ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಂಡಿಯೂಟ

ನಿಶ್ಯಬ್ಧವಾಗಿ ಕುಳಿತ ಹತ್ತಾರು ಕಣ್ಣುಗಳು ಯಾರಿಗಾಗೋ ಕಾತರಿಸುತ್ತಿವೆ. ಪರಪರ ಸದ್ದು ಪೊದೆಯೊಳಗಿಂದ ಬರುತ್ತಿದೆ....

Mainashree
Updated On : 5 Aug 2013, 12:21 pm

ನಿಶ್ಯಬ್ಧವಾಗಿ ಕುಳಿತ ಹತ್ತಾರು ಕಣ್ಣುಗಳು ಯಾರಿಗಾಗೋ ಕಾತರಿಸುತ್ತಿವೆ. ಪರಪರ ಸದ್ದು ಪೊದೆಯೊಳಗಿಂದ ಬರುತ್ತಿದೆ. ನೋಡ ನೋಡುತ್ತಿದ್ದಂತೆ ಚಿರತೆ ಪ್ರತ್ಯಕ್ಷ! ಅದೋ ಚಿರತೆ... ಎಲ್ಲಿ... ಅಲ್ಲಿ... ಶ್... ಸೈಲೆನ್ಸ್ ಪ್ಲೀಸ್... ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದಂತೆ ಚಿರತೆ ಪೊದೆ ಸೇರುತ್ತದೆ. ಪಕ್ಕಕ್ಕೆ ಕಣ್ಣು ಸರಿಸಿದರೆ ಅಗೋ ಜಿಂಕೆಗಳ ಹಿಂಡು. ಚಿರತೆ ಬೇಟೆಗಾಗಿ ಬಂದಿರಬೇಕು ಎಂದುಕೊಳ್ಳುವಷ್ಟರಲ್ಲೇ, ಜಿಂಕೆಗಳು ಮೈನವಿರೇಳಿಸಿಕೊಂಡು ತಳಮಳದಿಂದ ಕೂಗಾಡುತ್ತಿವೆ. ಚಿರತೆಗೆ ಹಸಿವಿಲ್ಲ ಅನ್ನಿಸುತ್ತೆ, ಜಿಂಕೆ ಹಿಂಡಿನ ಸುತ್ತ ಪ್ರದಕ್ಷಿಣೆ ಹಾಕಿ ಮತ್ತೆ ತಾನು ಬಂದ ದಾರಿ ಹಿಡಿಯುತ್ತದೆ. ನಮ್ಮ ಕಣ್ಣುಗಳು ಏನನ್ನೋ ಮಿಸ್ ಮಾಡಿಕೊಂಡಂತೆ ಹುಡುಕಾಡುತ್ತಿವೆ.

ಸಣ್ಣದೊಂದು ತಣ್ಣೀರಿನ ಹೊಂಡದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕಾಡಿನ ರಾಜ ಕಾಣಿಸುತ್ತದೆ. ಪಟ್ಟೆ ಹುಲಿ ಗಂಭೀರವಾಗಿ ನೀರಿನಲ್ಲಿ ಮಲಗಿದ್ದರೆ ಸಣ್ಣದೊಂದು ಭಯದಿಂದ ಕಂಪಿಸುತ್ತ ಅದನ್ನೇ ಇಣುಕಿ ನೋಡುವ ಥ್ರಿಲ್ ಬೇರೆ. ಸೂರ್ಯನ ಕಿರಣಕ್ಕೆ ಮಿರಮಿರನೆ ಹೊಳೆಯುವ ಅದರ ಮೈಮಾಟಕ್ಕೆ ಮನಸೋತು ಮುದ್ದಾಡುವ ಆಸೆ ಧುಮ್ಮಿಕ್ಕುತ್ತದೆ. ಕೊಕ್ಕರೆಗಳಂತೂ ಹುಲಿರಾಯನಿಗೆ ಕ್ಯಾರೇ ಅನ್ನದೆ ತಮ್ಮ ಪಾಡಿಗೆ ತಾವು ನೀರಿನಲ್ಲಿ ಕೆಲಸ ಮುಂದುವರಿಸುತ್ತವೆ. ಅದೇನಾಯಿತೋ ಏನೋ ಎಚ್ಚರವಾದ ಹುಲಿ ಎದ್ದು ನಿಂತು ತನ್ನ ದಾರಿ ಹಿಡಿಯಿತು.

