, ಪುಸ್ತಕಗಳಲ್ಲಿ ದೊರೆಯುವ ತಪ್ಪು ಮಾಹಿತಿಗಳನ್ನು ನಂಬಿಕೊಳ್ಳುತ್ತಾರೆ. ಅದಕ್ಕೆ ಅವರನ್ನು ದೂರುವುದು ಸರಿಯಲ್ಲ. ಬದಲಾಗಿ ವಾಸ್ತವಿಕತೆ ಮತ್ತು ಭ್ರಮಲೋಕದ ನಡುವಿನ ಅಂತರವನ್ನು ಬಾಲ್ಯದಿಂದಲೇ ತಿಳಿಸಿಕೊಡಬೇಕು.
-ಸುಮಿತ್ರಾ ಹರೀಶ್, ಬಸರಿಕಟ್ಟೆ

ಸಮರ್ಪಣಾ ಭಾವವಿಲ್ಲ!

'ಯತ್ರ ನಾರ್ಯಸ್ತು ಪೂಜ್ಯಂತೇ೤ ತತ್ರ ರಮಂತೇ ದೇವತಾಃ೤' ಎಂಬ ಮಾತಿನಂತೆ ನಮ್ಮ ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದೆ. ಅಂತಹ ನಾಡಿನಲ್ಲಿ 'ವಿವಾಹಪೂರ್ವ ಲೈಂಗಿಕತೆ' ಸಾಧುವಲ್ಲ. ವಿವಾಹ ನಂತರದ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮರ್ಪಣಾಭಾವದಿಂದ ಬದುಕನ್ನು ಸುಂದರವಾಗಿಸಿಕೊಳ್ಳುತ್ತಾರೆ. 'ವಿವಾಹಪೂರ್ವ ಲೈಂಗಿಕತೆ'ಯಲ್ಲಿ ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ ಎಂಬುದು 'ಗಾಳಿ ಗೋಪುರ'ದಂತೆ. ಕ್ಷಣಿಕ ಸುಖಕ್ಕಾಗಿಯೋ ಅಥವಾ ಆಕರ್ಷಣೆಗೆ ಒಳಗಾಗಿ, ಮೈ-ಮನಗಳು ಒಂದಾಗುತ್ತವೆಯೇ ಹೊರತು ಸಮರ್ಪಣಾ ಭಾವದಿಂದಲ್ಲ. ಈ ರೀತಿಯ ಜೀವನದಲ್ಲಿ ಬದುಕಿಗೆ ಭದ್ರತೆ ಎಂಬುದಿರುವುದಿಲ್ಲ. ಬದುಕಿನ ನೊಗ ಹೊರಲು ಗಂಡು- ಹೆಣ್ಣು ಇಬ್ಬರಲ್ಲೂ ಪಕ್ವತೆ ಇರುವುದಿಲ್ಲ. ಎಚ್ಚರಿಕೆಯ ಹೆಜ್ಜೆ ಇಡದಿದ್ದಾಗ ಅಪಾಯವಾಗುವುದೂ ಖಚಿತ. ಈ ರೀತಿಯ ಲೈಂಗಿಕ ಸಂಬಂಧ ಸಮಾಜಕ್ಕೆ ಮಾರಕವೇ ಹೊರತು ಪೂರಕವಲ್ಲ. ಸಂಯಮದ ಎಲ್ಲೆ ಮೀರಿದಾಗ ಬದುಕಿನ 'ಗಟ್ಟಿತನ'ದ ಕೊಂಡಿ ಕಳಚುತ್ತದೆ. ಒಟ್ಟಾರೆಯಾಗಿ, ಹೇಳುವುದಾದರೆ ನಮ್ಮ ಭಾರತೀಯ ಸಂಸ್ಕೃತಿಗೆ 'ವಿವಾಹ ಪೂರ್ವ ಲೈಂಗಿಕತೆ' ಸಮ್ಮತವಲ್ಲ.
-ಶಶಿಕಲಾ ಕೆ.ಎಸ್., ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement