ವಸುಧೈವ ಕುಟಂಬ
ಚೆನ್ನೈನ ಒಬ್ಬ ಪುಟ್ಟ ಹುಡುಗ. ಅವನ ಒಂದು ಕಾಲು ಪೂರಾ ಕುದಿಯುವ ನೀರಿನಿಂದ ಸುಟ್ಟು ಹೋಗಿದೆ. ಬಡತನದ ಜಿಗುಪ್ಸೆಯಿಂದ ಅವನ ಮೇಲೆ ಕುದಿಯುವ ನೀರು ಸುರಿದು ತಾನೂ ಸಾಯಲು ಮುಂದಾಗಿದ್ದಳು ತಾಯಿ. ಆದರೆ ಅವನು ಬದುಕುಳಿದಿದ್ದ. ಮುಂಬಯಿಯ ಒಬ್ಬ ಹುಡುಗ ಎಚ್ಐವಿ ಪೀಡಿತನಾಗಿ ಸಮಾಜದಲ್ಲಿ ಅಸ್ಪೃಶ್ಯನಾಗಿದ್ದಾನೆ. ಚಿಕ್ಕಂದಿನಲ್ಲೇ ಹೀಗೆ ತಮ್ಮ ಬಾಲ್ಯ ಕಳೆದುಕೊಂಡ ಚಿಣ್ಣರ ಕಣ್ಣುಗಳಲ್ಲಿ ಕನಸು ಮತ್ತೆ ತುಂಬಿಕೊಳ್ಳುತ್ತಿದೆ.
ಹೇಗೆ ಅಂತೀರಾ? ಪ್ರತಿ ವರ್ಷ ಸಿಂಗಾಪುರದಿಂದ ಒಂದು ಕುಟುಂಬದ ಸದಸ್ಯರೆಲ್ಲ ರಾಜ್ಯಕ್ಕೆ ಬಂದು ಇಲ್ಲಿನ ಬಡ, ಅನಾಥ, ಬೀದಿ, ಬುಡಕಟ್ಟು ಮಕ್ಕಳೊಡನೆ ಹತ್ತಾರು ದಿನ ತಂಗಿದ್ದು, ವಿವಿಧ ಕಲೆ ಕೌಶಲಗಳನ್ನು ಕಲಿಸಿ, ಆಡಿಸಿ, ಖುಷಿಪಡುತ್ತಾರೆ. ಹಳ್ಳಿಯ ಸರ್ಕಾರಿ ಶಾಲೆಗಳಿಗೆ ಟಾಯ್ಲೆಟ್ ಕಟ್ಟಿಕೊಡುವುದು, ಕ್ಲಾಸ್ರೂಂ ಪೇಂಟ್ ಮಾಡಿಕೊಡುವುದು, ಸುಸಜ್ಜಿತ ಲೈಬ್ರರಿ ನಿರ್ಮಿಸುವುದು ಇವರ ಕೆಲಸಗಳಲ್ಲಿ ಕೆಲವು.
'ಹೆಗ್ಗಡದೇವನ ಕೋಟೆ, ಬಿಳಿಗಿರಿ ರಂಗನ ಬೆಟ್ಟ, ಆಂಧ್ರ- ಕರ್ನಾಟಕ- ಚೆನ್ನೈ ಬಾರ್ಡರ್ನಲ್ಲಿರುವ ಜೇನು ಕುರುಬರು, ಬುಡಕಟ್ಟು, ಆದಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ಕ್ಯಾಂಪ್ಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಇದಕ್ಕೆಲ್ಲಾ ನನ್ನ ತಾಯಿಯೇ ಪ್ರೇರಣೆ' ಅಂತಾರೆ ಸಿಂಗಾಪೂರ್ನ ಡೆಂಟಿಸ್ಟ್ ಫೆಲೋ ಆಫ್ ಅಕಾಡೆಮಿ ಆಫ್ ಮೆಡಿಸಿನ್ ಡಾ. ವಿಜಯನ್ ಲೋಕನಾಥನ್. ಅವರ ಜತೆ ನಡೆಸಿದ ಮಾತುಕತೆ:
ಇವರ ಪೂರ್ವಜರು ಭಾರತೀಯರು. ಸಮಾಜಸೇವೆ, ಅಪ್ಪ- ಅಮ್ಮ ಕಲಿಸಿದ ಸಂಸ್ಕೃತಿ. ಶಾಲೆ ಕಲಿತದ್ದು ಸಿಂಗಾಪುರದಲ್ಲೇ. ನಂತರ ಸ್ವಿಟ್ಜರ್ಲ್ಯಾಂಡ್ನಲ್ಲಿ ಮಾಸ್ಟರ್ಸ್ ಇನ್ ಆರ್ಟ್ ಅಂಡ್ ಕಮ್ಯುನಿಕೇಷನ್ ಮುಗಿಸಿ, ಸಿಂಗಾಪುರದಲ್ಲಿ ಸರ್ಕಾರಿ ಸೇವೆ. ಸ್ವಂತ ಪ್ರಾಕ್ಟೀಸ್ ಪ್ರಾರಂಭಿಸಿದ ಬಳಿಕ ವರ್ಷಕ್ಕೆರಡು ಬಾರಿ ಭಾರತದಲ್ಲಿ ಶಿಬಿರ ನಡೆಸಲಾರಂಭಿಸಿದರು.
ಇವರ ಪ್ರಾಜೆಕ್ಟ್ಗಳು 2 ವಿಧ. ಒಂದು, ಹೆಲ್ತ್ ಕೇರ್. ಹಳ್ಳಿಯ ಜನರಿಗೆ ದಂತರಕ್ಷಣೆ ಬಗ್ಗೆ ತಿಳಿವಳಿಕೆ, ಸಣ್ಣ ಚಿಕಿತ್ಸೆ ನಡೆಸುತ್ತಾರೆ. ಇನ್ನೊಂದು, ಬೀದಿ ಮಕ್ಕಳ ಒಡನಾಟ. ಅವರೊಂದಿಗೆ ಹತ್ತಾರು ದಿನಗಳ ಕ್ಯಾಂಪ್ ನಡೆಸಿ, ಸಿನೆಮಾ, ಮಾಲ್, ಪಿಕ್ನಿಕ್ ಕರೆದುಕೊಂಡು ಹೋಗುವುದು, ಆರ್ಟ್-ಕ್ರಾಫ್ಟ್ ಕಲಿಸಿ ಅವರಿಗೆ ಜೀವನೋಪಾಯ ಕಲ್ಪಿಸುವುದು. 'ನಮಗೇನೂ ಬೇಡ. ಅವರ ಮುಖದ ಮೇಲೆ ಮೂಡುವ ನಗು ಸಾಕು' ಎಂಬುದುವರ ಮಾತು. ಇವರ ಕೆಲಸಕ್ಕೆ ಬೆಂಗಳೂರಿನಲ್ಲಿ ಸಹಾಯಕರು ಗಣೇಶ್ ಮತ್ತು ಪ್ರಶಾಂತ್. ಇವರಂತೆಯೇ ಸೇವಾ ಮನೋಭಾವ ಇರುವ ಬಂಧು-ಮಿತ್ರರನ್ನು ಸೇರಿಸಿ 'ಫ್ಯಾಮಿಲಿ ಅಫೇರ್' ಪ್ರಾರಂಭಿಸಿದ್ದಾರೆ. ಇದರಲ್ಲಿ ಇವರ ತಂದೆ, ಅಣ್ಣ, ಅಕ್ಕ, ತಂಗಿ ಎಲ್ಲರೂ ತೊಡಗಿದ್ದಾರೆ. 'ಒಂದೇ ಮನೆಯಲ್ಲೇ ಹುಟ್ಟಿರಬೇಕಿಲ್ಲ. ಒಮ್ಮತದಿಂದ ಒಂದಾದರೆ ಅದೇ ಕುಟುಂಬ' ಅಂತ ಮುಗುಳ್ನಗುತ್ತಾರೆ ಡಾ. ವಿಜಯನ್ ಲೋಕನಾಥನ್. ಬ್ರಿಟನ್ನಲ್ಲಿ ಕಲಿತ ಪರಿಣಾಮಕಾರಿ ಭಾಷಣಕಲೆ, ಅಮೆರಿಕದಲ್ಲಿ ಕಲಿತ ಸಮೂಹ ಸಂವಹನ ಎಲ್ಲದರ ಜ್ಞಾನವನ್ನು ಹಳ್ಳಿ ಮಕ್ಕಳಿಗೆ ಧಾರೆಯೆರೆದು, ಅವರಲ್ಲಿ ಕಲಿಯುವ ಆಸಕ್ತಿ ಮೂಡಿಸುತ್ತಿರುವ ವಿಜಯನ್ ಅವರಿಗೊಂದು ಹ್ಯಾಟ್ಸ್ ಆಫ್ ಹೇಳೋಣ.
- ಗೀತಾ ಶ್ರೀನಿವಾಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.