ನೀವೇ ಮೊದಲಾಗಿ
ಸಂಬಂಧಗಳು ಅಷ್ಟು ಸುಲಭದಲ್ಲಿ ಉಳಿದುಬಿಡುವುದಿಲ್ಲ. ಅದೊಂದು ತುಡಿತ. ಅದಕ್ಕೊಂದು ಬದ್ಧತೆ. ಅದು ಪ್ರಾಮಾಣಿಕತೆ. ಅದು ತ್ಯಾಗ. ಅದು ರಾಜಿ. ಇವೆಲ್ಲದರ ಸಂಗಮ ದರ್ಶನದಿಂದ ಮಾತ್ರವೇ ಲಭಿಸುವ ಪುಣ್ಯವದು. ಏನೋ ಫೋಸು ಕೊಟ್ಟು ಬಿಡುತ್ತೇನೆ ಎಂದ ಮಾತ್ರಕ್ಕೆ ಸಂಬಂಧ ಆಂತರ್ಯದಲ್ಲಿ ಉಳಿಯುವುದಿಲ್ಲ. ಎದುರಿಗೆ ಎಷ್ಟೇ ಆತ್ಮೀಯವಾಗಿದ್ದಂತೆ ತೋರಿಕೆ ಪ್ರದರ್ಶನ ಮಾಡಬಹುದು. ನಿಮ್ಮೆದುರಿದ್ದವರು ಅದನ್ನು ಒಂದು ಹಂತಕ್ಕೆ ನಂಬಲೂಬಹುದು. ಹಾಗಂತ ಅದು ನೈಜ ಸಂಬಂಧವಾಗುವುದಿಲ್ಲ. ಹಾವಿಲ್ಲದೇ ಹಾವಿನ ಭಯ ಹುಟ್ಟಿಸುವ ಪೊರೆಯಂತಾಗಿರುತ್ತದೆ. ಸಂಬಂಧದ ಮೊದಲ ಅರ್ಹತೆ ಕಳಕಳಿ. ಅಲ್ಲಿ ನಾನು- ನೀನು ಅನ್ನುವ ಪ್ರಶ್ನೆಯೇ ಇಲ್ಲ. ಕರ್ತವ್ಯದ ಪ್ರಶ್ನೆ ಬಂದಾಗ ಮೊದಲು ನಾನೇ. ಉದಾಹರಣೆಗೆ ಯಾವುದೋ ಕಾರಣಕ್ಕೆ ಮುನಿಸು ತಲೆದೋರಿದೆ. ಇಬ್ಬರಲ್ಲಿ ಅಭಿಪ್ರಾಯ ಭೇದ. ಒಂದು ಹಂತದವರೆಗೆ ಚರ್ಚೆ ಮುಂದುವರಿದಿದೆ. ಎಲ್ಲೋ ವಿಪರೀತಕ್ಕೆ ಹೋಗುತ್ತಿದೆ ಅನ್ನಿಸಿದಾಗ ನಮ್ಮದೇ ಸರಿಯಿದ್ದರೂ, ನಮ್ಮ ವಾದದಲ್ಲಿ ಹುರುಳಿದ್ದರೂ ಮೊದಲು ಚರ್ಚೆ ನಿಲ್ಲಿಸಬೇಕಾದದ್ದು ನಾನೇ. ಚರ್ಚೆ ತಂತಾನೇ ಕೊನೆಯಾಗುತ್ತದೆ. ಒಂದಷ್ಟು ಹೊತ್ತು ಇಬ್ಬರ ನಡುವೆಯೂ ಮೌನ ಮುಂದುವರಿಯುತ್ತದೆ. ಅಷ್ಟಕ್ಕೆ ಸಂಬಂಧ ಸರಿ ಹೋಗುವುದಿಲ್ಲ. ಮತ್ತೆ ಇಬ್ಬರೂ ಮಾತು ಮುಂದುವರಿಸಲೇಬೇಕು. ಆಗ ಮತ್ತೆ ಪ್ರಶ್ನೆ ಉದ್ಭವಿಸುತ್ತದೆ. 'ಆವಾಗ ನಾನು ಮೊದಲು ಮಾತು ನಿಲ್ಲಿಸಿ ಜಗಳಕ್ಕೆ ಕೊನೆ ಹಾಡಿದ್ದೇನೆ. ಈಗ ಅವರೇ ಮಾತನಾಡಿಸಲಿ' ಅನ್ನುವ ಹಾಗೆಯೇ ಇಲ್ಲ. ಒಳ್ಳೆಯ ಸಂಬಂಧ ಬೇಕಿದ್ದರೆ ಮತ್ತೆ ನಾನೇ ಮಾತು ಆರಂಭಿಸಬೇಕು. ಕೋಪಕ್ಕೆ ಕೊನೆ ಹಾಡಲೇಬೇಕು. ಕ್ಷಮೆ ಕೇಳುವ ಪ್ರಮೇಯ ಬಂದಾಗ ತಪ್ಪಿರಲಿ, ಇಲ್ಲದಿರಲಿ, ನಾವೇ ಎದುರಿನವರನ್ನು ಮನದಲ್ಲೇ ಕ್ಷಮಿಸಿ ನಾವೇ ಮುಂದಾಗಿ ಕ್ಷಮೆ ಕೇಳಿಬಿಡೋಣ. ಬೇಕಿದ್ದರೆ ಎಲ್ಲ ಸರಿ ಹೋದ ಮೇಲೆ ನಿಧಾನಕ್ಕೆ ಏನು ತಪ್ಪಾಗಿದೆ ಎನ್ನುವುದನ್ನು ವಿವರಿಸಿ ಹೇಳೋಣ. ಹಾಗಾದರೆ ಸಂಬಂಧಕ್ಕೆ ಧಕ್ಕೆ ಇಲ್ಲ. ಹಾಗೊಮ್ಮೆ ಕೋಪ ಮಾಡಲೇಬೇಕು, ಚರ್ಚೆಯನ್ನು ಮಾಡಲೇಬೇಕು. ಮುನಿಸಿನಿಂದ ಮಾತು ನಿಲ್ಲಿಸಬೇಕು. ಅಂಥ ಪ್ರಮೇಯ ಬಂದಾಗ ನಾವೆಂದೂ ಮೊದಲಿಗರಾಗಲೇಬಾರದು. ಸಾಧ್ಯವಾದಷ್ಟು ತಾಳ್ಮೆಯ ನಂತರ ಕೊನೆಯ ಆಯ್ಕೆ ನನ್ನದಾಗಬೇಕು. ಹಾಗೆಯೇ ತ್ಯಾಗದಲ್ಲಿ ನಾನು ಮೊದಲಿಗ. ಲಾಭದಲ್ಲಿ ನನ್ನದು ಕೊನೆಯ ಆಯ್ಕೆ. ಬದ್ಧತೆಯನ್ನು ನಾನು ಮೊದಲು ಪ್ರದರ್ಶಿಸಬೇಕು. ಚಾಂಚಲ್ಯಕ್ಕೆ ನನ್ನಲ್ಲಿ ಕೊನೆಯ ಸ್ಥಾನ. ನಂಬಿಕೆ ನನ್ನಲ್ಲಿ ಮೊದಲಿರಲಿ. ಸಂಶಯ ನನಗೆ ಬೇಡ. ಒಳ್ಳೆಯ ಸಂಬಂಧವನ್ನು ಎಲ್ಲರೊಟ್ಟಿಗೆ ಕಾಪಾಡಿಕೊಳ್ಳಬಲ್ಲವ ಮಾತ್ರವೇ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಮುಟ್ಟಬಲ್ಲ. ಅವನಿಗೆ ಯಾರೂ ಅನಗತ್ಯವಲ್ಲ. ಯಾರನ್ನೂ ಅವ ಕಳೆದುಕೊಳ್ಳಲಾರ.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.