ಯೆರೆಕೆರೆ ಬಳಿಗೆ ಸಾಲಾಗಿ ಬಂದವು ಗಜಪಡೆ. ನೀರು ಕುಡಿದು ಸಣ್ಣದೊಂದು ಚಿನ್ನಾಟ ಆಡಿದವು. ಮರಿಯಾನೆಯಂತೂ ನಾ ಮುಳುಗುವುದಿಲ್ಲ, ನನಗೂ ಈಜು ಬರುತ್ತೆ ಅನ್ನುವಂತೆ ಮೇಲೆದ್ದು ದರ್ಶನ ನೀಡುತ್ತಿತ್ತು. ಗಂಡಾನೆಗೆ ಅದೇನನ್ನಿಸಿತೋ ಏನೋ ತನ್ನ ಹೆಂಡತಿ ಮಗನನ್ನು ಕರೆದುಕೊಂಡು ಕೆರೆದಡದಲ್ಲಿ ನಿಲ್ಲಿಸಿದ್ದ ವಾಹನದ ಪಕ್ಕಕ್ಕೆ ಬಂದೇ ಬಿಡ್ತು. ಎಲ್ಲರ ಮುಖದಲ್ಲೂ ಆತಂಕದ ನೀರವ. ಅದೆಷ್ಟು ಬೇಕೊ ಅಷ್ಟು ಫೋಟೋ ಕ್ಲಿಕ್ಕಿಸಿಕೊಳ್ರಿ, ನಾವೇನು ನಿಮಗೆ ತೊಂದರೆ ಕೊಡಲ್ಲ ಎನ್ನುವಂತೆ ರಾಜ ಗಾಂಭೀರ್ಯದಿಂದ ನಿಂತು ಫೋಸು ನೀಡಿದವು.

ಇವು ಇತ್ತೀಚೆಗೆ ಬಂಡೀಪುರ ವನ್ಯಜೀವಿಧಾಮಕ್ಕೆ ಹೋದಾಗ ಕಂಡ ದೃಶ್ಯಗಳು. ಹಾಗೆ ನೋಡಿದರೆ ವನ್ಯಜವಿ ಪ್ರಪಂಚ ಅಚ್ಚರಿಗಳ ರಾಶಿ. ಅಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಅದೃಷ್ಟ ಚೆನ್ನಾಗಿದ್ದರೆ ಸಾಲು ಸಾಲು ಗಜಪಡೆ ದರ್ಶನವಾಗುತ್ತದೆ. ಹುಲಿ, ಚಿರತೆ, ಸೀಳು ನಾಯಿ ಬೇಟೆಯ ದೃಶ್ಯ ಲಭಿಸಿ ರೋಚಕ ಅನುಭವ ನೀಡುತ್ತದೆ. ಇಲ್ಲದಿದ್ದರೂ, ಸಾಲು ಜಿಂಕೆಗಳ ಹಿಂಡಿನ ದರ್ಶನಕ್ಕೇನೂ ಮೋಸವಿಲ್ಲ. ಈಗಂತೂ ಮಳೆ ಬಿದ್ದು ಎಲ್ಲೆಡೆ ಹಸಿರು ತುಂಬಿ ನಳನಳಿಸುತ್ತಿದೆ. ಈಗ ಕಾಡು ನೋಡುವುದೇ ಆಪ್ಯಾಯಮಾನ ಸಂಗತಿ.

ಸಫಾರಿಗೆ ಹೋಗೋದು
ಅರಣ್ಯ ಇಲಾಖೆ ಕಚೇರಿಯಲ್ಲಿ ಟಿಕೆಟ್ ಪಡೆದು, ಅವರು ಒದಗಿಸುವ ಸಫಾರಿ ವಾಹನದಲ್ಲಿ ಹೋಗಬೇಕು. ಅಲ್ಲಿನ ಸಿಬ್ಬಂದಿ ಕರೆದೊಯ್ಯುತ್ತಾರೆ. ಭಾರತೀಯರಿಗೆ ತಲಾ 300 ರು. ಶುಲ್ಕ. ತಂಗಲು ಬಂಡಿಪುರ ಅರಣ್ಯ ಇಲಾಖೆ ಕೊಠಡಿಗಳು ಹಾಗೂ ಜಂಗಲ್ ರೆಸಾರ್ಟ್ಗಳಿವೆ.

- ಅರುಣ ಎಂ.ಜಿ.
ಚಿತ್ರಗಳು: ಎಲ್.ಆರ್. ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments